AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡೂವರೆ ಲಕ್ಷ ಪೋಸ್ಟ್​ಮ್ಯಾನ್​ಗಳಿಗೆ ಮ್ಯುಚುವಲ್ ಫಂಡ್ ಡಿಸ್ಟ್ರಿಬ್ಯೂಟರ್​ಗಳಾಗಲು ಸಿಗಲಿದೆ ತರಬೇತಿ

Postmen to be trained as mutual fund distributors: ಅಂಚೆಗಳ ಡೆಲಿವರಿ ಮಾಡುವ ಪೋಸ್ಟ್​ಮ್ಯಾನ್​ಗಳು ಮುಂದಿನ ದಿನಗಳಲ್ಲಿ ಮ್ಯುಚುವಲ್ ಫಂಡ್ ವಿತರಕರಾಗಿ ಸಂಪರ್ಕ ಮಾಡಬಹುದು. ಭಾರತೀಯ ಮ್ಯೂಚುವಲ್ ಫಂಡ್ ಸಂಘವು (ಎಎಂಎಫ್​ಐ) ಡಿಸ್ಟ್ರಿಬ್ಯೂಟರ್​ಗಳ ಸಂಖ್ಯೆ ಹೆಚ್ಚಿಸಲು ಹುಡುಕಿರುವ ಮಾರ್ಗಗಳಲ್ಲಿ ಇದೂ ಒಂದು. ದೇಶಾದ್ಯಂತ ಇರುವ ಎರಡೂವರೆ ಲಕ್ಷ ಪೋಸ್ಟ್​ಮ್ಯಾನ್​ಗಳಿಗೆ ತರಬೇತಿ ನೀಡಿ, ಪರೀಕ್ಷೆ ಬರೆಸಿ ಮ್ಯುಚುವಲ್ ಫಂಡ್ ವಿತರಕರನ್ನಾಗಿ ಮಾಡಲು ಯೋಜಿಸಲಾಗಿದೆ.

ಎರಡೂವರೆ ಲಕ್ಷ ಪೋಸ್ಟ್​ಮ್ಯಾನ್​ಗಳಿಗೆ ಮ್ಯುಚುವಲ್ ಫಂಡ್ ಡಿಸ್ಟ್ರಿಬ್ಯೂಟರ್​ಗಳಾಗಲು ಸಿಗಲಿದೆ ತರಬೇತಿ
ಪೋಸ್ಟ್​ಮ್ಯಾನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 20, 2025 | 7:35 PM

Share

ಪತ್ರಗಳ ಡೆಲಿವರಿ ಸೇವೆ ಜೊತೆಗೆ ಕೆಲ ಜನಪ್ರಿಯ ಸಣ್ಣ ಉಳಿತಾಯ ಯೋಜನೆಗಳನ್ನು ಆಫರ್ ಮಾಡುವ ಅಂಚೆ ಕಚೇರಿ (Post Office) ಈಗ ಮ್ಯುಚುವಲ್ ಫಂಡ್ ವಿತರಣೆಗೂ (Mutual Fund distributors) ವೇದಿಕೆಯಾಗಲಿದೆ. ದೇಶಾದ್ಯಂತ ಇರುವ ಎರಡೂವರೆ ಲಕ್ಷ ಪೋಸ್ಟ್ ಮ್ಯಾನ್​ಗಳಿಗೆ ಮ್ಯೂಚುವಲ್ ಫಂಡ್ ವಿತರಕರಾಗಿ ತರಬೇತಿ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಬ್ಯುಸಿನೆಸ್ ಲೈನ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ, ಭಾರತದಲ್ಲಿ ಮ್ಯುಚುವಲ್ ಫಂಡ್ ಹಾಗೂ ಹೂಡಿಕೆ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಲ್ಲಿ ಈ ಮಿಷನ್ ಜಾರಿ ಮಾಡಲಾಗುತ್ತಿದೆ.

ಅಸೋಸಿಯೇಶನ್ ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾ (ಎಎಂಎಫ್​ಐ) ಸಂಸ್ಥೆಯೂ ಕೂಡ ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್​ಗಳ ಸಂಖ್ಯೆ ಹೆಚ್ಚಿಸಲು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದೆ. ಅದರಲ್ಲಿ ಪೋಸ್ಟ್ ಮ್ಯಾನ್​ಗಳಿಗೆ ತರಬೇತಿ ನೀಡುವುದೂ ಒಂದು ವಿಧಾನ. ಸಣ್ಣ ನಗರಗಳಲ್ಲಿ ಹಣಕಾಸು ಸಾಕ್ಷರತೆ ಹೆಚ್ಚಿಸುವ ಪ್ರಯತ್ನವೂ ಇದೆ.

