ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ಮೂರೇ ದಿನ ಬಾಕಿ ಇದೆ. ಇನ್ನೂ ಬಹಳ ಮಂದಿ ಐಟಿಆರ್ ಸಲ್ಲಿಸುವುದು ಬಾಕಿ ಇದೆ. ನೀವು ಇನ್ನೂ ರಿಟರ್ನ್ ಫೈಲ್ ಮಾಡದೇ ಇದ್ದರೆ ಸಾಧ್ಯವಾದಷ್ಟೂ ಬೇಗ ಮಾಡಿ. ಆಗಸ್ಟ್ 1ರಿಂದ ಅನಗತ್ಯವಾಗಿ ದಂಡ ಕಟ್ಟಬೇಕಾಗಬಹುದು. ಐಟಿಆರ್ ಸಲ್ಲಿಸುವ ಪ್ರಕ್ರಿಯೆ ತುಸು ಸರಳವೇ ಇದೆ. ನೀವು ರಿಟರ್ನ್ ಸಲ್ಲಿಸುವ ಮುನ್ನ ಫಾರ್ಮ್ 26ಎಎಸ್ ಮತ್ತು ಎಐಎಸ್ ಅನ್ನು ಖಂಡಿತವಾಗಿ ಪರಿಶೀಲಿಸಿ. ಇದರಿಂದ ರಿಟರ್ನ್ ಫೈಲ್ ಮಾಡುವಾಗ ಯಾವ ಮಾಹಿತಿ ಕೈಬಿಟ್ಟುಹೋಗುವುದನ್ನು ತಡೆಯಬಹುದು. ಐಟಿಆರ್ ಸಲ್ಲಿಸಲು ಮಾತ್ರವಲ್ಲ, ಯಾವುದೇ ಸಂದರ್ಭದಲ್ಲೂ ತೆರಿಗೆ ಪಾವತಿದಾರನಿಗೆ ಈ ಎಐಎಸ್ ಎಂಬುದು ಟ್ಯಾಕ್ಸ್ ಟ್ರ್ಯಾಕಿಂಗ್ ಸಾಧನ ಇದ್ದಂತೆ. ಈಗ ಎಐಎಸ್ ಅಥವಾ ಆ್ಯನುಯಲ್ ಇನ್ಫಾರ್ಮೇಶನ್ ಸ್ಟೇಟ್ಮೆಂಟ್ನ ಮೊಬೈಲ್ ಆ್ಯಪ್ ಕೂಡ ಲಭ್ಯ ಇದೆ. ನೀವು ಯಾವಾಗ ಬೇಕಾದರೂ ನಿಮ್ಮ ಆದಾಯ ಮತ್ತು ತೆರಿಗೆ ಬಾಧ್ಯತೆಗಳನ್ನು ಗಮನಿಸುತ್ತಿರಬಹುದು. ಅಗತ್ಯಬಿದ್ದಲ್ಲಿ ನಿರ್ದಿಷ್ಟ ತೆರಿಗೆ ವಿಚಾರದಲ್ಲಿ ನಿಮ್ಮ ಆದಾಯದ ಬಗ್ಗೆ ಸ್ಪಷ್ಟೀಕರಣ ಕೊಡಲೂ ಬಹುದು.
ಇನ್ಕಮ್ ಟ್ಯಾಕ್ಸ್ ಪೋರ್ಟಲ್ನಲ್ಲಿ ಇರುವ ಫಾರ್ಮ್ 26ಎಎಸ್ನ ಮುಂದುವರಿದ ಭಾಗವಾಗಿ ಎಐಎಸ್ ಇದೆ. ಫಾರ್ಮ್ 26ಎಎಸ್ನಲ್ಲಿ ನಿಮ್ಮ ಎಲ್ಲಾ ಆದಾಯ ಮತ್ತು ಹೂಡಿಕೆಗಳ ಮಾಹಿತಿ ಇರುತ್ತದೆ. ಒಂದು ಹಣಕಾಸು ವರ್ಷದ ಅವಧಿಯಲ್ಲಿ ಆಸ್ತಿ ಖರೀದಿ, ದೊಡ್ಡ ಮೊತ್ತದ ಹೂಡಿಕೆ, ಟಿಡಿಎಸ್ ಅಥವಾ ಟಿಸಿಎಸ್ ವಹಿವಾಟು ಇತ್ಯಾದಿ ವಿವರಗಳನ್ನು 26ಎಎಸ್ ಫಾರ್ಮ್ನಲ್ಲಿ ನೋಡಬಹುದು.
