ಪೆಟ್ರೋಲ್ ಮತ್ತು ಡೀಸೆಲ್ (Petrol and Diesel) ಬೆಲೆ ಏರಿಕೆ ಹೊರತಾಗಿಯೂ ತಮ್ಮ ಕಮಿಷನ್‌ಗಳಲ್ಲಿ ಯಾವುದೇ ಪರಿಷ್ಕರಣೆ ಮಾಡದಿರುವುದನ್ನು ಪ್ರತಿಭಟಿಸಿ ದೇಶದ 24 ರಾಜ್ಯಗಳ ಸುಮಾರು 70,000 ಪೆಟ್ರೋಲ್ ಪಂಪ್‌ಗಳು ಮೇ 31ರ ಮಂಗಳವಾರದಂದು ತೈಲ ಮಾರುಕಟ್ಟೆ ಕಂಪೆನಿಗಳಿಂದ (OMC) ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸುವುದಿಲ್ಲ. ರಾಜ್ಯ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್‌ಗಳ ಗುಂಪಿನಿಂದ ಪ್ರತಿಭಟನೆಗಳು ನಡೆದಿವೆ. ಸೋಮವಾರದಂದು ಪತ್ರಿಕಾಗೋಷ್ಠಿಯಲ್ಲಿ ದೆಹಲಿ ಪೆಟ್ರೋಲ್ ವಿತರಕರ ಸಂಘದ ಅಧ್ಯಕ್ಷ ಅನುರಾಗ್ ಜೈನ್ ಮಾತನಾಡಿ, ಪೆಟ್ರೋಲ್ ಪಂಪ್‌ಗಳು ಸಾಮಾನ್ಯವಾಗಿ ಎರಡು ದಿನಗಳವರೆಗೆ ಸ್ಟಾಕ್ ಅನ್ನು ಹೊಂದಿರುವುದರಿಂದ ಮತ್ತು ಪಂಪ್‌ಗಳು ಮಂಗಳವಾರ ಇಂಧನ ಮಾರಾಟವನ್ನು ಮುಂದುವರಿಸುವುದರಿಂದ ಗ್ರಾಹಕರಿಗೆ ರೀಟೇಲ್ ಪೂರೈಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ಹೇಳಿದರು.
ತಮಿಳುನಾಡು, ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ದೆಹಲಿ, ಪಂಜಾಬ್, ಹರಿಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಬಿಹಾರ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್, ಮಣಿಪುರ, ತ್ರಿಪುರ, ಸಿಕ್ಕಿಂ ಪಂಪ್‌ಗಳು ಪ್ರತಿಭಟನೆ ನಡೆಸುವ ಮತ್ತು ಇಂಧನ ಖರೀದಿಯಿಂದ ದೂರವಿಡುವ ರಾಜ್ಯಗಳು. ಉತ್ತರ ಬಂಗಾಳದ ಡೀಲರ್ಸ್ ಅಸೋಸಿಯೇಷನ್ ಮತ್ತು ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿನ ವಿತರಕರು ಸಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬದ್ಧರಾಗಿದ್ದಾರೆ. ದೆಹಲಿಯಲ್ಲಿ ಮಂಗಳವಾರ ಸುಮಾರು 400 ಪೆಟ್ರೋಲ್ ಪಂಪ್‌ಗಳು ಇಂಧನವನ್ನು ಖರೀದಿಸುವುದಿಲ್ಲ, ಆದರೆ ಮಹಾರಾಷ್ಟ್ರದಲ್ಲಿ 6,500 ಪಂಪ್‌ಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿವೆ.
