ಕ್ರೆಡಿಟ್ ಕಾರ್ಡ್ ರದ್ದುಗೊಳಿಸಿದರೆ ಪರಿಣಾಮಗಳೇನು? ಕ್ರೆಡಿಟ್ ಸ್ಕೋರ್ ಕಡಿಮೆಗೊಳ್ಳುತ್ತಾ? ಇಲ್ಲಿದೆ ಮಾಹಿತಿ

Closing the credit card and the consequences: ಕ್ರೆಡಿಟ್ ಕಾರ್ಡ್ ನೀವು ಮಾಡುವ ಖರೀದಿಗೆ ನಿರ್ದಿಷ್ಟ ಅವಧಿವರೆಗೆ ಬಡ್ಡಿರಹಿತವಾಗಿ ಸಾಲ ನೀಡುತ್ತದೆ. ತತ್​ಕ್ಷಣಕ್ಕೆ ಹಣ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಆದರೆ, ಹೆಚ್ಚೆಚ್ಚು ಶಾಪಿಂಗ್ ಮಾಡುವಂತೆ ಇದು ಉತ್ತೇಜಿಸಬಹುದು. ಹೀಗಾಗಿ, ಕೆಲವರು ಕ್ರೆಡಿಟ್ ಕಾರ್ಡ್ ಮುಚ್ಚಲು ಮುಂದಾಗುತ್ತಾರೆ. ಹೀಗೆ ಮಾಡುವುದರಿಂದ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ?

ಕ್ರೆಡಿಟ್ ಕಾರ್ಡ್ ರದ್ದುಗೊಳಿಸಿದರೆ ಪರಿಣಾಮಗಳೇನು? ಕ್ರೆಡಿಟ್ ಸ್ಕೋರ್ ಕಡಿಮೆಗೊಳ್ಳುತ್ತಾ? ಇಲ್ಲಿದೆ ಮಾಹಿತಿ
ಕ್ರೆಡಿಟ್ ಕಾರ್ಡ್

Updated on: Oct 10, 2025 | 3:42 PM

ಹೆಚ್ಚು ಸಂಖ್ಯೆಯಲ್ಲಿ ಇವೆ ಎಂದಲೋ, ಅನವಶ್ಯಕ ಎಂದನಿಸಿಯೋ ಕ್ರೆಡಿಟ್ ಕಾರ್ಡ್ (credit card) ಅನ್ನು ರದ್ದುಗೊಳಿಸಲು ನೀವು ಮುಂದಾಗಬಹುದು. ಕಾರ್ಡ್ ರದ್ದುಗೊಳಿಸಿದರೆ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು ಎಂದು ಹೇಳುವವರು ಇದ್ದಾರೆ. ಆದರೆ ನಿಜವಾಗಿಯೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದಾ? ವಸ್ತುಸ್ಥಿತಿ ಎಂದರೆ ಕ್ರೆಡಿಟ್ ಕಾರ್ಡ್ ಅನ್ನು ರದ್ದು ಮಾಡುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನೇರ ಪರಿಣಾಮ ಬೀರುವುದಿಲ್ಲ. ಪರೋಕ್ಷ ಪರಿಣಾಮ ಕೂಡ ನಿಮ್ಮ ಹಣಕಾಸು ಬಳಕೆಯ ಮೇಲೆ ಅವಲಂಬಿತವಾಗಿರುತ್ತದೆ. ಕ್ರೆಡಿಟ್ ಕಾರ್ಡ್ ನಿಲ್ಲಿಸುವುದರಿಂದ ಪರಿಣಾಮಗಳೇನು ಎಂದು ‘ಕ್ಯಾಷ್ ಕರೋ’ ಎನ್ನುವ ಫಿನ್​ಟೆಕ್ ಕಂಪನಿಯ ಸ್ಥಾಪಕ ರೋಹನ್ ಭಾರ್ಗವ ಮಾಹಿತಿ ಹಂಚಿಕೊಂಡಿದ್ದಾರೆ.

