New Wage Code: ಹೊಸ ವೇತನ ಸಂಹಿತೆ: ನಿಮ್ಮ ಕೆಲಸದ ಅವಧಿ, ವೇತನದಲ್ಲೂ ಆಗಲಿದೆ ಬದಲಾವಣೆ..!

| Updated By: ಝಾಹಿರ್ ಯೂಸುಫ್

Updated on: Aug 09, 2022 | 11:47 AM

New Wage Code: ಈಗಾಗಲೇ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ ಸರ್ಕಾರ ರೂಪಿಸಿರುವ ಹೊಸ ವೇತನ ಸಂಹಿತೆಯ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಶೀಘ್ರದಲ್ಲೇ ಹೊಸ ನಿಯಮವು ಎಲ್ಲಾ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ಬರಲಿದೆ.

New Wage Code: ಹೊಸ ವೇತನ ಸಂಹಿತೆ: ನಿಮ್ಮ ಕೆಲಸದ ಅವಧಿ, ವೇತನದಲ್ಲೂ ಆಗಲಿದೆ ಬದಲಾವಣೆ..!
ಸಾಂದರ್ಭಿಕ ಚಿತ್ರ
Follow us on

ಕೇಂದ್ರ ಸರಕಾರವು ಜಾರಿಗೆ ತರಲು ಮುಂದಾಗಿದ್ದ ಹೊಸ ವೇತನ ಸಂಹಿತೆಗಳ (New Wage Code) ಅನುಷ್ಠಾನವು ವಿಳಂಬವಾಗಿದೆ. ಈ ಹಿಂದೆ ಜುಲೈ 1 ರಿಂದ ಅನುಷ್ಠಾನಕ್ಕೆ ಬರಲಿದೆ ಎನ್ನಲಾಗಿದ್ದ ಈ ಕಾರ್ಮಿಕ ಸಂಹಿತೆಗಳನ್ನು ಇನ್ನೂ ಕೂಡ ಕೆಲ ರಾಜ್ಯಗಳು ಅನುಮೋದಿಸಿಲ್ಲ. ಹೀಗಾಗಿ ಹೊಸ ಕಾರ್ಮಿಕ ಕಾನೂನುಗಳ ಜಾರಿಯು ವಿಳಂಬವಾಗಿದೆ. ಕೇಂದ್ರ ಸರ್ಕಾರವು ಈ ಹೊಸ ಕಾರ್ಮಿಕ ಕಾನೂನನ್ನು ಸಂಸತ್ತಿನ ಮೂಲಕ ಅಂಗೀಕರಿಸಿದ್ದು, ಇನ್ನು ರಾಜ್ಯಗಳು ಈ ಸಂಹಿತೆಯನ್ನು ಅನುಮೋದಿಸಬೇಕಿದೆ. ಸರ್ಕಾರದ ಪ್ರಕಾರ, ಇಲ್ಲಿಯವರೆಗೆ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವೇತನ ಸಂಹಿತೆ- 2019 ರ ಅಡಿಯಲ್ಲಿ ಕರಡು ನಿಯಮಗಳನ್ನು ಪ್ರಕಟಿಸಿವೆ. ಶೀಘ್ರದಲ್ಲೇ ಜಾರಿಗೆ ಬರಲಿರುವ ಹೊಸ ಕಾರ್ಮಿಕ ಸಂಹಿತೆಯಿಂದ ಉದ್ಯೋಗಿಗಳ ಕೆಲಸದ ಸಮಯ, ಟೇಕ್-ಹೋಮ್ ವೇತನ ಮತ್ತು ರಜೆಯ ನಿಯಮಗಳಲ್ಲಿ ಬದಲಾವಣೆ ಕಂಡು ಬರಲಿದೆ.

ಹೊಸ ವೇತನ ನೀತಿಯಂತೆ ಉದ್ಯೋಗಿಯ ಕೆಲಸ ಕಡೆಯ ದಿನದಿಂದ ಎರಡು ದಿನಗಳಲ್ಲಿ ವೇತನ, ಬಾಕಿ ವೇತನದ ಪೂರ್ಣ ಮಾಹಿತಿ ಮತ್ತು ಅಂತಿಮ ಇತ್ಯರ್ಥವನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಲಾಗಿದೆ. ಹಾಗೆಯೇ ಕಂಪನಿಗಳು ಅಗತ್ಯವಿದ್ದರೆ ಉದ್ಯೋಗಿಗಳ ಕೆಲಸದ ಸಮಯವನ್ನು ಹೆಚ್ಚಿಸಬಹುದು. ಇಂತಹ ಸಂದರ್ಭಗಳಲ್ಲಿ ಅವರಿಗೆ ಹೆಚ್ಚುವರಿ ರಜೆಯನ್ನು ಸಹ ನೀಡಬೇಕಾಗುತ್ತದೆ ಎಂದು ತಿಳಿಸಿದೆ. ಹಾಗಿದ್ರೆ ಹೊಸ ಕಾರ್ಮಿಕ ನೀತಿಯಿಂದ ಕಂಡು ಬರಲಿರುವ ಪ್ರಮುಖ ಬದಲಾವಣೆಗಳೇನು ನೋಡೋಣ…

