
ಕೇಂದ್ರ ಸರ್ಕಾರ ಬಹಳ ಮಹತ್ವಾಕಾಂಕ್ಷೆಯಿಂದ ಮತ್ತು ಮಹದ್ಗುರಿಯೊಂದಿಗೆ ಆರಂಭಿಸಿದ ಯೋಜನೆಗಳಲ್ಲಿ ಪಿಎಂ ಉಜ್ವಲ ಸ್ಕೀಮ್ (PM Ujjwala Yojana) ಒಂದು. ಮನೆಯಲ್ಲಿ ಶುದ್ಧ ಪರಿಸರ, ಸ್ವಚ್ಛ ಇಂಧನ ಮತ್ತು ದೇಶದಲ್ಲಿ ಲಿಂಗ ಸಮಾನತೆ ಈ ಮೂರೂ ಉದ್ದೇಶಗಳನ್ನು ಈಡೇರಿಸಲು ಈ ಯೋಜನೆ ಸಹಕಾರಿಯಾಗಿದೆ 2016ರಲ್ಲಿ ಆರಂಭವಾದ ಪಿಎಂ ಉಜ್ವಲ ಯೋಜನೆ ದೇಶಾದ್ಯಂತ ಬಡ ವರ್ಗದ ಜನರಿಗೆ ಸಬ್ಸಿಡಿ ದರದಲ್ಲಿ ಎಲ್ಪಿಜಿ ಗ್ಯಾಸ್ ಕೊಡಲಾಗುತ್ತಿದೆ. ಯೋಜನೆ ಆರಂಭಗೊಂಡ ಏಳು ವರ್ಷದಲ್ಲಿ ಇದರಡಿ ಎಲ್ಪಿಜಿ (LPG) ಕನೆಕ್ಷನ್ ಪಡೆದ ಮನೆಗಳ ಸಂಖ್ಯೆ 10 ಕೋಟಿ ಮೈಲಿಗಲ್ಲು ಮುಟ್ಟಿದೆ.
ಪಿಎಂ ಉಜ್ವಲ ಯೋಜನೆಯಿಂದಾಗಿ ದೇಶಾದ್ಯಂತ ಶೇ. 95ರಷ್ಟು ಮನೆಗಳಿಗೆ ಎಲ್ಪಿಜಿ ಸಂಪರ್ಕ ಸಿಕ್ಕಂತಾಗಿದೆ. ಮತ್ತೊಂದು ಮಹತ್ವದ ಸಂಗತಿ ಎಂದರೆ, ಗ್ರಾಮೀಣ ಭಾಗದ ಮನೆಗಳಲ್ಲಿ ಸೌದೆ ಒಲೆ ಬದಲು ಎಲ್ಪಿಜಿಯನ್ನು ಪ್ರಮುಖ ಇಂಧನವಾಗಿ ಬಳಸುತ್ತಿರುವವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಲು ಪಿಎಂ ಉಜ್ವಲ ಯೋಜನೆ ಕಾರಣವಾಗಿದೆ.
ಇದನ್ನೂ ಓದಿ: Forex Reserves: ಮತ್ತೆ 700 ಬಿಲಿಯನ್ ಡಾಲರ್ ಗಡಿದಾಟಿದ ಭಾರತದ ಫಾರೆಕ್ಸ್ ರಿಸರ್ವ್ಸ್
ಭಾರತ, ಚೀನಾ, ಇಂಡೋನೇಷ್ಯಾ, ನೈಜೀರಿಯಾ ಮೊದಲಾದ ಕೆಳ ಮತ್ತು ಮಧ್ಯಮ ಆದಾಯ ದೇಶಗಳಲ್ಲಿ ಮನೆಗಳಲ್ಲಿ ವಾಯುಮಾಲಿನ್ಯ ಹೆಚ್ಚಿದೆ. ಕಲ್ಲಿದ್ದಲು, ಕಟ್ಟಿಗೆಯನ್ನು ಅಡುಗೆಗೆ ಬಳಸಲಾಗುವುದರಿಂದ ಮನೆಯೊಳಗೆ ಗಾಳಿಯ ಗುಣಮಟ್ಟ ಗಣನೀಯವಾಗಿ ಕಡಿಮೆ ಆಗುತ್ತದೆ. ಶ್ವಾಸಕೋಶ ಸಂಬಂಧಿತ ಸಂಸ್ಯೆಗಳು, ಹೃದಯ ಕಾಯಿಲೆಗಳು, ಕಣ್ಣಿನ ಸಮಸ್ಯೆ, ಸ್ಟ್ರೋಕ್ ಇತ್ಯಾದಿ ಆರೋಗ್ಯ ಸಮಸ್ಯೆಗಳು ಕಾಣಿಸುತ್ತವೆ.
