AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಟೋಬರ್​ನಲ್ಲಿ ಬೇರೆಲ್ಲಾ ಸೆಂಟ್ರಲ್ ಬ್ಯಾಂಕುಗಳಿಗಿಂತ ಆರ್​ಬಿಐನಿಂದಲೇ ಅತಿಹೆಚ್ಚು ಚಿನ್ನ ಖರೀದಿ

World Gold Council report: ಅಕ್ಟೋಬರ್ ತಿಂಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್​ನ ಮೀಸಲು ಸಂಪತ್ತಿಗೆ 27 ಟನ್ ಚಿನ್ನ ಸೇರ್ಪಡೆಯಾಗಿದೆ. ಜಾಗತಿಕವಾಗಿ ಸೆಂಟ್ರಲ್ ಬ್ಯಾಂಕುಗಳು ಖರೀದಿಸಿದ 60 ಟನ್ ಚಿನ್ನದಲ್ಲಿ ಅರ್ಧದಷ್ಟನ್ನು ಆರ್​ಬಿಐ ಖರೀದಿಸಿದೆ. ಈ ವರ್ಷ ಜನವರಿಯಿಂದ ಅಕ್ಟೋಬರ್​ವರೆಗೆ ಆರ್​ಬಿಐ ಖರೀದಿಸಿದ ಒಟ್ಟು ಚಿನ್ನ 77 ಟನ್ ಇದೆ. ಅದರ ಬಳಿ ಇರುವ ಒಟ್ಟಾರೆ ಚಿನ್ನ 882 ಟನ್​ನಷ್ಟು ಎನ್ನಲಾಗಿದೆ.

ಅಕ್ಟೋಬರ್​ನಲ್ಲಿ ಬೇರೆಲ್ಲಾ ಸೆಂಟ್ರಲ್ ಬ್ಯಾಂಕುಗಳಿಗಿಂತ ಆರ್​ಬಿಐನಿಂದಲೇ ಅತಿಹೆಚ್ಚು ಚಿನ್ನ ಖರೀದಿ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 08, 2024 | 3:39 PM

Share

ನವದೆಹಲಿ, ಡಿಸೆಂಬರ್ 8: ಜಾಗತಿಕವಾಗಿ ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕುಗಳ ಚಿನ್ನ ಖರೀದಿ ಭರಾಟೆ ಮುಂದುವರಿದಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ಸಂಸ್ಥೆ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಸೆಂಟ್ರಲ್ ಬ್ಯಾಂಕುಗಳು 60 ಟನ್​ಗಳಷ್ಟು ಚಿನ್ನವನ್ನು ಖರೀದಿಸಿವೆ. ಇದರಲ್ಲಿ ಹೆಚ್ಚೂಕಡಿಮೆ ಅರ್ಧದಷ್ಟು ಪಾಲು ಆರ್​ಬಿಐನದ್ದು. ಭಾರತೀಯ ರಿಸರ್ವ್ ಬ್ಯಾಂಕ್ ಅಕ್ಟೋಬರ್​ನಲ್ಲಿ ಖರೀದಿಸಿದ ಚಿನ್ನ ಬರೋಬ್ಬರಿ 27 ಟನ್​ನಷ್ಟು. ಜನವರಿಯಿಂದ ಅಕ್ಟೋಬರ್​ವರೆಗೆ ಈ ವರ್ಷದ 10 ತಿಂಗಳಲ್ಲಿ ಆರ್​ಬಿಐ 77 ಟನ್ ಚಿನ್ನವನ್ನು ಖರೀದಿಸಿ ತನ್ನ ಫಾರೆಕ್ಸ್ ನಿಧಿಗೆ ಸಂದಾಯ ಮಾಡಿದೆ.

ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಆರ್​ಬಿಐ ಶೇಖರಿಸಿದ ಚಿನ್ನದ ಪ್ರಮಾಣ ಐದು ಪಟ್ಟು ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಕಟಿಸುವ ಮಾಸಿಕ ದತ್ತಾಂಶದ ಆಧಾರದಲ್ಲಿ ವರ್ಲ್ಡ್ ಗೋಲ್ಡ್ ಕೌನ್ಸಿಲ್ ಈ ಮಾಹಿತಿ ಹೊರಗೆಡವಿದೆ. ಭಾರತದಲ್ಲಿ ಈಗ ಒಟ್ಟಾರೆ ಚಿನ್ನದ ಮೀಸಲು ನಿಧಿ 882 ಟನ್​ಗಳಷ್ಟಿದೆ. ಇದರಲ್ಲಿ 510 ಟನ್​ಗಳು ಭಾರತದಲ್ಲೇ ಇವೆ. ಉಳಿದ 372 ಟನ್​ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ಹಾಗೂ ಇತರ ದೇಶಗಳಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: ಶೇ. 3.2ಕ್ಕೆ ಇಳಿದ ನಿರುದ್ಯೋಗ ದರ; ಇ-ಶ್ರಮ್ ಪೋರ್ಟಲ್​ನಲ್ಲಿ ಅಸಂಘಟಿತ ವಲಯದ 30 ಕೋಟಿ ಕಾರ್ಮಿಕರ ನೊಂದಣಿ

