Multibagger: ರಾಜ್ ರೇಯಾನ್- ಇದಪ್ಪಾ ಮಲ್ಟಿಬ್ಯಾಗರ್ ಷೇರು; 1 ಲಕ್ಷಕ್ಕೆ ಎರಡೇ ವರ್ಷದಲ್ಲಿ 4.45 ಕೋಟಿ ರೂ ಲಾಭ

Raj Rayon Industries Shares: ಎರಡು ವರ್ಷದ ಹಿಂದೆ ಕೇವಲ 20 ಪೈಸೆ ರೂ ಬೆಲೆ ಹೊಂದಿದ್ದ ರಾಜ್ ರೇಯಾನ್ ಷೇರುಬೆಲೆ ನೋಡ ನೋಡುತ್ತಿದ್ದಂತೆಯೇ ಒಂದು ಹಂತದಲ್ಲಿ ಹೆಚ್ಚೂಕಡಿಮೆ 89 ರುಪಾಯಿಗೆ ಏರಿ ಹೋಗಿತ್ತು. ಸದ್ಯ ಇದರ ಷೇರುಬೆಲೆ 64 ರೂ ಆಸುಪಾಸಿನಲ್ಲಿದೆ.

Multibagger: ರಾಜ್ ರೇಯಾನ್- ಇದಪ್ಪಾ ಮಲ್ಟಿಬ್ಯಾಗರ್ ಷೇರು; 1 ಲಕ್ಷಕ್ಕೆ ಎರಡೇ ವರ್ಷದಲ್ಲಿ 4.45 ಕೋಟಿ ರೂ ಲಾಭ
ಷೇರುಪೇಟೆ

Updated on: Jun 14, 2023 | 5:40 PM

ಷೇರುಪೇಟೆ ಎಂಬ ಮಾಯಾಲೋಕದಲ್ಲಿ ಮಿಂಚುಳ್ಳಿಯಂತೆ ಮಿನುತ್ತಾ ಸಾಗುವ ಷೇರುಗಳನ್ನು ನೋಡಬಹುದು. ಷೇರುಗಳ ಮೇಲೆ ಹಣ ಹೂಡಿ ದಿಢೀರ್ ಶ್ರೀಮಂತರಾದವರು ಹಲವರಿದ್ದಾರೆ. ಒಂದು ಲಕ್ಷ ರೂ ಹೂಡಿಕೆ ಮಾಡಿ ಒಂದೆರಡು ವರ್ಷದಲ್ಲಿ ಕೋಟಿಗಟ್ಟಲೆ ಹಣದ ಲಾಭ (Share Trading Profit) ಮಾಡಿಕೊಂಡವರಿದ್ದಾರೆ. ಹೀಗೆ ಭರ್ಜರಿ ಲಾಭ ತಂದುಕೊಡಬಲ್ಲ ಷೇರುಗಳನ್ನು ಮಲ್ಟಿಬ್ಯಾಗರ್ ಸ್ಟಾಕ್ ಎನ್ನುತ್ತಾರೆ. ರಾಜ್ ರೇಯಾನ್ ಇಂಡಸ್ಟ್ರೀಸ್ ಸಂಸ್ಥೆಯ (Raj Rayon Industries) ಷೇರು ಕೂಡ ಇಂಥ ಒಂದು ಮಲ್ಟಿಬ್ಯಾಗರ್ ಸ್ಟಾಕ್ ಎನಿಸಿದೆ. ನೀವು ನಂಬುವುದು ಕಷ್ಟ, ಎರಡು ವರ್ಷದ ಹಿಂದೆ ಕೇವಲ 20 ಪೈಸೆ ರೂ ಬೆಲೆ ಹೊಂದಿದ್ದ ರಾಜ್ ರೇಯಾನ್ ಷೇರುಬೆಲೆ ನೋಡ ನೋಡುತ್ತಿದ್ದಂತೆಯೇ ಒಂದು ಹಂತದಲ್ಲಿ ಹೆಚ್ಚೂಕಡಿಮೆ 89 ರುಪಾಯಿಗೆ ಏರಿ ಹೋಗಿತ್ತು. ಅಂದರೆ 20 ಪೈಸೆ ಇದ್ದಾಗ ಯಾರಾದರೂ 1 ಸಾವಿರ ರೂ ಹಣಕ್ಕೆ ಈ ಷೇರನ್ನು ಖರೀದಿಸಿದ್ದರೆ ಹೆಚ್ಚೂಕಡಿಮೆ 4-5 ಲಕ್ಷ ರೂ ಲಾಭ ಮಾಡಿಕೊಳ್ಳುತ್ತಿದ್ದರು. 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಎರಡೇ ವರ್ಷದಲ್ಲಿ 4.45 ಕೋಟಿ ರೂನಷ್ಟು ಕುಬೇರರಾಗುತ್ತಿದ್ದರು. ಅಷ್ಟರಮಟ್ಟಿಗೆ ರಾಜ್ ರೇಯಾನ್ ಇಂಡಸ್ಟ್ರೀಸ್ ಷೇರು ಬೆಳೆದಿತ್ತು.

