ಆಧಾರ್ ನಮಗೆ ಅನಿವಾರ್ಯ ಅಲ್ಲವಾದರೂ ಬಹಳ ಅಗತ್ಯ ಇರುವ ದಾಖಲೆ. ವೈಯಕ್ತಿಕ ಗುರುತು, ವಿಳಾಸ (Address Proof) ಇತ್ಯಾದಿಗೆ ಇದು ಅಧಿಕೃತ ಪುರಾವೆ. ಹಾಗೆಯೇ, ಸರ್ಕಾರದ ಯೋಜನೆಗಳಿಗೆ ಆಧಾರ್ ಬೇಕು. ಇದೇ ಹೊತ್ತಿನಲ್ಲಿ ಆಧಾರ್ ನಂಬರ್ಗಳು ಖರೀಮರ ಕೈಗೆ ಸಿಕ್ಕು ದುರುಪಯೋಗವಾಗುವ ಪ್ರಕರಣಗಳು ಅಲ್ಲಲ್ಲಿ ಬೆಳಕಿಗೆ ಬಂದಿವೆ. ಹೀಗಾಗಿ, ಎಲ್ಲೆಡೆ ಆಧಾರ್ ನಂಬರ್ ಕೊಡುವ ಮುನ್ನ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಇದೆ. ಆಧಾರ್ನ ವರ್ಚುವಲ್ ಐಡಿಯಿಂದ (Aadhaar Virtual ID) ಇದನ್ನು ತಪ್ಪಿಸಲು ಸಾಧ್ಯ.
ಆಧಾರ್ ನಂಬರ್ ಬದಲು ಅದರ ವರ್ಚುವಲ್ ಐಡಿಯನ್ನು ಬಳಸುವ ಅವಕಾಶ ಇದೆ. ಗುರುತಿನ ಅಧಿಕೃತತೆ ಅಥವಾ ಅಥೆಂಟಿಕೇಶನ್ ಮಾಡುವಾಗ ಅಥವಾ ಇಕೆವೈಸಿ ಮಾಡುವಾಗ ಆಧಾರ್ ನಂಬರ್ ಬದಲು ಆಧಾರ್ ವಿಐಡಿ ಬಳಸಬಹುದು. ಇದು ಆಧಾರ್ ನಂಬರ್ಗೆ ಜೋಡಿತವಾದ 16 ಅಂಕಿಗಳ ತಾತ್ಕಾಲಿಕ ಸಂಖ್ಯೆ. ಆಧಾರ್ ನಂಬರ್ ಬಹಿರಂಗಪಡಿಸದೆಯೇ ವರ್ಚುವಲ್ ಐಡಿಯನ್ನು ಆಧಾರ್ನಂತೆಯೇ ಬಳಸಬಹುದು.
ಆಧಾರ್ ನಂಬರ್ ಹೊಂದಿರುವವರು ವಿಐಡಿ ಜನರೇಟ್ ಮಾಡಲು ಹಲವು ಆಯ್ಕೆಗಳಿವೆ. ಹಳೆಯ ವಿಐಡಿ ಪಡೆಯಲು, ಹೊಸ ವಿಐಡಿ ಸೃಷ್ಟಿಸಲು ಅವಕಾಶಗಳಿವೆ.
ಆಧಾರ್ನ ಹೆಲ್ಪ್ಲೈನ್ ನಂಬರ್ 1947ಗೆ ಎಸ್ಸೆಮ್ಮೆಸ್ ಕಳುಹಿಸುವ ಮೂಲಕ ವಿಐಡಿ ಜನರೇಟ್ ಮಾಡಬಹುದು. ಅದಕ್ಕಾಗಿ ಯುಐಡಿಎಐನ ಈ ನೇರ ಲಿಂಕ್ ಅನ್ನು ಕ್ಲಿಕ್ ಮಾಡಿ: myaadhaar.uidai.gov.in/genericGenerateOrRetriveVID
ಅಲ್ಲಿ ಆಧಾರ್ ನಂಬರ್ ಹಾಗೂ ಕ್ಯಾಪ್ಚಾ ಕೋಡ್ ಹಾಕಿ ಒಟಿಪಿ ಪಡೆದು ಸಬ್ಮಿಟ್ ಮಾಡಿ. ನಿಮಗೆ 16 ಅಂಕಿಗಳ ವರ್ಚುವಲ್ ಐಡಿ ಸಿಗುತ್ತದೆ.
