ಪ್ರಧಾನಿ ನರೇಂದ್ರ ಮೋದಿ ಫೆಬ್ರುವರಿ 27ರಂದು ಬೆಳಗಾವಿಯಲ್ಲಿ ಪಿಎಂ ಕಿಸಾನ್ ಯೋಜನೆಯ (PM Kisan Scheme) 13ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. ಎಂಟು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಒಟ್ಟಾರೆ 16,000 ಕೋಟಿ ರೂಗೂ ಹೆಚ್ಚು ಹಣ ಕೊಡಲಾಗಿದೆ. ಪ್ರತಿಯೊಬ್ಬ ಫಲಾನುಭವಿಯ ಬ್ಯಾಂಕ್ ಖಾತೆಗೂ ತಲಾ 2 ಸಾವಿರ ರೂ ನೇರವಾಗಿ ಜಮೆ ಮಾಡಲಾಗಿದೆ. ಕೇಂದ್ರ ಸರ್ಕಾರ ಈ ಯೋಜನೆ ಆರಂಭವಾದ 2019ರಿಂದ ಈಚೆ ಒಟ್ಟು 2.25 ಲಕ್ಷ ಕೋಟಿ ರೂಗೂ ಹೆಚ್ಚು ಹಣವನ್ನು ರೈತರ ಖಾತೆಗಳಿಗೆ ಸಂದಾಯ ಮಾಡಿದೆ. ಈ ರೈತರ ಪೈಕಿ 3 ಕೋಟಿಗೂ ಹೆಚ್ಚು ಮಹಿಳಾ ರೈತರಿದ್ದಾರೆ.
ಏನಿದು ಯೋಜನೆ?
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2018 ಡಿಸೆಂಬರ್ 1ರಂದು ಮೊದಲು ಚಾಲನೆಗೊಂಡಿತು. 2019ರ ಫೆಬ್ರುವರಿಯಲ್ಲಿ ಮೊದಲ ಕಂತಿನ ಹಣ ಬಿಡುಗಡೆ ಆಯಿತು. ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಕೃಷಿಗಾರಿಕೆಗೆ ಸಹಾಯವಾಗಲು ಹಣದ ನೆರವು ಒದಗಿಸುವುದು ಈ ಯೋಜನೆಯ ಉದ್ದೇಶ. ಮೊದಲಿಗೆ 2 ಹೆಕ್ಟೇರ್ಗಿಂತ (5 ಎಕರೆ) ಕಡಿಮೆ ಜಮೀನು ಹೊಂದಿರುವ ರೈತರನ್ನು ಮಾತ್ರ ಫಲಾನುಭವಿಗಳೆಂದು ಪರಿಗಣಿಸಲಾಗಿತ್ತು. ಇತ್ತೀಚೆಗೆ ಇದು ಎಲ್ಲಾ ರೈತರನ್ನೂ ಒಳಗೊಂಡಿದೆ. ಆದರೆ, ಜಮೀನು ಮಾಲಕತ್ವ ಹೊಂದಿದವರು ಮಾತ್ರ ಫಲಾನುಭವಿಗಳಾಗಬಹುದು.
ಈ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ಫಲಾನುಭವಿ ರೈತರಿಗೂ ಕೇಂದ್ರ ಸರ್ಕಾರ ವರ್ಷಕ್ಕೆ 6 ಸಾವಿರ ರೂ ನೀಡುತ್ತದೆ. ಇದು ತಲಾ 2 ಸಾವಿರ ರೂಗಳಂತೆ ಪ್ರತೀ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತದೆ. ಕರ್ನಾಟಕದ ರೈತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ 2 ಕಂತುಗಳು ಸಿಗುತ್ತದೆ. ಅಂದರೆ ರಾಜ್ಯದ ರೈತರಿಗೆ ವರ್ಷಕ್ಕೆ 10 ಸಾವಿರ ರೂ ಸಿಗುತ್ತದೆ.
ಇದನ್ನೂ ಓದಿ: PM KISAN 13th Installment: ಬೆಳಗಾವಿಯಲ್ಲಿ ಪಿಎಂ ಕಿಸಾನ್ 13ನೇ ಕಂತು ಬಿಡುಗಡೆ ಮಾಡಿದ ನರೇಂದ್ರ ಮೋದಿ
ಯಾವ ರೈತರು ಅನರ್ಹರು?
