PM Narendra Modi: ಹೊಸ ತಂತ್ರಜ್ಞಾನದ ಜೈವಿಕ ಇಂಧನ ಘಟಕ; ಇಂದು ಲೋಕಾರ್ಪಣೆ ಮಾಡಲಿದ್ದಾರೆ ನರೇಂದ್ರ ಮೋದಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 10, 2022 | 9:14 AM

World Biofuel Day 2022: ಈ ಘಟಕವು ವರ್ಷಕ್ಕೆ 2 ಲಕ್ಷ ಟನ್ ಭತ್ತದ ಹುಲ್ಲನ್ನು ಬಳಸಿಕೊಂಡು 3 ಕೋಟಿ ಲೀಟರ್ ಎಥನಾಲ್ ಉತ್ಪಾದಿಸಲಿದೆ. ‘ತ್ಯಾಜ್ಯದಿಂದ ಸಂಪತ್ತು’ ಉಪಕ್ರಮದ ಹೊಸ ಅಧ್ಯಾಯ ಇದರಿಂದ ಆರಂಭವಾಗಲಿದೆ.

PM Narendra Modi: ಹೊಸ ತಂತ್ರಜ್ಞಾನದ ಜೈವಿಕ ಇಂಧನ ಘಟಕ; ಇಂದು ಲೋಕಾರ್ಪಣೆ ಮಾಡಲಿದ್ದಾರೆ ನರೇಂದ್ರ ಮೋದಿ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ವಿಶ್ವ ಜೈವಿಕ ಇಂಧನ ದಿನವಾಗಿರುವ ಬುಧವಾರ (ಆಗಸ್ಟ್ 10) ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣದ ಪಾಣಿಪತ್​ನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (Indian Oil Corporation Ltd – IOCL) ನಿರ್ಮಿಸಿರುವ ಜೈವಿಕ ಇಂಧನ ಘಟಕವನ್ನು (Bio Fuel Unit) ಲೋಕಾರ್ಪಣೆ ಮಾಡಲಿದ್ದಾರೆ. ಈ ಘಟಕವು 2ನೇ ತಲೆಮಾರಿನ (2ಜಿ) ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಭಾರತದಲ್ಲಿ ಜೈವಿಕ ಇಂಧನದ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಈ ಘಟಕದ ಲೋಕಾರ್ಪಣೆಯ ಮೂಲಕ ಜೈವಿಕ ಇಂಧನ ವಲಯದ ಉತ್ತೇಜನಕ್ಕೆ ಇರುವ ತನ್ನ ಬದ್ಧತೆಯನ್ನು ಸರ್ಕಾರವು ಸಾರಿ ಹೇಳುತ್ತಿದೆ. ಇಂಧನ ಕ್ಷೇತ್ರವು ಜನಸಾಮಾನ್ಯರ ಕೈಗೆಟುಕುವಂತಿರಬೇಕು, ಪರಿಸರ ಸ್ನೇಹಿ ಸುಸ್ಥಿರ ಮಾದರಿ ಅಳವಡಿಸಿಕೊಳ್ಳಬೇಕು ಮತ್ತು ಕಾರ್ಯಕ್ಷಮತೆ ಅತ್ಯುತ್ತಮ ರೀತಿಯಲ್ಲಿರಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯಕ್ಕೆ ಅನುಗುಣವಾಗಿ ಈ ಘಟಕವನ್ನು ನಿರ್ಮಿಸಲಾಗಿದೆ.

ತೈಲ ಕ್ಷೇತ್ರದ ಮುಂಚೂಣಿ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಈ ಘಟಕವನ್ನು ₹ 900 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ಇದು ಪಾಣಿಪತ್ ತೈಲ ಸಂಸ್ಕರಣಾಗಾರದ ಸಮೀಪದಲ್ಲಿಯೇ ಇದೆ. ಈ ಘಟಕವು ವರ್ಷಕ್ಕೆ 2 ಲಕ್ಷ ಟನ್ ಭತ್ತದ ಹುಲ್ಲನ್ನು ಬಳಸಿಕೊಂಡು 3 ಕೋಟಿ ಲೀಟರ್ ಎಥನಾಲ್ ಉತ್ಪಾದಿಸಲಿದೆ. ಭಾರತದಲ್ಲಿ ‘ತ್ಯಾಜ್ಯದಿಂದ ಸಂಪತ್ತು’ (Waste-to-Wealth) ಉಪಕ್ರಮದ ಹೊಸ ಅಧ್ಯಾಯ ಇದರಿಂದ ಆರಂಭವಾಗಲಿದೆ.

