New IMPS Rules: ಫೆ. 1ರಿಂದ ಹೊಸ ಐಎಂಪಿಎಸ್ ನಿಯಮ; ಹಣ ಪಾವತಿ ವ್ಯವಸ್ಥೆ ಇನ್ನಷ್ಟು ಸರಳ ಹಾಗೂ ಉಪಯುಕ್ತ

|

Updated on: Jan 29, 2024 | 4:47 PM

Immediate Payment Service: ಇಮೀಡಿಯೇಟ್ ಪೇಮೆಂಟ್ ಸರ್ವಿಸ್ ಅಥವಾ ಐಎಂಪಿಎಸ್ ಪಾವತಿ ವಿಧಾನದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಬೆನಿಫಿಶಿಯರಿ ಸೇರಿಸದೆಯೇ ಐದು ಲಕ್ಷ ರೂವರೆಗೆ ಹಣ ವರ್ಗಾವಣೆ ಮಾಡಬಹುದು. ಫೆಬ್ರುವರಿ 1ರಿಂದ ಹೊಸ ಐಎಂಪಿಎಸ್ ಪಾವತಿ ನಿಯಮ ಜಾರಿಗೆ ಬರುತ್ತವೆ.

New IMPS Rules: ಫೆ. 1ರಿಂದ ಹೊಸ ಐಎಂಪಿಎಸ್ ನಿಯಮ; ಹಣ ಪಾವತಿ ವ್ಯವಸ್ಥೆ ಇನ್ನಷ್ಟು ಸರಳ ಹಾಗೂ ಉಪಯುಕ್ತ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ, ಜನವರಿ 29: ಭಾರತದಲ್ಲಿ ಹಲವು ಆನ್​ಲೈನ್ ಹಣ ಪಾವತಿ (digial payment method) ವಿಧಾನಗಳಿವೆ. ಯುಪಿಐ, ಎನ್​ಇಎಫ್​ಟಿ, ಐಎಂಪಿಎಸ್ ಇತ್ಯಾದಿಗಳೂ ಸೇರಿವೆ. ಹೆಚ್ಚಿನ ಮೊತ್ತದ ಹಣ ವರ್ಗಾವಣೆಗೆ ಈಗಲೂ ಜನರು ಎನ್​ಇಎಫ್​ಟಿ, ಆರ್​ಟಿಜಿಎಸ್ ಮತ್ತು ಐಎಂಪಿಎಸ್ ಉಪಯೋಗಿಸುತ್ತಾರೆ. ಐಎಂಪಿಎಸ್ ಅಥವಾ ಇಮೀಡಿಯೇಟ್ ಪೇಮೆಂಟ್ ಸರ್ವಿಸ್ (IMPS- Immediate Payment Services) ಮೂಲಕ ಕ್ಷಿಪ್ರವಾಗಿ ಹಣ ವರ್ಗಾವಣೆ ಮಾಡಬಹುದು. ಎನ್​ಇಎಫ್​ಟಿ, ಆರ್​ಟಿಜಿಎಸ್​ನಲ್ಲಿ ಹಣ ಕಳುಹಿಸಿದರೆ ತಲುಪಲು ಕೆಲ ಗಂಟೆಗಳಾಗಬಹುದು. ಆದರೆ, ಐಎಂಪಿಎಸ್​ನಲ್ಲಿ ತತ್​ಕ್ಷಣವೇ ಹಣ ವರ್ಗಾವಣೆ ಆಗುತ್ತದೆ. ಇದೀಗ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಐಎಂಪಿಎಸ್ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಿದೆ.

ಎನ್​ಇಎಫ್​ಟಿ ಮತ್ತು ಐಎಂಪಿಎಸ್​ನಲ್ಲಿ ಬೆನಿಫಿಶಿಯರಿ ಸೇರಿಸಬೇಕು. ಹಣ ಕಳುಹಿಸಲಾಗುವ ವ್ಯಕ್ತಿಯ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್​ಎಸ್​ಸಿ ಕೋಡ್ ಇತ್ಯಾದಿ ಹಾಕಬೇಕು. ಆದರೆ, ಈಗ ಮಾಡಲಾಗಿರುವ ಹೊಸ ನಿಯಮದ ಪ್ರಕಾರ ಬ್ಯಾಂಕ್ ಅಕೌಂಟ್ ನಂಬರ್ ಮತ್ತು ಐಎಫ್​ಎಸ್​ಸಿ ಕೋಡ್ ಹಾಕುವ ಅವಶ್ಯಕತೆ ಇಲ್ಲ. ಬೆನಿಫಿಶಿಯರಿ ಸೇರಿಸುವ ಅಗತ್ಯವೂ ಇಲ್ಲ. ಹಣ ಸ್ವೀಕರಿಸುವ ವ್ಯಕ್ತಿಯ ನೊಂದಾಯಿತ ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಹೆಸರನ್ನು ಮಾತ್ರ ಹಾಕಿದರಾಯಿತು. ಈ ರೀತಿಯಾಗಿ 5 ಲಕ್ಷ ರೂವರೆಗಿನ ಹಣದ ವರ್ಗಾವಣೆ ಮಾಡಬಹುದು. ಫೆಬ್ರುವರಿ 1ರಿಂದ ಈ ಹೊಸ ನಿಯಮ ಜಾರಿಗೆ ಬರುತ್ತದೆ.

