MI vs SRH: ಬೇಸರದಲ್ಲಿದ್ದ ಇಶಾನ್ ಕಿಶನ್ರನ್ನು ಮಗುವಿನಂತೆ ಸಮಾಧಾನ ಪಡಿಸಿದ ನೀತಾ ಅಂಬಾನಿ
Ishan kishan-Nita Ambani: ಮುಂಬೈ ಇಂಡಿಯನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯದ ನಂತರ, ಮುಂಬೈ ತಂಡದ ಒಡತಿ ನೀತಾ ಅಂಬಾನಿ ಮತ್ತು ಇಶಾನ್ ಕಿಶನ್ ವಾಂಖೆಡೆ ಕ್ರೀಡಾಂಗಣದಲ್ಲಿ ಭೇಟಿಯಾದರು. ಈ ಸಂದರ್ಭ ಕಿಶನ್ ಬೇಸರದಲ್ಲಿರುವಂತೆ ಕಂಡುಬಂತು. ಐಪಿಎಲ್ 2025 ರ ಹರಾಜಿನ ಮೊದಲು, ಇಶಾನ್ ಕಿಶನ್ ಮುಂಬೈ ತಂಡದಲ್ಲಿ 7 ಋತುಗಳ ಕಾಲ ಆಡಿದ್ದರು.

ಬೆಂಗಳೂರು (ಏ. 17): ಐಪಿಎಲ್ 2025 ರಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ (Mumbai Indians vs Sunrisers Hyderabad) ವಿರುದ್ಧ ರೋಚಕ ಗೆಲುವು ಸಾಧಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ಕೇವಲ 162 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಪ್ರತಿಯಾಗಿ ಮುಂಬೈ ತಂಡವು 19ನೇ ಓವರ್‌ನ ಮೊದಲ ಎಸೆತದಲ್ಲೇ ಪಂದ್ಯವನ್ನು ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಇಶಾನ್ ಕಿಶನ್ ಅವರ ಪ್ರದರ್ಶನ ತೀರಾ ಕಳಪೆಯಾಗಿತ್ತು. ಪಂದ್ಯದ ನಂತರ, ಇಶಾನ್ ಸ್ವಲ್ಪ ಅಸಮಾಧಾನಗೊಂಡಂತೆ ಕೂಡ ಕಂಡುಬಂದರು. ಈ ಸಂದರ್ಭ ಮುಂಬೈ ಇಂಡಿಯನ್ಸ್ ತಂಡದ ಒಡತಿ ನೀತಾ ಅಂಬಾನಿ ಅವರನ್ನು ಸಮಾಧಾನ ಪಡಿಸಿದರು.
ಇಶಾನ್ ಅವರನ್ನು ಭೇಟಿಯಾದ ನೀತಾ ಅಂಬಾನಿ:
ಪಂದ್ಯದ ನಂತರ, ಮುಂಬೈ ಇಂಡಿಯನ್ಸ್ ತಂಡದ ಒಡತಿ ನೀತಾ ಅಂಬಾನಿ ಮತ್ತು ಇಶಾನ್ ಕಿಶನ್ ವಾಂಖೆಡೆ ಕ್ರೀಡಾಂಗಣದಲ್ಲಿ ಭೇಟಿಯಾದರು. ಐಪಿಎಲ್ 2025 ರ ಹರಾಜಿನ ಮೊದಲು, ಇಶಾನ್ ಕಿಶನ್ ಮುಂಬೈ ತಂಡದಲ್ಲಿ 7 ಋತುಗಳ ಕಾಲ ಆಡಿದ್ದರು. ನಂತರ, ಹೈದರಾಬಾದ್ ಅವರನ್ನು ದೊಡ್ಡ ಮೊತ್ತಕ್ಕೆ ಖರೀದಿಸಿತು. ವಾಂಖೆಡೆ ಕ್ರೀಡಾಂಗಣದಲ್ಲಿ ಇಶಾನ್ ಎದುರಾಳಿ ತಂಡದ ಆಟಗಾರನಾಗಿ ಆಡುತ್ತಿರುವುದು ಇದೇ ಮೊದಲು. ಆದಾಗ್ಯೂ, ಬ್ಯಾಟಿಂಗ್‌ನಲ್ಲಿ ಅವರ ಪ್ರದರ್ಶನ ಉತ್ತಮವಾಗಿರಲಿಲ್ಲ. ಕೇವಲ 2 ರನ್ ಗಳಿಸಿ ಔಟಾದರು.
