ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು (Repo Rate) 35 ಮೂಲಾಂಶದಷ್ಟು ಹೆಚ್ಚಿಸಿದ್ದು ಶೇಕಡಾ 6.25ಕ್ಕೆ ನಿಗದಿಪಡಿಸಿದೆ. ಇದು ಸಾಲಗಳ ಬಡ್ಡಿ ದರದ ಮೇಲೆ ಹೇಗೆ ಪರಿಣಾಮ ಬೀರಲಿದೆಯೋ ಅದೇ ರೀತಿ ಸ್ಥಿರ ಠೇವಣಿ (FD) ಸೇರಿದಂತೆ ಠೇವಣಿಗಳ ಮೇಲೂ ಪರಿಣಾಮ ಬೀರಲಿದೆ. ಮುಂಬರುವ ದಿನಗಳಲ್ಲಿ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನೂ ಬ್ಯಾಂಕ್ಗಳು ಹೆಚ್ಚಿಸುವ ಸಾಧ್ಯತೆ ಇದೆ. ಇದು ಠೇವಣಿದಾರರಿಗೆ ಉತ್ತಮ ರಿಟರ್ನ್ಸ್ ತಂದುಕೊಡಬಲ್ಲದು ಎಂದು ಬ್ಯಾಂಕಿಂಗ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಎಫ್ಡಿ ಖಾತೆಯಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಈಗಲೇ ಠೇವಣಿ ಆರಂಭಿಸಬೇಕೇ ಅಥವಾ ಇನ್ನೂ ಕೆಲವು ಕಾಲ ಕಾಯುವುದು ಒಳ್ಳೆಯದೇ ಎಂಬ ಪ್ರಶ್ನೆ ಈಗ ಮೂಡಬಹುದು. ಈಗಾಗಲೇ ಎಫ್ಡಿ ಆರಂಭಿಸಿರುವವರಲ್ಲಿಯೂ ಪ್ರಶ್ನೆಗಳು ಉದ್ಭವಿಸಬಹುದು. ಪ್ರಸ್ತುತ ದೇಶದಲ್ಲಿ ಸಾಲದ ಬೇಡಿಕೆ ಹೆಚ್ಚುತ್ತಿದೆ. ಇದನ್ನು ಸರಿದೂಗಿಸುವುದಕ್ಕಾಗಿ ಬ್ಯಾಂಕ್ಗಳಿಗೆ ಹೆಚ್ಚು ಠೇವಣಿಯ ಅಗತ್ಯವಿದೆ. ಹೀಗಾಗಿ ಬ್ಯಾಂಕ್ಗಳು ಠೇವಣಿಗಳ ಬಡ್ಡಿ ದರ ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿರುವುದಾಗಿ ‘ಫೈನಾನ್ಶಿಯಲ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಆರ್ಬಿಐ ರೆಪೊ ದರ ಹೆಚ್ಚಿಸಿದ ಬಳಿಕ ಬ್ಯಾಂಕ್ಗಳು ಅದನ್ನು ಗ್ರಾಹಕರಿಗೆ ವರ್ಗಾಯಿಸಲು ಕೆಲವು ಸಮಯ ತೆಗೆದುಕೊಳ್ಳುತ್ತವೆ. ಈ ಬಾರಿ ಆರ್ಬಿಐ ದರ ಹೆಚ್ಚಳದ ವೇಗವನ್ನು ಕಡಿಮೆ ಮಾಡಿದೆ. ಹೀಗಾಗಿ ಬ್ಯಾಂಕ್ಗಳು ಎಫ್ಡಿ ಬಡ್ಡಿ ದರವನ್ನು ಹೆಚ್ಚಿಸಬಹುದು ಎಂದು ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುವುದೂ ಕಷ್ಟ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Fixed Deposit: ತೆರಿಗೆ ಉಳಿಸುವ ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರ ನೀಡುವ ಬ್ಯಾಂಕ್ಗಳು