ಕೈಗೆಟುಕುವ ವೇತನ ಕಡಿತ:
ಹೊಸ ವೇತನ ಸಂಹಿತೆ ಪ್ರಕಾರ, ಮೂಲ ವೇತನದ ಮೇಲೆ ನೇರ ಪರಿಣಾಮ ಬೀರಲಿದೆ. ಅಂದರೆ ಉದ್ಯೋಗಿಗೆ ನೀಡಲಾಗುವ ಒಟ್ಟು ಸಿಟಿಸಿಯಲ್ಲಿ ಕನಿಷ್ಠ ಶೇ. 50ರಷ್ಟು ಮೊತ್ತವು ಬೇಸಿಕ್ ವೇತನ ಆಗಿರಬೇಕೆಂದು ಹೊಸ ನಿಯಮದಲ್ಲಿ ತಿಳಿಸಲಾಗಿದೆ. ಇಲ್ಲಿ ಬೇಸಿಕ್ ವೇತನ ಹೆಚ್ಚಾಗುವುದರಿಂದ ಪಿಎಫ್, ಗ್ರಾಚುಟಿ ಇತ್ಯಾದಿ ಉಳಿತಾಯ ಯೋಜನೆಗಳಿಗೆ ಸಂಬಳದಿಂದ ಹೆಚ್ಚಿನ ಹಣ ಕಡಿತವಾಗಲಿದೆ. ಇದರಿಂದ ಉದ್ಯೋಗಿಯ ಕೈಗೆ ಸಿಗುವ ಸಂಬಳ ಕೂಡ ಕಡಿಮೆಯಾಗಲಿದೆ. ಹೀಗೆ ಕಡಿತಗೊಂಡ ಹಣವನ್ನು ಪಿಎಫ್ ಮತ್ತು ಗ್ರಾಚುಟಿಗೆ ಹೋಗಲಿದ್ದು, ಇದರಿಂದ ನಿವೃತ್ತಿ ಉಳಿತಾಯ ಮೊತ್ತ ಹೆಚ್ಚಾಗುತ್ತದೆ.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಕೆಲಸದ ಅವಧಿ ಹೆಚ್ಚಳ:
ಹೊಸ ಕಾರ್ಮಿಕ ಸಂಹಿತೆ ಪ್ರಕಾರ, ಕಂಪನಿಗಳು ಉದ್ಯೋಗಿಗಳ ಕೆಲಸದ ಸಮಯವನ್ನು ಹೆಚ್ಚಿಸಬಹುದು. ಅಂದರೆ ಈಗಿನ 9 ಗಂಟೆಗಳಿಂದ 12 ಗಂಟೆಗಳವರೆಗೆ ಕೆಲಸದ ಅವಧಿ ಹೆಚ್ಚಿಸಲು ಅನುಮತಿಸಲಾಗಿದೆ. ಒಂದು ವೇಳೆ ಉದ್ಯೋಗಿಯಿಂದ 12 ಗಂಟೆಗಳವರೆಗೆ ಕೆಲಸ ತೆಗೆದುಕೊಂಡರೆ, ಪ್ರಸ್ತುತ ಇರುವ 5 ದಿನಗಳ ಕೆಲಸದ ಅವಧಿಯನ್ನು 4 ದಿನಗಳಿಗೆ ಕಡಿತ ಮಾಡಬೇಕಾಗುತ್ತದೆ. ಅಂದರೆ ಕಂಪೆನಿಯು ಕಾರ್ಮಿಕರಿಂದ 12 ಗಂಟೆಗಳ ಕಾಲ ಕೆಲಸ ಮಾಡಿಸಿದರೆ, ಅವರಿಗೆ ವಾರದಲ್ಲಿ ಮೂರು ದಿನಗಳ ಕಾಲ ರಜೆ ನೀಡಬೇಕು ಎಂದು ತಿಳಿಸಲಾಗಿದೆ. ಒಂದು ವಾರದಲ್ಲಿ ಕನಿಷ್ಠ 48 ಗಂಟೆ ಕೆಲಸ ಮಾಡಿದರೆ ಮೂರು ದಿನಗಳ ಕಾಲ ರಜೆ ನೀಡಬೇಕೆಂದು ಹೊಸ ಸಂಹಿತೆಯಲ್ಲಿ ಆದೇಶಿಸಲಾಗಿದೆ.

2 ದಿನಗಳಲ್ಲಿ ಅಂತಿಮ ಸೆಟ್ಲ್​ಮೆಂಟ್:
ಉದ್ಯೋಗಿಯು ಕಂಪೆನಿಯಿಂದ ಹೊರನಡೆದರೆ ಅಥವಾ ರಾಜೀನಾಮೆ ನೀಡಿದರೆ 2 ದಿನಗಳಲ್ಲಿ ಆತನ ಎಲ್ಲಾ ವೇತನವನ್ನು ನೀಡಬೇಕೆಂದು ಹೊಸ ನೀತಿಯಲ್ಲಿ ತಿಳಿಸಲಾಗಿದೆ. ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ, ಕಂಪೆನಿಯಿಂದ ಕೆಲಸ ಬಿಟ್ಟಿರುವ ಕಾರ್ಮಿಕನಿಗೆ 45 ದಿನದಿಂದ 2 ತಿಂಗಳ ಒಳಗೆ ಫೈನಲ್ ಸೆಟ್ಲ್​ಮೆಂಟ್ ಮಾಡಲಾಗುತ್ತದೆ. ಆದರೆ, ಹೊಸ ವೇತನ ಸಂಹಿತೆಯ ಪ್ರಕಾರ ಉದ್ಯೋಗಿಯು ಕೆಲಸ ಬಿಟ್ಟ ಎರಡು ದಿನದೊಳಗೆ ಎಲ್ಲಾ ಬಾಕಿ ವೇತನ ಹಾಗೂ ಇತರೆ ಸಂಬಳಗಳನ್ನು ನೀಡಬೇಕೆಂದು ತಿಳಿಸಿದೆ.

ಈಗಾಗಲೇ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ ಸರ್ಕಾರ ರೂಪಿಸಿರುವ ಹೊಸ ವೇತನ ಸಂಹಿತೆಯ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಶೀಘ್ರದಲ್ಲೇ ಹೊಸ ನಿಯಮವು ಎಲ್ಲಾ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ಬರಲಿದೆ.