ಕ್ಯಾಲಿಫೋರ್ನಿಯಾ, ಅಕ್ಟೋಬರ್ 15: ವಿಶ್ವದ ಅತ್ಯಂತ ಶಕ್ತಿಶಾಲಿ ಸೂಪರ್ ಕಂಪ್ಯೂಟರ್ ಅನ್ನು ತೀರಾ ಕಡಿಮೆ ಅವಧಿಯಲ್ಲಿ ನಿರ್ಮಿಸಿದ್ದ ಇಲಾನ್ ಮಸ್ಕ್ ಅವರನ್ನು ನಿವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ (Nvidia CEO Jensen Huang) ಹಾಡಿಹೊಗಳಿದ್ದಾರೆ. ಕೊಲೋಸಸ್ ಹೆಸರಿನ ಸೂಪರ್ ಕಂಪ್ಯೂಟರ್ ಅನ್ನು ಇಲಾನ್ ಮಸ್ಕ್ ನೇತೃತ್ವದಲ್ಲಿ ಎಕ್ಸ್ಎಐ (xAI) ತಂಡದ ಎಂಜಿನಿಯರುಗಳು ಮೂರು ತಿಂಗಳಲ್ಲಿ ನಿರ್ಮಿಸಿದ್ದರು. ಇದೇ ನಿವಿಡಿಯಾ ಸಂಸ್ಥೆಯ ಒಂದು ಲಕ್ಷ ಜಿಪಿಯುಗಳನ್ನು ಬಳಸಿ ಕೊಲೋಸ್ಸಸ್ (Colossus Super Computer) ಅನ್ನು ತಯಾರಿಸಲಾಗಿತ್ತು.
‘ನನಗೆ ತಿಳಿದಿರುವಂತೆ ಈ ಕಾರ್ಯ ಮಾಡಬಲ್ಲ ಏಕೈಕ ವ್ಯಕ್ತಿ ಆತನೇ. ಎಂಜಿನಿಯರಿಂಗ್, ಕನ್ಸ್ಟ್ರಕ್ಷನ್ ಹಾಗು ಬೃಹತ್ ಸಿಸ್ಟಮ್ಗಳ ಬಗ್ಗೆ ಹಾಗೂ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬ ಜ್ಞಾನ ಇಲಾನ್ ಮಸ್ಕ್ರಂತೆ ಯಾರಿಗೂ ಇಲ್ಲ,’ ಎಂದು ಜೆನ್ಸೆನ್ ಹುವಾಂಗ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಒಂದು ಕ್ಲಸ್ಟರ್ ಆಗಿ ಈ ಕೊಲೋಸ್ಸಸ್ ಈ ಭೂಮಿಯಲ್ಲಿರುವ ಅತಿವೇಗದ ಸೂಪರ್ಕಂಪ್ಯೂಟರ್ ಎನಿಸುತ್ತದೆ ಎಂಬುದು ನಿವಿಡಿಯಾ ಸಿಇಒ ಅವರ ಅನಿಸಿಕೆ. ಒಂದು ಸೂಪರ್ ಕಂಪ್ಯೂಟರ್ ಅನ್ನು ನಿರ್ಮಿಸಲು ಕನಿಷ್ಠ ನಾಲ್ಕು ವರ್ಷವಾದರೂ ಬೇಕು. ಅದರ ಪ್ಲಾನ್ ನಿರ್ಮಿಸಲೇ ಸಾಮಾನ್ಯವಾಗಿ ಮೂರು ವರ್ಷ ಬೇಕು ಎನ್ನುತ್ತಾರೆ ಹುವಾಂಗ್.