‘ಕ್ರೆಡಿಟ್ ಕಾರ್ಡ್ ನಿಲ್ಲಿಸುವುದು ತಪ್ಪೇನಲ್ಲ. ಆದರೆ, ಯೋಚಿಸಿ ಮಾಡಬೇಕು. ಅದು ನಿಮ್ಮ ಕ್ರೆಡಿಟ್ ಬಳಕೆ ಅನುಪಾತವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ನಿಮ್ಮ ಕ್ರೆಡಿಟ್ ಹಿಸ್ಟರಿಯನ್ನು ಕಡಿಮೆಗೊಳಿಸಬಹುದು. ಸಾಲದ ವೈವಿಧ್ಯತೆಯನ್ನು ತಗ್ಗಿಸಬಹುದು’ ಎಂದು ಭಾರ್ಗವ ಹೇಳುತ್ತಾರೆ.

ಕ್ರೆಡಿಟ್ ಸ್ಕೋರ್ ಕಡಿಮೆಯಾಗುವ ಸಾಧ್ಯತೆ ಹೇಗೆ?

ನಿಮ್ಮ ಬಳಿ ಮೂರು ಕ್ರೆಡಿಟ್ ಕಾರ್ಡ್​ಗಳಿವೆ ಎಂದಿಟ್ಟುಕೊಳ್ಳಿ. ಇದರಲ್ಲಿ ಕ್ರಮವಾಗಿ 20,000 ರೂ, 10,000 ರೂ ಮತ್ತು 20,000 ರೂ ಹೀಗೆ ಒಟ್ಟು 50,000 ರೂ ಕ್ರೆಡಿಟ್ ಮಿತಿಯನ್ನು ಈ ಕಾರ್ಡ್​ಗಳು ಹೊಂದಿರುತ್ತವೆ ಎಂದುಕೊಳ್ಳೋಣ. ಈ ಮೂರು ಕಾರ್ಡ್​ಗಳಿಂದ ಸೇರಿ ತಿಂಗಳಿಗೆ 25,000 ರೂ ಮೊತ್ತದಷ್ಟು ಶಾಪಿಂಗ್ ಮಾಡುತ್ತೀರಿ. ನಿಮ್ಮ ಕ್ರೆಡಿಟ್ ಯುಟಿಲೈಸೇಶನ್ ರೇಶಿಯೋ ಅಥವಾ ಕ್ರೆಡಿಟ್ ಬಳಕೆ ಅನುಪಾತ ಶೇ. 50 ಇರುತ್ತದೆ.

ಇದನ್ನೂ ಓದಿ: ಈ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ಡೆಪಾಸಿಟ್ ರೇಟ್ ಶೇ. 8.10; ಇದರ ವಾರ್ಷಿಕ ಯೀಲ್ಡ್ ಶೇ. 8.35

ಈಗ ನೀವು 20,000 ರೂ ಕ್ರೆಡಿಟ್ ಮಿತಿ ಇರುವ ಕಾರ್ಡ್ ರದ್ದು ಮಾಡಿದಾಗ ನಿಮ್ಮ ಉಳಿದ ಎರಡು ಕಾರ್ಡ್​ಗಳಿಂದ ಇರುವ ಕ್ರೆಡಿಟ್ ಮಿತಿ 30,000 ರೂ ಮಾತ್ರವೇ. ಈಗ ನೀವು ಆ ಎರಡು ಕಾರ್ಡ್ ಬಳಸಿ 25,000 ರೂ ಶಾಪಿಂಗ್ ಮಾಡಿದಾಗ, ನಿಮ್ಮ ಕ್ರೆಡಿಟ್ ಬಳಕೆ ಅನುಪಾತ ಶೇ. 80 ಅನ್ನು ಮೀರಿ ಹೋಗುತ್ತದೆ.

