ಪಿಎಂ ಕಿಸಾನ್ ಯೋಜನೆ; ಅನಗತ್ಯ ಹಣ ಪೋಲು ತಪ್ಪಿಸಲು ಕ್ರಮ; ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ವಾಪಸ್

|

Updated on: Dec 08, 2024 | 1:55 PM

PM Kisan scheme: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಅನರ್ಹರಾದರೂ ನೊಂದಾಯಿಸಿಕೊಂಡು ಫಲ ಪಡೆಯುತ್ತಿರುವವರು ಹಲವರಿದ್ದಾರೆ. ಅವರನ್ನು ಗುರುತಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರ ಪರಿಣಾಮವಾಗಿ ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ವಾಪಸ್ ಪಡೆಯಲಾಗಿದೆ.

ಪಿಎಂ ಕಿಸಾನ್ ಯೋಜನೆ; ಅನಗತ್ಯ ಹಣ ಪೋಲು ತಪ್ಪಿಸಲು ಕ್ರಮ; ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ವಾಪಸ್
ಪಿಎಂ ಕಿಸಾನ್ ಯೋಜನೆ
Follow us on

ನವದೆಹಲಿ, ಡಿಸೆಂಬರ್ 8: ಪಿಎಂ ಕಿಸಾನ್ ಯೋಜನೆಯ ನಿಯಮಗಳನ್ನು ಉಲ್ಲಂಘಿಸಿ ಫಲಾನುಭವಿಗಳಾಗಿದ್ದ ವ್ಯಕ್ತಿಗಳಿಂದ 335 ಕೋಟಿ ರೂ ಹಣವನ್ನು ಹಿಂಪಡೆಯಲಾಗಿದೆ. ಈ ಮಾಹಿತಿಯನ್ನು ಸರ್ಕಾರ ಕೆಲ ದಿನಗಳ ಹಿಂದೆ ಸಂಸತ್​ಗೆ ತಿಳಿಸಿದೆ. ಅರ್ಹ ಫಲಾನುಭವಿಗಳನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಅನರ್ಹರನ್ನು ಗುರುತಿಸಿ ದೂರ ಇಡಲು ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡ ಪರಿಣಾಮ, ಯೋಜನೆಯ ಹಣ ಪೋಲಾಗುವುದು ತಗ್ಗುತ್ತಿದೆ.

ಪಿಎಂ ಕಿಸಾನ್ ಯೋಜನೆಯಲ್ಲಿ ಅರ್ಹ ಫಲಾನುಭವಿಗಳನ್ನು ಖಾತ್ತಿಪಡಿಸುವ ಹೊಣೆ ರಾಜ್ಯ ಸರ್ಕಾರಗಳಿಗೆ ಇರುತ್ತದೆ. ಕೆಲ ರಾಜ್ಯಗಳಲ್ಲಿ ಫಲಾನುಭವಿಗಳ ಆಧಾರ್ ಅನ್ನು ಲಿಂಕ್ ಮಾಡುವ ನಿಯಮದಿಂದ ವಿನಾಯಿತಿ ನೀಡಲಾಗಿತ್ತು. ಇದೀಗ ಕೆವೈಸಿ ಮೂಲಕ ಆಧಾರ್ ಅನ್ನು ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಹಾಗೆಯೇ, ಜಮೀನು ದಾಖಲೆಗಳು, ಪಬ್ಲಿಕ್ ಫೈನಾನ್ಷಿಯಲ್ ಮ್ಯಾನೇಜ್ಮೆಂಟ್ ಸಿಸ್ಟಂ, ಇನ್ಕಮ್ ಟ್ಯಾಕ್ಸ್ ದತ್ತಾಂಶ ಇತ್ಯಾದಿಯನ್ನೂ ಜೋಡಿಸಲಾಗಿದೆ. ಇದರಿಂದ ಅನರ್ಹ ಫಲಾನುಭವಿಗಳನ್ನು ಗುರುತಿಸಲು ಸಾಧ್ಯವಾಗಿದೆ. ಇವರಿಂದ 335 ಕೋಟಿ ರೂ ಹಣ ಹಿಂಪಡೆಯಲು ಸಾಧ್ಯವಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

2019ರ ಫೆಬ್ರುವರಿ 24ರಂದು ಪಿಎಂ ಕಿಸಾನ್ ಯೋಜನೆ ಚಾಲನೆಗೊಂಡಿದೆ. ಕೇಂದ್ರ ಸರ್ಕಾರ ಒಂದು ವರ್ಷದಲ್ಲಿ ತಲಾ 2,000 ರೂನಂತೆ ಮೂರು ಕಂತುಗಳಲ್ಲಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾಯಿಸುತ್ತದೆ. ಕೃಷಿ ಕಾರ್ಯಕ್ಕೆ ಸರ್ಕಾರ ನೀಡುವ ಸಹಾಯಧನ ಇದು. ಸರ್ಕಾರ ಇಲ್ಲಿಯವರೆಗೆ 18 ಕಂತುಗಳ ಹಣವನ್ನು ರೈತರಿಗೆ ನೀಡಿದೆ.

ಇದನ್ನೂ ಓದಿ: ಭಾರತದ ಭವಿಷ್ಯ ಈಶಾನ್ಯದಲ್ಲಿದೆ; ಅಷ್ಟಲಕ್ಷ್ಮಿ ಮಹೋತ್ಸವದಲ್ಲಿ ಪ್ರಧಾನಿ ಮೋದಿ

ಅಪ್ಪಟ ರೈತರಿಗೆ ಮಾತ್ರವೇ, ಅಂದರೆ ಕೃಷಿ ಆದಾಯವೇ ಪ್ರಧಾನ ಆಗಿರುವ ವ್ಯಕ್ತಿಗಳಿಗೆ ಮಾತ್ರವೇ ಈ ಯೋಜನೆ ಇರುವುದು. ಜಮೀನು ಹೊಂದಿರುವ ಯಾವುದೇ ರೈತರು ಈ ಯೋಜನೆಯ ಫಲಾನುಭವಿಯಾಗಬಹುದು. ವೈದ್ಯ, ಎಂಜಿನಿಯರ್ ಇತ್ಯಾದಿ ವೃತ್ತಿಪರರು ನೊಂದಾಯಿಸುವಂತಿಲ್ಲ. ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ಸಂಸದರು, ಶಾಸಕರು ಮೊದಲಾದವರು ಕೃಷಿ ಜಮೀನು ಮಾಲೀಕರಾಗಿದ್ದರೂ ಪಿಎಂ ಕಿಸಾನ್ ಯೋಜನೆಗೆ ಅನರ್ಹರಾಗಿರುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