Chinese Frauds: ಒಂದು ವರ್ಷದಲ್ಲಿ 15,000 ಭಾರತೀಯರಿಗೆ ಮಂಕುಬೂದಿ ಎರಚಿ ನೂರಾರು ಕೋಟಿ ರೂ ಲಪಟಾಯಿಸಿದ ಚೀನೀ ಏಜೆಂಟ್ಸ್

|

Updated on: Jul 24, 2023 | 5:54 PM

700 Crore Chinese Fraud In India: ಹೂಡಿಕೆಗಳ ಮೇಲೆ ಒಳ್ಳೆಯ ರಿಟರ್ನ್ ಕೊಡುತ್ತೇವೆಂದು ಪುಸಲಾಯಿಸಿ ಜನರಿಂದ ನೂರಾರು ಕೋಟಿ ರೂ ವಂಚಿಸಿದ ಚೀನೀ ಜಾಲವೊಂದನ್ನು ಹೈದರಾಬಾದ್ ಪೊಲೀಸರು ಪತ್ತೆಹಚ್ಚಿದ್ದಾರೆ.

Chinese Frauds: ಒಂದು ವರ್ಷದಲ್ಲಿ 15,000 ಭಾರತೀಯರಿಗೆ ಮಂಕುಬೂದಿ ಎರಚಿ ನೂರಾರು ಕೋಟಿ ರೂ ಲಪಟಾಯಿಸಿದ ಚೀನೀ ಏಜೆಂಟ್ಸ್
ಚೀನಾ ವಂಚಕರು
Follow us on

ಹೈದರಾಬಾದ್, ಜುಲೈ 24: ಚೀನೀ ಮೂಲದ ಲೋನ್ ಆ್ಯಪ್​ಗಳ ದಂಧೆ (Chinese Loan Apps) ಬಗ್ಗೆ ಕೇಳಿರಬಹುದು. ಚೀನಾದ ಗ್ಯಾಂಗ್​ಗಳು ಭಾರತದ ಹಣಕಾಸು ವ್ಯವಸ್ಥೆಯ ಮೇಲೆ ಮಾರಕ ದಾಳಿ ನಡೆಸಲು ಯತ್ನಿಸುತ್ತಿವೆ ಎಂಬಂತಹ ಸುದ್ದಿಗಳು ಕೇಳಿಬರುತ್ತಿವೆ. ಇದಕ್ಕೆ ಪುಷ್ಟಿಕೊಡುವಂತಹ, ಚೀನೀ ಸಂಬಂಧಿತ ವಂಚನೆ ಪ್ರಕರಣಗಳು ದೇಶಾದ್ಯಂತ ಹಲವು ಬೆಳಕಿಗೆ ಬಂದಿವೆ. ಈಗ ಚೀನೀ ಏಜೆಂಟ್​ಗಳು ಭಾಗಿಯಾಗಿರುವ ಬೃಹತ್ ವಂಚನೆಯ ಜಾಲವೊಂದನ್ನು ಹೈದರಾಬಾದ್ ಪೊಲೀಸರು ಪತ್ತೆ ಮಾಡಿದ್ದಾರೆ. ಒಂದೇ ವರ್ಷದಲ್ಲಿ 15,000ಕ್ಕೂ ಹೆಚ್ಚು ಮಂದಿ ಜನರು 700ಕೋಟಿಗೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ. ಒಬ್ಬ ಟೆಕ್ಕಿಯಂತೂ 82 ಲಕ್ಷ ರೂ ಕಳೆದುಕೊಂಡಿದ್ದಿದೆ. ಕ್ರಿಪ್ಟೊಕರೆನ್ಸಿ, ಉಗ್ರರ ಜಾಲಗಳನ್ನು ಬಳಸಿ ಹಣ ಲಪಟಾಯಿಸಿದ ಮಾಸ್ಟರ್​ಮೈಂಡ್​ಗಳು ಚೀನೀ ರಾಷ್ಟ್ರೀಯರೇ ಆಗಿದ್ದಾರೆ. ಪೊಲೀಸರು ಹಲವಾರು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮಾಸ್ಟರ್​ಮೈಂಡ್ ಎನಿಸಿದ ಚೀನೀ ಏಜೆಂಟ್​ಗಳನ್ನು ಪತ್ತೆ ಮಾಡುವ ಪ್ರಯತ್ನದಲ್ಲಿ ಪೊಲೀಸರು ಇದ್ದಾರೆ.

