SBI Sarvottam Scheme: ಪಿಪಿಎಫ್, ಎನ್ಎಸ್ಸಿ ಇತ್ಯಾದಿಗಿಂತ ಎಸ್ಬಿಐನ ಈ ಸ್ಕೀಮ್ನಲ್ಲಿ ರಿಟರ್ನ್ಸ್ ಹೆಚ್ಚು
Senior Citizen's Get Good Offer From SBI: ಎಸ್ಬಿಐನ ಸರ್ವೋತ್ತಮ್ ಸ್ಕೀಮ್ನಲ್ಲಿ ಹಿರಿಯ ನಾಗರಿಕರು 2 ವರ್ಷ ಕಾಲ ಇರಿಸಲಾಗುವ 15 ಲಕ್ಷ ರೂ ಮೊತ್ತದ ನಿಶ್ಚಿತ ಠೇವಣಿಗಳಿಗೆ ವಾರ್ಷಿಕವಾಗಿ ಗರಿಷ್ಠ ಶೇ. 7.9ರಷ್ಟು ಬಡ್ಡಿ ಪಡೆಯಬಹುದು. ಪಿಪಿಎಫ್, ಎನ್ಎಸ್ಸಿ, ಕೆವಿಸಿಗಳಿಗಿಂತ ಇದರಲ್ಲಿ ಹೆಚ್ಚು ರಿಟರ್ಸ್ ಸಿಗುತ್ತದೆ.
ಎವರಿ ಮನಿ ಸೇವ್ಡ್ ಈಸ್ ಎವರಿ ಮನಿ ಅರ್ನ್ಡ್ ಎಂಬ ನಾಣ್ನುಡಿ ಇಂಗ್ಲೀಷ್ನಲ್ಲಿ ಇದೆ. ನೀವು ಉಳಿಸಿದ ಪ್ರತಿಯೊಂದು ಹಣವು, ಅಷ್ಟೇ ಗಳಿಕೆಗೆ ಸಮ ಎಂದರ್ಥ. ನಾವು ಉಳಿಸಿದ ಹಣಕ್ಕೆ ಒಳ್ಳೆಯ ಬಡ್ಡಿ ಸಿಕ್ಕರೆ ಇನ್ನಷ್ಟು ಹಣ ಉಳಿತಾಯಕ್ಕೆ (Savings) ಪ್ರೇರಣೆ ಸಿಗುವುದು ಹೌದು. ಈಗ ಆರ್ಬಿಐ ರೆಪೋ ದರ ಏರಿಸಿದ ಬಳಿಕ ಹಲವು ಬ್ಯಾಂಕುಗಳು ಗ್ರಾಹಕರ ಉಳಿತಾಯ ಹಣಕ್ಕೆ ಹೆಚ್ಚಿನ ಬಡ್ಡಿ ಕೊಡುತ್ತಿವೆ. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳು (Fixed Deposits) ಮತ್ತೆ ಜನಪ್ರಿಯತೆ ಮತ್ತು ಬೇಡಿಕೆ ಪಡೆದುಕೊಂಡಿವೆ. ಬ್ಯಾಂಕುಗಳು ಪೈಪೋಟಿಯ ಮೇಲೆ ಬಡ್ಡಿ ದರಗಳ ಆಫರ್ ಮಾಡುತ್ತಿವೆ. ಇಂಥ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸರ್ವೋತ್ತಮ್ ಯೋಜನೆ (SBI Sarvottam Scheme) ಆಕರ್ಷಕ ಎನಿಸಿದೆ.
ಎಸ್ಬಿಐನಲ್ಲಿ 15 ಲಕ್ಷ ರೂಗೂ ಹೆಚ್ಚು ಮೊತ್ತದ ನಿಶ್ಚಿತ ಠೇವಣಿಗೆ ಅತಿಹೆಚ್ಚು ಬಡ್ಡಿ ಸಿಗುತ್ತದೆ. ಸರ್ವೋತ್ತಮ್ ಸ್ಕೀಮ್ ಎಂದು ಕರೆಯಲಾಗುವ ಯೋಜನೆಯಲ್ಲಿ ಹಿರಿಯ ನಾಗರಿಕರು 2 ವರ್ಷ ಕಾಲ ಇರಿಸಲಾಗುವ 15 ಲಕ್ಷ ರೂ ಮೊತ್ತದ ನಿಶ್ಚಿತ ಠೇವಣಿಗಳಿಗೆ ವಾರ್ಷಿಕವಾಗಿ ಗರಿಷ್ಠ ಶೇ. 7.9ರಷ್ಟು ಬಡ್ಡಿ ಪಡೆಯಬಹುದು. ಇದೇ ಯೋಜನೆಯಲ್ಲಿ ಇತರರಿಗೆ ಸಿಗುವ ಬಡ್ಡಿ ಶೇ. 7.4 ಇದೆ.
ಸರ್ವೋತ್ತಮ್ ಸ್ಕೀಮ್ನಲ್ಲಿ ಹಿರಿಯ ನಾಗರಿಕರು 2 ವರ್ಷದ ಬದಲು 1 ವರ್ಷಕ್ಕೆ ಈ 15 ಲಕ್ಷ ರೂ ಠೇವಣಿ ಇರಿಸಿದರೆ ಶೇ. 7.6ರಷ್ಟು ಬಡ್ಡಿ ಪಡೆಯಬಹುದು. ಇತರರು ಶೇ. 7.1ರಷ್ಟು ಬಡ್ಡಿ ಪಡೆಯಬಹುದು. ಫೆಬ್ರುವರಿ 17ರಿಂದ ಈ ಹೊಸ ಬಡ್ಡಿದರಗಳು ಅನ್ವಯ ಆಗುತ್ತಿವೆ.
