
ಸಿಕರ್, ರಾಜಸ್ಥಾನ, ಜುಲೈ 27: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) 14ನೇ ಕಂತಿನ ಹಣ ಬಿಡುಗಡೆ ಆಗಿದೆ. ರಾಜಸ್ಥಾನದ ಸಿಕರ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು 14ನೇ ಕಂತಿನ ಹಣ ಬಿಡುಗಡೆ ಆಗಿರುವುದನ್ನು ಘೋಷಿಸಿದ್ದಾರೆ. 9 ಕೋಟಿಗೂ ಹೆಚ್ಚು ಮಂದಿ ರೈತರ ಖಾತೆಗಳಿಗೆ ಇಂದು ತಲಾ 2,000 ರೂ ಹಣ ವರ್ಗಾವಣೆ ಆಗುತ್ತಿದೆ. 14ನೇ ಕಂತಿನ ಹಣಕ್ಕೆ ಕೇಂದ್ರ ಸರ್ಕಾರಕ್ಕೆ 20,000 ಕೋಟಿಗೂ ಹೆಚ್ಚು ವ್ಯಯವಾಗಿದೆ. ಪ್ರಧಾನಿ ನರೇಂದ್ರ ಮೋದಿ 2023ರ ಫೆಬ್ರುವರಿ 27ರಂದು ಬೆಳಗಾವಿಯ ಸಮಾವೇಶವೊಂದರಲ್ಲಿ 13ನೇ ಕಂತಿನ ಹಣ ಬಿಡುಗಡೆ ಮಾಡಿದ್ದರು.
2019ರ ಫೆಬ್ರುವರಿ 24ರಂದು ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸ್ಕೀಮ್ ಆರಂಭಿಸಿತು. ಆರಂಭದಲ್ಲಿ ಇದು 5 ಎಕರೆಯೊಳಗಿನ ಜಮೀನು ಹೊಂದಿರುವ ಸಣ್ಣ ಮತ್ತು ಮಧ್ಯಮ ರೈತರಿಗೆ ವ್ಯವಸಾಯಕ್ಕೆ ಅನುಕೂಲವಾಗಲೆಂದು ಧನಸಹಾಯವಾಗಿ ಯೋಜನೆ ಆರಂಭಿಸಲಾಯಿತು. ಬಳಿಕ ಎಲ್ಲಾ ರೈತರಿಗೂ ಯೋಜನೆಯನ್ನು ವಿಸ್ತರಿಸಲಾಗಿದೆ.
ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ವರ್ಷಕ್ಕೆ 3 ಕಂತುಗಳಲ್ಲಿ ತಲಾ 2,000 ರೂನಂತೆ ಒಟ್ಟು 6,000 ರೂ ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುತ್ತದೆ. ಡಿಸೆಂಬರ್ನಿಂದ ಮಾರ್ಚ್, ಏಪ್ರಿಲ್ನಿಂದ ಜುಲೈ, ಹಾಗು ಆಗಸ್ಟ್ನಿಂದ ನವೆಂಬರ್ ಹೀಗೆ ಪ್ರತೀ 4 ತಿಂಗಳ ಅವಧಿಯಲ್ಲಿ ಸರ್ಕಾರ 2,000 ರೂ ನೀಡುತ್ತದೆ. 2018ರ ಡಿಸೆಂಬರ್ನಿಂದ ಶುರುವಾಗಿ ಈವರೆಗೆ 14 ಕಂತುಗಳನ್ನು ರೈತರಿಗೆ ನೀಡಲಾಗಿದೆ.
ಕರ್ನಾಟಕದ ರೈತರಿಗೆ ರಾಜ್ಯ ಸರ್ಕಾರ ಇನ್ನೆರಡು ಹೆಚ್ಚುವರಿ ಕಂತುಗಳನ್ನು ಸೇರಿಸಿಕೊಡುತ್ತಿತ್ತು. ಈಗಿನ ರಾಜ್ಯ ಸರ್ಕಾರ ಈ ಸೌಲಭ್ಯ ಮುಂದುವರಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಮೂಲಗಳ ಪ್ರಕಾರ ರಾಜ್ಯ ಸರ್ಕಾರ ಪಿಎಂ ಕಿಸಾನ್ ಯೋಜನೆಯಲ್ಲಿ ಹೆಚ್ಚುವರಿ ಕಂತುಗಳನ್ನು ನೀಡುವ ಸಾಧ್ಯತೆ ಇಲ್ಲ.
ಇದನ್ನೂ ಓದಿ: PM Kisan: ಪಿಎಂ ಕಿಸಾನ್ ಯೋಜನೆ; ಒಂದೇ ಕುಟುಂಬದ ಇಬ್ಬರು ವರ್ಷಕ್ಕೆ 6,000 ರೂ ಪಡೆಯಬಹುದಾ?
ಕರ್ನಾಟಕದಲ್ಲಿ 58 ಲಕ್ಷಕ್ಕೂ ಹೆಚ್ಚು ರೈತರು ಯೋಜನೆಗೆ ನೊಂದಾಯಿಸಿದ್ದಾರೆ. ಕಳೆದ ಬಾರಿ 13ನೇ ಕಂತಿನಲ್ಲಿ ರಾಜ್ಯದ ಶೇ. 88ರಷ್ಟು ಫಲಾನುಭವಿಗಳಿಗೆ ಹಣ ಸಿಕ್ಕಿದೆ. ಇಕೆವೈಸಿ ಮಾಡದ ಇತರರಿಗೆ ಹಣ ಸಿಕ್ಕಿಲ್ಲ. ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಫಲಾನುಭವಿಗಳು 13ನೇ ಕಂತಿನ ಹಣ ಪಡೆದ ಸಂಖ್ಯೆ ಶೇ. 50ಕ್ಕಿಂತಲೂ ಕಡಿಮೆ ಇದೆ. ಶೇ. 88ರಷ್ಟು ಮಂದಿ ಹಣ ಪಡೆದ ಕರ್ನಾಟಕವೇ ಈ ವಿಚಾರದಲ್ಲಿ ಮೊದಲ ಸ್ಥಾನದಲ್ಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Thu, 27 July 23