ಫಲಾನುಭವಿಗಳ ಪಟ್ಟಿ
ಪಿಎಂ ಕಿಸಾನ್ ಯೋಜನೆಗೆ ನೊಂದಾವಣಿ ಮಾಡಿಸಿದ ಅನೇಕ ರೈತರಿಗೆ ಯೋಜನೆಯ ಹಣ ಸಿಕ್ಕಿಲ್ಲ. ಅಂತಹವರು ಈ ಯೋಜನೆಯಲ್ಲಿ ತಮ್ಮ ಹೆಸರಿದೆಯಾ ಎಂಬುದನ್ನು ಆನ್ಲೈನ್ನಲ್ಲೇ ಪರಿಶೀಲಿಸಬಹುದು. ಅದಕ್ಕಾಗಿ ಪಿಎಂ ಕಿಸಾನ್ ಯೋಜನೆಯ ಪೋರ್ಟಲ್ಗೆ ಹೋಗಬೇಕು. ಅಲ್ಲಿ ಬೆನಿಫಿಷಿಯರಿ ಲಿಸ್ಟ್ ಟ್ಯಾಬ್ ಕ್ಲಿಕ್ ಮಾಡಿ, ರಾಜ್ಯ, ಜಿಲ್ಲೆ, ಗ್ರಾಮ ಇತ್ಯಾದಿ ಆಯ್ಕೆ ಮಾಡಿಕೊಂಡರೆ ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯಾ ನೋಡಿ. ಇಲ್ಲದಿದ್ದರೆ ಯೋಜನೆಗೆ ಮತ್ತೊಮ್ಮೆ ನೊಂದಾವಣಿ ಮಾಡಿಸಬೇಕಾಗಬಹುದು.
ಇದನ್ನೂ ಓದಿ: PM KUSUM Scheme: ಪಿಎಂ ಕುಸುಮ್- ಕೇಂದ್ರದ ದೂರದೃಷ್ಟಿಯ ಒಂದು ಯೋಜನೆ
ಯೋಜನೆಗೆ ನೊಂದಣಿ ಹೇಗೆ?
ಪಿಎಂ ಕಿಸಾನ್ ಪೋರ್ಟಲ್ನಲ್ಲಿ New Farmer Registration Form ಕ್ಲಿಕ್ ಮಾಡಿದರೆ ಆಧಾರ್ ನಂಬರ್, ಮೊಬೈಲ್ ನಂಬರ್ ಇತ್ಯಾದಿ ವಿವರ ಕೇಳುತ್ತದೆ. ಅದನ್ನು ಭರ್ತಿ ಮಾಡಿದ ಬಳಿಕ ನಂತರ ಕೇಳಲಾಗುವ ದಾಖಲೆಯನ್ನೂ ಒದಗಿಸಿ ಯೋಜನೆಗೆ ನೊಂದಣಿ ಮಾಡಿಸಬಹುದು.
ಅಥವಾ ನಿಮ್ಮ ಗ್ರಾಮದ ಸಮೀಪದ ಸಿಎಸ್ಸಿ ಕೇಂದ್ರಕ್ಕೆ ಹೋಗಿಯೂ ನೊಂದಣಿ ಮಾಡಿಸಬಹುದು. ಅದಕ್ಕೆ ಆಧಾರ್ ಕಾರ್ಡ್, ನಿಮ್ಮ ಖಾತೆ, ಮೊಬೈಲ್ ನಂಬರ್ ಇತ್ಯಾದಿ ಒದಗಿಸಬೇಕಾಗುತ್ತದೆ.
ಕೆವೈಸಿ ತುಂಬಿದ್ದೀರಾ?
ಕಳೆದ ಬಾರಿಯ 12ನೇ ಕಂತಿನ ಹಣ ನಿಮ್ಮ ಕೈಸಿದ್ದು, ಈ ಬಾರಿ ಹಣ ಬಂದಿಲ್ಲವೆಂದರೆ ನೀವು ಇ–ಕೆವೈಸಿ ತುಂಬದೇ ಇರುವುದು ಕಾರಣವಾಗಿರಬಹುದು. ಹಾಗಾದಲ್ಲಿ ನೀವು ಮತ್ತೊಮ್ಮೆ ಆನ್ಲೈನ್ನಲ್ಲೇ ಇ–ಕೆವೈಸಿ ಅಪ್ಡೇಟ್ ಮಾಡಬಹುದು. ಅಥವಾ ಸಿಎಸ್ಸಿ ಕೇಂದ್ರಕ್ಕೆ ಹೋಗಿ ಕೆವೈಸಿ ಕೊಡಬಹುದು. ಹಾಗೆ ಮಾಡಿದಾಕ್ಷಣ ನಿಮಗೆ 13ನೇ ಕಂತಿನ ಹಣ ಸಿಗುವುದಿಲ್ಲ. ಮುಂದಿನ ಕಂತುಗಳು ಮಾತ್ರ ನಿಮಗೆ ಲಭ್ಯವಾಗಬಹುದು.