ಹಿರಿಯ ನಾಗರಿಕರು 2 ವರ್ಷದ ಅವಧಿಗೆ 15 ಲಕ್ಷ ರೂಗಳ ಠೇವಣಿ ಇರಿಸಿದರೆ ವಾರ್ಷಿಕ ಬಡ್ಡಿ ಶೇ. 7.9 ಸಿಗುತ್ತದಾದರೂ ಒಂದು ವರ್ಷದಲ್ಲಿ ಠೇವಣಿಯು ಶೇ. 8.14ರಷ್ಟು ಬೆಳೆಯುತ್ತದೆ.
ಇದನ್ನೂ ಓದಿ: Mutual Fund: ಈ ಮ್ಯೂಚುವಲ್ ಫಂಡ್ನಲ್ಲಿ ದಿನಕ್ಕೆ 50 ರೂ. ಹೂಡಿಕೆ ಮಾಡಿ, 30 ಲಕ್ಷ ಗಳಿಸಿ!
ಆದರೆ, ಇತರೆಲ್ಲೆಡೆ ಇರುವಂತೆ ಎಸ್ಬಿಐನಲ್ಲೂ ಇನ್ನೂ ದೊಡ್ಡ ಮೊತ್ತದ ಠೇವಣಿಗಳಿಗೆ ಹೆಚ್ಚು ಬಡ್ಡಿ ಸಿಗುವುದಿಲ್ಲ. 2ರಿಂದ 5 ಕೋಟಿ ರೂವರೆಗಿನ ಠೇವಣಿಗಳಿಗೆ ಎಸ್ಬಿಐ ಒಂದು ವರ್ಷಕ್ಕೆ ಶೇ. 7.55 ಬಡ್ಡಿ ನೀಡುತ್ತದೆ. ಎರಡು ವರ್ಷಕ್ಕಾದರೆ ಬಡ್ಡಿ ಇನ್ನೂ ತುಸು ಕಡಿಮೆ ಇರುತ್ತದೆ.
ಸರ್ವೋತ್ತಮ್ ಸ್ಕೀಮ್ ಅಲ್ಲದೇ ಎಸ್ಬಿಐನ ಸಾಮಾನ್ಯ ಠೇವಣಿಗಳಲ್ಲೂ ಹಿರಿಯ ನಾಗರಿಕರಿಗೆ ಉತ್ತಮ ಬಡ್ಡಿ ಆಫರ್ ಇದೆ. 2ರಿಂದ 3 ವರ್ಷ ಅವಧಿಯ ಠೇವಣಿಗಳಿಗೆ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ಅಮೃತ್ ಕಳಶ್ ಸ್ಕೀಮ್ ಅಡಿಯಲ್ಲಿ 400 ದಿನಗಳ ಕಾಲ (ಸುಮಾರು 13 ತಿಂಗಳು) ಠೇವಣಿ ಇರಿಸಿದರೆ ಶೇ. 7.6 ಬಡ್ಡಿ ಬರುತ್ತದೆ.
ಇತರ ಉಳಿತಾಯ ಯೋಜನೆಗಳಿಂದೆಷ್ಟು ರಿಟರ್ನ್ಸ್?
ಬ್ಯಾಂಕುಗಳಲ್ಲದೇ ಬೇರೆಡೆಯೂ ಹಲವು ಉಳಿತಾಯ ಯೋಜನೆಗಳುಂಟು. ಪಿಪಿಎಫ್, ಪೋಸ್ಟ್ ಆಫೀಸ್, ಎನ್ಎಸ್ಸಿ, ಕೆವಿಸಿ ಇತ್ಯಾದಿ ಜನಪ್ರಿಯ ಹೂಡಿಕೆ ಮಾರ್ಗಗಳಿವೆ. ಪಿಪಿಎಫ್ನಲ್ಲಿ ನೀವು ಒಂದು ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂ ಹೂಡಿಕೆ ಮಾಡಬಹುದು. ಇಲ್ಲಿ ವಾರ್ಷಿಕವಾಗಿ ಶೇ. 7.1ರಷ್ಟು ಬಡ್ಡಿ ಸಿಗುತ್ತದೆ. ಇದರ ಜೊತೆಗೆ ತೆರಿಗೆ ರಿಯಾಯಿತಿಯೂ ಇದೆ.
ಅಂಚೆ ಕಚೇರಿಯಲ್ಲಿ 5 ವರ್ಷದ ಠೇವಣಿಗಳಿಗೆ ವಾರ್ಷಿಕ ಬಡ್ಡಿ ಶೇ. 7 ಇದೆ. 1 ವರ್ಷ ಮತ್ತು 2 ವರ್ಷದ ಠೇವಣಿಗಳಿಗೆ ಶೇ. 6.6 ಮತ್ತು ಶೇ. 6.8 ಬಡ್ಡಿ ಸಿಗುತ್ತದೆ. ಇದರಡಿಯಲ್ಲೇ ಇರುವ ಮಾಸಿಕ ಆದಾಯ ಯೋಜನೆಯಿಂದ ಶೇ. 7.1ರಷ್ಟು ಬಡ್ಡಿ ಸಿಗುತ್ತದೆ.
ಇನ್ನು, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್ಸಿ) ಯೋಜನೆಯಲ್ಲಿ ಇರಿಸುವ ಠೇವಣಿಗಳಿಗೆ ಶೇ. 7ರಷ್ಟು ಬಡ್ಡಿ ಸಿಕ್ಕರೆ, ಕಿಸಾನ್ ವಿಕಾಸ್ ಪತ್ರ ಶೇ. 7.2ರಷ್ಟು ಬಡ್ಡಿ ಕೊಡುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:20 pm, Wed, 1 March 23