ಆರು ತಿಂಗಳಿಗೊಮ್ಮೆ ಡೀಲರ್ ಮಾರ್ಜಿನ್ ಪರಿಷ್ಕರಣೆ
ಡೀಲರ್ ಅಸೋಸಿಯೇಷನ್‌ಗಳ ಪ್ರಕಾರ, ಪ್ರತಿ ಆರು ತಿಂಗಳಿಗೊಮ್ಮೆ ಡೀಲರ್ ಮಾರ್ಜಿನ್‌ಗಳನ್ನು ಪರಿಷ್ಕರಿಸಲಾಗುತ್ತದೆ ಎಂದು ತೈಲ ಮಾರ್ಕೆಟಿಂಗ್ ಕಂಪೆನಿಗಳು ಮತ್ತು ಡೀಲರ್ ಅಸೋಸಿಯೇಷನ್‌ಗಳ ಮಧ್ಯೆ ಒಪ್ಪಂದವಿದ್ದರೂ 2017ರಿಂದ ಅದನ್ನು ಪರಿಷ್ಕರಿಸಲಾಗಿಲ್ಲ. “2017 ರಿಂದ ಇಂಧನದ ಬೆಲೆಗಳು ಹತ್ತಿರಹತ್ತಿರ ದ್ವಿಗುಣಗೊಂಡಿದೆ, ಆದ್ದರಿಂದ ಹೆಚ್ಚುವರಿ ಸಾಲಗಳು ಮತ್ತು ಬ್ಯಾಂಕ್ ಬಡ್ಡಿಗಳು ಅದರ ನಂತರ ವರ್ಕಿಂಗ್ ಕ್ಯಾಪಿಟಲ್ ವ್ಯವಹಾರದಲ್ಲಿ ದ್ವಿಗುಣಗೊಂಡಿದೆ,” ಎಂದು ಹೇಳಿಕೆಯೊಂದು ತಿಳಿಸಿದೆ. “ಏರಿಳಿಕೆಯ ನಷ್ಟವು ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚಾಗಿದೆ. ಅಲ್ಲದೆ, ಕಳೆದ 5 ವರ್ಷಗಳಲ್ಲಿ ಬ್ಯಾಂಕ್ ಶುಲ್ಕಗಳು, ವಿದ್ಯುತ್ ಬಿಲ್‌ಗಳು, ಸಂಬಳ ಮುಂತಾದ ವೆಚ್ಚಗಳು ಹಲವು ಪಟ್ಟು ಹೆಚ್ಚಾಗಿದೆ. ಡೀಲರ್ ಕಮಿಷನ್ ಅನ್ನು ಪರಿಷ್ಕರಿಸುವ ನಮ್ಮ ನಿರಂತರ ಬೇಡಿಕೆಯನ್ನು ತೈಲ ಮಾರ್ಕೆಟಿಂಗ್ ಕಂಪೆನಿಗಳು ಕಡೆಗಣಿಸಿವೆ. ಹಾಗೆ ಮಾಡುವ ಮೂಲಕ ಒಎಂಸಿಗಳು ತನ್ನದೇ ಆದ ನೆಟ್‌ವರ್ಕ್ ಅನ್ನು ಆರ್ಥಿಕವಾಗಿ ಅಶಕ್ತಗೊಳಿಸುತ್ತಿವೆ, ”ಎಂದು ಅದು ಹೇಳಿದೆ.
ಸದ್ಯಕ್ಕೆ, ಪೆಟ್ರೋಲ್ ಪಂಪ್‌ಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ ಸುಮಾರು ರೂ. 2.90 ಮತ್ತು ಡೀಸೆಲ್‌ಗೆ ಸುಮಾರು ರೂ. 1.85 ಕಮಿಷನ್ ಪಡೆಯುತ್ತವೆ. 2017ರಲ್ಲಿ ಕಮಿಷನ್‌ಗಳನ್ನು ಲೀಟರ್‌ಗೆ ಸುಮಾರು 1 ರೂಪಾಯಿ ಹೆಚ್ಚಿಸಲಾಗಿದ್ದರೂ “ಒಎಂಸಿಗಳು ಅದರಲ್ಲಿ 40 ಪೈಸೆಯನ್ನು ಪರವಾನಗಿ ಶುಲ್ಕದ ಹೆಸರಿನಲ್ಲಿ ಇಡುತ್ತವೆ,” ಎಂದು ಜೈನ್ ಹೇಳಿದರು. ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಕಾರಣ ಪೆಟ್ರೋಲ್ ಡೀಲರ್‌ಗಳು ತಮ್ಮ ನಷ್ಟವನ್ನು ಮರುಪಾವತಿಸುವಂತೆ ಕೋರಿದ್ದಾರೆ.
