AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Credit Score- ಮೊದಲ ಸಲ ಸಾಲ ಪಡೆಯುವವರ ಕ್ರೆಡಿಟ್ ಸ್ಕೋರ್ ಪರಿಶೀಲನೆ ಕಡ್ಡಾಯವಲ್ಲ: ಹಣಕಾಸು ಸಚಿವಾಲಯ

CIBIL Score Not Mandatory For First-Time Borrowers To Get Bank Loans: Finance Ministry: ಮೊದಲ ಬಾರಿ ಸಾಲ ಪಡೆಯಲು ಹೊರಟಿರುವ ಗ್ರಾಹಕರಿಗೆ ಕ್ರೆಡಿಟ್ ಹಿಸ್ಟರಿ ಇರುವುದಿಲ್ಲ. ಈ ಕಾರಣಕ್ಕೆ ಅರ್ಜಿ ತಿರಸ್ಕರಿಸಬಾರದು ಎಂದು ಸರ್ಕಾರ ಹೇಳಿದೆ. ಕೇಂದ್ರ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಆರ್​ಬಿಐ ಆದೇಶವನ್ನು ಉಲ್ಲೇಖಿಸಿದ್ದಾರೆ. ಸಾಲ ನೀಡಲು ಇಷ್ಟು ಕ್ರೆಡಿಟ್ ಸ್ಕೋರ್ ಇರಬೇಕೆಂಬ ಕಡ್ಡಾಯ ನಿಯಮ ಇಲ್ಲ. ಬ್ಯಾಂಕುಗಳು ತಮ್ಮದೇ ವಿವೇಚನೆ ಬಳಸಬಹುದು ಎಂದಿದೆ ಆರ್​ಬಿಐ.

Credit Score- ಮೊದಲ ಸಲ ಸಾಲ ಪಡೆಯುವವರ ಕ್ರೆಡಿಟ್ ಸ್ಕೋರ್ ಪರಿಶೀಲನೆ ಕಡ್ಡಾಯವಲ್ಲ: ಹಣಕಾಸು ಸಚಿವಾಲಯ
ಕ್ರೆಡಿಟ್ ಸ್ಕೋರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 25, 2025 | 11:04 AM

Share

ನವದೆಹಲಿ, ಆಗಸ್ಟ್ 25: ಕೆಲಸವಿಲ್ಲದೆ ಅನುಭವ ಇಲ್ಲ, ಅನುಭವ ಇಲ್ಲದೆ ಕೆಲಸ ಇಲ್ಲ ಎನ್ನುವಂತೆ ಮೊದಲ ಬಾರಿ ಸಾಲಕ್ಕೆ ಅರ್ಜಿ ಸಲ್ಲಿಸುವವರದ್ದು ವ್ಯಥೆ. ಯಾವತ್ತೂ ಸಾಲ ಮಾಡದವರು ಮತ್ತು ಕ್ರೆಡಿಟ್ ಕಾರ್ಡ್ ಬಳಕೆ ಮಾಡದವರಿಗೆ ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ (credit score) ಇರುವುದೇ ಇಲ್ಲ. ಇಂಥವರು ಸಾಲಕ್ಕೆ ಅರ್ಜಿ ಹಾಕಿದಾಗ ಬ್ಯಾಂಕುಗಳು ಇವರಿಗೆ ಉತ್ತಮ ಸಿಬಿಲ್ ಸ್ಕೋರ್ ಇಲ್ಲವೆಂದು ಸಾಲ ನೀಡಲು ನಿರಾಕರಿಸುವ ಸಾಧ್ಯತೆ ಇದೆ. ಹಣಕಾಸು ಸಚಿವಾಲಯವು ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದು, ಮೊದಲ ಬಾರಿ ಸಾಲ ಪಡೆಯುತ್ತಿರುವವರಿಗೆ ಅವರ ಸಿಬಿಲ್ ಸ್ಕೋರ್ ಪರಿಶೀಲಿಸುವುದು ಕಡ್ಡಾಯವೇನಿಲ್ಲ ಎಂದು ಹೇಳಿದೆ.

ಕೇಂದ್ರ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಯಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ. ಸಾಲ ಮಂಜೂರಾತಿ ಮಾಡಲು ಆರ್​ಬಿಐ ನಿರ್ದಿಷ್ಟ ಕ್ರೆಡಿಟ್ ಸ್ಕೋರ್ ಇರಬೇಕೆಂದು ನಿಯಮ ಮಾಡಿಲ್ಲ ಎಂದಿದ್ದಾರೆ.

