ನವೆಂಬರ್ ದ್ವಿತೀಯಾರ್ಧದಲ್ಲಿ ಷೇರು ಮಾರಾಟಕ್ಕಿಂತ ಖರೀದಿ ಹೆಚ್ಚಿಸಿದ ವಿದೇಶೀ ಹೂಡಿಕೆದಾರರು
Foreign investment in Indian stocks: ನವೆಂಬರ್ ಎರಡನೇ ಭಾಗದಲ್ಲಿ ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆದಾರರು ನೆಟ್ ಸೆಲ್ಲರ್ನಿಂದ ನೆಟ್ ಬಯರ್ಗಳಾಗಿದ್ದಾರೆ. ನವೆಂಬರ್ ಮೊದಲಾರ್ಧದಲ್ಲಿ 22,400 ಕೋಟಿ ರೂ ಮೌಲ್ಯದ ಷೇರುಗಳನ್ನು ಎಫ್ಪಿಐಗಳು ಮಾರಿದ್ದವು. ದ್ವಿತೀಯಾರ್ಧದಲ್ಲಿ ಮಾರುವುದಕ್ಕಿಂತ ಖರೀದಿ ಹೆಚ್ಚಾಗಿದೆ. ಹಣಕಾಸು ಸೇವೆ, ಐಟಿ, ಎಫ್ಎಂಸಿಜಿ ಮೊದಲಾದ ಕೆಲ ಸೆಕ್ಟರ್ಗಳಲ್ಲಿ ಎಫ್ಪಿಐಗಳಿಂದ ಹೆಚ್ಚು ಹೂಡಿಕೆ ಆಗಿದೆ.

ನವದೆಹಲಿ, ಡಿಸೆಂಬರ್ 8: ನವೆಂಬರ್ ತಿಂಗಳ ದ್ವಿತೀಯಾರ್ಧದಲ್ಲಿ ವಿದೇಶೀ ಹೂಡಿಕೆದಾರರು ಮಾರುವುದಕ್ಕಿಂತ ಖರೀದಿಸುವುದೇ ಅಧಿಕ ಆಗಿತ್ತು. ಹಿಂದಿನ ಕೆಲ ತಿಂಗಳಿಂದ ಎಫ್ಪಿಐಗಳು ನೆಟ್ ಸೆಲ್ಲರ್ಗಳಾಗಿದ್ದರು. ನವೆಂಬರ್ ಮೊದಲಾರ್ಧದಲ್ಲಿ ಎಫ್ಪಿಐಗಳೀಂದ 22,400 ಕೋಟಿ ರೂಗೂ ಅಧಿಕ ಹೂಡಿಕೆ ಹಿಂತೆಗೆತ ಆಗಿತ್ತು. ದ್ವಿತೀಯಾರ್ಧದಲ್ಲಿ 809 ಕೋಟಿ ರೂ ನಿವ್ವಳ ಹೂಡಿಕೆಯಾಗಿದೆ. ಇದು ಪ್ರೈಮ್ ಇನ್ಫೋ ಬೇಸ್ ಡಾಟ್ ಕಾಮ್ನಿಂದ ಸಂಗ್ರಹವಾಗಿರುವ ದತ್ತಾಂಶದಿಂದ ತಿಳಿದುಬರುತ್ತದೆ.
ವಿದೇಶೀ ಹೂಡಿಕೆದಾರರು ನವೆಂಬರ್ ದ್ವಿತೀಯಾರ್ಧದಲ್ಲಿ ಫೈನಾನ್ಷಿಯಲ್ ಸರ್ವಿಸ್ ಮತ್ತು ಐಟಿ ಕ್ಷೇತ್ರದ ಸ್ಟಾಕ್ಗಳ ಮೇಲೆ ಹೆಚ್ಚು ಹೂಡಿಕೆ ಮಾಡಿದ್ದಾರೆ. ವಿದೇಶಿಗರ ಹೂಡಿಕೆಗಳು ಹೊರಹೋಗಿದ್ದು ಹೆಚ್ಚಾಗಿ ತೈಲ ಮತ್ತು ಅನಿಲ, ಆಟೊಮೊಬೈಲ್ ಸೆಕ್ಟರ್ನಿಂದ ಎಂದೆನ್ನಲಾಗಿದೆ.
