ವಿವಿಧ ವಯಸ್ಸಲ್ಲಿ ಎಷ್ಟೆಷ್ಟು ಸೇವಿಂಗ್ಸ್ ಮಾಡಬೇಕು? ರಾಧಿಕಾ ಗುಪ್ತಾ 10-30-50 ನಿಯಮ
Mango Millionaire, tips to save money to become rich: ಶ್ರೀಮಂತರಾಗಲು ಹಣ ಗಳಿಕೆ, ಹಣ ಉಳಿಕೆ ಮತ್ತು ಹಣ ಹೂಡಿಕೆ ಬಹಳ ಮುಖ್ಯವಾದ ನಿಯಮ. ಇಲ್ಲಿ ಹೂಡಿಕೆ ಎನ್ನುವ ಯುದ್ಧಕ್ಕೆ ಮುನ್ನ ಗಳಿಕೆ ಮತ್ತು ಉಳಿಕೆ ಮಹತ್ವವಾಗಿರುತ್ತದೆ. ಎಷ್ಟು ಹಣ ಉಳಿಸುವುದು ಎನ್ನುವ ಜಿಜ್ಞಾಸೆ ಇದ್ದವರಿಗೆ ಮ್ಯೂಚುವಲ್ ಫಂಡ್ ಉದ್ಯಮಿ ರಾಧಿಕಾ ಗುಪ್ತಾ ಸಲಹೆ ನೀಡಿದ್ಧಾರೆ.

ಜೀವನದಲ್ಲಿ ಶ್ರೀಮಂತಿಕೆ (rich) ಸಾಧಿಸಲು ಒಂದು ಪ್ರಧಾನ ಸೂತ್ರ ಇದೆ. ಅದು, ಗಳಿಕೆ, ಉಳಿಕೆ ಮತ್ತು ಹೂಡಿಕೆ. ಈ ಮೂರೂ ಸರಿಯಾಗಿ ಕೆಲಸ ಮಾಡಿದರೆ ಮನುಷ್ಯ ಶ್ರೀಮಂತನಾಗುತ್ತಾನೆ. ಅದರಲ್ಲೂ ಮೊದಲ ಎರಡು ಅಂಶಗಳಂತೂ ಬಹಳ ಮುಖ್ಯ. ಹಣ ಗಳಿಸುತ್ತಿರಬೇಕು. ಹಣ ಗಳಿಸುವುದು ಎಷ್ಟು ಮುಖ್ಯವೋ ಅದನ್ನು ವೃಥಾ ವೆಚ್ಚ ಮಾಡದೇ ಉಳಿಸುವುದು ಅಷ್ಟೇ ಮುಖ್ಯ. ಹಣ ಗಳಿಸಲು ಕೌಶಲ್ಯಗಳು ಅಗತ್ಯ ಇರುವಂತೆ, ಹಣ ಉಳಿಸುವುದೂ ಒಂದು ಕಲೆ.
ಬಹಳ ಜನರು ಸಾಕಷ್ಟು ಹಣ ಗಳಿಸುತ್ತಾರೆ. ಆದರೆ, ಅದರಲ್ಲಿ ಹೆಚ್ಚಿನ ಮೊತ್ತವು ಬೇಡದ ಸಂಗತಿಗಳಿಗೆ ಖರ್ಚಾಗಿ ಹೋಗುತ್ತದೆ. ಎರಡು ಲಕ್ಷ ರೂ ಮಾಸಿಕ ಸಂಬಳ ಪಡೆಯುವ ವ್ಯಕ್ತಿ ತಿಂಗಳಿಗೆ 20,000 ರೂ ಮಾತ್ರವೇ ಉಳಿಸುತ್ತಾನೆ ಎಂದಿಟ್ಟುಕೊಳ್ಳಿ. 40,000 ರೂ ಸಂಬಳ ಪಡೆಯುವ ವ್ಯಕ್ತಿ ಕೂಡ 20,000 ರೂ ಉಳಿಸಬಲ್ಲ. ಅಂತಿಮವಾಗಿ ಇಬ್ಬರ ನೆಟ್ವರ್ತ್ ಒಂದೇ ಇರುತ್ತದೆ. ಹೀಗಾಗಿ, ಹಣವನ್ನು ಉಳಿಸುವುದು ಬಹಳ ಮುಖ್ಯ.
ಯುದ್ದಕ್ಕೆ ಮುಂಚಿನ ಶಸ್ತ್ರಾಭ್ಯಾಸದಂತೆ ಹಣ ಉಳಿತಾಯ
ಎಡೆಲ್ವೀಸ್ ಮ್ಯುಚುವಲ್ ಫಂಡ್ ಸಂಸ್ಥೆಯ ಸಿಇಒ ರಾಧಿಕಾ ಗುಪ್ತಾ ಅವರು ನಿರಂಜನ್ ಅವಾಸ್ತಿ ಜೊತೆ ಸೇರಿ ‘ಮ್ಯಾಂಗೋ ಮಿಲಿಯನೇರ್’ ಎನ್ನುವ ಹೊಸ ಪುಸ್ತಕ ಬರೆದಿದ್ದಾರೆ. ಅದರಲ್ಲಿ ಅವರು ಹಣ ಉಳಿಸಲು ಅಗತ್ಯವಾಗಿರುವ ಕೆಲ ಟ್ರಿಕ್ ತಿಳಿಸಿದ್ದಾರೆ. ಹಣ ಉಳಿತಾಯವನ್ನು ಅವರು ಕ್ರಿಕೆಟ್ ಪಂದ್ಯಕ್ಕೆ ಮುಂಚಿನ ನೆಟ್ ಪ್ರಾಕ್ಟೀಸ್ಗೆ ಹೋಲಿಸಿದ್ದಾರೆ. ಹೂಡಿಕೆ ಎನ್ನುವ ಮಹಾ ಯುದ್ಧಕ್ಕೆ ಮುಂಚೆ ಸೇವಿಂಗ್ಸ್ ಎನ್ನುವ ತಾಲೀಮು ಮುಖ್ಯ ಎಂಬುದು ಅವರ ಅನಿಸಿಕೆ.
