PM Kisan: ಪಿಎಂ ಕಿಸಾನ್ ಯೋಜನೆ; ಒಂದೇ ಕುಟುಂಬದ ಇಬ್ಬರು ವರ್ಷಕ್ಕೆ 6,000 ರೂ ಪಡೆಯಬಹುದಾ?
Can 2 Persons From 1 Family Get Benefit?: ಪಿಎಂ ಕಿಸಾನ್ ಯೋಜನೆಯ ನಿಯಮದ ಪ್ರಕಾರ ಜಮೀನು ಮಾಲಿಕತ್ವ ಹೊಂದಿದ ವ್ಯಕ್ತಿಗಳಿಗೆ ಮಾತ್ರ ಯೋಜನೆ ಅನ್ವಯ ಆಗುತ್ತದೆ. ಒಂದು ಕುಟುಂಬದಲ್ಲಿ ಯಾರ ಹೆಸರಲ್ಲಿ ಜಮೀನು ಇದೆಯೋ ಅವರು ಮಾತ್ರ 2,000 ರೂ ಕಂತು ಹಣ ಪಡೆಯಬಹುದು.
ನವದೆಹಲಿ: ಕೇಂದ್ರ ಸರ್ಕಾರ ಕಳೆದ ಮೂರ್ನಾಲ್ಕು ವರ್ಷಗಳಿಂದ ಜಾರಿ ಮಾಡಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಕೋಟ್ಯಂತರ ರೈತ ಕುಟುಂಬಗಳಿಗೆ ಉಪಯುಕ್ತ ಎನಿಸಿದೆ. ಕೇಂದ್ರ ಸರ್ಕಾರ ವರ್ಷಕ್ಕೆ 6,000 ರೂ ಹಣವನ್ನು 3 ಕಂತುಗಳಲ್ಲಿ ನೀಡುತ್ತದೆ. 2019ರಿಂದ ಈಚೆಗೆ ಕೇಂದ್ರ ಸರ್ಕಾರ 2,000 ರೂಗಳ 13 ಕಂತುಗಳನ್ನು ರೈತರಿಗೆ ನೀಡಿದೆ. ಈಗ 14ನೇ ಕಂತಿನ ಹಣಕ್ಕೆ ಜನರು ಕಾಯುತ್ತಿದ್ದಾರೆ. ಈ ತಿಂಗಳು ಮುಗಿಯುವುದರೊಳಗೆ 2,000 ರೂಗಳ 14ನೇ ಕಂತು ಫಲಾನುಭವಿ ರೈತರ ಖಾತೆಗಳಿಗೆ ಬಂದು ಬೀಳುವ ನಿರೀಕ್ಷೆ ಇದೆ. ಇನ್ನು, ಕರ್ನಾಟಕ ಸರ್ಕಾರ ವರ್ಷಕ್ಕೆ ಕೇಂದ್ರ ನೀಡುವ 3 ಕಂತುಗಳ ಜೊತೆ ತಾನೂ ಇನ್ನೆರಡು ಕಂತುಗಳನ್ನು ಸೇರಿಸಿಕೊಡುತ್ತಿತ್ತು. ಈಗ ಸರ್ಕಾರ ಬದಲಾಗಿರುವ ಹಿನ್ನೆಲೆಯಲ್ಲಿ ಹೊಸ ಸರ್ಕಾರ ಈ ಕ್ರಮ ಮುಂದುವರಿಸುತ್ತದಾ ಇಲ್ಲವಾ ಎಂಬುದು ಗೊತ್ತಿಲ್ಲ.
ಒಂದೇ ಕುಟುಂಬದ ಇಬ್ಬರು ವ್ಯಕ್ತಿಗಳು ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಬಹುದಾ?
ಪಿಎಂ ಕಿಸಾನ್ ಯೋಜನೆಯ ನಿಯಮದ ಪ್ರಕಾರ ಜಮೀನು ಮಾಲಿಕತ್ವ ಹೊಂದಿದ ವ್ಯಕ್ತಿಗಳಿಗೆ ಮಾತ್ರ ಯೋಜನೆ ಅನ್ವಯ ಆಗುತ್ತದೆ. ಒಂದು ಕುಟುಂಬದಲ್ಲಿ ಯಾರ ಹೆಸರಲ್ಲಿ ಜಮೀನು ಇದೆಯೋ ಅವರು ಮಾತ್ರ 2,000 ರೂ ಕಂತು ಹಣ ಪಡೆಯಬಹುದು. ಗಂಡ ಹೆಂಡತಿ ಅಥವಾ ಬೇರೆಯವರ ಜೊತೆ ಜಂಟಿ ಮಾಲಿಕತ್ವ ಇದ್ದು ಇಬ್ಬರೂ ಕೂಡ ಯೋಜನೆಗೆ ನೊಂದಾಯಿಸಿಕೊಂಡಿದ್ದರೆ ಹೇಗೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ರೀತಿ ಇದ್ದರೆ ಒಬ್ಬರಿಗೆ ಮಾತ್ರವೇ ಯೋಜನೆ ಲಾಭ ಸಿಗುವುದು. ಹಾಗೊಂದು ವೇಳೆ ಇಬ್ಬರೂ ಇದರ ಲಾಭ ಪಡೆಯುತ್ತಿದ್ದರೆ ಒಬ್ಬರು ಅದನ್ನು ವಾಪಸ್ ಮಾಡಬೇಕಾಗಬಹುದು.
