ನವದೆಹಲಿ, ನವೆಂಬರ್ 16: ಕೃಷಿಕರ ಬೇಸಾಯಕ್ಕೆ ಧನಸಹಾಯವಾಗಿ ಸರ್ಕಾರ ಆರಂಭಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) 15ನೇ ಕಂತಿನ ಹಣ ನಿನ್ನೆ ನವೆಂಬರ್ 15ರಂದು ಬಿಡುಗಡೆ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಝಾರ್ಖಂಡ್ನ ಖೂಂಟಿಯಲ್ಲಿ (Khunti, Jharkhand) ನಿನ್ನೆ ಹೊಸ ಕಂತಿನ ಹಣ ಬಿಡುಗಡೆಯಾಗಿರುವುದನ್ನು ಪ್ರಕಟಿಸಿದರು. ಎಂಟು ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ 2,000 ರೂ ಹಣ ವರ್ಗಾವಣೆ ಆಗಿದೆ. ಬಹುತೇಕ ಮಂದಿಯ ಖಾತೆಗೆ ಹಣ ಬಂದಿದೆ. ಸರ್ಕಾರ 15ನೇ ಕಂತಿಗೆ ಒಟ್ಟು 18,000 ಕೋಟಿ ರೂ ಹಣ ವೆಚ್ಚ ಮಾಡಿದೆ. ಇಲ್ಲಿಯವರೆಗೆ ಎಲ್ಲಾ 15 ಕಂತುಗಳಿಂದ ಒಟ್ಟು ಹಣ 2.75 ಲಕ್ಷ ಕೋಟಿ ರೂ ಆಗಿದೆ.
ಪಿಎಂ ಕಿಸಾನ್ ಸ್ಕೀಮ್ ರೈತರಿಗಾಗಿ ವಿಶ್ವದಲ್ಲೇ ಇರುವ ಅತಿದೊಡ್ಡ ಡಿಬಿಟಿ ಸ್ಕೀಮ್ (DBT- direct beneficiary transfer) ಆಗಿದೆ. 2019ರ ಫೆಬ್ರುವರಿಯಲ್ಲಿ ಆರಂಭವಾದ ಈ ಸ್ಕೀಮ್ನಲ್ಲಿ ವರ್ಷಕ್ಕೆ ತಲಾ 2,000 ರೂಗಳ 3 ಕಂತುಗಳಂತೆ 6,000 ರೂ ಹಣವನ್ನು ಅರ್ಹ ರೈತರ ಖಾತೆಗಳಿಗೆ ಸರ್ಕಾರ ನೇರವಾಗಿ ವರ್ಗಾವಣೆ ಮಾಡುತ್ತದೆ. ಈ 15ನೇ ಕಂತಿನ ಹಣ ಇನ್ನೂ ಬಂದಿಲ್ಲ ಎಂದು ಬಹಳಷ್ಟು ಮಂದಿ ಹೇಳುತ್ತಿರುವುದುಂಟು.
ಇದನ್ನೂ ಓದಿ: ಪಿಎಂ ಕಿಸಾನ್: ಬಂತು 15ನೇ ಕಂತಿನ ಹಣ; ಪ್ರಧಾನಿ ನರೇಂದ್ರ ಮೋದಿಯಿಂದ 18,000 ಕೋಟಿ ರೂ ಬಿಡುಗಡೆ
ನೀವು ಪಿಎಂ ಕಿಸಾನ್ ಸ್ಕೀಮ್ನ ಅಧಿಕೃತ ಪೋರ್ಟಲ್ಗೆ (ಲಿಂಕ್ ಇಲ್ಲಿದೆ: https://pmkisan.gov.in/) ಹೋದರೆ ಮುಖ್ಯಪುಟದಲ್ಲೇ ಆರಂಭದಲ್ಲಿ ಒಂದು ಪಾಪ್ ಅಪ್ ಬರುತ್ತದೆ. ಅದರಲ್ಲಿ ಇಕೆವೈಸಿ, ನಿಮ್ಮ ಸ್ಟೇಟಸ್ ತಿಳಿಯಲು ಹಾಗೂ ಪಿಎಂ ಕಿಸಾನ್ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಲು ಕ್ಯುಆರ್ ಕೋಡ್ಗಳು ಕಾಣುತ್ತವೆ. ನಿಮಗೆ ಬೇಕಾದರೆ ಅದನ್ನು ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಬಹುದು.
ಇದನ್ನೂ ಓದಿ: ಎಸ್ಸಿಎಸ್ಎಸ್ನಿಂದ ನ್ಯಾಷನಲ್ ಸೇವಿಂಗ್ಸ್ವರೆಗೂ; ಪೋಸ್ಟ್ ಆಫೀಸ್ನಲ್ಲಿ ಅತ್ಯುತ್ತಮ ಉಳಿತಾಯ ಯೋಜನೆಗಳಿವು
ಹಾಗೆಯೇ, ಪಾಪ್ ಅಪ್ ಮುಚ್ಚಿ, ಪಿಎಂ ಕಿಸಾನ್ ವೆಬ್ಸೈಟ್ನ ಮುಖ್ಯಪುಟದಲ್ಲಿ ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಸೆಕ್ಷನ್ನಲ್ಲಿ ವಿವಿಧ ಸೇವೆಗಳ ಟ್ಯಾಬ್ಗಳನ್ನು ನೋಡಬಹುದು. ಅದರಲ್ಲಿ ಇಕೆವೈಸಿ ಮಾಡುವುದು, ಫಲಾನುಭವಿಗಳ ಪಟ್ಟಿ ವೀಕ್ಷಿಸುವುದು, ನೊಂದಣಿ ಸ್ಟೇಟಸ್ ನೋಡುವುದು ಹೀಗೆ ಹಲವು ಆಯ್ಕೆಗಳಿವೆ.
ನಿಮಗೆ ಯಾವುದಾದರೂ ಅನುಮಾನ ಇದ್ದಲ್ಲಿ ಹೆಲ್ಪ್ಡೆಸ್ಕ್ ಟ್ಯಾಬ್ ಕ್ಲಿಕ್ ಮಾಡಬಹುದು. ಅದರಲ್ಲಿ ನಿಮ್ಮ ನೊಂದಣಿ ನಂಬರ್ ಮೂಲಕ ನಿಮ್ಮ ದೂರು ಅಥವಾ ಅನುಮಾನವನ್ನು ವ್ಯಕ್ತಪಡಿಸಬಹುದು. ಅದಕ್ಕೆ ಸೂಕ್ತ ಸಮಜಾಯಿಷಿ ಅಥವಾ ಉತ್ತರ ಅಥವಾ ಪರಿಹಾರ ಸಿಗುವ ಸಾಧ್ಯತೆ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