ಇದನ್ನೂ ಓದಿ: ಈ ಟೆಕ್ನಿಕ್ ಉಪಯೋಗಿಸಿ, ಇನ್ಷೂರೆನ್ಸ್ ಪ್ರೀಮಿಯಮ್ ಉಚಿತಗೊಳಿಸಿ
10-30-50 ನಿಯಮ ಮುಂದಿಡುತ್ತಾರೆ ರಾಧಿಕಾ ಗುಪ್ತ
ನೀವು ಹೊಸದಾಗಿ ಕೆಲಸಕ್ಕೆ ಸೇರಿದವರಾಗಿದ್ದರೆ ಹಣ ಉಳಿಸುವ ಮನಸ್ಥಿತಿ ಮೊದಲು ರೂಢಿಸಿಕೊಳ್ಳಬೇಕು. ಆರಂಭದಲ್ಲಿ ಸಣ್ಣ ಮೊತ್ತದಿಂದಲೇ ಉಳಿಸುವುದನ್ನು ಆರಂಭಿಸಬೇಕು. 20-30ನೇ ವಯಸ್ಸಿನಲ್ಲಿ ನಿಮ್ಮ ಆದಾಯದಲ್ಲಿ ಶೇ. 10ರಷ್ಟು ಉಳಿಸುವಂತಾದರೂ ಸಾಕು.
30-40ರ ವಯಸ್ಸಿನಲ್ಲಿ ನಿಮ್ಮ ಸಂಬಳ ಅಥವಾ ಬ್ಯುಸಿನೆಸ್ ಆದಾಯ ಹೆಚ್ಚಿರುತ್ತದೆ. ಈಗ ನಿಮ್ಮ ಸೇವಿಂಗ್ಸನ್ನೂ ಹೆಚ್ಚಿಸುವುದು ಅಗತ್ಯ. ಕನಿಷ್ಠ ಶೇ. 30ರಷ್ಟಾದರೂ ಉಳಿಸುವುದು ಗುರಿಯಾಗಿರಬೇಕು.
ಇನ್ನು, 40 ಅಥವಾ 50ರ ವಯಸ್ಸು ದಾಟಿದ ಬಳಿಕ ಮಕ್ಕಳ ಶಿಕ್ಷಣ ಇತ್ಯಾದಿ ಸಾಕಷ್ಟು ವೆಚ್ಚಗಳಿರುತ್ತವೆ. ಅವುಗಳ ಮಧ್ಯೆ ನಿಮ್ಮ ಹಣ ಉಳಿತಾಯವನ್ನೂ ಹೆಚ್ಚಿಸಬೇಕು. ಶೇ. 50ರಷ್ಟು ಆದಾಯವನ್ನು ಉಳಿಸಲು ಪ್ರಯತ್ನಿಸಿ ಎನ್ನುವುದು ಮ್ಯಾಂಗೋ ಮಿಲಿಯನೇರ್ ಪುಸ್ತಕದಲ್ಲಿ ಸಲಹೆ ನೀಡಲಾಗಿದೆ.
ಇದನ್ನೂ ಓದಿ: ಎರಡೂವರೆ ಲಕ್ಷ ಪೋಸ್ಟ್ಮ್ಯಾನ್ಗಳಿಗೆ ಮ್ಯುಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ಗಳಾಗಲು ಸಿಗಲಿದೆ ತರಬೇತಿ
ಟಿಡಿಎಸ್ ರೀತಿಯಲ್ಲಿ ಎಸ್ಡಿಎಸ್
ಹಣ ಉಳಿಸಲು ರಾಧಿಕಾ ಗುಪ್ತಾ ಎಸ್ಡಿಎಸ್ ಎನ್ನುವ ಐಡಿಯಾ ನೀಡಿದ್ದಾರೆ. ಎಸ್ಡಿಎಸ್ ಎಂದರೆ ಸೇವಿಂಗ್ಸ್ ಡಿಡಕ್ಟಡ್ ಅಡ್ ಸೋರ್ಸ್. ಅಂದರೆ, ನೀವು ಆದಾಯ ಬಳಸುವ ಮುನ್ನವೇ ಆ ಹಣವು ಉಳಿತಾಯ ಯಂತ್ರಗಳಿಗೆ ತನ್ನಿಂತಾನೇ ಹೋಗುವಂತೆ ಮಾಡುವುದು. ಅಂದರೆ, ಎಸ್ಐಪಿ, ಆರ್ಡಿ ಇತ್ಯಾದಿಗೆ ನಿಯಮಿತವಾಗಿ ಹಣ ಹೋಗುವಂತೆ ಮಾಡುವುದು ಉತ್ತಮ ಐಡಿಯಾ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




