ಪಿಎಂ ವಿದ್ಯಾಲಕ್ಷ್ಮೀ ಯೋಜನೆ; ಕಡಿಮೆ ಬಡ್ಡಿದರದಲ್ಲಿ 10 ಲಕ್ಷ ರೂವರೆಗೆ ಸಾಲ; ಇದು ಕೇಂದ್ರ ಪ್ರಾಯೋಜಿತ ಸ್ಕೀಮ್

Pradhan Mantri Vidyalaxmi scheme details: ಆರ್ಥಿಕ ಅನನುಕೂಲತೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಪಿಎಂ ವಿದ್ಯಾಲಕ್ಷ್ಮೀ ಯೋಜನೆ ನಡೆಸಲಾಗುತ್ತಿದೆ. ಮ್ಯಾನೇಜ್ಮೆಂಟ್ ಕೋಟಾ ಬದಲು ಮೆರಿಟ್ ಆಧಾರದಲ್ಲಿ ಉನ್ನತ ಶಿಕ್ಷಣದ ಕೋರ್ಸ್ ಸೇರಿದ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಸಾಲ ಸಿಗುತ್ತದೆ. ಸರ್ಕಾರದ ಪ್ರಾಯೋಜಿತ ಯೋಜನೆಯಾದ ಇದರಲ್ಲಿ ಅಡಮಾನರಹಿತವಾಗಿ ಸಾಲ ನೀಡಲಾಗುತ್ತದೆ. ಈ ಯೋಜನೆಯ ವಿವರ ಇಲ್ಲಿದೆ...

ಪಿಎಂ ವಿದ್ಯಾಲಕ್ಷ್ಮೀ ಯೋಜನೆ; ಕಡಿಮೆ ಬಡ್ಡಿದರದಲ್ಲಿ 10 ಲಕ್ಷ ರೂವರೆಗೆ ಸಾಲ; ಇದು ಕೇಂದ್ರ ಪ್ರಾಯೋಜಿತ ಸ್ಕೀಮ್
ವಿದ್ಯಾರ್ಥಿನಿ

Updated on: Nov 26, 2025 | 6:15 PM

ಉನ್ನತ ಶಿಕ್ಷಣ ವ್ಯಾಸಂಗಕ್ಕೆ ನೆರವಾಗಲು ಕೇಂದ್ರ ಸರ್ಕಾರವು ವಿದ್ಯಾರ್ಥಿಗಳಿಗೆಂದು ಪಿಎಂ ವಿದ್ಯಾಲಕ್ಷ್ಮೀ ಯೋಜನೆಯನ್ನು (Pradhan Mantri Vidyalaxmi Yojana) ನಡೆಸುತ್ತಿದೆ. ಕೇಂದ್ರ ಶಿಕ್ಷಣ ಸಚಿವಾಲಯದ ವತಿಯಿಂದ ನಡೆಸಲಾಗುವ ಈ ಸ್ಕೀಮ್​ನಲ್ಲಿ ವಿದ್ಯಾರ್ಥಿಗಳಿಗೆ ಸುಲಭವಾದ ಮತ್ತು ಅಡಮಾನ ರಹಿತವಾದ ಶಿಕ್ಷಣ ಸಾಲವನ್ನು (collateral-free education loan) ಒದಗಿಸಲಾಗುತ್ತದೆ. ಆರ್ಥಿಕ ಅನನುಕೂಲತೆಯ ಕಾರಣದಿಂದ ಪ್ರತಿಭಾನ್ವಿತ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಳಕಳಿಯಿದ ಸರ್ಕಾರ ಈ ಯೋಜನೆ ಆರಂಭಿಸಿದೆ.