ಮೊದಲ ಬಾರಿ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿರುವ ವ್ಯಕ್ತಿಗೆ ಯಾವುದೇ ಕ್ರೆಡಿಟ್ ಹಿಸ್ಟರಿ ಇಲ್ಲವೆಂಬ ಕಾರಣಕ್ಕೆ ಸಾಲ ತಿರಸ್ಕಾರ ಮಾಡಬಾರದು ಎಂದು 2025ರ ಜನವರಿ 6ರಂದು ಆರ್​ಬಿಐ ಸಲಹೆ ನೀಡಿರುವ ವಿಚಾರವನ್ನು ಸಚಿವ ಚೌಧರಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಅನಿಲ್ ಅಂಬಾನಿಯ ಸಾಲಕ್ಕೆ ‘ವಂಚನೆ’ ಹಣೆಪಟ್ಟಿ ಕೊಟ್ಟ ಬ್ಯಾಂಕ್ ಆಫ್ ಇಂಡಿಯಾ, ಎಸ್​ಬಿಐ

‘ಸಾಲ ಮಂಜೂರು ಮಾಡುವಾಗ ಕ್ರೆಡಿಟ್ ಸ್ಕೋರ್ ಕನಿಷ್ಠ ಇಷ್ಟು ಇರಬೇಕು ಎನ್ನುವ ಮಾನದಂಡವನ್ನು ಆರ್​ಬಿಐ ನಿಗದಿ ಮಾಡಿಲ್ಲ. ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ವಾಣಿಜ್ಯಾತ್ಮಕವಾಗಿ ಅವಲೋಕಿಸುವುದೋ, ಮಂಡಳಿ ಅನುಮೋದನೆ ಪಡೆದೋ ಅಥವಾ ರೆಗ್ಯುಲೇಟರಿ ಮಾರ್ಗಸೂಚಿ ಪ್ರಕಾರವೋ ನಿರ್ಧಾರ ತೆಗೆದುಕೊಳ್ಳಬೇಕು. ಸಾಲ ಪಡೆಯುವವರ ಕ್ರೆಡಿಟ್ ರಿಪೋರ್ಟ್ ಹಲವು ಅಂಶಗಳಲ್ಲಿ ಒಂದಷ್ಟೇ’ ಎಂದು ಪಂಕಜ್ ಚೌಧರಿ ಹೇಳಿದ್ದಾರೆ.

ಕ್ರೆಡಿಟ್ ಸ್ಕೋರ್ ಎಂಬುದು ಸಿಬಿಲ್ ಇತ್ಯಾದಿ ನಾಲ್ಕೈದು ಏಜೆನ್ಸಿಗಳು ಗ್ರಾಹಕರಿಗೆ ನೀಡುವ 300ರಿಂದ 900ವರೆಗಿನ ಅಂಕವಾಗಿದೆ. ಸಾಲ ಪಡೆದು ಸರಿಯಾಗಿ ತೀರಿಸಿದರೆ ಉತ್ತಮ ಕ್ರೆಡಿಟ್ ಸ್ಕೋರ್ ಇರುತ್ತದೆ. ಸಾಲದ ಇಎಂಐ ಸರಿಯಾಗಿ ಕಟ್ಟದೇ ಇದ್ದರೆ ಮತ್ತು ಕ್ರೆಡಿಟ್ ಕಾರ್ಡ್ ಬಿಲ್​ಗಳನ್ನು ಸರಿಯಾಗಿ ಕಟ್ಟದೇ ಇದ್ದರೆ ಸ್ಕೋರ್ ಕಡಿಮೆ ಆಗುತ್ತದೆ. 300 ಅಂಕ ಎಂದರೆ ಕನಿಷ್ಠ ಸ್ಕೋರ್ ಮಟ್ಟ. 900 ಗರಿಷ್ಠ ಅಂಕ.

ಇದನ್ನೂ ಓದಿ: ವಿವಿಧ ವಯಸ್ಸಲ್ಲಿ ಎಷ್ಟೆಷ್ಟು ಸೇವಿಂಗ್ಸ್ ಮಾಡಬೇಕು? ರಾಧಿಕಾ ಗುಪ್ತಾ 10-30-50 ನಿಯಮ

ಭಾರತದಲ್ಲಿ ನಾಲ್ಕು ಏಜೆನ್ಸಿಗಳು ಕ್ರೆಡಿಟ್ ಸ್ಕೋರ್ ನೀಡುತ್ತವೆ. ಸಿಬಿಲ್, ಈಕ್ವಿಫ್ಯಾಕ್ಸ್, ಸಿಆರ್​ಐಎಫ್ ಮತ್ತು ಎಕ್​ಪೀರಿಯನ್. ಬ್ಯಾಂಕುಗಳು ಈ ಏಜೆನ್ಸಿಗಳ ನೆರವಿನಿಂದ ಗ್ರಾಹಕರ ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ಪಡೆಯುತ್ತವೆ.

ಕ್ರೆಡಿಟ್ ರಿಪೋರ್ಟ್​ನಲ್ಲಿ ಗ್ರಾಹಕರ ಪೂರ್ಣ ಸಾಲದ ಇತಿಹಾಸವೇ ದಾಖಲಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