IPL 2025: ಮುಂಬೈ ಬೌಲರ್ಗಳ ಮ್ಯಾಜಿಕ್; ಹೈದರಾಬಾದ್ಗೆ 5ನೇ ಸೋಲು
IPL 2025: ಮುಂಬೈ ಇಂಡಿಯನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸಿ ಐಪಿಎಲ್ 2025ರ ಪ್ಲೇಆಫ್ ಆಸೆಯನ್ನು ಇನ್ನು ಜೀವಂತವಾಗಿ ಉಳಿಸಿಕೊಂಡಿದೆ. ಇಡೀ ತಂಡದ ಸಾಂಘಿಕ ಪ್ರದರ್ಶನದಿಂದಾಗಿ ಮುಂಬೈ ಗೆಲುವಿನತ್ತ ಸಾಗಿತು. ಈ ಗೆಲುವಿನೊಂದಿಗೆ ಮುಂಬೈ ತಂಡವು ಈ ಸೀಸನ್‌ನಲ್ಲಿ ಮೂರನೇ ಗೆಲುವು ದಾಖಲಿಸಿದೆ.

ಮುಂಬೈ ಇಂಡಿಯನ್ಸ್ (MI) ತಂಡವು ಸತತ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಐಪಿಎಲ್ 2025 (IPL 2025) ರಲ್ಲಿ ಮೊದಲ ಬಾರಿಗೆ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡವು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಅದರ ತವರು ಮೈದಾನವಾದ ವಾಂಖೆಡೆ ಕ್ರೀಡಾಂಗಣದಲ್ಲಿ 4 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ ಮುಂಬೈ ತಂಡವು ಈ ಸೀಸನ್‌ನಲ್ಲಿ ತನ್ನ ಮೂರನೇ ಗೆಲುವು ದಾಖಲಿಸಿತು. ಏತನ್ಮಧ್ಯೆ, ಕಳೆದ ಸೀಸನ್ನ ಫೈನಲಿಸ್ಟ್ ಸನ್‌ರೈಸರ್ಸ್ ಹೈದರಾಬಾದ್ಗೆ ಗೆಲುವಿನ ಆವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಾಗದೆ ಐದನೇ ಸೋಲನ್ನು ಎದುರಿಸಬೇಕಾಯಿತು. ಈ ಸೋಲು ಹೈದರಾಬಾದ್ ತಂಡದ ಪ್ಲೇಆಫ್ ತಲುಪುವ ಆಸೆಗೆ ತೀವ್ರ ಹೊಡೆತ ನೀಡಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ಹೈಸ್ಕೋರ್ ಪಂದ್ಯವಾಗುವ ನಿರೀಕ್ಷೆಗಳಿದ್ದವು. ಕೆಲವು ದಿನಗಳ ಹಿಂದೆ, ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ಕೂಡ ಈ ಪಂದ್ಯದಲ್ಲಿ ಮೊದಲ ಬಾರಿಗೆ 300ರ ಗಡಿ ದಾಟಬಹುದು ಎಂದು ಭವಿಷ್ಯ ನುಡಿದಿದ್ದರು. ಆದರೆ ಪಂದ್ಯ ಆರಂಭವಾದ ತಕ್ಷಣ ಎಲ್ಲರೂ ಆಘಾತಕ್ಕೊಳಗಾದರು. ಈ ಪಂದ್ಯ ನಡೆದ ಪಿಚ್‌ನಲ್ಲಿ ಸನ್‌ರೈಸರ್ಸ್ ತಂಡ ಕಷ್ಟಪಟ್ಟು 150 ರನ್‌ಗಳ ಗಡಿ ದಾಟಲಷ್ಟೇ ಶಕ್ತವಾಯಿತು.