ಇದನ್ನೂ ಓದಿ: Crore in 5 Years: ಸ್ಟೆಪಪ್ ಮ್ಯಾಜಿಕ್ ತಿಳಿಯಿರಿ; ಕೇವಲ 5 ವರ್ಷದಲ್ಲಿ 1 ಕೋಟಿ ಗಳಿಸಲು ಎಷ್ಟು ಹೂಡಿಕೆ ಬೇಕು?

ಐಎಂಪಿಎಸ್​ನಲ್ಲಿ ಹಣ ಕಳುಹಿಸುವಾಗ ಬ್ಯಾಂಕ್ ಖಾತೆ ಸರಿಯಾಗಿದೆಯಾ ಎಂಬುದನ್ನು ಪರಿಶೀಲಿಸಬಹುದು. ತಪ್ಪಾಗಿ ಹಣ ವರ್ಗಾವಣೆ ಆಗುವುದನ್ನು ತಪ್ಪಿಸಲು ಇದರಿಂದ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಮ್ಯಾಪಿಂಗ್ ಮಾಡುವಂತೆ ಎನ್​ಪಿಸಿಐ ಎಲ್ಲಾ ಬ್ಯಾಂಕುಗಳಿಗೆ ನಿರ್ದೇಶನ ನೀಡಿತ್ತು. ಐಎಂಪಿಎಸ್ ಸೇವೆ ನಿತ್ಯ 24 ಗಂಟೆಯೂ ಲಭ್ಯ ಇರುತ್ತದೆ.

ಐಎಂಪಿಎಸ್ ಹೇಗೆ ಬಳಸುವುದು?

  • ಮೊದಲಿಗೆ ನಿಮ್ಮ ಬ್ಯಾಂಕ್ ಖಾತೆ ಇರುವ ಬ್ಯಾಂಕ್​ನ ಮೊಬೈಲ್ ಆ್ಯಪ್​ಗೆ ಹೋಗಿ
  • ಫಂಡ್ ಟ್ರಾನ್ಸ್​ಫರ್ ಸೆಕ್ಷನ್ ಒತ್ತಿರಿ
  • ಫಂಡ್ ಟ್ರಾನ್ಸ್​ಫರ್​ಗೆ ಆದ್ಯತಾ ವಿಧಾನವಾವಾಗಿ ಐಎಂಪಿಎಸ್ ಅನ್ನು ಆಯ್ಕೆ ಮಾಡಿ.
  • ಹಣ ಸ್ವೀಕರಿಸುವವರು ಮೊಬೈಲ್ ನಂಬರ್ ಮತ್ತು ಅವರ ಬ್ಯಾಂಕ್ ಹೆಸರನ್ನು ನಮೂದಿಸಿ.
  • ಐದು ಲಕ್ಷ ರೂ ಒಳಗಿನ ಹಣದ ಮೊತ್ತವನ್ನು ನಮೂದಿಸಿ.
  • ಬಳಿಕ ಕನ್​ಫರ್ಮ್ ಅನ್ನು ಒತ್ತಿರಿ
  • ಒಟಿಪಿ ಪಡೆದು ಮುಂದುವರಿಯಿರಿ.

ಇದನ್ನೂ ಓದಿ: NPS: ಎನ್​ಪಿಎಸ್​ನಲ್ಲಿ ನಿಮ್ಮ ಹಣ ತೊಡಗಿಸಿದರೆ ಎಷ್ಟು ರಿಟರ್ನ್ ಸಿಗುತ್ತದೆ? ಆನ್​ಲೈನ್​ನಲ್ಲಿ ಈ ಸ್ಕೀಮ್ ಪಡೆಯುವುದು ಹೇಗೆ?

ಒಂದು ಮೊಬೈಲ್ ನಂಬರ್​ನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳು ಲಿಂಕ್ ಆಗಿದ್ದಿರಬಹುದು. ಯುಪಿಐನಲ್ಲಿ ಇರುವಂತೆ ಪ್ರೈಮರಿ ಖಾತೆ ಅಥವಾ ಡೀಫಾಲ್ಟ್ ಖಾತೆಯೊಂದನ್ನು ನಮೂದಿಸಲಾಗಿರುತ್ತದೆ. ಐಎಂಪಿಎಸ್ ಮೂಲಕ ಮೊಬೈಲ್ ನಂಬರ್​ಗೆ ಹಣ ಕಳುಹಿಸಲಾದರೆ ಅದು ಡೀಫಾಲ್ಟ್ ಬ್ಯಾಂಕ್ ಖಾತೆಗೆ ಹೋಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