ಇದನ್ನೂ ಓದಿ: ಕೇಂದ್ರದಿಂದ ‘ಅನ್ನ ಚಕ್ರ’ ಆರಂಭ; ಆಹಾರ ಸಂಸ್ಕರಣಾ ವಲಯಕ್ಕೆ 368 ಮಿಲಿಯನ್ ಡಾಲರ್ ಎಫ್ಡಿಐ
ಎಫ್ಪಿಐಗಳು ಹಣಕಾಸು ಸೇವಾ ವಲಯದ ಸ್ಟಾಕ್ಗಳಲ್ಲಿ 9,597 ಕೋಟಿ ರೂ ಹೂಡಿಕೆ ಮಾಡಿವೆ. ಐಟಿ ವಲಯದ ಷೇರುಗಳಲ್ಲಿ ಎಫ್ಪಿಐ ಹೂಡಿಕೆ ಆಗಿರುವುದು 2,429 ಕೋಟಿ ರೂ. ಇದೇ ವೇಳೆ, ತೈಲ ಮತ್ತು ಅನಿಲ ವಲಯದ ಸ್ಟಾಕುಗಳಿಂದ 6,132 ಕೋಟಿ ರೂ ಮೊತ್ತದ ಹೂಡಿಕೆಯನ್ನು ಎಫ್ಪಿಐಗಳು ಮಾರಿದ್ದಾರೆ.
ಅಮೆರಿಕದ ಆರ್ಥಿಕತೆ ಉತ್ತಮ ಬೆಳವಣಿಗೆಯ ಲಕ್ಷಣ ತೋರಿದ್ದರಿಂದ ಭಾರತೀಯ ಐಟಿ ಸ್ಟಾಕ್ಗಳತ್ತ ವಿದೇಶೀ ಹೂಡಿಕೆ ಹರಿದುಬಂದಿದೆ. ಇನ್ನು, ಹಣಕಾಸು ಸೇವಾ ಕ್ಷೇತ್ರವು ಮುಂದಿನ ದಿನಗಳಲ್ಲಿ ಉತ್ತಮ ಬೆಳವಣಿಗೆ ತೋರುವ ಸಾಧ್ಯತೆ ಇರುವುದರಿಂದ ಎಫ್ಪಿಐ ಆಕರ್ಷಿತವಾಗಿರಬಹುದು.
ಇದನ್ನೂ ಓದಿ: ಅಕ್ಟೋಬರ್ನಲ್ಲಿ ಬೇರೆಲ್ಲಾ ಸೆಂಟ್ರಲ್ ಬ್ಯಾಂಕುಗಳಿಗಿಂತ ಆರ್ಬಿಐನಿಂದಲೇ ಅತಿಹೆಚ್ಚು ಚಿನ್ನ ಖರೀದಿ
ಫೈನಾನ್ಷಿಯಲ್ ಸರ್ವಿಸ, ಐಟಿ ಮಾತ್ರವಲ್ಲ, ಎಫ್ಎಂಸಿಜಿ, ರಿಯಲ್ ಎಸ್ಟೇಟ್ ಮತ್ತು ಕ್ಯಾಪಿಟಲ್ ಗೂಡ್ಸ್ ಸೆಕ್ಟರ್ನ ಷೇರುಗಳತ್ತ ಎಫ್ಪಿಐಗಳ ಒಳಹರಿವು ನಡೆದಿದೆ. ಆಯಿಲ್ ಅಂಡ್ ಗ್ಯಾಸ್, ಆಟೊಮೊಬೈಲ್ ಹಾಗೂ ಟೆಲಿಕಾಂ, ಕಟ್ಟಡ ನಿರ್ಮಾಣ ಕ್ಷೇತ್ರದ ಷೇರುಗಳನ್ನು ಎಫ್ಪಿಐಗಳು ಹೆಚ್ಚು ಮಾರಾಟ ಮಾಡಿರುವುದು ದತ್ತಾಂಶದಿಂದ ತಿಳಿದುಬರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




