ಬೆಂಗಳೂರು: ಆ್ಯಕ್ಸಿಸ್ ಬ್ಯಾಂಕ್ (Axis bank) ಇತ್ತೀಚೆಗಷ್ಟೇ ತನ್ನ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಈ ಬ್ಯಾಂಕ್ನಲ್ಲಿ ಇಡಲಾಗುವ ನಿಶ್ಚಿತ ಠೇವಣಿಗಳಿಗೆ (Fixed Deposits) ಶೇ. 8.01ರವರೆಗೂ ಬಡ್ಡಿ ಸಿಗುತ್ತದೆ. ದೇಶದ ಬ್ಯಾಂಕುಗಳಲ್ಲೇ ಠೇವಣಿಗಳಿಗೆ ನೀಡಲಾಗುವ ಅತಿಹೆಚ್ಚು ಬಡ್ಡಿ ಇದಾಗಿದೆ. ಹಿರಿಯ ನಾಗರಿಕರಿಗೆ ಗರಿಷ್ಠ ಬಡ್ಡಿ ದರ ಸಿಗುತ್ತದೆ.
ಹಿರಿಯ ನಾಗರಿಕರು (Senior Citizens) ಆ್ಯಕ್ಸಿಸ್ ಬ್ಯಾಂಕ್ನಲ್ಲಿ 2 ಕೋಟಿ ರೂಗಿಂತ ಕಡಿಮೆ ಮೊತ್ತದ ಠೇವಣಿ ಇರಿಸಿದರೆ ಶೇ. 8.01 ಬಡ್ಡಿ ಪಡೆಯಬಹುದು. ಇತರ ಸಾರ್ವಜನಿಕರು ಇರಿಸುವ ಠೇವಣಿಗಳಿಗೆ ಗರಿಷ್ಠ ಶೇ. 7.26 ಬಡ್ಡಿ ಕೊಡಲಾಗುತ್ತದೆ.
10 ವರ್ಷದ ಅವಧಿಯ ನಿಶ್ಚಿತ ಠೇವಣಿಗಳಿಗೆ ತುಸು ಕಡಿಮೆ ಬಡ್ಡಿ ಸಿಗುತ್ತದೆ. ಆದರೆ, ಸಾರ್ಜನಿಕರು ಕನಿಷ್ಠ ಶೇ. 7ರಷ್ಟು ಬಡ್ಡಿ ಪಡೆಯಬಹುದು. 1 ಲಕ್ಷ ರೂ ಹಣವನ್ನು 10 ವರ್ಷದ ಅವಧಿಗೆ ನಿಶ್ಚಿತ ಠೇವಣಿಯಾಗಿ ಇರಿಸಿದರೆ 2,00,159 ರೂ ಕೈ ಸೇರುತ್ತದೆ. ಹಿರಿಯ ನಾಗರಿಕರಿಗೆ ಇದೇ ವೇಳೆ ಶೇ. 7.75ರಷ್ಟು ಬಡ್ಡಿ ಹಣ ಸಿಕ್ಕು ಅವರ ಕೈಸೇರುವ ಹಣ 2,15,456 ರೂ ಆಗುತ್ತದೆ. ಅಂದರೆ 10 ವರ್ಷದಲ್ಲಿ ಸುಲಭವಾಗಿ ಹಣ ಡಬಲ್ ಆಗುತ್ತದೆ.
ಹಿರಿಯ ನಾಗಕರಿಕರು 2 ವರ್ಷದ ಅವಧಿಗೆ 1 ಲಕ್ಷ ರೂ ಹಣವನ್ನು ಇರಿಸಿ ಅದರಿಂದ ಬರುವ ಬಡ್ಡಿ ಸಮೇತ ಹಾಗೆಯೇ ಮತ್ತೆ ಹೊಸ ಎಫ್ಡಿಗೆ ಮುಂದುವರಿಸಬಹುದು. ಹೀಗೆ 10 ವರ್ಷದಲ್ಲಿ 1 ಲಕ್ಷ ರೂ ಹಣಕ್ಕೆ 2.25 ಲಕ್ಷ ರೂ ಶೇಖರಣೆ ಆಗುತ್ತದೆ.
ಆ್ಯಕ್ಸಿಸ್ ಬ್ಯಾಂಕ್ನಲ್ಲಿ 13 ತಿಂಗಳಿಂದ 24 ತಿಂಗಳೊಳಗಿನ ನಿಶ್ಚಿತ ಠೇವಣಿಗಳಿಗೆ ಶೇ. 6.75ದಿಂದ ಶೇ. 7.5ರವರೆಗೆ ಬಡ್ಡಿ ಬರುತ್ತದೆ.
ಇದನ್ನೂ ಓದಿ: SBI Sarvottam Scheme: ಪಿಪಿಎಫ್, ಎನ್ಎಸ್ಸಿ ಇತ್ಯಾದಿಗಿಂತ ಎಸ್ಬಿಐನ ಈ ಸ್ಕೀಮ್ನಲ್ಲಿ ರಿಟರ್ನ್ಸ್ ಹೆಚ್ಚು
ಇನ್ನು, 1 ವರ್ಷ 25 ದಿನಗಳಿಂದ ಹಿಡಿದು 13 ತಿಂಗಳವರೆಗಿನ ಠೇವಣಿಯಾದರೆ ಸಾಮಾನ್ಯ ನಾಗಕರಿಗೆ ಶೇ. 7.1 ಮತ್ತು ಹಿರಿಯ ನಾಗರಿಕರಿಗೆ ಶೇ. 7.85 ಬಡ್ಡಿ ಸಿಗುತ್ತದೆ. ಇನ್ನು ಈ ಬ್ಯಾಂಕ್ನಲ್ಲಿ ಆರಂಭಿಕ ಬಡ್ಡಿ ದರ ಶೇ. 3.5ರಿಂದ ಶುರುವಾಗುತ್ತದೆ. 45 ದಿನಗಳಿಗೂ ಹೆಚ್ಚು ಅವಧಿಯ ಠೇವಣಿಗಳಿಗೆ ಶೇ. 4ಕ್ಕಿಂತ ಹೆಚ್ಚು ಬಡ್ಡಿ ಸಿಗುತ್ತದೆ. ಶೇ. 6ಕ್ಕಿಂತ ಹೆಚ್ಚು ಬಡ್ಡಿ ದರ ಸಿಗಬೇಕೆಂದರೆ ಕನಿಷ್ಠ 9 ತಿಂಗಳ ಅವಧಿಯ ಎಫ್ಡಿ ಮಾಡಿಸಬೇಕಾಗುತ್ತದೆ.
ಇಲ್ಲಿ ಇನ್ನೊಂದು ವಿಚಾರ ಗಮನಿಸಬೇಕು. ಎಫ್ಡಿ ಮೇಲೆ ಸಿಗುವ ಬಡ್ಡಿಗೆ ತೆರಿಗೆ ಅನ್ವಯ ಆಗುತ್ತದೆ. ಆದರೆ, 5 ವರ್ಷಗಳ ಅವಧಿಗೆ ಇರಿಸುವ ಎಫ್ಡಿ ಇಟ್ಟುಕೊಂಡು ಡಿಡಕ್ಷನ್ ಕ್ಲೇಮ್ ಮಾಡಬಹುದು. ಐಟಿ ಸೆಕ್ಷನ್ 80ಸಿ ಅಡಿಯಲ್ಲಿ ಒಂದು ವರ್ಷದಲ್ಲಿ ಒಂದೂವರೆ ಲಕ್ಷ ರೂನಷ್ಟು ಡಿಡಕ್ಷನ್ ಪಡೆಯಬಹುದು.