ನಿಮ್ಮಷ್ಟೇ, ಅಥವಾ ನಿಮಗಿಂತ ಕಡಿಮೆ ಆದಾಯ ಪಡೆಯವ ಜನರು ನಿಮಗಿಂತ ಹೆಚ್ಚು ಆಸ್ತಿ ಸಂಪಾದನೆ ಮಾಡಿದ್ದಾರೆಯಾ? ಹೆಚ್ಚು ಸೇವಿಂಗ್ಸ್ (savings) ಕೂಡಿಟ್ಟಿದ್ದಾರೆಯಾ? ನಿಮ್ಮ ಆದಾಯಕ್ಕಿಂತ ಖರ್ಚೇ ಹೆಚ್ಚಾಗಿ ಸೇವಿಂಗ್ ಅನ್ನೋ ಪದವೇ ಮರೆತುಹೋಗಿದೆಯಾ? ಹಾಗಿದ್ದರೆ ಇದು ನಿಮಗೆ ಹಣಕಾಸು ತುರ್ತುಸ್ಥಿತಿಯ ಕರೆಗಂಟೆ (warning bell) ಎಂದೇ ಅರ್ಥ ಮಾಡಿಕೊಳ್ಳಿ. ಈಗಾಗಲೇ ನೀವು ಸಾಲದ ಸುಳಿಗೆ ಸಿಲುಕಿರಬಹುದು, ಅಥವಾ ಸಾಲದ ಸುಳಿಗೆ (debt trap) ಸಿಲುಕುವ ಹೆದ್ದಾರಿಯಲ್ಲಿರಬಹುದು. ಅಷ್ಟಕ್ಕೂ ನಿಮಗಿಂತ ಕಡಿಮೆ ಆದಾಯ ಹೊಂದಿರುವ ಜನರು ನಿಮಗಿಂತ ಹೆಚ್ಚು ಸೇವಿಂಗ್ಸ್ ಕೂಡಿಡಲ ಹೇಗೆ ಸಾಧ್ಯವಾಗುತ್ತದೆ? ಯೋಚಿಸಬೇಕಾದ ಸಂಗತಿ…
ಸಣ್ಣ ಮಕ್ಕಳು ನೋಡಿ ಕಲಿಯುತ್ತಾರೆ. ಮನೆಯಲ್ಲಿ ಅಪ್ಪ ಅಪ್ಪ ಹಣ ಎಷ್ಟು ಖರ್ಚು ಮಾಡುತ್ತಾರೆ, ಹೇಗೆ ವ್ಯಯಿಸುತ್ತಾರೆ, ಯಾವುದಕ್ಕೆ ಹೆಚ್ಚು ವ್ಯಯಿಸುತ್ತಾರೆ ಇವೆಲ್ಲವನ್ನೂ ಮಕ್ಕಳು ಗಮನಿಸುತ್ತಾರೆ. ಅಂತೆಯೇ ನೀವು ಚಿಕ್ಕವರಿದ್ದಾಗ ಅಪ್ಪ ಅಮ್ಮನ ಹಣಕಾಸು ನಿರ್ವಹಣೆಯ ರೀತಿ ಕಂಡು ಬೆಳೆದಿರುತ್ತೀರಿ. ಅದೇ ಗುಣ ನಿಮಗೆ ಸ್ವಾಭಾವಿಕವಾಗಿ ಬಂದಿರಬಹುದು.