ಈ ವರ್ಷ ಚಿನ್ನ ಶೇಖರಣೆಯಲ್ಲಿ ಭಾರತಕ್ಕೆ ಪೈಪೋಟಿ ನೀಡಿರುವುದು ಟರ್ಕಿ ಮತ್ತು ಪೋಲ್ಯಾಂಡ್ ದೇಶಗಳು. ಟರ್ಕಿ ದೇಶದ ಸೆಂಟ್ರಲ್ ಬ್ಯಾಂಂಕು 2024ರ ಜನವರಿಯಿಂದ ಅಕ್ಟೋಬರ್​ವರೆಗೆ 72 ಟನ್​ಗಳಷ್ಟು ಚಿನ್ನವನ್ನು ಖರೀದಿಸಿವೆ. ಪೋಲೆಂಡ್ ದೇಶದ ಸೆಂಟ್ರಲ್ ಬ್ಯಾಂಕು 69 ಟನ್ ಚಿನ್ನವನ್ನು ತೆಗೆದಿರಿಸಿದೆ. ಜಾಗತಿಕವಾಗಿ ಈ ವರ್ಷ ಸೆಂಟ್ರಲ್ ಬ್ಯಾಂಕುಗಳು ಖರೀದಿಸಿರುವ ಒಟ್ಟಾರೆ ಚಿನ್ನದಲ್ಲಿ ಶೇ. 60ರಷ್ಟು ಭಾಗವನ್ನು ಭಾರತ, ಟರ್ಕಿ ಮತ್ತು ಪೋಲ್ಯಾಂಡ್ ದೇಶಗಳ ಸೆಂಟ್ರಲ್ ಬ್ಯಾಂಕುಗಳೇ ಖರೀದಿಸಿವೆ.

ಅಕ್ಟೋಬರ್ ತಿಂಗಳಲ್ಲಿ ಆರ್​ಬಿಐ 27 ಟನ್ ಚಿನ್ನ ಖರೀದಿಸಿರುವುದು ಅತಿಹೆಚ್ಚು ಎನಿಸಿದೆ. ನಂತರದ ಸ್ಥಾನವು ಟರ್ಕಿಯ ಸೆಂಟ್ರಲ್ ಬ್ಯಾಂಕ್​ನದ್ದು. ಅದು 17 ಟನ್ ಚಿನ್ನ ಖರೀದಿಸಿದೆ. ಸತತ 17 ತಿಂಗಳು ಟರ್ಕಿಯ ಬ್ಯಾಂಕು ಚಿನ್ನ ಖರೀದಿಸಿರುವುದು ಗಮನಾರ್ಹ.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; ಅನಗತ್ಯ ಹಣ ಪೋಲು ತಪ್ಪಿಸಲು ಕ್ರಮ; ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ವಾಪಸ್

ಪೋಲೆಂಡ್​ನ ಸೆಂಟ್ರಲ್ ಬ್ಯಾಂಕು ಅಕ್ಟೋಬರ್ ತಿಂಗಳಲ್ಲಿ 8 ಟನ್ ಚಿನ್ನ ಖರೀದಿಸಿದೆ. ತನ್ನ ಒಟ್ಟಾರೆ ಮೀಸಲು ಸಂಪತ್ತಿನಲ್ಲಿ ಚಿನ್ನದ ಪ್ರಮಾಣ ಶೇ. 20ರಷ್ಟಿರಬೇಕೆಂಬ ಗುರಿಯತ್ತ ಪೋಲೆಂಡ್ ಸಾಗುತ್ತಿದೆ. ಆ ನಿಟ್ಟಿನಲ್ಲಿ ಸತತ ಏಳೆಂಟು ತಿಂಗಳಿಂ ಚಿನ್ನದ ಖರೀದಿಯ ಭರಾಟೆಯಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More