‘ಭಾರತೀಯರನ್ನು ವಂಚಿಸಿ ಪಡೆದ ಹಣವು ದುಬೈಗೆ ಹೋಗಿ ಅಲ್ಲಿಂದ ಚೀನಾಗೆ ವರ್ಗಾವಣೆ ಆಗಿದೆ. ಕೆಲ ಹಣವು ಲೆಬನಾನ್​ನ ಉಗ್ರ ಸಂಘಟನೆ ಹೆಜ್ಬೋಲ್ಲಾದ ಖಾತೆಗೆ ಕಳುಹಿಸಲಾಗಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ನಾವು ಅಲರ್ಟ್ ಮಾಡಿದ್ದೇವೆ. ಕೇಂದ್ರ ಗೃಹ ಸಚಿವಾಲಯದ ಸೈಬರ್ ಕ್ರೈಮ್ ಘಟಕಕ್ಕೆ ಎಲ್ಲಾ ಮಾಹಿತಿ ಕೊಟ್ಟಿದ್ದೇವೆ’ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಸಿ.ವಿ. ಆನಂದ್ ಹೇಳಿದರೆಂದು ಎನ್​ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: Loan Write Offs: 2022-23ರಲ್ಲಿ 2 ಲಕ್ಷಕೋಟಿ ರೂ ಕೆಟ್ಟ ಸಾಲ ಹೊರಗಿಟ್ಟ ಬ್ಯಾಂಕುಗಳು; 3 ವರ್ಷದಲ್ಲಿ ಎನ್​ಪಿಎ ವಸೂಲಾಗಿರುವುದೆಷ್ಟು?

ಹೈದರಾಬಾದ್ ಪೊಲೀಸರು ಒಟ್ಟು 9 ಮಂದಿಯನ್ನು ಬಂಧಿಸಿದ್ದಾರೆ. ಇದರಲ್ಲಿ ಹೈದರಾಬಾದ್​ನಿಂದ ನಾಲ್ವರು, ಮುಂಬೈನಿಂದ ಮೂವರು ಮತ್ತು ಅಹ್ಮದಾಬಾದ್​ನಿಂದ ಇಬ್ಬರು ಸೇರಿದ್ದಾರೆ. ಇನ್ನೂ ಆರು ಮಂದಿ ಆರೋಪಿಗಳನ್ನು ಪೊಲೀಸರು ಹುಡುಕುತ್ತಿದ್ದಾರೆ.

ಅಮಾಯಕರನ್ನು ಏಮಾರಿಸುತ್ತಿದ್ದ ಪರಿ ನೋಡಿ…

ಪಾರ್ಟ್ ಟೈಮ್ ಕೆಲಸ ಹಾಗೂ ಹೂಡಿಕೆಯ ಆಫರ್ ಮೂಲಕ ಅಮಾಯಕ ಜನರನ್ನು ಆಕರ್ಷಿಸಲಾಗುತ್ತಿತ್ತೆನ್ನಲಾಗಿದೆ. 2023ರಲ್ಲಿ ಹೈದರಾಬಾದ್​ನ ಸೈಬರ್ ಕ್ರೈಮ್ ಬ್ರ್ಯಾಂಚ್​ಗೆ ವ್ಯಕ್ತಿಯೊಬ್ಬರು ದೂರು ನೀಡಿ ತನಗೆ 28 ಲಕ್ಷ ರೂ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಅದರ ಬೆನ್ನತ್ತಿದ ಹೈದರಾಬಾದ್ ಪೊಲೀಸರಿಗೆ ಅಚ್ಚರಿಯ ಮೇಲೆ ಅಚ್ಚರಿಯ ಸಂಗತಿಗಳು ಗೋಚರಿಸಿವೆ.

