Gold Bond: ಸಾವರಿನ್ ಗೋಲ್ಡ್ ಬಾಂಡ್, ಜೂನ್ 19ರಿಂದ 23ರವರೆಗೆ; ಗ್ರಾಂಗೆ ಎಷ್ಟು ಬೆಲೆ? ರಿಯಾಯಿತಿ, ಬಡ್ಡಿ, ತೆರಿಗೆ ಇತ್ಯಾದಿ ಮಾಹಿತಿ ತಿಳಿದಿರಿ
Sovereign Gold Bonds From June 19-23: ಸಾವರಿನ್ ಗೋಲ್ಡ್ ಬಾಂಡ್ಗಳನ್ನು ಜೂನ್ 19ರಿಂದ 23ರವರೆಗೂ ವಿತರಿಸಲಾಗುತ್ತದೆ; ಗ್ರಾಮ್ಗೆ 5,926ರೂನಂತೆ 1ರಿಂದ 4 ಕಿಲೋವರೆಗಿನ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. 8 ವರ್ಷದ ಅವಧಿಯ ಈ ಬಾಂಡ್ಗಳನ್ನು ಬ್ಯಾಂಕುಗಳಲ್ಲಿ ಪಡೆಯಬಹುದು.
ಸಾವರಿನ್ ಗೋಲ್ಡ್ ಬಾಂಡ್ ಅಥವಾ ಸಾರ್ವಭೌಮ ಚಿನ್ನ ಸಾಲಪತ್ರ (Sovereign Gold Bond) ಮತ್ತೆ ಬಿಡುಗಡೆ ಆಗುತ್ತಿದೆ. ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಎರಡು ಸರಣಿಯಲ್ಲಿ ಗೋಲ್ಡ್ ಬಾಂಡ್ಗಳನ್ನು ಸರ್ಕಾರ ವಿತರಿಸುತ್ತಿದೆ. ಮೊದಲ ಸರಣಿಯಲ್ಲಿ ಜೂನ್ 19ರಿಂದ (ಸೋಮವಾರ) 23ರವರೆಗೆ ಈ ಚಿನ್ನದ ಬಾಂಡ್ಗಳನ್ನು ಹಂಚಲಾಗುತ್ತದೆ. 5 ದಿನಗಳ ಕಾಲಾವಕಾಶವನ್ನು ಸಾರ್ವಜನಿಕರಿಗೆ ನೀಡಲಾಗಿದೆ. ಸಾರ್ವಜನಿಕರು ಈ ದಿನಾಂಕ ತಪ್ಪಿದರೂ ಸೆಪ್ಟಂಬರ್ 11ರಿಂದ 15ರವರೆಗೆ ಇರುವ ಎರಡನೇ ಸರಣಿಯಲ್ಲಿ ಬಾಂಡ್ಗಳನ್ನು ಖರೀದಿಸುವ ಅವಕಾಶ ಇದೆ. ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ ನೀವು ಚಿನ್ನದ ಮೇಲೆ ಹೂಡಿಕೆ ಮಾಡುತ್ತೀರಿ. ನಿಮ್ಮ ಹೂಡಿಕೆಯ ಮೊತ್ತಕ್ಕೆ ಬಡ್ಡಿಯೂ ಪ್ರಾಪ್ತವಾಗುತ್ತದೆ. ರಿಯಾಯಿತಿ ಇತ್ಯಾದಿ ಸೌಲಭ್ಯವೂ ಇರುತ್ತದೆ. ಈ ದೃಷ್ಟಿಯಿಂದ ಸಾವರಿನ್ ಗೋಲ್ಡ್ ಬಾಂಡ್ನ ಯೋಜನೆ ಯಾರಿಗಾದರೂ ಕೂಡ ನಷ್ಟ ತಂದುಕೊಡದ ಹೂಡಿಕೆ ಆಗುತ್ತದೆ.
ಒಂದು ಗ್ರಾಂಗೆ 5,926 ರೂ, ಆನ್ಲೈನ್ನಲ್ಲಿ ಹಣ ಪಾವತಿಸುವವರಿಗೆ ಡಿಸ್ಕೌಂಟ್
ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ 1 ಗ್ರಾಮ್ನಿಂದ ಹಿಡಿದು 4 ಕಿಲೋ ಚಿನ್ನದವರೆಗೆ ಹೂಡಿಕೆ ಮಾಡಬಹುದು. ಈ ಬಾಂಡ್ 8 ವರ್ಷದ ಅವಧಿಯದ್ದಾಗಿರುತ್ತದೆ. ಜೂನ್ 19ರಿಂದ 23ರವರೆಗೆ ನೀಡಲಾಗುವ ಗೋಲ್ಡ್ ಬಾಂಡ್ನಲ್ಲಿ ಒಂದು ಗ್ರಾಮ್ಗೆ 5,926 ರೂ ದರ ನಿಗದಿ ಮಾಡಲಾಗಿದೆ. ಇಷ್ಯೂ ದಿನಾಂಕದಿಂದ 3 ಹಿಂದಿನ ಕಾರ್ಯ ದಿನಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಸರಾಸರಿಯನ್ನು ಲೆಕ್ಕ ಮಾಡಲಾಗುತ್ತದೆ. ಈ ಸರಣಿಯಲ್ಲಿ ಜೂನ್ 17 ಇಷ್ಯೂ ಡೇಟ್ ಆಗಿದೆ. ಇದರ ಹಿಂದಿನ ವರ್ಕಿಂಗ್ ಡೇ ಎಂದರೆ ಜೂನ್ 14ರಿಂದ ಜೂನ್ 16. ಈ ಅವಧಿಯಲ್ಲಿ ಇದ್ದ ಚಿನ್ನದ ಬೆಲೆಯ ಸರಾಸರಿ ಗಣಿಸಿದರೆ 5,926 ರೂ ಆಗುತ್ತದೆ. ಇದು ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ನ ಮೊದಲ ಸರಣಿಯಲ್ಲಿ ಒಂದು ಗ್ರಾಮ್ಗೆ ಇರುವ ಬೆಲೆ.
ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ ನೀವು ಯುಪಿಐ, ನೆಟ್ಬ್ಯಾಂಕಿಂಗ್ ಇತ್ಯಾದಿ ಡಿಜಿಟಲ್ ಆಗಿ ಹಣ ಪಾವತಿಸಿದರೆ ರಿಯಾಯಿತಿ ಸಿಗುತ್ತದೆ. ಒಂದು ಗ್ರಾಮ್ಗೆ ಬರೋಬ್ಬರಿ 50 ರೂ ಡಿಸ್ಕೌಂಟ್ ಸಿಗುತ್ತದೆ. 5,926 ರೂ ಇರುವ ಒಂದು ಗ್ರಾಮ್ ಚಿನ್ನವನ್ನು ನೀವು 5,876 ರುಪಾಯಿಗೆ ಖರೀದಿಸಬಹುದು.
ಒಬ್ಬ ವ್ಯಕ್ತಿ ಎಷ್ಟು ಚಿನ್ನದ ಮೇಲೆ ಹೂಡಿಕೆ ಮಾಡಬಹುದು?
ಆರ್ಬಿಐ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ 1 ಗ್ರಾಮ್ನಿಂದ ಹಿಡಿದು 4 ಕಿಲೋವರೆಗೂ ಹೂಡಿಕೆ ಮಾಡಬಹುದು. ಸುಮಾರು 2.37 ಕೋಟಿ ರೂವರೆಗೂ ಈ ಬಾರಿ ಒಬ್ಬ ವ್ಯಕ್ತಿ ಈ ಗೋಲ್ಡ್ ಬಾಂಡ್ ಖರೀದಿಸಬಹುದು. ಟ್ರಸ್ಟ್ಗಳು ಇತ್ಯಾದಿ ಸಂಘ ಸಂಸ್ಥೆಗಳು 20 ಕಿಲೋ ಚಿನ್ನದವರೆಗೂ ಹೂಡಿಕೆ ಮಾಡಬಹುದು.
ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ 8 ವರ್ಷದ ಅವಧಿಯದ್ದಾಗಿರುತ್ತದೆ. ಬೇಕೆಂದರೆ 5 ವರ್ಷದ ಬಳಿಕ ಹಿಂಪಡೆಯುವ ಅವಕಾಶ ಇರುತ್ತದೆ. ಬಾಂಡ್ ಮೆಚ್ಯೂರ್ ಆದಾಗ ಅಂದಿನ ಚಿನ್ನದ ಮಾರುಕಟ್ಟೆ ದರ ಪ್ರಕಾರ ನಿಮ್ಮ ಹೂಡಿಕೆ ಬೆಳೆದಿರುತ್ತದೆ. ನೀವು ಗ್ರಾಮ್ಗೆ 5,926 ರನಂತೆ 100 ಗ್ರಾಮ್ ಚಿನ್ನಕ್ಕೆ 5,92,600 ರೂ ಕೊಟ್ಟು ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. 8 ವರ್ಷದ ಬಳಿಕ ಚಿನ್ನದ ಬೆಲೆ ಗ್ರಾಮ್ಗೆ 10,000 ರೂ ಆದರೆ 5,92,600 ರೂ ಇದ್ದ ನಿಮ್ಮ ಹೂಡಿಕೆ 10,00,000 ರೂಗೆ ಏರಿರುತ್ತದೆ.
ಈ ಮಧ್ಯೆ ನಿಮ್ಮ ಹೂಡಿಕೆಗೆ ಆಗಾಗ್ಗೆ ಬಡ್ಡಿಯೂ ಪ್ರಾಪ್ತವಾಗುತ್ತಿರುತ್ತದೆ. ಸದ್ಯ ವರ್ಷಕ್ಕೆ ಶೇ. 2.5ರಷ್ಟು ಬಡ್ಡಿ ನೀಡಲಾಗುತ್ತದೆ. ಈ ಬಡ್ಡಿ ಹಣ ಮೂರು ತಿಂಗಳಿಗೊಮ್ಮೆ ಬಿಡುಗಡೆ ಆಗುತ್ತದೆ. ಈ ಬಡ್ಡಿ ಹಣಕ್ಕೆ ಟಿಡಿಎಸ್ ಕಡಿತ ಮಾಡಲಾಗುತ್ತದೆ.
ಇನ್ನು, ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ ನೀವು ಮಾಡುವ ಹೂಡಿಕೆ ಮೇಲೆ ಅಗತ್ಯಬಿದ್ದರೆ ಸಾಲವನ್ನೂ ಕೊಡಲಾಗುತ್ತದೆ. ಇದಕ್ಕೆ ಬಡ್ಡಿಯೂ ಕಡಿಮೆಯೇ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