Nita Ambani and Ishan Kishan after the Match. ❤️ pic.twitter.com/QI6TYfoxMw
— Tanuj (@ImTanujSingh) April 17, 2025
ಪಂದ್ಯದ ನಂತರ, ಆಟಗಾರರು ಕೈಕುಲುಕುತ್ತಾ ತಮ್ಮ ತಮ್ಮ ಡಗೌಟ್ ಕಡೆಗೆ ಹೋಗುತ್ತಿದ್ದರು. ಇಶಾನ್ ಕಿಶನ್ ಸಪ್ಪೆ ಮೋರೆ ಹಾಕಿದ್ದರು. ಈ ಸಂದರ್ಭ ಕಿಶನ್, ನೀತಾ ಅಂಬಾನಿ ಬಳಿಗೆ ಹೋಗಿ ಅವರನ್ನು ನಗುತ್ತಾ ಸ್ವಾಗತಿಸಿದರು. ನೀತಾ ಕೂಡ ಇಶಾನ್ಗೆ ಪ್ರೀತಿಯಿಂದ ಪ್ರತಿಕ್ರಿಯಿಸಿ ಅವನ ಕೆನ್ನೆ ತಟ್ಟಿ ಸಮಾಧಾನ ಮಾಡುತ್ತಿರುವಂತೆ ಕಂಡುಬಂತು. ಇಶಾನ್ ಮುಂಬೈ ಮಾಲೀಕರೊಂದಿಗೆ ಕೆಲ ಸಮಯ ಮಾತನಾಡಿ ನಂತರ ಹೈದರಾಬಾದ್ ತಂಡಕ್ಕೆ ಮರಳಿದರು.
Sanju Samson: ಸಂಜು ಸ್ಯಾಮ್ಸನ್-ರಾಹುಲ್ ದ್ರಾವಿಡ್ ಮಧ್ಯೆ ಜಗಳ?: ರಾಜಸ್ಥಾನ್ ರಾಯಲ್ಸ್ ಟೀಮ್ನಲ್ಲಿ ಬಿರುಕು
ಮುಂಬೈ ತಂಡದಿಂದ ಅದ್ಭುತ ಪ್ರದರ್ಶನ:
ಈ ಪಂದ್ಯದಲ್ಲಿ ಮುಂಬೈ ಉತ್ತಮ ಪ್ರದರ್ಶನ ನೀಡಿ ಸನ್‌ರೈಸರ್ಸ್ ತಂಡವನ್ನು ಸೋಲಿಸಿತು. 163 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ 18.1 ಓವರ್‌ಗಳಲ್ಲಿ ಗುರಿ ತಲುಪಿತು. ವಿಲ್ ಜ್ಯಾಕ್ಸ್ 26 ಎಸೆತಗಳಲ್ಲಿ 36 ರನ್ ಗಳಿಸಿದರು, ಸೂರ್ಯಕುಮಾರ್ ಯಾದವ್ 15 ಎಸೆತಗಳಲ್ಲಿ 26 ರನ್ ಗಳಿಸಿದರು ಮತ್ತು ತಿಲಕ್ ವರ್ಮಾ ಅಜೇಯ 21 ರನ್ ಗಳಿಸಿದರು. ಮುಂಬೈ ಬೌಲರ್‌ಗಳು ಸನ್‌ರೈಸರ್ಸ್ ತಂಡವನ್ನು 162 ರನ್‌ಗಳಿಗೆ ಸೀಮಿತಗೊಳಿಸಿದರು. ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್ ಮತ್ತು ಜಾಕ್ವೆಸ್ ಉತ್ತಮವಾಗಿ ಬೌಲಿಂಗ್ ಮಾಡಿದರು.
ಹೈದರಾಬಾದ್ ತಂಡವು ಕೊನೆಯಲ್ಲಿ ಸ್ವಲ್ಪ ಹೋರಾಟ ಪ್ರದರ್ಶಿಸಿತು. ಹೆನ್ರಿಕ್ ಕ್ಲಾಸೆನ್ 37 ರನ್ ಗಳಿಸಿದರು ಮತ್ತು ಅನಿಕೇತ್ ವರ್ಮಾ ಕೊನೆಯ ಓವರ್‌ನಲ್ಲಿ ಕೆಲವು ಉತ್ತಮ ಹೊಡೆತಗಳನ್ನು ಹೊಡೆದರು. ಆದರೆ ಮುಂಬೈ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅದ್ಭುತ ಪ್ರದರ್ಶನ ನೀಡಿತು. ಈ ಗೆಲುವಿನೊಂದಿಗೆ ಮುಂಬೈ ತಂಡ ಆರು ಅಂಕಗಳೊಂದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಏರಿದೆ. ಅದೇ ಸಮಯದಲ್ಲಿ, 2025 ರ ಋತುವು ಸನ್‌ರೈಸರ್ಸ್‌ಗೆ ಕಷ್ಟಕರವಾಗಿದೆ. ತಂಡವು ಇಲ್ಲಿಯವರೆಗೆ ಕೇವಲ ಎರಡು ಪಂದ್ಯಗಳನ್ನು ಗೆದ್ದಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:09 am, Fri, 18 April 25