ಭಾರತದ ಮೇಲೆ ಹೆಚ್ಚುವರಿ ಟ್ಯಾರಿಫ್; ಅಮೆರಿಕದಿಂದ ಕರಡು ಸೂಚನೆ ಪ್ರಕಟ
US issues notice to impose additional tariffs on Indian goods: ಭಾರತದ ಮೇಲೆ ದಂಡ ಸೇರಿ ಅಮೆರಿಕ ವಿಧಿಸಿರುವ ಒಟ್ಟು ಶೇ. 50ರಷ್ಟು ಟ್ಯಾರಿಫ್ ದರ ಆಗಸ್ಟ್ 27ರಿಂದ ಜಾರಿಗೆ ಬರುತ್ತಿದೆ. ಈ ಸಂಬಂಧ ಅಮೆರಿಕದ ಗೃಹ ಸಚಿವಾಲಯವು ಕರಡು ನೋಟೀಸ್ ಹೊರಡಿಸಿದೆ. ಆಗಸ್ಟ್ 7ರಿಂದ ಭಾರತದ ಮೇಲೆ ಅಮೆರಿಕ ಶೇ. 25ರಷ್ಟು ಬೇಸ್ಲೈನ್ ಟ್ಯಾರಿಫ್ ಹಾಕಿತ್ತು. ರಷ್ಯನ್ ತೈಲ ಖರೀದಿಸುತ್ತಿರುವ ಕಾರಣಕ್ಕೆ ಹೆಚ್ಚುವರಿ ಶೇ. 25ರಷ್ಟು ಟ್ಯಾರಿಫ್ ಹಾಕುತ್ತಿದೆ.

ವಾಷಿಂಗ್ಟನ್, ಆಗಸ್ಟ್ 26: ರಷ್ಯನ್ ತೈಲವನ್ನು ಖರೀದಿಸಲಾಗುತ್ತಿದೆ ಎನ್ನುವ ಆರೋಪವೊಡ್ಡಿ ಅಮೆರಿಕವು ಭಾರತದ ಮೇಲೆ ಶೇ. 25ರಷ್ಟು ಹೆಚ್ಚುವರಿ ಟ್ಯಾರಿಫ್ (additional tariffs) ಹಾಕಲು ನಿರ್ಧರಿಸಿದೆ. ಇದು ಆಗಸ್ಟ್ 27, ಬುಧವಾರದಿಂದ ಜಾರಿಗೆ ಬರಲಿದೆ. ಈ ಸಂಬಂಧ ಸೋಮವಾರ ಅಮೆರಿಕದ ಗೃಹ ಇಲಾಖೆಯು ಕರಡು ಸೂಚನೆ ಹೊರಡಿಸಿದೆ. ‘2025ರ ಆಗಸ್ಟ್ 27ರಂದು 12:01 ಗಂಟೆ ಬಳಿಕ ಆಗಮಿಸುವ ಭಾರತೀಯ ಉತ್ಪನ್ನಗಳ ಮೇಲೆ ಹೆಚ್ಚಿನ ಆಮದು ಸುಂಕಗಳನ್ನು ವಿಧಿಸಲಾಗುತ್ತದೆ’ ಎಂದು ಈ ಡ್ರಾಫ್ಟ್ ನೋಟೀಸ್ನಲ್ಲಿ ತಿಳಿಸಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೊದಲಿಗೆ ವಿವಿಧ ದೇಶಗಳ ಮೇಲೆ ಬೇಸ್ಲೈನ್ ಟ್ಯಾರಿಫ್, ಅಥವಾ ಮೂಲ ಸುಂಕವನ್ನು ಪ್ರಕಟಿಸಿದರು. ಭಾರತಕ್ಕೆ ಶೇ. 25ರಷ್ಟು ಸುಂಕ ವಿಧಿಸಿದರು. ಆಗಸ್ಟ್ 7ರಿಂದ ಇದು ಜಾರಿಯಲ್ಲಿದೆ. ರಷ್ಯನ್ ತೈಲವನ್ನು ಖರೀದಿಸಲಾಗುತ್ತಿದೆ ಎನ್ನುವ ಕಾರಣಕ್ಕೆ ಭಾರತದ ಮೇಲೆ ದಂಡವಾಗಿ ಶೇ. 25ರಷ್ಟು ಹೆಚ್ಚುವರಿ ಸುಂಕ ಪ್ರಕಟಿಸಿದ್ದಾರೆ. ಆಗಸ್ಟ್ 27ರಿಂದ ಭಾರತದ ಹೆಚ್ಚಿನ ಸರಕುಗಳಿಗೆ ಅಮೆರಿಕ ಶೇ. 50ರಷ್ಟು ಟ್ಯಾರಿಫ್ ಹಾಕಲಿದೆ.