ಸಾಮಾನ್ಯವಾಗಿ, ಕ್ರೆಡಿಟ್ ಯುಟಿಲೈಸೇಶನ್ ರೇಶಿಯೋ ಹೆಚ್ಚು ಇದ್ದಷ್ಟೂ ಕ್ರೆಡಿಟ್ ಸ್ಕೋರ್​ಗೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚು. ಹೀಗಾಗಿ, ಯಾವುದೇ ಕ್ರೆಡಿಟ್ ಕಾರ್ಡ್ ರದ್ದುಗೊಳಿಸುವ ಮುನ್ನ ಈ ಅಂಶ ಪರಿಗಣಿಸಬೇಕು.

ನಿಮ್ಮ ಕ್ರೆಡಿಟ್ ಹಿಸ್ಟರಿಯೂ ಗಮನದಲ್ಲಿರಲಿ…

ನೀವು ತುಂಬಾ ದಿನಗಳಿಂದ ಬಳಸಿರುವ ಮತ್ತು ಸರಿಯಾಗಿ ಬಿಲ್​ಗಳನ್ನು ಪಾವತಿಸಿಕೊಂಡು ಬಂದಿರುವ ಕ್ರೆಡಿಟ್ ಕಾರ್ಡ್ ನಿಮ್ಮ ಆರ್ಥಿಕ ಶಿಸ್ತಿಗೆ ಪ್ರತಿಬಿಂಬವೆಂಬಂತಿರುತ್ತದೆ. ಬ್ಯಾಂಕುಗಳು ನಿಮ್ಮ ಕ್ರೆಡಿಟ್ ರಿಪೋರ್ಟ್ ಪರಿಶೀಲಿಸುವಾಗ ನಿಮ್ಮ ಕ್ರೆಡಿಟ್ ಹಿಸ್ಟರಿಯನ್ನೂ ನೋಡುತ್ತವೆ. ಆಗ ಕ್ರೆಡಿಟ್ ಕಾರ್ಡ್​ನ ದತ್ತಾಂಶ ಉಪಯೋಗಕ್ಕೆ ಬರುತ್ತದೆ. ಇಂಥ ಕಾರ್ಡ್​ಗಳನ್ನು ತ್ಯಜಿಸುವ ಮುನ್ನ ಆಲೋಚಿಸಬೇಕು.

ಇದನ್ನೂ ಓದಿ: ವಯಸ್ಸಾದವರಿಗೆ ಶೇ. 8.5ರವರೆಗೆ ಬಡ್ಡಿ ನೀಡುವ ಫಿಕ್ಸೆಡ್ ಡೆಪಾಸಿಟ್; ಇಲ್ಲಿವೆ ವಿವಿಧ ಬ್ಯಾಂಕುಗಳ ಎಫ್​ಡಿ ದರಗಳು

ಕ್ರೆಡಿಟ್ ಸ್ಕೋರ್ ಹಾಳಾಗದಿರಲು ಹೀಗೆ ಮಾಡಿ…

  • ಕ್ರೆಡಿಟ್ ಕಾರ್ಡ್ ಮುಚ್ಚುವ ಮುನ್ನ ಯಾವುದೇ ಬಾಕಿ ಬಿಲ್ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
  • ಒಮ್ಮೆಗೇ ಒಂದಕ್ಕಿಂತ ಹೆಚ್ಚು ಕಾರ್ಡ್​ಗಳನ್ನು ಮುಚ್ಚಬೇಡಿ
  • ಹಳೆಯ ಕಾರ್ಡ್​ಗಳನ್ನು ಸಕ್ರಿಯವಾಗಿರಿಸಿಕೊಳ್ಳಲು ಯತ್ನಿಸಿ.
  • ದುಬಾರಿ ವಾರ್ಷಿಕ ಶುಲ್ಕ ಇರುವ ಪ್ರೀಮಿಯಮ್ ಕಾರ್ಡ್​ಗಳು ನಿಮಗೆ ನಿರುಪಯುಕ್ತ ಎನಿಸಿದಲ್ಲಿ ಮುಚ್ಚಬಹುದು.
  • ತುಂಬಾ ಹೆಚ್ಚು ಸಂಖ್ಯೆಯಲ್ಲಿ ಕಾರ್ಡ್​ಗಳಿದ್ದರೆ ಕೆಲವನ್ನು ಮುಚ್ಚಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