
ನೀವು ಎಷ್ಟೇ ಹಣ ಸಂಪಾದಿಸಿದರೂ ಅದು ಸುಖಾಸುಮ್ಮನೆ ಖರ್ಚಾಗಿ ಹೋಗುತ್ತಿದೆಯಾ? ಅರ್ಧಕ್ಕಿಂತ ಹೆಚ್ಚಿನ ಜನರ ಸಮಸ್ಯೆ ಇದು. ಯಾವುದೋ ಬಹಳ ದೊಡ್ಡ ವೆಚ್ಚ ಹಣವೆಲ್ಲಾ ಖರ್ಚಾಗಿ ಹೋಗುವುದು ಬೇರೆ, ಆದರೆ ದೈನಂದಿನ ಸಾಧಾರಣ ಜಂಜಾಟಗಳಿಂದಲೇ ಹಣ ಖರ್ಚು ಮಾಡಿಕೊಳ್ಳುವುದು ಬೇರೆ. ಅವಗಡಗಳು ನಮ್ಮ ಕೈಲಿರುವುದಿಲ್ಲ. ಆದರೆ ಇತರ ಹಲವು ವೆಚ್ಚಗಳ ನಿಯಂತ್ರಣ (Expense control) ನಮ್ಮ ಕೈಲಿರುತ್ತದೆ. ಸ್ವಲ್ಪ ಯೋಜಿಸಿದರೆ ವೆಚ್ಚಗಳ ಮೇಲೆ ಸುಲಭವಾಗಿ ಕಡಿವಾಣ ಹಾಕಬಹುದು. ಹೇಗೆ ಮಾಡಬೇಕೆಂದು ಗೊಂದಲ ಇದ್ದರೆ 50-30-20 ರೂಲ್ ನೆನಪಿನಲ್ಲಿಡಿ.
ನಿಮ್ಮ ಆದಾಯವನ್ನು ಹೇಗೆ ವ್ಯಯಿಸಬೇಕು, ಯಾವುದಕ್ಕೆ ಉಪಯೋಗಿಸಬೇಕು ಎಂದು ವರ್ಗೀಕರಿಸಲು ಈ 50-30-20 ನಿಯಮ ಬಳಸಿ. ಅನಿವಾರ್ಯ ವೆಚ್ಚಗಳಿಗೆ ಶೇ. 50, ತುಸು ಐಷಾರಾಮ್ಯಕ್ಕೆ ಶೇ. 30, ಹಾಗೂ ಉಳಿತಾಯ ಮತ್ತು ಹೂಡಿಕೆಗೆ ಶೇ. 20 ಎಂದು ಒಂದು ಚೌಕಟ್ಟು ಹಾಕಿಕೊಳ್ಳಿ.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಉಳಿತಾಯ ಮತ್ತು ಹೂಡಿಕೆಗೆಂದು ಶೇ. 20 ಮೀಸಲಿಟ್ಟಿರುವ ಹಣ ಯಾವತ್ತೂ ಕಡಿಮೆ ಆಗಬಾರದು.
ಇದನ್ನೂ ಓದಿ: 1 ಲಕ್ಷ ರೂನಿಂದ 2.71 ಕೋಟಿ ರೂ; ಭಾರತದ ಅತ್ಯಂತ ಹಳೆಯ ಫಂಡ್ನಿಂದ ಭರ್ಜರಿ ಆದಾಯ
ಇಲ್ಲಿ ಶೇ. 50ರ ಗುಂಪಿನಲ್ಲಿರುವ ಅನಿವಾರ್ಯ ವೆಚ್ಚಗಳಲ್ಲಿ ಮನೆ ಬಾಡಿಗೆ, ಶಾಲಾ ಫೀಸ್, ದಿನಸಿ ವಸ್ತು, ವಿದ್ಯುತ್, ನೀರು, ಗ್ಯಾಸ್ ಬಿಲ್ಗಳು, ಕಚೇರಿಗೆ ಓಡಾಡುವ ವೆಚ್ಚ, ಇನ್ಷೂರೆನ್ಸ್, ಸಾಲದ ಇಎಂಇ ಇತ್ಯಾದಿ ಸೇರುತ್ತವೆ. ಇವಿಷ್ಟೂ ಅನಿವಾರ್ಯ ವೆಚ್ಚಗಳು ನಿಮ್ಮ ಆದಾಯದ ಶೇ. 50 ಮೀರದಂತೆ ನೋಡಿಕೊಳ್ಳಬೇಕು. ಸಾಲ ತೆಗೆದುಕೊಂಡಾಗ ಇಎಂಐ ಕೂಡ ಇದೇ ವ್ಯಾಪ್ತಿಯಲ್ಲಿ ಬರಬೇಕು. ಈ ಅನಿವಾರ್ಯ ಖರ್ಚುಗಳು ಶೇ. 50ಕ್ಕಿಂತ ಕಡಿಮೆ ಇದ್ದರೆ, ಅದರಲ್ಲಿ ಮಿಗುವ ಹಣವನ್ನು ವ್ಯಯಿಸಬೇಡಿ.
