Tips: ನಿಮ್ಮ ವಯಸ್ಸಿನ್ನೂ 30 ದಾಟಿಲ್ಲವೇ? ಹಣ ಸಂಪಾದನೆ, ಹಣಭದ್ರತೆಗೆ ತಪ್ಪದೇ ಈ ಕ್ರಮ ಅನುಸರಿಸಿ

Financial Advice For 20s Youth: ಕೆಲಸಕ್ಕೆ ಸೇರಿ ವೃತ್ತಿಜೀವನ ಆರಂಭಿಸುತ್ತಿರುವ 25 ವರ್ಷದೊಳಗಿನ ವಯೋಮಾನದವರು ಹಣಕಾಸು ಮಹತ್ವ ತಿಳಿದಿರಬೇಕು. ಅಷ್ಟೇ ಅಲ್ಲ, ಕೆಲವೊಂದು ಹಣಕಾಸು ಶಿಸ್ತು ಮತ್ತು ಕ್ರಮಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳಬೇಕು. ಇಂಥ ಕೆಲ ಅಂಶಗಳು ಇಲ್ಲಿವೆ.

Tips: ನಿಮ್ಮ ವಯಸ್ಸಿನ್ನೂ 30 ದಾಟಿಲ್ಲವೇ? ಹಣ ಸಂಪಾದನೆ, ಹಣಭದ್ರತೆಗೆ ತಪ್ಪದೇ ಈ ಕ್ರಮ ಅನುಸರಿಸಿ
ಹಣ ಉಳಿತಾಯ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 24, 2023 | 10:36 AM

ಹಣ ನನಗೆ ತೃಣ ಎಂದು ಬಾಯಿ ಮಾತಿಗೂ ಹೇಳುವ ಧೈರ್ಯ ಮತ್ತು ವೈರಾಗ್ಯ ಬಹುಶಃ ಯಾರಿಗೂ ಇಲ್ಲ. ಇವತ್ತಿನ ಸಂದರ್ಭದಲ್ಲಿ ಹಣ ಬಹಳ ಮುಖ್ಯ ಎಂಬುದು ಪುಟ್ಟ ಮಗುವಿಗೂ ಗೊತ್ತಾಗಿರುವ ಸತ್ಯ. ಈಗ ಮಜಾ ಮಾಡೋಣ, ನಾಳೆ ನೋಡೋಣ ಎನ್ನುವ ಮಾತನ್ನು ಪಕ್ಕಕ್ಕಿಟ್ಟು, ಈಗಲೂ ಮಜಾ ಮಾಡೋಣ, ನಾಳೆಯೂ ಮಜಾ ಮಾಡೋಣ, ಅದಕ್ಕೆ ಬೇಕಾದ ಪ್ಲಾನ್ (Financial Planning) ಮಾಡೋಣ ಎಂಬುದು ಹಣ ಸಂಪಾದನೆಯಲ್ಲಿ ತೊಡಗಿಸಿಕೊಳ್ಳುವ ಪ್ರತಿಯೊಬ್ಬರೂ ಆಲೋಚಿಸಬೇಕು. ನೀವು ಸಂಪಾದಿಸುವ ಹಣದಲ್ಲಿ ಉಳಿತಾಯ ಎನ್ನುವುದು ಇಲ್ಲದಿದ್ದರೆ ನಾಳೆಯ ಜೀವನದಲ್ಲಿ ನಿಮಗೆ ಸಿಗುವುದ ಮಜಾ ಅಲ್ಲ, ಸಜಾ ಎಂಬುದು ಸತ್ಯ. ಅದಕ್ಕಾಗಿ ಯುವಕರು ಹಣಕಾಸು ಸಾಕ್ಷರರಾಗಿರಬೇಕು. ಅದರಲ್ಲೂ ಕಾಲೇಜು ಓದುತ್ತಿರುವ ಹಾಗೂ ಈಗಷ್ಟೇ ಕೆಲಸಕ್ಕೆ ಸೇರಿ ವೃತ್ತಿಜೀವನ ಆರಂಭಿಸುತ್ತಿರುವ 25 ವರ್ಷದೊಳಗಿನ ವಯೋಮಾನದವರು ಹಣಕಾಸು ಮಹತ್ವ ತಿಳಿದಿರಬೇಕು. ಅಷ್ಟೇ ಅಲ್ಲ, ಕೆಲವೊಂದು ಹಣಕಾಸು ಶಿಸ್ತು ಮತ್ತು ಕ್ರಮಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳಬೇಕು. ಇಂಥ ಕೆಲ ಅಂಶಗಳು ಇಲ್ಲಿವೆ.