ಇದನ್ನೂ ಓದಿ: ‘ಮ್ಯಾಗ್ನೆಟ್ ನೀಡದಿದ್ದರೆ ಚೀನಾವನ್ನು ನಾಶ ಮಾಡುತ್ತೇವೆ’: ಮತ್ತೆ ಆರ್ಭಟಿಸಿದ ಡೊನಾಲ್ಡ್ ಟ್ರಂಪ್
ರಷ್ಯನ್ ತೈಲ ಖರೀದಿಸಿದರೆ ಅಮೆರಿಕಕ್ಕೆ ಯಾಕೆ ಕೋಪ?
ಅಮೆರಿಕದ ಹಿತಾಸಕ್ತಿಗೆ ರಷ್ಯಾ ಮಾರಕವಾಗಿದೆ ಎಂಬುದು ಡೊನಾಲ್ಡ್ ಟ್ರಂಪ್ ವಾದ. ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾಗೆ ಅಮೆರಿಕ ಹಲವು ಸ್ತರಗಳಲ್ಲಿ ದಿಗ್ಬಂಧನ ಕ್ರಮಗಳನ್ನು ಜಾರಿಗೊಳಿಸಿದೆ. ರಷ್ಯಾಗೆ ಪ್ರಮುಖ ಆದಾಯ ಮೂಲಗಳಲ್ಲಿ ಅದರ ತೈಲ ಮಾರಾಟವೂ ಸೇರಿದೆ. ಚೀನಾ ಮತ್ತು ಭಾರತ ದೇಶಗಳು ಸಾಕಷ್ಟು ರಷ್ಯನ್ ತೈಲವನ್ನು ಖರೀದಿಸುತ್ತಿವೆ. ಇದರಿಂದ ರಷ್ಯಾಗೆ ಯುದ್ಧ ಮುಂದುವರಿಸಲು ಬೇಕಾದ ಆರ್ಥಿಕ ಶಕ್ತಿ ಸಿಗುತ್ತಿದೆ ಎಂಬುದು ಅಮೆರಿಕ ಹೊಂದಿರುವ ಆಕ್ಷೇಪ.
ರಷ್ಯಾದ ತೈಲ ಖರೀದಿಸುವ ಮೂಲಕ ಅದಕ್ಕೆ ಭಾರತ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎನ್ನುವ ಅಮೆರಿಕವು, ಇದಕ್ಕೆ ಶಿಕ್ಷೆಯಾಗಿ ಟ್ಯಾರಿಫ್ ಕ್ರಮ ಕೈಗೊಂಡಿದೆ. ಚೀನಾ ಮೇಲೂ ಅಮೆರಿಕ ಈ ಮೊದಲು ಟ್ಯಾರಿಫ್ ಕ್ರಮ ಕೈಗೊಂಡಿತ್ತು. ಇದಕ್ಕೆ ಪ್ರತಿಯಾಗಿ ಚೀನಾ ಕೂಡ ಪ್ರತಿಸುಂಕ ಹಾಕಿತು. ಕೊನೆಗೆ, ಸೋಲಾರ್, ಇವಿ ಕ್ಷೇತ್ರಕ್ಕೆ ಅಗತ್ಯವಾಗಿರುವ ವಿರಳ ಭೂಖನಿಜಗಳ ರಫ್ತನ್ನು ಚೀನಾ ನಿಲ್ಲಿಸಲು ನಿರ್ಧರಿಸಿದಾಗ ಅಮೆರಿಕ ಮೆತ್ತಗಾಯಿತು.
ಇದನ್ನೂ ಓದಿ: ಇವತ್ತಿಂದ ಅಮೆರಿಕಕ್ಕೆ ಪೋಸ್ಟಲ್ ಸರ್ವಿಸ್ ನಿಲ್ಲಿಸಿದ ಭಾರತ; ಐರೋಪ್ಯ ದೇಶಗಳಿಂದಲೂ ಇದೇ ಕ್ರಮ
ಟ್ರಂಪ್ ಅವರ ಟ್ಯಾರಿಫ್ ಆರ್ಭಟಗಳಿಂದಾಗಿ ಬ್ರಿಕ್ಸ್ ಗುಂಪಿಗೆ ಹೊಸ ಜೀವ ಸಿಕ್ಕಂತಾಗಿದೆ. ಭಾರತ ಈಗ ಹೆಚ್ಚು ನಿರ್ಭೀತಿಯಿಂದ ಗುಂಪಿನ ಇತರ ದೇಶಗಳೊಂದಿಗೆ ಸಂವಾದ ನಡೆಸುತ್ತಿರುವುದು ಗಮನಾರ್ಹ. ಚೀನಾ ಜೊತೆಗಿನ ಗಡಿ ವೈಷಮ್ಯವನ್ನು ತಾತ್ಕಾಲಿಕವಾಗಿ ಪಕ್ಕಕ್ಕಿಟ್ಟು ಭಾರತ ವ್ಯವಹರಿಸುವ ಇರಾದೆ ತೋರಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