ಮೈ ಆಧಾರ್ ಪೋರ್ಟಲ್ನಲ್ಲಿ ಮಾತ್ರವಲ್ಲದೇ ಆಧಾರ್ನ ಮೊಬೈಲ್ ಆ್ಯಪ್ನಲ್ಲೂ ವಿಐಡಿ ಸೃಷ್ಟಿಸುವ ಅವಕಾಶವಿದೆ.
ಇಮೇಲ್ ಇತ್ಯಾದಿ ಅಪ್ಲಿಕೇಶನ್ನಲ್ಲಿ ಪಾಸ್ವರ್ಡ್ ಮರೆತುಹೋದರೆ ಫರ್ಗಾಟ್ ಪಾಸ್ವರ್ಡ್ ಎಂಬ ಅವಕಾಶ ಬಳಸಿ ಪಾಸ್ವರ್ಡ್ ಮರಳಿಪಡೆಯುತ್ತೇವೆ. ಅದೇ ರೀತಿ ನೀವು ಹಿಂದೆ ಪಡೆದ ಆಧಾರ್ ವರ್ಚುವಲ್ ಐಡಿಯ ನಂಬರ್ ಅನ್ನು ಮರೆತುಹೋಗಿದ್ದರೆ, ಅದನ್ನು ಮರಳಿ ಪಡೆಯಬಹುದು. ಅಥವಾ ಹೊಸ ಐಡಿಯನ್ನೂ ಸೃಷ್ಟಿಸಬಹುದು.
ಮೈ ಆಧಾರ್ ಪೋರ್ಟಲ್ ಮತ್ತು ಆ್ಯಪ್ ಮೂಲಕ ಇದು ಸಾಧ್ಯ. ಹಾಗೆಯೇ ಎಸ್ಸೆಮ್ಮೆಸ್ ಮೂಲಕವೂ ವರ್ಚುಲ್ ಐಡಿಯನ್ನು ಮರಳಿ ಪಡೆಯಬಹುದು. RVID ಹಾಗೂ ಆಧಾರ್ ನಂಬರ್ನ ಕೊನೆಯ 4 ಅಂಕಿಗಳನ್ನು ಟೈಪಿಸಿ 1947ಗೆ ಕಳುಹಿಸಿದರೆ ನಿಮ್ಮ ಹಿಂದಿನ ವರ್ಚುವಲ್ ಐಡಿಯನ್ನು ಮರಳಿ ಪಡೆಯಬಹುದು.
ನಾವು ಒಮ್ಮೆ ಆಧಾರ್ ವರ್ಚುವಲ್ ಐಡಿ ಸೃಷ್ಟಿಸಿದರೆ ಅದು ಖಾಯಂ ಎಂಬಂತಿಲ್ಲ. ಅದೇ ನಂಬರ್ ಅನ್ನು ಮರಳಿಪಡೆಯಬಹುದು, ಅಥವಾ ಹೊಸ ನಂಬರ್ ಕೂಡ ಪಡೆಯಬಹುದು. ಹೊಸ ವಿಐಡಿ ರಚಿಸಿದರೆ ಹಳೆಯ ವಿಐಡಿ ನಿಷ್ಕ್ರಿಯಗೊಳ್ಳುತ್ತದೆ.
ಯಾವುದೇ ಆಧಾರ್ ವರ್ಚುವಲ್ ಐಡಿ ಹೊಸ ವಿಐಡಿ ರಚನೆಯಾಗುವವರೆಗೂ ಬಳಕೆಗೆ ಸಿಂಧುವಾಗಿರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