ಸರ್ಕಾರದಿಂದ ನಡೆಸಲಾಗುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF- Public Provident Fund) ಬಹಳ ಮಂದಿಗೆ ನೆಚ್ಚಿನ ಸೇವಿಂಗ್ಸ್ ಸ್ಕೀಮ್ ಎನಿಸಿದೆ. ಇದು ಶೇ. 7ಕ್ಕಿಂತ ಹೆಚ್ಚು ಬಡ್ಡಿ ಕೊಡುವುದರ ಜೊತೆಗೆ ತೆರಿಗೆ ಲಾಭಗಳನ್ನೂ ತಂದುಕೊಡುತ್ತದೆ. ಹೀಗಾಗಿ, ತೆರಿಗೆ ಪಾವತಿದಾರರು ಈ ಸ್ಕೀಮ್ನಲ್ಲಿ ಹಣ ತೊಡಗಿಸುತ್ತಾರೆ. 15 ವರ್ಷದ ಅವಧಿಯ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯನ್ನು 20 ವರ್ಷದವರೆಗೆ ವಿಸ್ತರಿಸಬಹುದು. ವರ್ಷಕ್ಕೆ 500 ರೂನಿಂದ ಒಂದೂವರೆ ಲಕ್ಷ ರೂವರೆಗೆ ಹೂಡಿಕೆ ಮಾಡಬಹುದು. ವರ್ಷಕ್ಕೆ ಶೇ. 7.1ರಷ್ಟು ಬಡ್ಡಿದರದಲ್ಲಿ ಹೂಡಿಕೆ ಬೆಳೆಯುತ್ತಾ ಹೋಗುತ್ತದೆ. ನೀವು ವರ್ಷಕ್ಕೆ ಒಂದೇ ಬಾರಿಗೆ ಹೂಡಿಕೆ ಮಾಡಬಹುದು, ಅಥವಾ ಪ್ರತೀ ತಿಂಗಳು ಕಟ್ಟಬಹುದು. ಉದಾಹರಣೆಗೆ, ನೀವು ವರ್ಷಕ್ಕೆ 1,20,000 ರೂ ಕಟ್ಟುತ್ತೀರೆಂದರೆ ತಿಂಗಳಿಗೆ 10,000 ರೂನಂತೆ 12 ಕಂತುಗಳಲ್ಲಿ ಕಟ್ಟಬಹುದು.
ನೀವು ಒಂದು ವರ್ಷಕ್ಕೆ 1.5 ಲಕ್ಷ ರೂನಷ್ಟು ಹೂಡಿಕೆ ಮಾಡಿದರೆ ಅಷ್ಟು ಮೊತ್ತದ ನಿಮ್ಮ ಆದಾಯಕ್ಕೆ ತೆರಿಗೆ ಅನ್ವಯ ಆಗುವುದಿಲ್ಲ. ಹೀಗಾಗಿ, ನೀವು ಸಾಕಷ್ಟು ತೆರಿಗೆ ಹಣವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ.
ಪಿಪಿಎಫ್ ಖಾತೆಯನ್ನು ಭಾರತೀಯ ಪ್ರಜೆಯಾಗಿರುವ ಯಾರು ಬೇಕಾದರೂ ತೆರೆಯಬಹುದು. ಎಸ್ಬಿಐ, ಪಿಎನ್ಬಿ, ಆಂಧ್ರಾ ಬ್ಯಾಂಕ್ ಇತ್ಯಾದಿ ಸರ್ಕಾರಿ ಸ್ವಾಮ್ಯದ ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಪಿಪಿಎಫ್ ಖಾತೆ ತೆರೆಯಬಹುದು. ನೀವು ಬ್ಯಾಂಕ್ ಕಚೇರಿ ಅಥವಾ ಅಂಚೆ ಕಚೇರಿಗೆ ಹೋಗಿ ಅಲ್ಲಿ ಅರ್ಜಿ ಭರ್ತಿ ಮಾಡುವ ಮೂಲಕ ಪಿಪಿಎಫ್ ಖಾತೆ ತೆರೆಯಲು ಸಾಧ್ಯ. ಆನ್ಲೈನ್ನಲ್ಲೂ ಸುಲಭವಾಗಿ ಪಿಪಿಎಫ್ ಅಕೌಂಟ್ ತೆರೆಯಬಹುದು.
ಇದನ್ನೂ ಓದಿ: Leave Encashment Tax: ಲೀವ್ ಎನ್ಕ್ಯಾಶ್ಮೆಂಟ್ಗೆ ತೆರಿಗೆ: ಬದಲಾವಣೆ ತಂದ ಹಣಕಾಸು ಇಲಾಖೆ; ಏನಿದು ಹೊಸ ರೂಲ್ಸ್?