ವೆಚ್ಚದ ಮೇಲೆ ಕಣ್ಣಿಡಿ

ನಿಮಗೆ ಆದಾಯ ಎಷ್ಟು ಬರುತ್ತದೆ ಇದೆ, ನಿಮ್ಮ ವೆಚ್ಚ ಎಷ್ಟು ಇದೆ ಎಂಬ ಕರಾರುವಾಕ್ ಲೆಕ್ಕ ನೀವು ಹಾಕಿಡಬೇಕು. ಅನಿರೀಕ್ಷಿತ ವೆಚ್ಚ ಬದಿಗಿಟ್ಟು, ಮಾಮೂಲಿಯ ವೆಚ್ಚಗಳು ಎಷ್ಟಿರುತ್ತವೆ ಎಂಬುದನ್ನು ಅವಲೋಕಿಸಿ. ನಿಮ್ಮ ಆದಾಯಕ್ಕಿಂತ ವೆಚ್ಚ ಹೆಚ್ಚಾಗುತ್ತದೆ ಎಂದರೆ ಅದು ಅಪಾಯಕಾರಿ ಸ್ಥಿತಿ. ವೆಚ್ಚ ಕಡಿತ ಬಿಟ್ಟರೆ ಅನ್ಯಥಾ ದಾರಿ ಇರುವುದಿಲ್ಲ.

ಹೋಟೆಲ್​ಗೆ ಹೆಚ್ಚು ವೆಚ್ಚವಾಗುತ್ತಿದ್ದರೆ, ಸಾಧ್ಯವಾದಷ್ಟೂ ಮನೆಯಿಂದಲೇ ಊಟ ತೆಗೆದುಕೊಂಡು ಹೋಗಿ. ಆಟೊ, ಕ್ಯಾಬ್ ಇತ್ಯಾದಿ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿ. ರೈಲು, ಮೆಟ್ರೋ, ನಡಿಗೆ ಇತ್ಯಾದಿ ಸೇವೆ ಬಳಸಿಕೊಳ್ಳಿ.

ಇದನ್ನೂ ಓದಿCrorepati: 10,000 ರೂ ಎಸ್​ಐಪಿಯಿಂದ ಎಷ್ಟು ದಿನದಲ್ಲಿ ಕೋಟ್ಯಾಧಿಪತಿಯಾಗಬಹುದು? ಇಲ್ಲಿದೆ ಲೆಕ್ಕಾಚಾರ

ಉಳಿತಾಯ ಮಂತ್ರ

ಹಣಕಾಸು ಶಿಸ್ತಿನಲ್ಲಿ ಒಂದು ಪ್ರಮುಖ ಪಾಠ ಎಂದರೆ ಅದು ಉಳಿತಾಯ ಮಂತ್ರ. ನಿಮ್ಮ ವೆಚ್ಚ ಬಿಟ್ಟು ಎಷ್ಟು ಣ ಉಳಿಯುತ್ತದೆ ಎಂದು ನೋಡಿ. ನಿಮ್ಮ ಆದಾಯದಲ್ಲಿ ಕನಿಷ್ಠ ಶೇ. 20ರಷ್ಟಾದರೂ ಹಣವನ್ನು ನೀವು ಉಳಿಸಬೇಕು. ನಿಮ್ಮ ಆದಾಯ ಹೆಚ್ಚುತ್ತಾ ಹೋದಂತೆಲ್ಲಾ ನಿಮ್ಮ ಉಳಿತಾಯವೂ ಹೆಚ್ಚುತ್ತಾ ಹೋಗಬೇಕು. ವೆಚ್ಚದ ಪ್ರಮಾಣ ಕಡಿಮೆ ಮಾಡುತ್ತಾ ಹೋಗಬೇಕು.

ಹಣ ಕೈಲಿದ್ದರೆ ಖರ್ಚಾಗಬಹುದು ಎಂಬ ಭಯ ನಿಮಗಿದ್ದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಆರ್​ಡಿ ತೆರೆದು ಅದಕ್ಕೆ ಇಂತಿಷ್ಟು ಹಣ ಆಟೊ ಡೆಬಿಟ್ ಆಗುವಂತೆ ಮಾಡಿ. ಆಗ ನಿಮಗೆ ಉಳಿತಾಯ ಕಾರ್ಯ ಸುಲಭಗೊಳ್ಳುತ್ತದೆ.