ರಾಜ್ ರೇಯಾನ್ ಇಂಡಸ್ಟ್ರೀಸ್ ಸಂಸ್ಥೆಯ ಸದ್ಯದ ಷೇರು ಬೆಲೆ 64 ರೂ ಆಸುಪಾಸಿನಲ್ಲಿದೆ. ಕಳೆದ ಎರಡು ವರ್ಷಗಳಿಂದ ಬಹಳ ಏರಿಳಿತಗಳ ಮಧ್ಯೆಯೇ ತೀವ್ರವಾಗಿ ಬೆಳೆದಿದೆ. ಸರಿಯಾಗಿ ಒಂದು ವರ್ಷದ ಹಿಂದೆ (ಜೂನ್ 14, 2022) ಇದರ ಷೇರುಬೆಲೆ 9.80 ರೂ ಇತ್ತು. ಆಗ ನೀವು ಈ ಷೇರಿನ ಮೇಲೆ 1,000 ರೂ ಹೂಡಿಕೆ ಮಾಡಿದ್ದರೆ 6,530 ರೂ ಲಾಭ ಸಿಗುತ್ತಿತ್ತು. ಅಂದರೆ ನಿಮಗೆ 6 ಪಟ್ಟಿಗೂ ಹೆಚ್ಚು ರಿಟರ್ನ್ಸ್ ಸಿಗುತ್ತಿತ್ತು.

ಇದನ್ನೂ ಓದಿ: Explainer: ಎಂಆರ್​ಎಫ್ ಷೇರು ಬೆಲೆ 1 ಲಕ್ಷಕ್ಕೆ ಏರಲು ಏನು ಕಾರಣ?; 5 ಅಂಶಗಳು

1993ರಲ್ಲಿ ಆರಂಭಗೊಂಡ ರಾಜ್ ರೇಯಾನ್ ಇಂಡಸ್ಟ್ರೀಸ್ ಸಂಸ್ಥೆ ಜವಳಿ ಉದ್ಯಮಕ್ಕೆ ಸೇರಿದ್ದಾಗಿದ್ದು ಪಾಲಿಸ್ಟರ್ ದಾರಗಳನ್ನು ತಯಾರಿಸುತ್ತದೆ. ಇದು ಉಡುಪುಗಳ ನೇಯ್ಗೆಗೆ ಬಳಕೆಯಾಗುತ್ತದೆ. 300ರಿಂದ 350 ಮಂದಿ ಉದ್ಯೋಗಿಗಳು ಇಲ್ಲಿ ಕೆಲಸ ಮಾಡುತ್ತಾರೆ. ಈ ಕಂಪನಿಯ ಷೇರು ಎನ್​ಎಸ್​ಇ ಮತ್ತು ಬಿಎಸ್​ಇ ಎರಡರಲ್ಲೂ ಲಿಸ್ಟ್ ಆಗಿದೆ. ಆದರೆ, ಒಂದು ದಿನದಲ್ಲಿ ಬಿಕರಿಯಾಗುವ ಇದರ ಷೇರುಗಳ ಪ್ರಮಾಣ ಕಡಿಮೆ. ಈ ಕಂಪನಿಯು ತನ್ನ ವ್ಯವಹಾರದಲ್ಲಿ ಕಳೆದ 1 ವರ್ಷದಿಂದ ಹೆಚ್ಚು ಆದಾಯ ಗಳಿಸುತ್ತಾ ಬಂದಿದೆ. ಡಿಸೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಇದರ ವರಮಾನ 26 ಕೋಟಿ ರೂ ಇದ್ದದ್ದು ಮಾರ್ಚ್ ಅಂತ್ಯದ ಕ್ವಾರ್ಟರ್​ನಲ್ಲಿ 110 ಕೋಟಿಗೆ ಏರಿತ್ತು. ಆದರೆ, ಈ ಎರಡೂ ಕ್ವಾರ್ಟರ್​ನಲ್ಲಿ ನಷ್ಟ ತೋರಿಸಿದೆ. ಹೀಗಾಗಿ, ಈ ಷೇರಿನ ಮೇಲೆ ಹೂಡಿಕೆ ಮಾಡುವ ಮುನ್ನ ತಜ್ಞರ ಅಭಿಪ್ರಾಯ ಸಂಗ್ರಹಿಸುವುದು ಲೇಸು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us