ಭಾರತದ ಇವಿ ಕ್ಷೇತ್ರಕ್ಕೆ ಮಹತ್ವದ ದಿನ; ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ ತಯಾರಿಕೆ; ಇ-ವಿಟಾರಾದ ಜಾಗತಿಕ ರಫ್ತಿಗೆ ಚಾಲನೆ

PM Modi to flag off eVitara and Hybrid Battery Electrode: ಸುಜುಕಿ ಕಾರ್ಪೊರೇಶನ್ ಸಂಸ್ಥೆಯ ಅಹ್ಮದಾಬಾದ್​ನ ಹಂಸಲಪುರ್ ಘಟಕದಲ್ಲಿ ತಯಾರಾಗುತ್ತಿರುವ ಇ-ವಿಟಾರಾ ಎಲೆಕ್ಟ್ರಿಕ್ ಕಾರುಗಳು 100ಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗಲಿವೆ. ಪ್ರಧಾನಿ ನರೇಂದ್ರ ಮೋದಿ ಇಂದು ಇ-ವಿಟಾರಾಗೆ ಚಾಲನೆ ನೀಡಲಿದ್ದಾರೆ. ಸುಜುಕಿ ಮೋಟಾರ್ ಪ್ಲಾಟ್​ನಲ್ಲಿ ಹೈಬ್ರಿಡ್ ಎಲೆಕ್ಟ್ರಿಕ್ ಬ್ಯಾಟರಿ ತಯಾರಿಕೆಗೂ ಪ್ರಧಾನಿ ಚಾಲನೆ ನೀಡಲಿದ್ದಾರೆ.

ಅಹ್ಮದಾಬಾದ್, ಆಗಸ್ಟ್ 26: ಮಾರುತಿ ಸುಜುಕಿಯ ಹೊಸ ಹಿಟ್ ಬ್ರ್ಯಾಂಡ್ ಆದ ಗ್ರ್ಯಾಂಡ್ ವಿಟಾರಾದ ಇವಿ ಆವೃತ್ತಿಯಾದ ಇ-ವಿಟಾರಾ ಈಗ ನೂರಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗಲು ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇ-ವಿಟಾರಾ ಯೋಜನೆಯನ್ನು ಬಿಡುಗಡೆ ಮಾಡಲಿದ್ದಾರೆ. ಇದೂ ಸೇರಿದಂತೆ ಪ್ರಧಾನಿಗಳು ಇಂದು ಹಂಸಲಪುರ್​ನಲ್ಲಿರುವ ಸುಜುಕಿ ಮೋಟಾರ್ ಪ್ಲಾಂಟ್​ನಲ್ಲಿ ಎರಡು ಮಹತ್ವದ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಸುಜುಕಿ ಸೇರಿ ಮೂರು ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಲಿರುವ ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ ಫ್ಯಾಕ್ಟರಿಗೂ ಪ್ರಧಾನಿಗಳು ಚಾಲನೆ ನೀಡಲಿದ್ದಾರೆ.

ಇ-ವಿಟಾರಾ ಇವಿಗಳ ರಫ್ತು…

ಅಹ್ಮದಾಬಾದ್​ನ ಹಂಸಲಪುರ್​ನಲ್ಲಿರುವ ಸುಜುಕಿ ಮೋಟಾರ್ ಪ್ಲಾಂಟ್​ನಲ್ಲಿ ಇ-ವಿಟಾರಾ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ನಡೆದಿದೆ. ಈ ಬ್ಯಾಟರಿ ವಾಹನಗಳು ನೂರಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗಲಿವೆ. ಜಪಾನ್, ಯೂರೋಪ್​ನಂತಹ ಉನ್ನತ ಮಾರುಕಟ್ಟೆಗಳಿಗೆ ಈ ವಾಹನಗಳು ಸರಬರಾಜಾಗಲಿರುವುದು ಗಮನಾರ್ಹ. ಜಪಾನ್ ಮೂಲದ ಸುಜುಕಿ ಸಂಸ್ಥೆಯ ಮೊದಲ ಜಾಗತಿಕ ಬ್ಯಾಟರಿ ಎಲೆಕ್ಟ್ರಿಕ್ ವಾಹನ ಯೋಜನೆ ಇದು. ಇದರೊಂದಿಗೆ ಹಂಸಲಪುರವು ಸುಜುಕಿಯ ಎಲೆಕ್ಟ್ರಿಕ್ ವಾಹನಗಳಿಗೆ ಜಾಗತಿಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ: ಇವತ್ತಿಂದ ಅಮೆರಿಕಕ್ಕೆ ಪೋಸ್ಟಲ್ ಸರ್ವಿಸ್ ನಿಲ್ಲಿಸಿದ ಭಾರತ; ಐರೋಪ್ಯ ದೇಶಗಳಿಂದಲೂ ಇದೇ ಕ್ರಮ

ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್​ಗಳ ತಯಾರಿಕೆ

ಸುಜುಕಿ, ಟೋಶಿಬಾ ಮತ್ತು ಡೆನ್ಸೋ ಕಂಪನಿಗಳು ಜಂಟಿಯಾಗಿ ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್​ಗಳನ್ನು ತಯಾರಿಸಲಿವೆ. ಟಿಡಿಎಸ್ ಲಿಥಿಯಂ ಅಯಾನ್ ಬ್ಯಾಟರಿ ಘಟಕದಲ್ಲಿ ಈ ಎಲೆಕ್ಟ್ರೋಡ್​ಗಳು ತಯಾರಾಗಲಿವೆ. ಈ ಎಲೆಕ್ಟ್ರೋಡ್​ಗಳು ಇವಿ ಬ್ಯಾಟರಿಗಳ ಕ್ಷಮತೆಯನ್ನು ಹೆಚ್ಚಿಸಬಲ್ಲುವು. ಇದನ್ನು ಭಾರತದಲ್ಲಿ ತಯಾರಿಸಲಾಗುತ್ತಿರುವುದು ಇದೇ ಮೊದಲು.

ಪ್ರಧಾನಿಗಳ ಎಕ್ಸ್ ಪೋಸ್ಟ್

ಈ ಎರಡು ಯೋಜನೆಗಳು ಎಲೆಕ್ಟ್ರಿಕ್ ವಾಹನ ಹಾಗೂ ಹಸಿರು ಇಂಧನ ಕ್ಷೇತ್ರದಲ್ಲಿ ಭಾರತಕ್ಕೆ ಮಹತ್ವದ ವಿಚಾರ ಎನಿಸಿದೆ.

ಇದನ್ನೂ ಓದಿ: ಮೊದಲ ಸಲ ಸಾಲ ಪಡೆಯುವವರ ಕ್ರೆಡಿಟ್ ಸ್ಕೋರ್ ಪರಿಶೀಲನೆ ಕಡ್ಡಾಯವಲ್ಲ: ಹಣಕಾಸು ಸಚಿವಾಲಯ

ಪ್ರಧಾನಿ ನರೇಂದ್ರ ಮೋದಿ ಅವರ ಇಂದಿನ ಗುಜರಾತ್ ಭೇಟಿಯಲ್ಲಿ ಈ ಎರಡು ಯೋಜನೆಗಳು ಸೇರಿದಂತೆ ಇನ್ನೂ ಕೆಲವಾರು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. 5,400 ಕೋಟಿ ರೂ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಹಸಿರು ನಿಶಾನೆ ನೀಡಲಿದ್ದಾರೆ.

ಇದರಲ್ಲಿ ವಿವಿಧ ರೈಲ್ವೆ ಯೋಜನೆಗಳು, ವಿದ್ಯುತ್ ವಿತರಣೆ ಯೋಜನೆಗಳು ಮತ್ತು ಇನ್​ಫ್ರಾಸ್ಟ್ರಕ್ಚರ್ ಯೋಜನೆಗಳು ಒಳಗೊಂಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:07 pm, Tue, 26 August 25