ನವದೆಹಲಿ, ಡಿಸೆಂಬರ್ 8: ಜಾಗತಿಕವಾಗಿ ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕುಗಳ ಚಿನ್ನ ಖರೀದಿ ಭರಾಟೆ ಮುಂದುವರಿದಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ಸಂಸ್ಥೆ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಸೆಂಟ್ರಲ್ ಬ್ಯಾಂಕುಗಳು 60 ಟನ್ಗಳಷ್ಟು ಚಿನ್ನವನ್ನು ಖರೀದಿಸಿವೆ. ಇದರಲ್ಲಿ ಹೆಚ್ಚೂಕಡಿಮೆ ಅರ್ಧದಷ್ಟು ಪಾಲು ಆರ್ಬಿಐನದ್ದು. ಭಾರತೀಯ ರಿಸರ್ವ್ ಬ್ಯಾಂಕ್ ಅಕ್ಟೋಬರ್ನಲ್ಲಿ ಖರೀದಿಸಿದ ಚಿನ್ನ ಬರೋಬ್ಬರಿ 27 ಟನ್ನಷ್ಟು. ಜನವರಿಯಿಂದ ಅಕ್ಟೋಬರ್ವರೆಗೆ ಈ ವರ್ಷದ 10 ತಿಂಗಳಲ್ಲಿ ಆರ್ಬಿಐ 77 ಟನ್ ಚಿನ್ನವನ್ನು ಖರೀದಿಸಿ ತನ್ನ ಫಾರೆಕ್ಸ್ ನಿಧಿಗೆ ಸಂದಾಯ ಮಾಡಿದೆ.
ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಆರ್ಬಿಐ ಶೇಖರಿಸಿದ ಚಿನ್ನದ ಪ್ರಮಾಣ ಐದು ಪಟ್ಟು ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಕಟಿಸುವ ಮಾಸಿಕ ದತ್ತಾಂಶದ ಆಧಾರದಲ್ಲಿ ವರ್ಲ್ಡ್ ಗೋಲ್ಡ್ ಕೌನ್ಸಿಲ್ ಈ ಮಾಹಿತಿ ಹೊರಗೆಡವಿದೆ. ಭಾರತದಲ್ಲಿ ಈಗ ಒಟ್ಟಾರೆ ಚಿನ್ನದ ಮೀಸಲು ನಿಧಿ 882 ಟನ್ಗಳಷ್ಟಿದೆ. ಇದರಲ್ಲಿ 510 ಟನ್ಗಳು ಭಾರತದಲ್ಲೇ ಇವೆ. ಉಳಿದ 372 ಟನ್ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ಹಾಗೂ ಇತರ ದೇಶಗಳಲ್ಲಿ ಇರಿಸಲಾಗಿದೆ.
ಇದನ್ನೂ ಓದಿ: ಶೇ. 3.2ಕ್ಕೆ ಇಳಿದ ನಿರುದ್ಯೋಗ ದರ; ಇ-ಶ್ರಮ್ ಪೋರ್ಟಲ್ನಲ್ಲಿ ಅಸಂಘಟಿತ ವಲಯದ 30 ಕೋಟಿ ಕಾರ್ಮಿಕರ ನೊಂದಣಿ
ಈ ವರ್ಷ ಚಿನ್ನ ಶೇಖರಣೆಯಲ್ಲಿ ಭಾರತಕ್ಕೆ ಪೈಪೋಟಿ ನೀಡಿರುವುದು ಟರ್ಕಿ ಮತ್ತು ಪೋಲ್ಯಾಂಡ್ ದೇಶಗಳು. ಟರ್ಕಿ ದೇಶದ ಸೆಂಟ್ರಲ್ ಬ್ಯಾಂಂಕು 2024ರ ಜನವರಿಯಿಂದ ಅಕ್ಟೋಬರ್ವರೆಗೆ 72 ಟನ್ಗಳಷ್ಟು ಚಿನ್ನವನ್ನು ಖರೀದಿಸಿವೆ. ಪೋಲೆಂಡ್ ದೇಶದ ಸೆಂಟ್ರಲ್ ಬ್ಯಾಂಕು 69 ಟನ್ ಚಿನ್ನವನ್ನು ತೆಗೆದಿರಿಸಿದೆ. ಜಾಗತಿಕವಾಗಿ ಈ ವರ್ಷ ಸೆಂಟ್ರಲ್ ಬ್ಯಾಂಕುಗಳು ಖರೀದಿಸಿರುವ ಒಟ್ಟಾರೆ ಚಿನ್ನದಲ್ಲಿ ಶೇ. 60ರಷ್ಟು ಭಾಗವನ್ನು ಭಾರತ, ಟರ್ಕಿ ಮತ್ತು ಪೋಲ್ಯಾಂಡ್ ದೇಶಗಳ ಸೆಂಟ್ರಲ್ ಬ್ಯಾಂಕುಗಳೇ ಖರೀದಿಸಿವೆ.
ಅಕ್ಟೋಬರ್ ತಿಂಗಳಲ್ಲಿ ಆರ್ಬಿಐ 27 ಟನ್ ಚಿನ್ನ ಖರೀದಿಸಿರುವುದು ಅತಿಹೆಚ್ಚು ಎನಿಸಿದೆ. ನಂತರದ ಸ್ಥಾನವು ಟರ್ಕಿಯ ಸೆಂಟ್ರಲ್ ಬ್ಯಾಂಕ್ನದ್ದು. ಅದು 17 ಟನ್ ಚಿನ್ನ ಖರೀದಿಸಿದೆ. ಸತತ 17 ತಿಂಗಳು ಟರ್ಕಿಯ ಬ್ಯಾಂಕು ಚಿನ್ನ ಖರೀದಿಸಿರುವುದು ಗಮನಾರ್ಹ.
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; ಅನಗತ್ಯ ಹಣ ಪೋಲು ತಪ್ಪಿಸಲು ಕ್ರಮ; ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ವಾಪಸ್
ಪೋಲೆಂಡ್ನ ಸೆಂಟ್ರಲ್ ಬ್ಯಾಂಕು ಅಕ್ಟೋಬರ್ ತಿಂಗಳಲ್ಲಿ 8 ಟನ್ ಚಿನ್ನ ಖರೀದಿಸಿದೆ. ತನ್ನ ಒಟ್ಟಾರೆ ಮೀಸಲು ಸಂಪತ್ತಿನಲ್ಲಿ ಚಿನ್ನದ ಪ್ರಮಾಣ ಶೇ. 20ರಷ್ಟಿರಬೇಕೆಂಬ ಗುರಿಯತ್ತ ಪೋಲೆಂಡ್ ಸಾಗುತ್ತಿದೆ. ಆ ನಿಟ್ಟಿನಲ್ಲಿ ಸತತ ಏಳೆಂಟು ತಿಂಗಳಿಂ ಚಿನ್ನದ ಖರೀದಿಯ ಭರಾಟೆಯಲ್ಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