ಎಫ್ಡಿ ಖಾತೆದಾರರು ಹೀಗೆ ಮಾಡಿ…
ಈಗಾಗಲೇ ಅಸ್ತಿತ್ವದಲ್ಲಿರುವ ಎಫ್ಡಿಯನ್ನು ಅವಧಿ ಮುಕ್ತಾಯಗೊಳ್ಳುವವರೆಗೆ ಮುಂದುವರಿಸುವುದೇ ಉತ್ತಮ. ಈಗ ಪಡೆಯುತ್ತಿರುವ ಬಡ್ಡಿಗಿಂತಲೂ ಗಣನೀಯ ಪ್ರಮಾಣದ ಹೆಚ್ಚಳ (ಅವಧಿಪೂರ್ವ ಹಿಂಪಡೆಯುವಿಕೆಗೆ ನೀಡಬೇಕಾದ ಪೆನಾಲ್ಟಿಯನ್ನೂ ಸರಿದೂಗಿಸುವ ಮಟ್ಟದಲ್ಲಿ) ಮುಂದೆ ದೊರೆಯಬಹುದು ಎಂಬುದು ಖಾತರಿಯಾದರೆ ಮಾತ್ರವೇ ಅವಧಿಪೂರ್ವ ವಾಪಸ್ ಪಡೆದು ಮತ್ತೆ ಹೂಡಿಕೆ ಮಾಡುವುದು ಒಳ್ಳೆಯದು ಎಂದು ಪೈಸಾಬಜಾರ್ನ ಸಿಇಒ ನವೀನ್ ಕುಕ್ರೆಜಾ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಆಟೊ ರಿನೀವಲ್ ಆಯ್ಕೆ ಮಾಡಬೇಡಿ
ಒಂದು ಅಥವಾ ಎರಡು ವರ್ಷಗಳ ಅವಧಿಗೆ ಎಫ್ಡಿ ಠೇವಣಿ ಇಡುವುದು ಉತ್ತಮ. ಆಟೊ ರಿನೀವಲ್ ಆಯ್ಕೆ ಮಾಡಬೇಡಿ. ಈ ಕ್ರಮ ಅನುಸರಿಸದೇ ದೀರ್ಘವಧಿ ಎಫ್ಡಿ ಇಟ್ಟರೆ ಬದಲಾದ ಬಡ್ಡಿ ದರದ ಪ್ರಯೋಜನ ಪಡೆಯುವುದು ಸಾಧ್ಯವಾಗದು ಎಂದು ನವೀನ್ ಸಲಹೆ ನೀಡಿದ್ದಾರೆ. ಯಾಕೆಂದರೆ ಎಫ್ಡಿ ಬಡ್ಡಿ ಪರಿಷ್ಕರಣೆಗೊಂಡರೂ ಹಾಲಿ ಠೇವಣಿದಾರರಿಗೆ ಹಿಂದಿನ ಬಡ್ಡಿ ದರವೇ ಅನ್ವಯವಾಗುತ್ತದೆ.
ಇದನ್ನೂ ಓದಿ: Yes Bank FD Rates: ಯೆಸ್ ಬ್ಯಾಂಕ್ ಎಫ್ಡಿ ದರ ಪರಿಷ್ಕರಣೆ; ಹಿರಿಯ ನಾಗರಿಕರಿಗೆ ಶೇ 7.50ರ ವರೆಗೆ ಸಿಗಲಿದೆ ಬಡ್ಡಿ
ಹೊಸದಾಗಿ ಠೇವಣಿ ಇಡುವುದಾದರೆ ಏನು ಮಾಡಬಹುದು?
ಹೊಸದಾಗಿ ಎಫ್ಡಿ ಠೇವಣಿ ಇಡಲು ಬಯಸುವವರು ಕೆಲವು ದಿನಗಳ ಕಾಲ ಕಾಯುವುದು ಉತ್ತಮ ಎಂದಿದ್ದಾರೆ ತಜ್ಞರು. ಬ್ಯಾಂಕ್ಗಳು ಎಫ್ಡಿ ದರ ಹೆಚ್ಚಿಸುವ ನಿರೀಕ್ಷೆ ಇರುವುದರಿಂದ ಈ ಸಲಹೆ ನೀಡಿದ್ದಾತೆ. ಬಡ್ಡಿ ದರ ಪರಿಷ್ಕರಣೆಯಾದ ಬಳಿಕ ಎಫ್ಡಿ ಠೇವಣಿ ಇಡುವ ಮೂಲಕ ಹೆಚ್ಚಿನ ರಿಟರ್ನ್ಸ್ ಗಳಿಸಬಹುದು ಎಂಬುದು ಅವರ ಸಲಹೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