ಪಿಎಂ ವಿದ್ಯಾಲಕ್ಷ್ಮೀ ಯೋಜನೆಯ ಮುಖ್ಯಾಂಶಗಳು…

  • ಪದವಿ ಹಾಗೂ ಮೇಲ್ಪಟ್ಟ ಮಟ್ಟದ ಶಿಕ್ಷಣವನ್ನು ಉನ್ನತ ಶಿಕ್ಷಣವೆಂದು ಪರಿಗಣಿಸಲಾಗುತ್ತದೆ. ಸರ್ಕಾರ ಪಟ್ಟಿ ಮಾಡಿದ 800ಕ್ಕೂ ಅಧಿಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಒಂದು ಕೋರ್ಸ್ ಸೇರಿರಬೇಕು.
  • ಮ್ಯಾನೇಜ್ಮೆಂಟ್ ಕೋಟಾದಲ್ಲಿ ಸೀಟು ಪಡೆದಿದ್ದರೆ ವಿದ್ಯಾಲಕ್ಷ್ಮೀ ಸಾಲ ಸಿಗುವುದಿಲ್ಲ.
  • ಅರ್ಹ ವಿದ್ಯಾರ್ಥಿಗೆ 10 ಲಕ್ಷ ರೂವರೆಗೂ ಸಾಲ ಸಿಗುತ್ತದೆ.
  • ಸಾಲಕ್ಕೆ ಬಡ್ಡಿದರವು ಬ್ಯಾಂಕ್​ನ ಇಬಿಎಲ್​ಆರ್ + ಶೇ. 0.5 ಇರುತ್ತದೆ.
  • 8 ಲಕ್ಷ ರೂ ಒಳಗೆ ವಾರ್ಷಿಕ ಆದಾಯ ಇರುವ ಕುಟುಂಬದ ವಿದ್ಯಾರ್ಥಿಗೆ ಶೇ. 3 ರಿಯಾಯಿತಿ ಸಿಗುತ್ತದೆ.
  • 4,50,000 ರೂಗಿಂತ ಕಡಿಮೆ ಆದಾಯ ಇರುವ ಕುಟುಂಬದ ವಿದ್ಯಾರ್ಥಿಯು ಪಿಎಂ ಉಎಸ್​ಪಿ ಸಿಎಸ್​ಐಎಸ್ ಅಡಿಯಲ್ಲಿ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್​ಗೆ ಸೇರಿದರೆ ಬಡ್ಡಿಯಲ್ಲಿ ಪೂರ್ಣ ವಿನಾಯಿತಿ ಸಿಗುತ್ತದೆ.
  • ಸಾಲ ಮಂಜೂರಾದಂದಿನಿಂದ ಹಿಡಿದು ಓದು ಮುಗಿದು ಒಂದು ವರ್ಷದವರೆಗಿನ ಅವಧಿಯನ್ನು ಮೊರಾಟೋರಿಯಂ ಅವಧಿ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಬಡ್ಡಿ ಗಣಿಸಲಾಗುತ್ತದೆಯಾದರೂ ಕಟ್ಟುವ ಅವಶ್ಯಕತೆ ಇಲ್ಲ. ಮೊರಾಟೋರಿಯಂ ಮುಗಿದ ಬಳಿಕ 15 ವರ್ಷ ಸಾಲ ತೀರಿಸಲು ಅವಕಾಶ ಕೊಡಲಾಗಿರುತ್ತದೆ.
  • ಬಡ್ಡಿ ರಿಯಾಯಿತಿಗೆ ಅರ್ಹರಾಗಿರುವ ವಿದ್ಯಾರ್ಥಿಯು ಓದಿನಲ್ಲಿ ಹಿಂದುಳಿದಿರಬಾರದು.

ಇದನ್ನೂ ಓದಿ: ಎನ್​ಪಿಎಸ್ ಟಯರ್-1, ಟಯರ್-2 ಅಕೌಂಟ್​ಗಳು; ಏನು ವ್ಯತ್ಯಾಸ, ಹೂಡಿಕೆ ಹೇಗೆ? ಇಲ್ಲಿದೆ ಡೀಟೇಲ್ಸ್

ಪಿಎಂ ವಿದ್ಯಾಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಪಿಎಂ ವಿದ್ಯಾಲಕ್ಷ್ಮೀ ಯೋಜನೆಯ ಅಧಿಕೃತ ವೆಬ್​ಸೈಟ್​ಗೆ ಹೋಗಿ: pmvidyalaxmi.co.in/
  • ಇಲ್ಲಿ ವಿದ್ಯಾರ್ಥಿಯಾಗಿ ಲಾಗಿನ್ ಆಗಿ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕು.
  • ಇದಾದ ಬಳಿಕ ಮತ್ತೆ ಸ್ಟುಡೆಂಟ್ ಲಾಗಿನ್ ಆಗಿ, ‘ಅಪ್ಲೈ ಫಾರ್ ಎಜುಕೇಶನ್ ಲೋನ್’ ಅನ್ನು ಕ್ಲಿಕ್ ಮಾಡಿ, ಅಲ್ಲಿ ಕೇಳಲಾದ ಎಲ್ಲಾ ದಾಖಲೆಗಳನ್ನು ಅಪ್​ಲೋಡ್ ಮಾಡಬೇಕು. ನಂತರ ಅರ್ಜಿ ಸಲ್ಲಿಕೆ ಮಾಡಿರಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