ನಿಮ್ಮ ಗುರಿ, ಆಸೆಗಳ ಪಟ್ಟಿ ಮಾಡಿ ಯೋಜಿಸಿ

ಪ್ರತಿಯೊಬ್ಬರಿಗೂ ಆಸೆ ಆಕಾಂಕ್ಷೆಗಳಿರುತ್ತವೆ. ಬೈಕು, ಕಾರು, ಮನೆ, ಫಾರೀನ್ ಟ್ರಿಪ್ ಇತ್ಯಾದಿ ಬಯಸುತ್ತೇವೆ. ಆದರೆ, ಸಾಲ ಮಾಡಿಯಾದರೂ ತುಪ್ಪು ತಿನ್ನು ಎಂದು ಈ ಆಸೆ ಪೂರೈಕೆಗೆ ಸಿಕ್ಕ ಸಿಕ್ಕ ಸಾಲ ಪಡೆದು ಶೂಲಕ್ಕೇರುವ ದುಸ್ಸಾಹಸ ಬೇಡ. ನಿಮ್ಮ ಆಸೆ ಮತ್ತು ಗುರಿಗಳ ಪಟ್ಟಿ ಮಾಡಿ. ಅದಕ್ಕೆ ಎಷ್ಟು ಹಣ ಬೇಕಾಗುತ್ತದೆ, ಅದನ್ನು ಈಡೇರಿಸುವ ವಿಧಾನ ಏನೆಂಬುದನ್ನು ಯೋಜಿಸಿ. ಅದಕ್ಕೆ ತಕ್ಕಂತೆ ಉಳಿತಾಯ ಯೋಜನೆ ಹಾಕಿಕೊಳ್ಳಿ.

ಆರ್​ಡಿಯೋ, ಚೀಟಿಯೋ ಏನಾದರೂ ಆಗಬಹುದು. ಆದ್ಯತೆಗಳ ಪ್ರಕಾರ ನಿಮ್ಮ ಯೋಜನೆ ಇರಲಿ. ಆ ನಿಮ್ಮ ಪ್ರತಿಯೊಂದು ಗುರಿಗೂ ಹಣ ಹೂಡಿಕೆ ಮಾಡುವಷ್ಟು ಆದಾಯ ನಿಮ್ಮಲ್ಲಿ ಇದೆಯಾ ಎಂಬುದನ್ನು ನೋಡಿ. ಇಲ್ಲವಾದರೆ ಕೆಲವೊಂದು ಆಸೆಗಳನ್ನು ಕೈಬಿಡುವುದು ಉತ್ತಮ.

ಇದನ್ನೂ ಓದಿSukanya Samriddhi Yojana: ತಿಂಗಳಿಗೆ 10,000 ರೂ ಕಟ್ಟಿ, 52 ಲಕ್ಷ ರಿಟರ್ನ್ ಪಡೆಯಿರಿ; ಇದು ಸುಕನ್ಯ ಸಮೃದ್ಧಿ ಯೋಜನೆ ವಿಶೇಷತೆ

ಹಣ ಬೆಳೆಸಿ

ನೀವು ಹಣ ಉಳಿತಾಯ ಮಾಡುವುದು ಒಂದಾದರೆ ಆ ಹಣವನ್ನು ಬೆಳೆಸುವುದೂ ಬಹಳ ಮುಖ್ಯ. ಇವು ನಿಮ್ಮ ಗುರಿ ಸಾಧನೆಗೆ ಬಹಳ ಸಹಕಾರಿ ಎನಿಸುತ್ತವೆ. ಎಫ್​ಡಿ, ಆರ್​ಡಿ, ಬಾಂಡ್​ಗಳು, ಷೇರು, ಮ್ಯೂಚುವಲ್ ಫಂಡ್, ಎಸ್​ಐಪಿ ಹೀಗೆ ನಾನಾ ದಾರಿಗಳುಂಟು. ನೀವು ಉಳಿಸುವ ಅಷ್ಟೂ ಹಣವನ್ನು ವಿವಿಧ ಹೂಡಿಕೆಗಳ ಮೇಲೆ ಹಾಕಿ. ಎಲ್ಲವನ್ನೂ ಷೇರುಗಳ ಮೇಲೆ ಹೂಡುವ ಬದಲು ಬೇರೆ ಬೇರೆ ರೀತಿಯ ಸಾಧನಗಳನ್ನು ಬಳಸಿ. ಆಗ ನಿಮಗೆ ರಿಸ್ಕ್ ಕಡಿಮೆ.

ಎಮರ್ಜೆನ್ಸಿ ಫಂಡ್ ಇರಲಿ

ಕೆಲವೊಮ್ಮೆ ಜೀವನದಲ್ಲಿ ಅನಿರೀಕ್ಷಿತ ಸಂದರ್ಭಗಳು ಎದುರಾಗಬಹುದು. ದಿಢೀರ್ ನಿಮಗೆ ಕೆಲಸ ಹೋಗಿ, 2-3 ತಿಂಗಳು ನಿರುದ್ಯೋಗಿಯಾಗಿ ಉಳಿಯಬಹುದು. ಅಥವಾ ವೈದ್ಯಕೀಯ ತುರ್ತು ಎದುರಾಗಬಹುದು. ಹೀಗಾಗಿ, 6 ತಿಂಗಳ ನಿಮ್ಮ ಸಕಲ ಅಗತ್ಯಗಳನ್ನು ಸರಿದೂಗಿಸುವಷ್ಟು ಪ್ರಮಾಣದಲ್ಲಿ ಹಣವನ್ನು ಎಮರ್ಜೆನ್ಸಿ ಫಂಡ್​ಗೆಂದು ಎತ್ತಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ನೀವು ಬೇಕೆಂದಾಗ ಹಿಂಪಡೆಯಬಲ್ಲ ಆರ್​ಡಿ, ಲಿಕ್ವಿಡ್ ಮ್ಯೂಚುವಲ್ ಫಂಡ್ ಇತ್ಯಾದಿಯಲ್ಲಿ ನಿಮ್ಮ ಎಮರ್ಜೆನ್ಸಿ ಫಂಡ್ ಇರಲಿ.