ಇದನ್ನೂ ಓದಿ: Post Office plans: ಪೋಸ್ಟ್ ಆಫೀಸ್​ನ SCSS ಸ್ಕೀಮ್; ತಿಂಗಳಿಗೆ 20,500 ರೂವರೆಗೆ ಆದಾಯ ಗಳಿಸಿ

ಪಟ್ಟಣಗಳಲ್ಲಿ ಮ್ಯುಚುವಲ್ ಫಂಡ್ ಡಿಸ್ಟ್ರಿಬ್ಯೂಟರ್​ಗಳಾಗಲಿದ್ದಾರೆ ಪೋಸ್ಟ್​ಮ್ಯಾನ್​ಗಳು

ಪೋಸ್ಟ್​ಮೆನ್​ಗಳು ಸಣ್ಣ ಪಟ್ಟಣಗಳಲ್ಲಿ ಜನರ ಜೊತೆ ನಿಕಟ ಸಂಪರ್ಕದಲ್ಲಿರುತ್ತಾರೆ. ಅವರಿಗೆ ತಮ್ಮ ವ್ಯಾಪ್ತಿಯ ಪ್ರದೇಶದ ಬಗ್ಗೆ ಗ್ರೌಂಡ್​ಲೆವೆಲ್ ಮಾಹಿತಿ ಇರುತ್ತದೆ. ಹೀಗಾಗಿ, ಪೋಸ್ಟ್​ಮೆನ್​ಗಳು ಮ್ಯುಚುವಲ್ ಫಂಡ್ ಡಿಸ್ಟ್ರಿಬ್ಯುಟರ್​ಗಳಾದರೆ ಸಂಭಾವ್ಯ ಹೂಡಿಕೆದಾರರನ್ನು ಗುರುತಿಸುವುದು ಸುಲಭವಾಗುತ್ತದೆ. ದೇಶಾದ್ಯಂತ ಇರುವ ಎರಡೂವರೆ ಲಕ್ಷ ಪೋಸ್ಟ್​ಮ್ಯಾನ್​ಗಳಿಗೆ ವಿಶೇಷ ತರಬೇತಿ ನೀಡುವುದು ಮಾತ್ರವಲ್ಲ, ಎನ್​ಐಎಸ್​ಎಂ (ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಸೆಕ್ಯೂರಿಟೀಸ್ ಮಾರ್ಕೆಟ್) ಪರೀಕ್ಷೆ ನೀಡಿ ವಿತರಕರಾಗಿ ಆಯ್ಕೆ ಮಾಡುವ ಯೋಜನೆ ಇದು. ಇದಕ್ಕಾಗಿ ಅಂಚೆ ಇಲಾಖೆ ಜೊತೆ ಮ್ಯೂಚುವಲ್ ಫಂಡ್ ಉದ್ಯಮ ಸಂಸ್ಥೆಯು ಹೊಂದಾಣಿಕೆ ಮಾಡಿಕೊಳ್ಳಲು ಯೋಜಿಸಿದೆ.

ಪೋಸ್ಟ್​ಮ್ಯಾನ್​ಗಳು ಮ್ಯುಚುವಲ್ ಫಂಡ್ ವಿತರಕರಾದರೆ ಸಂಭಾವನೆ ಹೇಗೆ ಕೊಡಲಾಗುತ್ತದೆ ಎಂಬ ವಿವರ ಸದ್ಯಕ್ಕಿಲ್ಲ.

ಶಾಲಾ ಕಾಲೇಜುಗಳಲ್ಲಿ ತರಬೇತಿ

ಇದೇ ವೇಳೆ, ಮ್ಯುಚುವಲ್ ಫಂಡ್ ಅಸೋಸಿಯೇಶನ್ ಇನ್ನೂ ಬೇರೆ ಬೇರೆ ಮಾರ್ಗಗಳ ಮೂಲಕ ಉದ್ಯಮದ ಜನಪ್ರಿಯತೆ ಹೆಚ್ಚಿಸುವ ಪ್ರಯತ್ನದಲ್ಲಿದೆ. ಶಾಲಾ ಕಾಲೇಜುಗಳಲ್ಲಿ ಹಣಕಾಸು ಅರಿವು ಮೂಡಿಸುವ ಕೆಲಸವಾಗಲಿದೆ. ಎರಡು ಮಟ್ಟಗಳಲ್ಲಿ ಇದರ ತರಗತಿಗಳು ನಡೆಯಲಿವೆ. ಮೊದಲ ಮಟ್ಟದಲ್ಲಿ ಕನಿಷ್ಠ 10,000 ಮಂದಿಗೆ ಹಣಕಾಸು ಶಿಕ್ಷಣ ಕೊಡಲಾಗುತ್ತದೆ. ಅವರಲ್ಲಿ ಕನಿಷ್ಠ 1,000 ಮಂದಿಯನ್ನು ಮ್ಯುಚುವಲ್ ಫಂಡ್ ಡಿಸ್ಟ್ರಿಬ್ಯೂಟರ್​ಗಳಾಗಿ ಮಾರ್ಪಡಿಸುವ ಗುರಿ ಇಡಲಾಗಿದೆ.

ಇದನ್ನೂ ಓದಿ: Mutual Funds: 1 ಲಕ್ಷ ರೂ, 30 ವರ್ಷ ಹೂಡಿಕೆ, ಕೋಟಿ ರೂಗೂ ಅಧಿಕ ರಿಟರ್ನ್; ಇದು ಈ ಐದು ಫಂಡ್​ಗಳ ಮ್ಯಾಜಿಕ್

ಈ ಯೋಜನೆಗೆ ಸದ್ಯಕ್ಕೆ ಎಎಂಎಫ್​ಐ ನಾಲ್ಕು ರಾಜ್ಯಗಳನ್ನು ಆಯ್ದುಕೊಂಡಿದೆ. ಮೇಘಾಲಯ, ಬಿಹಾರ, ಒಡಿಶಾ ಮತ್ತು ಆಂಧ್ರದ ಪ್ರಮುಖ ಶಿಕ್ಷಣ ಸಂಸ್ಥೆಗಳ ನೆರವಿನಿಂದ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಲಾಗಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