ಇನ್ನು ಎರಡನೇ ವರ್ಗ ಅಗತ್ಯವಲ್ಲದ ಮತ್ತು ಐಷಾರಾಮಿ ಎನಿಸುವ ಖರ್ಚುಗಳು. ಇದರಲ್ಲಿ ನೀವು ಹೋಟೆಲ್ಗೆ ಹೋಗಿ ತಿನ್ನುವುದು, ಆನ್ಲೈನ್ ಶಾಪಿಂಗ್ ಮಾಡುವುದು, ಒಟಿಟಿ ಸಬ್ಸ್ಕ್ರಿಪ್ಷನ್, ಪ್ರವಾಸ, ಹೊಸ ಗ್ಯಾಜೆಟ್ ಖರೀದಿ, ವಾಹನ ಖರೀದಿ, ಸಿನಿಮಾ ಇತ್ಯಾದಿ ಖರ್ಚುಗಳು ಇದರಲ್ಲಿ ಬರುತ್ತವೆ. ಈ ವಿಭಾಗದಲ್ಲಿ ನೀವು ಎಷ್ಟು ಸಾಧ್ಯವೋ ಅಷ್ಟು ಖರ್ಚು ಕಡಿಮೆ ಮಾಡಲು ಯತ್ನಿಸಬಹುದು.
ಇದನ್ನೂ ಓದಿ: 2010ರಿಂದ ತಿಂಗಳಿಗೆ 15,000 ರೂ ಹೂಡಿಕೆ; ಇವತ್ತು ನೀವು ಕೋಟ್ಯಾಧಿಪತಿ; ಸಿಂಪಲ್ 15x15x15 ಫಾರ್ಮುಲಾದಿಂದ ಸಾಧ್ಯ
ನೀವು ಖರ್ಚು ಕಡಿಮೆ ಮಾಡಿ ಉಳಿಸಿದ ಹಣವನ್ನು ಹೂಡಿಕೆಗೆ ವರ್ಗಾಯಿಸಬಹುದು. ಅದಕ್ಕಿಂತ ಮುನ್ನ ಒಂದು ತುರ್ತು ನಿಧಿ ಮಾಡಿ ಅದರಲ್ಲಿ ನಿಮ್ಮ ಮಾಸಿಕ ವೆಚ್ಚದ ಆರರಷ್ಟು ಹಣವನ್ನು ಕೂಡಿಡಬೇಕು. ಇದು ನಿಮ್ಮ ಹಣಕಾಸು ಸಂಕಷ್ಟಕ್ಕೆ ಶಾಕ್ ಅಬ್ಸಾರ್ಬರ್ ರೀತಿ ಕೆಲಸ ಮಾಡುತ್ತದೆ. ಎಮರ್ಜೆನ್ಸಿ ಫಂಡ್ ಭರ್ತಿಯಾಗಿ ನಂತರ ಉಳಿಯುವ ಹಣವನ್ನು ಹೂಡಿಕೆಗೆ ಬಳಸಬಹುದು. ಹೀಗೆ ನೀವು ನಿಮ್ಮ ಆದಾಯದಲ್ಲಿ ಹೂಡಿಕೆಗೆಂದು ನಿಗದಿ ಮಾಡಿಕೊಂಡಿರುವ ಶೇ. 20ರ ಪ್ರಮಾಣವನ್ನು ಶೇ. 30, ಶೇ. 40ಕ್ಕೆ ಹೆಚ್ಚಿಸಿದರೆ ಇನ್ನೂ ಗ್ರೇಟ್. ಇದು ಸಾಧ್ಯವಾಗಬೇಕಾದರೆ ನಿಮ್ಮ ಲೈಫ್ಸ್ಟೈಲ್ ಬದಲಾವಣೆ ಆಗಬೇಕಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