ಇದನ್ನೂ ಓದಿ: 3ಜಿ, 4ಜಿಯಲ್ಲಿ ಹಿಂದುಳಿದಿದ್ದ ಭಾರತ ಈಗ 6ಜಿಯಲ್ಲಿ ಸೂಪರ್ಫಾಸ್ಟ್; ಜಾಗತಿಕ ದೈತ್ಯ ದೇಶಗಳಿಗೆ ಭಾರತದಿಂದ ಪೈಪೋಟಿ
ಇಲಾನ್ ಮಸ್ಕ್ ಅವರ ಎಕ್ಸ್ಎಐನ ಎಂಜಿನಿಯರಿಂಗ್, ನೆಟ್ವರ್ಕಿಂಗ್, ಇನ್ಫ್ರಾಸ್ಟ್ರಕ್ಚರ್ ಮತ್ತು ಸಾಫ್ಟ್ವೇರ್ ತಂಡಗಳನ್ನು ಅಸಾಮಾನ್ಯ ಎಂದು ಹುವಾಂಗ್ ಬಣ್ಣಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಇಲಾನ್ ಮಸ್ಕ್ ಅವರನ್ನು ಅನೇಕರು ಹುಚ್ಚ ಎಂದೇ ಕರೆದಿದ್ದರು. ಮಂಗಳ ಗ್ರಹದಲ್ಲಿ ಮಾನವರ ವಸಾಹತು (Human colony) ನಿರ್ಮಿಸುವುದಾಗಿ ದಶಕಗಳ ಹಿಂದೆಯೇ ಹೇಳಿದ್ದರು. ಅದೆಲ್ಲವೂ ಬೊಗಳೆ ಎಂಬುದು ಹಲವರ ಅನಿಸಿಕೆಯಾಗಿತ್ತು. ತಮ್ಮ ಗುರಿಗಿಂತ ಬಹಳ ತಡವಾಗಿಯಾದರೂ ಆ ನಿಟ್ಟಿನಲ್ಲಿ ಮಸ್ಕ್ ಒಂದೊಂದೇ ಹೆಜ್ಜೆ ಇರಿಸುತ್ತಿದ್ದಾರೆ. ಮೊನ್ನೆ ರಾಕೆಟ್ ಬೂಸ್ಟರ್ ಅನ್ನು ಉಡಾಯಿಸಿ ನಂತರ ಅದನ್ನು ವಾಪಸ್ ಭೂಮಿಗೆ ನಿಗದಿತ ಸ್ಥಳಕ್ಕೆ ಇಳಿಸಿದ ಅವರ ಕಾರ್ಯ ಕಂಡು ಇಡೀ ವಿಶ್ವವೇ ಬೆರಗಾಗಿದೆ.
ಇದನ್ನೂ ಓದಿ: ಮೂವರು ಅಮೆರಿಕನ್ ಅರ್ಥಿಕತಜ್ಞರಿಗೆ ಸ್ವೆರಿಜೆಸ್ ರಿಕ್ಸ್ಬ್ಯಾಂಕ್ ಪ್ರಶಸ್ತಿ; ಇದು ನೊಬೆಲ್ ಬಹುಮಾನಕ್ಕೆ ಸಮ
ಈಗ ಎಕ್ಸ್ಎಐ ನಿರ್ಮಿಸಿದ ಸೂಪರ್ಕಂಪ್ಯೂಟರ್ ಅನ್ನು ಗ್ರೋಕ್ (Grok) ಎಂಬ ಚಾಟ್ಬೋಟ್ಗ ಬಳಸಲಾಗುತ್ತಿದೆ. ವರದಿಗಳ ಪ್ರಕಾರ, ಇಲಾನ್ ಮಸ್ಕ್ ಅವರು ಆಪ್ಟಿಮಸ್ ಎಂಬ ಮಾನವಾಕಾರದ ರೋಬೋಗೆ ಕೃತಕ ಬುದ್ಧಿಮತ್ತೆ ತುಂಬಲು ಈ ಸೂಪರ್ ಕಂಪ್ಯೂಟರ್ ಶಕ್ತಿಯನ್ನು ಬಳಸುತ್ತಿದ್ದಾರೆ. ಈ ರೋಬೋವನ್ನು ಇತ್ತೀಚೆಗೆ ಅನಾವರಣಗೊಳಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