ಕೃಷಿ ಉತ್ಪನ್ನಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು, ರೈತರಿಗೆ ಲಾಭದ ಸಾಧ್ಯತೆ ಹೆಚ್ಚು ಮಾಡಬೇಕು ಎನ್ನುವುದು ಪ್ರಧಾನಿ ಅವರ ಇಚ್ಛೆಯಾಗಿದೆ. ಈ ಘಟಕವು ಉದ್ಯೋಗಿಗಳಿಗೆ ನೇರವಾಗಿ ಉದ್ಯೋಗಾವಕಾಶ ಕಲ್ಪಿಸುತ್ತದೆ. ಭತ್ತದ ಹುಲ್ಲು ಕತ್ತರಿಸುವುದು, ನಿರ್ವಹಿಸುವುದು ಮತ್ತು ಸಂಗ್ರಹಿಸುವ ಚಟುವಟಿಕೆಗಳ ಮೂಲಕ ಸಾಕಷ್ಟು ಜನರಿಗೆ ಪರೋಕ್ಷವಾಗಿ ಉದ್ಯೋಗಾವಕಾಶ ಕಲ್ಪಿಸುತ್ತದೆ. ಈ ಘಟಕದಿಂದ ದ್ರವ ರೂಪದ ತ್ಯಾಜ್ಯ ಹೊರಬರುವುದಿಲ್ಲ. ಭತ್ತದ ಹುಲ್ಲು ಸುಡುವುದಕ್ಕೆ ಕಡಿವಾಣ ಹಾಕುವ ಮೂಲಕ ವರ್ಷಕ್ಕೆ 3 ಲಕ್ಷ ಟನ್ ಕಾರ್ಬನ್ ಡೈಆಕ್ಸೈಡ್ ವಾತಾವರಣಕ್ಕೆ ಸೇರುವುದನ್ನು ತಪ್ಪಿಸಲಿದೆ. ಇದು ಒಂದು ವರ್ಷಕ್ಕೆ 63,000 ಕಾರುಗಳಿಂದ ಉಂಟಾಗುವ ವಾಯುಮಾಲಿನ್ಯಕ್ಕೆ ಸಮನಾದುದು.

ವಿಶ್ವ ಜೈವಿಕ ಇಂಧನ ದಿನ

ಪ್ರತಿ ವರ್ಷ ಆಗಸ್ಟ್ 10ರಂದು ವಿಶ್ವ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ. ಪ್ರಾಣಿತ್ಯಾಜ್ಯ, ಪಾಚಿ (ಆಲ್ಗೆ), ಕೈಗಾರಿಕೆ ಮತ್ತು ಕೃಷಿ ತ್ಯಾಜ್ಯಗಳಿಂದ ಜೈವಿಕ ಇಂಧನವನ್ನು ಉತ್ಪಾದಿಸಲಾಗುತ್ತದೆ. ಪಳೆಯುಳಿಕೆ ಇಂಧನಗಳಿಗೆ (Fossil Fuels) ಹೋಲಿಸಿದರೆ ಜೈವಿಕ ಇಂಧನವನ್ನು ಅತಿ ಕಡಿಮೆ ಸಮಯದಲ್ಲಿ ದ್ರವ ಅಥವಾ ಅನಿಲ ರೂಪದಲ್ಲಿ ಉತ್ಪಾದಿಸಲಾಗುತ್ತದೆ. ಇವು ಪರಿಸರ ಸ್ನೇಹಿ, ಸುಸ್ಥಿರ, ನವೀಕರಿಸಬಲ್ಲ ಹಾಗೂ ಕೊಳೆಯಬಲ್ಲ ಇಂಧನವಾಗಿರುತ್ತದೆ.

ಜೈವಿಕ ಇಂಧನ ದಿನದ ಇತಿಹಾಸ

ಭಾರತದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (Ministry of Petroleum and Natural Gas – MoP&NG) ಮತ್ತು ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ (Ministry of Environment, Forest and Climate Change – MoEFCC) ಇಲಾಖೆಗಳು 2015ರಿಂದ ಜೈವಿಕ ಇಂಧನ ದಿನದ ಆಚರಣೆಗೆ ಚಾಲನೆ ನೀಡಿದವು. ಆಗಸ್ಟ್ 10ರಂದೇ ಏಕೆ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ ಎನ್ನುವುದಕ್ಕೂ ಒಂದು ಕಾರಣವಿದೆ. ಜರ್ಮನಿಯ ಸಂಶೋಧಕ ಸರ್ ರುಡಾಲ್ಫ್​ ಡೀಸೆಲ್ (Sir Rudolf Diesel) ಆಗಸ್ಟ್ 10, 1893ರಂದು ಮೊದಲ ಬಾರಿಗೆ ಕಡ್ಲೆಕಾಯಿ ಎಣ್ಣೆಯಿಂದ ಡೀಸೆಲ್ ಎಂಜಿನ್​ನ ಕಾರ್ಯಾಚರಣೆ ಮಾಡಿದ. ಇದು ಪಳೆಯುಳಿಕೆ ಇಂಧನಗಳಿಗೆ ಬದಲಿಯಾಗಿ ಬಳಸಬಲ್ಲ ಸುರಕ್ಷಿತ, ಸುಸ್ಥಿರ ಮತ್ತು ನವೀಕರಿಸಲು ಸಾಧ್ಯವಿರುವ ಪರ್ಯಾಯವನ್ನು ಒದಗಿಸಿಕೊಡುವ ಮಹತ್ವದ ಸಂಶೋಧನೆ ಎನಿಸಿತು.

Published On - 9:11 am, Wed, 10 August 22