ಕುಶಲಕರ್ಮಿ
ನವದೆಹಲಿ, ಸೆಪ್ಟೆಂಬರ್ 17: ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಾಗೂ ವಿಶ್ವಕರ್ಮ ಜಯಂತಿ ದಿನವಾದ ಇಂದು ಪಿಎಂ ವಿಶ್ವಕರ್ಮ ಯೋಜನೆ (PM Vishwakarma Scheme) ಆರಂಭವಾಗಿದೆ. ಸಾಂಪ್ರದಾಯಿಕ ಕುಶಲಕರ್ಮಿಗಳ ಅಭ್ಯುದಯಕ್ಕಾಗಿ ಇರುವ ಈ ಸ್ಕೀಮ್ ಬಗ್ಗೆ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಭಾಷಣದ ವೇಳೆಯೇ ಮೋದಿ ಪ್ರಸ್ತಾಪ ಮಾಡಿದ್ದರು. ಹೊಸದಾಗಿ ಇಂದೇ ಉದ್ಘಾಟನೆಗೊಂಡಿರುವ ಐಐಸಿಸಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರು ವಿಶ್ವಕರ್ಮ ಸ್ಕೀಮ್ ಅನ್ನು ಅನಾವರಣಗೊಳಿಸಿದರು. ಭಾರತದ ಸಾಂಪ್ರದಾಯಿಕ ಕಲೆಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಈ ಯೋಜನೆ ಆರಂಭಿಸಿದೆ. ಆರಂಭದಲ್ಲಿ 18 ಕಲೆಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಸಾಂಪ್ರದಾಯಿಕ ಕಲೆಗಳನ್ನೂ ಈ ಸ್ಕೀಮ್ನ ವ್ಯಾಪ್ತಿಗೆ ತರುವ ಸಾಧ್ಯತೆ ಇದೆ.
ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಒಳಗೊಂಡಿರುವ ಕುಶಲಕರ್ಮಿಗಳಿವರು
- ಮರಗೆಲಸ ಮಾಡುವವರು (ಕಾರ್ಪೆಂಟರ್)
- ದೋಣಿ ತಯಾರಕರು
- ಶಸ್ತ್ರಕಾರರು (ಮದ್ದುಗುಂಡು ತಯಾರಿಸುವವರು)
- ಕಮ್ಮಾರರು
- ಸುತ್ತಿಗೆ ಇತ್ಯಾದಿ ತಯಾರಿಸುವವರು
- ಬೀಗ ಮತ್ತು ಕೀಲಿ ತಯಾರಿಸುವವರು
- ಅಕ್ಕಸಾಲಿಗರು (ಚಿನ್ನದ ಕುಸುರಿ)
- ಕುಂಬಾರರು (ಮಡಿಕೆ ತಯಾರಿಸುವವರು)
- ಶಿಲ್ಪಿಗಳು, ಕಲ್ಲು ಒಡೆಯುವವರು
- ಚಮ್ಮಾರರು (ಪಾದರಕ್ಷೆ ತಯಾರಿಸುವವರು)
- ಮೇಸ್ತ್ರಿಗಳು
- ಬುಟ್ಟಿ ಹೆಣೆಯುವವರು
- ಬೊಂಬೆ ತಯಾರಿಸುವವರು
- ಕ್ಷೌರಿಕರು
- ಹೂಮಾಲೆ ತಯಾರಕರು
- ಅಗಸರು (ಬಟ್ಟೆ ಒಗೆಯುವವರು)
- ದರ್ಜಿಗಳು (ಟೈಲರ್)
- ಮೀನಿನ ಬಲೆ ತಯಾರಕರು
ಇದನ್ನೂ ಓದಿ: ನರೇಂದ್ರ ಮೋದಿ ಜನ್ಮದಿನ; ಒಂದು ವರ್ಷದಲ್ಲಿ ಭಾರತೀಯ ಷೇರುಮಾರುಕಟ್ಟೆ ಅಮೋಘ ಬೆಳವಣಿಗೆ; ಸೆನ್ಸೆಕ್ಸ್, ನಿಫ್ಟಿ ಸೇರಿ ಯಾವ್ಯಾವ ಸೂಚ್ಯಂಕಗಳು ಹೆಚ್ಚಿರುವುದೆಷ್ಟು? ಇಲ್ಲಿದೆ ಮಾಹಿತಿ
ಮೊದಲ ವರ್ಷದಲ್ಲಿ ಐದು ಲಕ್ಷ ಕುಟುಂಬಗಳಿಗೆ ಯೋಜನೆಯ ಲಾಭ
ಪಿಎಂ ವಿಶ್ವಕರ್ಮ ಯೋಜನೆಗೆಂದು ಕೇಂದ್ರ ಸರ್ಕಾರ 13,000 ಕೋಟಿ ರೂ ಮೀಸಲಿರಿಸಿದೆ. ಒಟ್ಟು 18 ಸಾಂಪ್ರದಾಯಿಕ ಕಲೆಗಳಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿಗಳು ಈ ಯೋಜನೆಯ ಲಾಭ ಪಡೆಯಬಹುದು. ಒಂದು ಅಂದಾಜು ಪ್ರಕಾರ ಮೊದಲ ವರ್ಷದಲ್ಲಿ 5 ಲಕ್ಷ ಕುಟುಂಬಗಳು ಫಲಾನುಭವಿಗಳ ಪಟ್ಟಿಯಲ್ಲಿರಲಿವೆ. ಮುಂದಿನ ಐದು ವರ್ಷದಲ್ಲಿ ಒಟ್ಟು ಫಲಾನುಭವಿ ಕುಟುಂಬಗಳ ಸಂಖ್ಯೆ 30 ಲಕ್ಷ ಮುಟ್ಟುವ ನಿರೀಕ್ಷೆ ಇದೆ.