ಅಬಕಾರಿ ಸುಂಕದ ಹಠಾತ್ ಕಡಿತದಿಂದ ವಿತರಕರಿಗೆ ನಷ್ಟ
“ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡುವಲ್ಲಿ ಕೇಂದ್ರ ಸರ್ಕಾರವು ದೇಶದ ನಾಗರಿಕರಿಗೆ ನೀಡಿದ ಪರಿಹಾರವನ್ನು ವಿತರಕರ ಸಂಘಗಳು ಸ್ವಾಗತಿಸುತ್ತವೆ. ಆದರೆ ಈ ಹಠಾತ್ ಕಡಿತವು ವಿತರಕರಿಗೆ ಭಾರಿ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ. ಕಳೆದ ಆರು ತಿಂಗಳಲ್ಲಿ ಕೇಂದ್ರ ಸರ್ಕಾರವು ಅಬಕಾರಿ ಸುಂಕದಲ್ಲಿ ಎರಡು ಪ್ರಮುಖ ಕಡಿತಗಳನ್ನು ಘೋಷಿಸಿದೆ (ನವೆಂಬರ್ 4, 2021 ಮತ್ತು ಮೇ 21, 2022ರಂದು), ಮತ್ತು ಪೆಟ್ರೋಲ್ ಮೇಲೆ ರೂ. 13/ಲೀಟರ್‌ಗೆ ಮತ್ತು ಡೀಸೆಲ್ ಮೇಲೆ ರೂ. 16/ಲೀಟರ್‌ಗೆ ಸಂಪೂರ್ಣ ಹೊರೆಯನ್ನು ವರ್ಗಾಯಿಸಲಾಯಿತು. ಪೆಟ್ರೋಲ್ ಪಂಪ್ ಡೀಲರ್‌ಗಳು ತುಂಬಲಾರದ ನಷ್ಟವನ್ನು ಉಂಟು ಮಾಡುತ್ತಿದ್ದಾರೆ,” ಎಂದು ಹೇಳಿಕೆ ತಿಳಿಸಿದೆ.
ಪೆಟ್ರೋಲ್ ಪಂಪ್ ಅಸೋಸಿಯೇಷನ್‌ಗಳ ಪ್ರಕಾರ, ಇತ್ತೀಚಿನ ಸುಂಕ ಕಡಿತದ ನಂತರ ದೇಶಾದ್ಯಂತ ಪಂಪ್‌ಗಳು ಸುಮಾರು ರೂ. 2,100 ಕೋಟಿ ಕಳೆದುಕೊಂಡಿವೆ. ಏಕೆಂದರೆ ಅವರು ಹೆಚ್ಚಿನ ಸುಂಕದಲ್ಲಿ ಇಂಧನವನ್ನು ಖರೀದಿಸಿದ್ದಾರೆ ಮತ್ತು ಅಬಕಾರಿ ಸುಂಕದ ಕಡಿತದಿಂದಾಗಿ ಕಡಿಮೆ ಬೆಲೆಗೆ ಇಂಧನವನ್ನು ಮಾರಾಟ ಮಾಡಬೇಕಾಯಿತು. ಮೇ 22ರಂದು ಕೇಂದ್ರವು ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಲೀಟರ್‌ಗೆ ರೂ. 8 ಮತ್ತು ಡೀಸೆಲ್‌ಗೆ ರೂ. 6 ರಷ್ಟು ಕಡಿಮೆ ಮಾಡಿದೆ. ಪರಿಣಾಮವಾಗಿ, ದೆಹಲಿಯಲ್ಲಿ ಚಿಲ್ಲರೆ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ. 96.72 ಮತ್ತು ಡೀಸೆಲ್ ಲೀಟರ್‌ಗೆ ರೂ. 89.62ಕ್ಕೆ ಇಳಿದಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧಿಕಾರಿಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಭರವಸೆ ನೀಡಿರುವುದರಿಂದ ಪೆಟ್ರೋಲ್ ಪಂಪ್‌ಗಳು ಯಾವುದೇ ಪ್ರತಿಭಟನೆಗೆ ಆಸ್ಪದ ನೀಡುವುದಿಲ್ಲ ಎಂದು ಮತ್ತೊಂದು ವಿತರಕರ ಸಂಸ್ಥೆಯಾದ ಆಲ್ ಇಂಡಿಯಾ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ (ಎಐಪಿಡಿಎ) ಹೇಳಿದ ಕೆಲವೇ ದಿನಗಳಲ್ಲಿ ಪ್ರತಿಭಟನೆಗೆ ಕರೆ ಬಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