ಕ್ರೆಡಿಟ್ ಸ್ಕೋರ್ ಉತ್ತಮವಾಗಿರಲಿ

ಇದು ಬಹಳ ಮುಖ್ಯ. ನೀವು ಸಾಲ ಪಡೆದರೆ ಅದನ್ನು ನಿಯಮಿತವಾಗಿ ಮತ್ತು ಗಡುವು ಮೀರದೇ ಕಟ್ಟುತ್ತಾ ಹೋಗಬೇಕು. ಕ್ರೆಡಿಟ್ ಕಾರ್ಡ್ ಬಿಲ್​ಗಳನ್ನು ವಾಯಿದೆಯೊಳಗೆ ಕಟ್ಟಬೇಕು. ಇಲ್ಲದಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್​ಗೆ ಹಾನಿಯಾಗುತ್ತದೆ. ಕ್ರೆಡಿಟ್ ಸ್ಕೋರ್ ಕಡಿಮೆ ಆದರೆ ನಿಮಗೆ ಸಾಲ ಸಿಗುವುದು ಕಷ್ಟವಾಗುತ್ತದೆ.

ಚಿನ್ನವೂ ನಿಮ್ಮ ಬಳಿ ಇರಲಿ

ನಿಮ್ಮ ಉಳಿತಾಯ ಹಣದಲ್ಲಿ ಸಾಧ್ಯವಾದರೆ ಚಿನ್ನದ ಮೇಲೂ ಹೂಡಿಕೆಗಾಗಲೀ. ಯಾಕೆಂದರೆ ಚಿನ್ನ ಒಂದು ರೀತಿಯ ಆಪದ್ಬಾಂಧವ ಲೋಹ. ನಿಮಗೆ ಆಭರಣವಾಗಿ ಶೋಭೆ ತರುವುದಲ್ಲದೇ, ಕಡಿಮೆ ಬಡ್ಡಿಗೆ ಸುಲಭವಾಗಿ ಸಾಲ ಬೇಕೆಂದರೆ ಅದು ಉಪಯೋಗಕ್ಕೆ ಬರುತ್ತದೆ.

ಕೌಶಲ್ಯಕ್ಕೆ ಹಣ

ನಿಮ್ಮ ಹಣಕಾಸು ಸ್ಥಿತಿ ಉತ್ತಮವಾಗಿರಲು ಬಹಳ ಮುಖ್ಯ ಸಂಗತಿ ಎಂದರೆ ಅದು ಆದಾಯ ಹೆಚ್ಚಳ. ನಿಮ್ಮ ಆದಾಯ ವರ್ಷಗಳುರುಳಿದಂತೆ ಹೆಚ್ಚಾಗದಿದ್ದರೆ ನಿಮ್ಮ ಎಲ್ಲಾ ಯೋಜನೆಗಳು ನಿಷ್ಫಲ ಎನಿಸುತ್ತವೆ. ನೀವು ವೃತ್ತಿಯಲ್ಲಿ ಏಳಿಗೆ ಸಾಧಿಸಬೇಕಾದರೆ ಸಮರ್ಥ ಕೆಲಸಗಾರರಾಗಬೇಕು. ಜೊತೆಗೆ, ನಿಮ್ಮ ವೃತ್ತಿಗೆ ಅಗತ್ಯವಾಗಿರುವ ಕೆಲ ಕೌಶಲ್ಯಗಳ ಕೊರತೆ ನಿಮಗಿದ್ದರೆ ಅದನ್ನು ಕಲಿಯಲು ಗಮನ ಕೊಡಿ. ಅಗತ್ಯ ಇದ್ದರೆ ಕೋರ್ಸ್​ಗಳ ಮೂಲಕ ಕಲಿಯಿರಿ. ಮ್ಯಾನೇಜ್ಮೆಂಟ್ ಅಂಶಗಳನ್ನು ಕಲಿಯಿರಿ. ವೃತ್ತಿಯಲ್ಲಿ ಎತ್ತರಕ್ಕೆ ಏರಲು ಇದು ಬಹಳ ಮುಖ್ಯ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