ಇನ್ನೂ ಕೆಲ ವರದಿ ಪ್ರಕಾರ, ಒಂದೇ ಕುಟುಂಬಕ್ಕೆ ಸೇರಿದ ಇಬ್ಬರು ವ್ಯಕ್ತಿಗಳು ಯೋಜನೆಗೆ ನೊಂದಾಯಿಸಿಕೊಳ್ಳುವಂತಿಲ್ಲ. ಒಂದು ಕುಟುಂಬ ಎಂದರೆ ಇಲ್ಲಿ ಗಂಡ, ಹೆಂಡತಿ ಮತ್ತು ಅವರ ಮಕ್ಕಳು.
ಹಾಗೆಯೇ, ಒಂದು ಕುಟುಂಬದಲ್ಲಿ ಇಬ್ಬರು ವ್ಯಕ್ತಿಗಳು ಬೇರೆ ಬೇರೆ ಜಮೀನು ಮಾಲಿಕತ್ವದ ಹೊಂದಿದ್ದರೆ ಅವರು ಯೋಜನೆಯ ಲಾಭ ಪಡೆಯಬಹುದಾ ಎಂಬ ಪ್ರಶ್ನೆಗೆ ಉತ್ತರ ನೀಡಲಾಗಿಲ್ಲ. ಆದರೆ, ಯೋಜನೆ ನಿಯಮ ಗಮನಿಸಿದಾಗ ಅದು ಸಾಧ್ಯ.
ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ನಿಮಗೆ ಸಿಗುತ್ತಾ? ಫಲಾನುಭವಿಗಳ ಪಟ್ಟಿ ಒಮ್ಮೆ ನೋಡಿ
ಪಿಎಂ ಕಿಸಾನ್ ಯೋಜನೆಯಲ್ಲಿ ಕೆಲವೊಮ್ಮೆ ನಮ್ಮ ಹೆಸರು ಕೈಬಿಟ್ಟು ಹೋಗಿರಬಹುದು ಎಂಬ ಭಯ ಯಾರಿಗಾದರೂ ಕಾಡಬಹುದು. ನಿಮಗೆ ಹಾಗನಿಸಿದಲ್ಲಿ ಆನ್ಲೈನ್ನಲ್ಲಿ ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದೆಯಾ ಎಂದು ಖಚಿತಪಡಿಸಿಕೊಳ್ಳಬಹುದು.
ಇದನ್ನೂ ಓದಿ: Tips: ನಿಮ್ಮ ವಯಸ್ಸಿನ್ನೂ 30 ದಾಟಿಲ್ಲವೇ? ಹಣ ಸಂಪಾದನೆ, ಹಣಭದ್ರತೆಗೆ ತಪ್ಪದೇ ಈ ಕ್ರಮ ಅನುಸರಿಸಿ
- ಪಿಎಂ ಕಿಸಾನ್ ಯೋಜನೆಯ ಅಧಿಕೃತ ಪೋರ್ಟಲ್ pmkisan.gov.inಗೆ ಹೋಗಿ
- ಅಲ್ಲಿ ಫಾರ್ಮರ್ಸ್ ಕಾರ್ನರ್ ಅಡಿಯಲ್ಲಿ ಬೆನಿಫಿಶಿಯರಿ ಲಿಸ್ಟ್ ಇತ್ಯಾದಿಯನ್ನು ಕಾಣಬಹುದು.
- ಬೆನಿಫಿಶಿಯರಿ ಲಿಸ್ಟ್ ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆದುಕೊಳ್ಳುತ್ತದೆ.
- ಅದರಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಊರನ್ನು ಆರಿಸಿಕೊಳ್ಳಿ.
- ನಿಮ್ಮ ಊರಿನ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣುತ್ತದೆ.
ಹಾಗೆಯೇ, ಫಾರ್ಮರ್ಸ್ ಕಾರ್ನರ್ ಅಡಿಯಲ್ಲಿ ನ್ಯೂ ಫಾರ್ಮರ್ಸ್ ರಿಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಿದರೆ, ಅಲ್ಲಿ ನೀವು ಹೊಸದಾಗಿ ಯೋಜನೆಗೆ ನೊಂದಾಯಿಸಿಕೊಳ್ಳಬಹುದು. ಈಗ ಮಾಡಿದರೆ ಈ ವಾರ ಬಿಡುಗಡೆ ಆಗುವ ಹಣ ನಿಮ್ಮ ಖಾತೆಗೆ ಬರುವುದಿಲ್ಲ. ಮುಂದಿನ ಕಂತಿನ ಹಣ ಪಡೆಯಲು ಸಾಧ್ಯವಾಗಬಹುದು.