ಇನ್ನು, ಎಐಎಸ್ನಲ್ಲಿ ನಿಮ್ಮ ಎಸ್ಬಿ ಖಾತೆಯಲ್ಲಿರುವ ಹಣಕ್ಕೆ ಸಿಕ್ಕಿರುವ ಬಡ್ಡಿ, ಡಿವಿಡೆಂಡ್, ಬಾಡಿಗೆ ಆದಾಯ, ಠೇವಣಿ ಮೇಲಿನ ಬಡ್ಡಿ, ಜಿಎಸ್ಟಿ ಟರ್ನೋವರ್, ಆಸ್ತಿಗಳ ಖರೀದಿ ಮತ್ತು ಮಾರಾಟ, ವಿದೇಶಕ್ಕೆ ಕಳುಹಿಸಿದ ಹಣ ಇತ್ಯಾದಿ ವಿವರ ಲಭ್ಯ ಇರುತ್ತದೆ.
ಈ ಪೋರ್ಟಲ್ನಲ್ಲಿ ಆ್ಯನುಯಲ್ ಇನ್ಫಾರ್ಮೇಶನ್ ಸ್ಟೇಟ್ಮೆಂಟ್ ಅನ್ನು ವೀಕ್ಷಿಸಬಹುದು. ಟ್ಯಾಕ್ಸ್ಪೇಯರ್ ಇನ್ಫಾರ್ಮೇಶನ್ ಸಮ್ಮರಿ (ಟಿಐಎಸ್) ಅನ್ನೂ ವೀಕ್ಷಿಸಬಹುದು.
ಇದನ್ನೂ ಓದಿ: IT Return: ಒಂದಿಷ್ಟು ತೆರಿಗೆ ಉಳಿಸಲು ಆದಾಯ ಕಡಿಮೆ ತೋರಿಸದಿರಿ; ಜೈಲಿಗೆ ಹೋಗಬೇಕಾದೀತು ಜೋಕೆ..!
ಇದೇ ಮಾರ್ಚ್ ತಿಂಗಳಲ್ಲಿ ಎಐಎಸ್ನ ಮೊಬೈಲ್ ಆ್ಯಪ್ ಅನ್ನೂ ಬಿಡುಗಡೆ ಮಾಡಲಾಗಿತ್ತು. ಪೋರ್ಟಲ್ನಲ್ಲಿರುವ ಎಐಎಸ್ನಲ್ಲಿ ಲಭ್ಯ ಇರುವ ಹೆಚ್ಚಿನ ಮಾಹಿತಿ ಮೊಬೈಲ್ ಅ್ಯಪ್ನಲ್ಲೂ ಇರುತ್ತದೆ. ಗೂಗಲ್ ಪ್ಲೇಸ್ಟೋರ್ ಅಥವಾ ಆ್ಯಪ್ ಸ್ಟೋರ್ನಿಂದ ಉಚಿತವಾಗಿ ಎಐಎಸ್ ಅ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಅ್ಯಪ್ ತೆರೆದು, ನಿಮ್ಮ ಪ್ಯಾನ್ ನಂಬರ್ ನೀಡಿ ನೊಂದಾಯಿಸಿಕೊಳ್ಳಬಹುದು. ಇದಕ್ಕೆ ನೀವು ಇಫೈಲಿಂಗ್ ಪೋರ್ಟಲ್ನಲ್ಲಿ ಮೊಬೈಲ್ ನಂಬರ್ ಮತ್ತು ಇಮೇಲ್ ನೊಂದಾಯಿಸಿರಬೇಕು. ಎಐಎಸ್ ಆ್ಯಪ್ನಲ್ಲಿ ಸೈನ್ ಅಪ್ ಆಗುವಾಗ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಮತ್ತು ಇಮೇಲ್ಗೆ ಒಟಿಪಿ ಬರುತ್ತದೆ. ಅದನ್ನು ಬಳಸಿ ಆ್ಯಪ್ಗೆ ಸೈನಪ್ ಅಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