
ನವದೆಹಲಿ, ಅಕ್ಟೋಬರ್ 8: ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಾವೇಶಕ್ಕೆ ಇಂದು ಚಾಲನೆ ನೀಡಿದ್ದಾರೆ. ದೆಹಲಿಯ ‘ಯಶೋಭೂಮಿ’ ಕಾಂಪ್ಲೆಕ್ಸ್ನಲ್ಲಿ ಆರಂಭಗೊಂಡ ಈ 10ನೇ ಆವೃತ್ತಿಯ ಪ್ರದರ್ಶನವು ಏಷ್ಯಾದ ಅತಿದೊಡ್ಡ ಟೆಲಿಕಾಂ ಮತ್ತು ತಂತ್ರಜ್ಞಾನ ಮೇಳವೆನಿಸಿದೆ. ಅಕ್ಟೋಬರ್ 10ರವರೆಗೂ ಮೊಬೈಲ್ ಕಾಂಗ್ರೆಸ್ ನಡೆಯಲಿದ್ದು, ಈ ಆವೃತ್ತಿಯಲ್ಲಿ ಅಸೀಮ ವಿಸ್ತರಣೆ (Scale Without Boundaries) ಎನ್ನುವ ಥೀಮ್ನಲ್ಲಿ ನಡೆಸಲಾಗುತ್ತಿದೆ. ಈ ಸಮಾವೇಶ ಉದ್ಘಾಟಿಸಿದ ಪ್ರಧಾನಿಗಳು, ಭಾರತದಲ್ಲಿ 5G ತಂತ್ರಜ್ಞಾನವು ದೇಶದ ಪ್ರತಿಯೊಂದು ಜಿಲ್ಲೆಗೂ ಯಶಸ್ವಿಯಾಗಿ ತಲುಪಿರುವುದನ್ನು ಮತ್ತು ಲಕ್ಷಾಂತರ ಬೇಸ್ ಸ್ಟೇಷನ್‌ಗಳು ಸ್ಥಾಪನೆಯಾಗಿರುವುದನ್ನು ಉಲ್ಲೇಖಿಸಿ, ದೇಶದ ಅದ್ಭುತ ಡಿಜಿಟಲ್ ಪ್ರಗತಿಯನ್ನು ಶ್ಲಾಘಿಸಿದರು.
ಡಿಜಿಟಲ್ ಕನೆಕ್ಟಿವಿಟಿ ಮತ್ತು ಮೊಬೈಲ್ ಫೋನ್ಗಳನ್ನು ಬಳಸಿ ಸರ್ಕಾರಿ ಸೇವೆಗಳನ್ನು ಜನರಿಗೆ ಸುವ್ಯವಸ್ಥಿತವಾಗಿ ತಲುಪಿಸುತ್ತಿರುವುದನ್ನು ಮೋದಿ ಈ ಸಂದರ್ಭದಲ್ಲಿ ವಿವರಿಸಿದರು. ಡಿಬಿಟಿ ಸಿಸ್ಟಂ ಮೂಲಕ 50 ಲಕ್ಷ ಕೋಟಿ ರೂ ಹಣವನ್ನು ಫಲಾನುಭವಿಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಹಣ ಸೋರಿಕೆಯನ್ನು ನಿಯಂತ್ರಿಸಲು ಸಾಧ್ಯವಾಗಿದ್ದು, 5 ಲಕ್ಷ ಕೋಟಿ ರೂ ಹಣ ಉಳಿತಾಯವಾಗಿದೆ ಎಂದು ಮೋದಿ ಹೇಳಿದರು.
ಇದನ್ನೂ ಓದಿ: ಸಣ್ಣ ಪ್ರಮಾಣದ ಯುಪಿಐ ಶುಲ್ಕದಿಂದ ದೊಡ್ಡ ಪರಿಣಾಮ ಆಗುವುದಿಲ್ಲ: ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅಭಿಪ್ರಾಯ
ಸೃಷ್ಟಿ (ಭವಿಷ್ಯದ ನಿರ್ಮಾಣ), ಸಂವರ್ಧನ (ಬೆಳವಣಿಗೆಗೆ ಶಕ್ತಿ), ಸಶಕ್ತ (ಅವಕಾಶಗಳ ವಿಸ್ತರಣೆ), ಮತ್ತು ಸುರಕ್ಷಾ (ವಿಶ್ವಾಸದ ಬಲವರ್ಧನೆ) ಎಂಬ ನಾಲ್ಕು ಮುಖ್ಯ ಸ್ತಂಭಗಳ ಮೇಲೆ ನಿಂತಿರುವ ಈ ಬಾರಿಯ ಮೇಳದಲ್ಲಿ 5G, 6G, ಕೃತಕ ಬುದ್ಧಿಮತ್ತೆ (AI), ಸೈಬರ್ ಭದ್ರತೆ ಮತ್ತು ಉಪಗ್ರಹ ಸಂಪರ್ಕದ ಜೊತೆಗೆ ಸ್ಮಾರ್ಟ್ ಮೊಬಿಲಿಟಿ (Smart Mobility), ಸ್ಟೇಡಿಯಂ ಅನುಭವಗಳು, ಕೈಗಾರಿಕಾ ರೋಬೋಟಿಕ್ಸ್ ಮತ್ತು ಸಾರಿಗೆ ತಂತ್ರಜ್ಞಾನ (Transport Technology) ದಂತಹ ಹೊಸ ಕ್ಷೇತ್ರಗಳ ಮೇಲೆಯೂ ಹೆಚ್ಚಿನ ಗಮನಹರಿಸಲಾಗಿದೆ.

ಈ ಬೃಹತ್ ತಂತ್ರಜ್ಞಾನ ಸಮಾವೇಶದಲ್ಲಿ 100ಕ್ಕೂ ಹೆಚ್ಚು ದೇಶಗಳಿಂದ 1.5 ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು, 500ಕ್ಕೂ ಹೆಚ್ಚು ಪ್ರದರ್ಶಕರು, 600ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಹಾಗೂ 900ಕ್ಕೂ ಹೆಚ್ಚು ತಂತ್ರಜ್ಞಾನ ತಜ್ಞರು ಭಾಗವಹಿಸುತ್ತಿದ್ದಾರೆ. 2,000ಕ್ಕೂ ಹೆಚ್ಚು ತಂತ್ರಜ್ಞಾನ ಮಾದರಿಗಳು (Use Cases) ಹಾಗೂ 120ಕ್ಕೂ ಹೆಚ್ಚು ಗೋಷ್ಠಿಗಳು ಇಲ್ಲಿ ನಡೆಯಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Thu, 8 October 26