ಅಡುಗೆಗೆ ಎಲ್ಪಿಜಿ ಬಳಸುವುದರಿಂದ ಮನೆಯೊಳಗೆ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಂದು, ಶುದ್ಧ ಗಾಳಿ ಇರುವ ಪರಿಸರ ನಿರ್ಮಾಣವಾಗುತ್ತದೆ ಎಂಬುದು ಅನೇಕ ಸಂಶೋಧನೆಗಳಿಂದ ದೃಢಪಟ್ಟಿದೆ.
ಇದನ್ನೂ ಓದಿ: ಒತ್ತಡ ಹಾಕಿದರೆ ಭಾರತ ಬಗ್ಗಲ್ಲ: ಪಾಶ್ಚಿಮಾತ್ಯ ದೇಶಗಳಿಗೆ ಸಚಿವ ಪೀಯೂಶ್ ಗೋಯಲ್ ಪ್ರಬಲ ಸಂದೇಶ
ಸೌದೆ ಒಲೆಯಿಂದ ಅಡುಗೆ ಮಾಡಿದಾಗ ಪಿಎಂ 2.5 ಎನ್ನುವ ಮಾಲಿನ್ಯಕಾರಕ ವಸ್ತು ಗಾಳಿಗೆ ಸೇರುತ್ತದೆ. ಭಾರತದ ವಾತಾವರಣದಲ್ಲಿ ಇರುವ ಪಿಎಂ 2.5 ಕಣಗಳಲ್ಲಿ ಶೇ. 30ರಷ್ಟವನ್ನು ದಯಪಾಲಿಸಿರುವುದೇ ಈ ಸೌದೆ ಒಲೆಗಳು ಎಂದೆನ್ನಲಾಗಿದೆ. ಈ ಪಿಎಂ 2.5 ಪಾರ್ಟಿಕಲ್ಗಳು ಆರೋಗ್ಯಕ್ಕೆ ಬಹಳ ಹಾನಿ ತರುತ್ತವೆ.
ಎಲ್ಲಾ ಮನೆಗಳಲ್ಲೂ ಎಲ್ಪಿಜಿ ಬಳಸಿ ಅಡುಗೆ ಮಾಡಿದರೆ ಪಿಎಂ 2.5 ಕಣಗಳು ವಾತಾವರಣ ಸೇರುವುದು ಗಣನೀಯವಾಗಿ ಕಡಿಮೆ ಆಗುತ್ತದೆ. ಇದರಿಂದ ಗಾಳಿಯ ಶುದ್ಧತೆ ಹೆಚ್ಚುತ್ತದೆ. ಅನಾರೋಗ್ಯವಾಗುವ ಸಂಭವನೀಯತೆ ಕಡಿಮೆ ಆಗುತ್ತದೆ. 2030ರೊಳಗೆ ಸ್ವಚ್ಛ ಇಂಧನದ ಅವಕಾಶ ಎಲ್ಲರನ್ನೂ ತಲುಪಬೇಕೆನ್ನುವ ವಿಶ್ವ ಸಂಸ್ಥೆಯ ಗುರಿ ಈಡೇರಲೂ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪಿಎಂ ಉಜ್ವಲ ಯೋಜನೆ ಪ್ರಮುಖ ಎನಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