ಪಿಎಂ ವಿಶ್ವಕರ್ಮ ಯೋಜನೆಯಿಂದ ಏನು ಲಾಭ?
- ಪಟ್ಟಿ ಮಾಡಲಾಗಿರುವ ಸಾಂಪ್ರದಾಯಿಕ ಕಲೆಗಳಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿಗಳು ಯೋಜನೆಯ ಪೋರ್ಟಲ್ನಲ್ಲಿ ನೊಂದಾಯಿಸಿಕೊಳ್ಳಬೇಕು. ಅದಾದ ಬಳಿಕ ಯೋಜನೆಯ ಪ್ರಮಾಣಪತ್ರ, ಐಡಿ ಕಾರ್ಡ್ ಸಿಗುತ್ತದೆ.
- ಫಲಾನುಭವಿಗಳಿಗೆ 15,000 ರೂ ಮೊತ್ತದ ಟೂಲ್ಕಿಟ್ ಸಿಗುತ್ತದೆ.
- ನೊಂದಾಯಿಸಿಕೊಂಡವರಿಗೆ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಮೂಲ ತರಬೇತಿ ಮತ್ತು ಉನ್ನತ ಮಟ್ಟದ ತರಬೇತಿಯನ್ನು ಕೊಡಲಾಗುತ್ತದೆ. ಇವೆಲ್ಲವೂ ಉಚಿತವಾಗಿರುತ್ತದೆ.
ಇದನ್ನೂ ಓದಿ: ತೆರಿಗೆ ಉಳಿಸುವ ನರೇಂದ್ರ ಮೋದಿ ಟ್ರಿಕ್ಸ್; ಇನ್ಫ್ರಾ ಬಾಂಡ್ಗಳಲ್ಲಿ ಹೂಡಿಕೆ ಮಾಡಿದ್ದ ಪ್ರಧಾನಿ; ಏನಿದು ಈ ಇನ್ಫ್ರಾಸ್ಟ್ರಕ್ಚರ್ ಬಾಂಡ್ಸ್?
- ತರಬೇತಿಯಷ್ಟೇ ಅಲ್ಲದೇ 10,000 ರೂನಿಂದ 10 ಲಕ್ಷ ರೂವರೆಗೆ ಹಣಕಾಸು ನೆರವನ್ನೂ ನೀಡಲಾಗುತ್ತದೆ.
- ಯೋಜನೆಯ ಮೊದಲ ಹಂತದಲ್ಲಿ ಕುಶಲಕರ್ಮಿಗಳಿಗೆ ಶೇ. 5ರ ಬಡ್ಡಿದರದಲ್ಲಿ 1 ಲಕ್ಷ ರೂವರೆಗೂ ಸಾಲ ನೀಡಲಾಗುತ್ತದೆ. ಮುಂದಿನ ಹಂತದಲ್ಲಿ ಅದೇ ಬಡ್ಡಿದರದಲ್ಲಿ 2 ಲಕ್ಷ ರೂವರೆಗೆ ಸಾಲ ಕೊಡಲಾಗುತ್ತದೆ.
ವಿಶ್ವಕರ್ಮ ಯೋಜನೆಯಿಂದ ಉದ್ಯೋಗಸೃಷ್ಟಿಗೆ ಸಹಾಯಕವಾಗುವ ನಿರೀಕ್ಷೆ
ಭಾರತದಲ್ಲಿ ಮುಂದಿನ ಐದು ವರ್ಷದಲ್ಲಿ 30 ಲಕ್ಷ ಕುಶಲಕರ್ಮಿ ಕುಟುಂಬಗಳನ್ನು ತಲುಪುವ ಗುರಿ ಈ ಯೋಜನೆಯದ್ದು. ಪ್ರತೀ ವರ್ಷ 15,000 ಮಂದಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ.
ಕುಶಲಕರ್ಮಿಗಳ ಬದುಕು ಹಸನಾಗಿಸುವುದಲ್ಲದೇ, ಭಾರತದ ಸಾಂಪ್ರದಾಯಿಕ ಕಲಾ ಶ್ರೀಮಂತಿಕೆ ಇನ್ನಷ್ಟು ಉಜ್ವಲಗೊಳ್ಳಲು ಹಾಗೂ ಜಾಗತಿಕ ಮಾರುಕಟ್ಟೆಯ ಅಗತ್ಯಗಳಿಗೆ ಸ್ಪಂದಿಸಲು ಇದು ನೆರವಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