ಹೈದರಾಬಾದ್ ಬ್ಯಾಟಿಂಗ್ ವೈಫಲ್ಯ
ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಅವರ ಸ್ಫೋಟಕ ಆರಂಭಿಕ ಜೋಡಿ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಲು ಕಷ್ಟಪಡಬೇಕಾಯಿತು. ಅಭಿಷೇಕ್ (40) ಕೆಲವು ಉತ್ತಮ ಹೊಡೆತಗಳೊಂದಿಗೆ ತಂಡಕ್ಕೆ ತ್ವರಿತ ಆರಂಭ ನೀಡಲು ಪ್ರಯತ್ನಿಸಿದರು. ಆದರೆ ಹೆಡ್ (28) ತಮ್ಮ ಇನ್ನಿಂಗ್ಸ್ ಉದ್ದಕ್ಕೂ ರನ್ಗಳಿಸಲು ಪರದಾಟ ನಡೆಸಿದರು. ಪರಿಣಾಮವಾಗಿ 10 ಓವರ್‌ಗಳಲ್ಲಿ ಕೇವಲ 75 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. 15 ಓವರ್‌ಗಳಲ್ಲಿ ಕೇವಲ 105 ರನ್ ಮಾತ್ರ ದಾಖಲಾಗಿದ್ದವು. ಇಲ್ಲಿ, ಹೆನ್ರಿಕ್ ಕ್ಲಾಸೆನ್ (37) ಕೊನೆಯಲ್ಲಿ ಹೊಡಿಬಡಿ ಆಟವನ್ನಾಡಿ 18 ನೇ ಓವರ್‌ನಲ್ಲಿ 21 ರನ್‌ಗಳನ್ನು ಸಿಡಿಸಿದರು. ನಂತರ 20 ನೇ ಓವರ್‌ನಲ್ಲಿ ಹೈದರಾಬಾದ್ ತಂಡವು 3 ಸಿಕ್ಸರ್‌ಗಳನ್ನು ಒಳಗೊಂಡಂತೆ 22 ರನ್ ಗಳಿಸಿ ತಂಡದ ಮೊತ್ತವನ್ನು 162 ರನ್‌ಗಳಿಗೆ ಕೊಂಡೊಯ್ದಿತ್ತು.
IPL 2025: ರೋಹಿತ್ ಶರ್ಮಾಗೆ ವಿಶೇಷ ಸ್ಮರಣಿಕೆ ನೀಡಿ ಗೌರವಿಸಿದ ಬಿಸಿಸಿಐ; ವಿಡಿಯೋ ನೋಡಿ
ಮುಂಬೈಗೂ ಪ್ರಯಾಸದ ಜಯ
ಇದಕ್ಕೆ ಪ್ರತಿಕ್ರಿಯೆಯಾಗಿ ಮುಂಬೈ ಸ್ಫೋಟಕ ಆರಂಭ ಪಡೆದುಕೊಂಡಿತು. ವಿಶೇಷವಾಗಿ ರೋಹಿತ್ ಶರ್ಮಾ 3 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ವಾಂಖೆಡೆಯಲ್ಲಿ ಹಾಜರಿದ್ದ ಅಭಿಮಾನಿಗಳನ್ನು ರಂಜಿಸಿದರು. ಆದರೆ ಮತ್ತೊಮ್ಮೆ ರೋಹಿತ್ (26) ತಮ್ಮ ಇನ್ನಿಂಗ್ಸ್ ಅನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು. ರಯಾನ್ ರಿಕಲ್ಟನ್ (31) ಮತ್ತು ಸೂರ್ಯಕುಮಾರ್ ಯಾದವ್ (26) ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ತಂಡವನ್ನು ಸಂಕಷ್ಟದಿಂದ ಹೊರತಂದರು. ಏತನ್ಮಧ್ಯೆ, ವಿಲ್ ಜ್ಯಾಕ್ಸ್ (36) ಕೂಡ ಉಪಯುಕ್ತ ಕಾಣಿಕೆ ನೀಡಿ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ಕೊನೆಯಲ್ಲಿ ಪ್ಯಾಟ್ ಕಮ್ಮಿನ್ಸ್ (3/26) ಎರಡೂ ವಿಕೆಟ್‌ಗಳನ್ನು ಪಡೆಯುವ ಮೂಲಕ ಮತ್ತೆ ಆಟವನ್ನು ರೋಚಕಗೊಳಿಸಿದರಾದರೂ ಅದು ತುಂಬಾ ತಡವಾಗಿತ್ತು. ಅಂತಿಮವಾಗಿ ಹಾರ್ದಿಕ್ ಪಾಂಡ್ಯ (21) ಮತ್ತು ತಿಲಕ್ ವರ್ಮಾ (17) ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:34 pm, Thu, 17 April 25