ಇದನ್ನೂ ಓದಿ: 50-30-20 Rule: ಅಗತ್ಯಗಳು, ಬಯಕೆಗಳಿಗೆ ಎಷ್ಟು ಹಣ ಬೇಕು? ಉಳಿತಾಯಕ್ಕೆ ಎಷ್ಟು ಬೇಕು? ನಿಮಗಿದೋ 50-30-20 ಸೂತ್ರ
ನೀವು ಹಣಕಾಸು ಶಿಸ್ತು ಬೆಳೆಸಿಕೊಳ್ಳುವುದು ಮುಖ್ಯ. ತಿಂಗಳ ಬಜೆಟ್, ವರ್ಷದ ಬಜೆಟ್ ಹೀಗೆ ನಿರ್ದಿಷ್ಟ ಅವಧಿಗೆ ಬಜೆಟ್ ಹಾಕಿಕೊಳ್ಳುವುದು ಬಹಳ ಮುಖ್ಯ. ಇಲ್ಲವಾದರೆ ಖರ್ಚುವೆಚ್ಚದ ಹಿಡಿತ ಸಾಧಿಸುವುದು ಕಷ್ಟ. ಸರ್ಕಾರದ ಬಜೆಟ್ನಲ್ಲಿ ಆದಾಯ ಮತ್ತು ಖರ್ಚಿನ ವಿವರ ಇರುವಂತೆ ನೀವೂ ಕೂಡ ಒಂದು ಬಜೆಟ್ ಹಾಕುವುದು ಉತ್ತಮ. ನಿಮ್ಮ ನಿತ್ಯದ ಖರ್ಚಿನ ವಿವರವನ್ನು ಬರೆದಿಡುವುದನ್ನು ರೂಢಿಸಿಕೊಳ್ಳಿ. ಇದರಿಂದ ನಿಮ್ಮ ಖರ್ಚು ಯಾವ್ಯಾವುದಕ್ಕೆ ಆಗುತ್ತದೆ ಎಂಬ ನಿಖರ ಮಾಹಿತಿ ನಿಮಗೆ ಸಿಗುತ್ತದೆ.
ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಇದರಿಂದ ಸುಲಭ ಸಾಧ್ಯವಾಗುತ್ತದೆ. ಸೇವಿಂಗ್ಸ್ ಕೂಡಿಡಲು ಇದು ಪ್ರೇರೇಪಿಸಬಹುದು.
ಇವತ್ತಿನದ್ದು ಇವತ್ತಿಗೆ ಎನ್ನುವ ಧೋರಣೆ ತಪ್ಪು
ಇವತ್ತಿನ ಜೀವನ ಎಂಜಾಯ್ ಮಾಡೋಣ, ನಾಳೆಯದ್ದು ನಾಳೆ ನೋಡೋಣ. ನಾಳೆ ಬದುಕಿರುತ್ತೇವೋ ಇಲ್ಲವೋ ಗೊತ್ತಿಲ್ಲ. ಯಾಕೆ ಸುಮ್ಮನೆ ಒದ್ದಾಟ ಎನ್ನುವ ಬಿಂದಾಸ್ ಕಾನ್ಸೆಪ್ಟ್ ನಿಮ್ಮ ತಲೆಯಲ್ಲಿದ್ದರೆ ಮೊದಲು ಕಿತ್ತುಹಾಕಿ. ನಾಳೆಯ ಪರಿಸ್ಥಿತಿ ಹೇಗಿರುತ್ತದೆ ಗೊತ್ತಿಲ್ಲ. ನಾಳೆಯ ಸಂಭಾವ್ಯ ವೆಚ್ಚ ಮತ್ತು ಅಪಾಯಗಳನ್ನು ಎದುರಿಸಲು ನಿಮ್ಮಲ್ಲಿ ಸಾಕಷ್ಟು ಸಂಪನ್ಮೂಲ ಇದೆ ಎಂಬುದು ಖಾತ್ರಿಪಡಿಸಿಕೊಂಡ ಬಳಿಕವಷ್ಟೇ ಬಿಂದಾಸ್ ಆಗಿ ಬದುಕಬಹುದು. ಇಲ್ಲದಿದ್ದರೆ ನಿಮ್ಮ ಸಾವಿಗೆ ನೀವೇ ಗೋರಿ ತೋಡಿಕೊಂಡಂತೆ ಆಗುತ್ತದೆ.
ಇದನ್ನೂ ಓದಿ: SIP Magic: ದಿನಕ್ಕೆ 200 ರೂನಂತೆ ಎಸ್ಐಪಿಯಲ್ಲಿ ಹೂಡಿಕೆ ಮಾಡಿದರೆ 25 ವರ್ಷಕ್ಕೆ ಎಷ್ಟು ಸಂಪಾದನೆ ಆಗಬಹುದು?
ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಹೆಚ್ಚು ಖರ್ಚಿನ ಜೀವನಶೈಲಿ ರೂಢಿಸಿಕೊಂಡಿರುತ್ತೇವೆ. ನಿಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಬೇಡುವ ಜೀವನಶೈಲಿ ಇದ್ದರೆ ಮೊದಲು ಅದರಿಂದ ಹೊರಬನ್ನಿ. ಇಲ್ಲದಿದ್ದರೆ ಸಾಲದ ಸುಳಿಗೆ ನೀವು ಸುಲಭವಾಗಿ ಸಿಲುಕಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