ವಂಚಕರು ಬಹಳ ಚಾಣಾಕ್ಷತೆಯಿಂದ ಜನರನ್ನು ಏಮಾರಿಸುತ್ತಿರುತ್ತಾರೆ. ವಾಟ್ಸಾಪ್, ಟೆಲಿಗ್ರಾಮ್​ಗಳಲ್ಲಿ ಅಮಾಯಕರನ್ನು ಸಂಪರ್ಕಿಸಲಾಗುತ್ತಿತ್ತು. ಮೊದಲಿಗೆ ಯೂಟ್ಯೂಬ್ ವಿಡಿಯೋಗಳನ್ನು ಲೈಕ್ ಮಾಡುವುದು, ಗೂಗಲ್ ರಿವ್ಯೂ ಬರೆಯುವುದು ಇತ್ಯಾದಿ ಸರಳ ಕೆಲಸಗಳನ್ನು ಮಾಡಲು ತಿಳಿಸಲಾಗುತ್ತಿತ್ತು. ಅದಕ್ಕೆ ತಕ್ಕ ಸಂಭಾವನೆಗಳನ್ನೂ ಕೊಡಲಾಗುತ್ತಿತ್ತು.

ಇದನ್ನೂ ಓದಿ: Chinese Apps: ಬೆಂಗಳೂರಿನಲ್ಲಿ ದಾಖಲಾದ 25 ಎಫ್​ಐಆರ್​ಗಳ ಜಾಡು ಹಿಡಿದ ಇಡಿ; ಚೀನೀ ಜಾಲದ ಕರ್ಮಕಾಂಡ ಬಯಲು

ಹಾಗೆಯೇ, ಹೂಡಿಕೆಗೂ ಪುಸಲಾಯಿಸಲಾಗುತ್ತಿತ್ತು. ಮೊದಲಿಗೆ 5,000 ರೂನಷ್ಟು ಕಡಿಮೆ ಮೊತ್ತದ ಹೂಡಿಕೆ ಮಾಡಲು ತಿಳಿಸಲಾಗುತ್ತಿತ್ತು. ಇವರು ಹೇಳಿದ ಕೆಲಸಗಳನ್ನು ಮಾಡಿದರೆ ಹೂಡಿಕೆಯ ಡಬಲ್ ರಿಟರ್ನ್ ಕೊಡಲಾಗುತ್ತಿತ್ತು. ನಂತರ ಹೆಚ್ಚಿನ ಮೊತ್ತದ ಹೂಡಿಕೆ ಮಾಡುವಂತೆ ಪ್ರೇರೇಪಿಸಲಾಗುತ್ತಿತ್ತು.

ವಂಚಕರು ನಕಲಿ ವಿಂಡೋ ಮೂಲಕ ಹೂಡಿಕೆದಾರರು ಗಳಿಸಿದ ಹಣದ ಲೆಕ್ಕ ತೋರಿಸುತ್ತಿದ್ದರು. ಇವರು ಹೇಳಿದ ಕೆಲಸಗಳು ಪೂರ್ಣಗೊಳ್ಳುವವರೆಗೂ ಆ ಹಣವನ್ನು ಹಿಂಪಡೆಯಲು ಅನುಮತಿಸುತ್ತಿರಲಿಲ್ಲ. ಆ ಎಲ್ಲಾ ಕೆಲಸ ಮುಗಿಯುತ್ತಿದ್ದಂತೆಯೇ ಆಟ ಮುಕ್ತಾಯ ಆಗುತ್ತಿತ್ತು. ಹೂಡಿಕೆದಾರರು ಲಕ್ಷಾಂತರ ರೂ ಕಳೆದುಕೊಂಡಿರುತ್ತಿದ್ದರು. ಹಲವು ಮಂದಿ ತಮ್ಮ ಶಕ್ತ್ಯಾನುಸಾರ ಈ ವಂಚಕರಲ್ಲಿ ಹೂಡಿಕೆ ಮಾಡಿದ್ದರು.

ಶೆಲ್ ಕಂಪನಿಗಳ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್​ಗಳು

ವಂಚಕರು ಮೊದಲಿಗೆ ಹಲವು ಶೇಲ್ ಕಂಪನಿಗಳನ್ನು ಸ್ಥಾಪಿಸಿ ಅವುಗಳ ಹೆಸರಿನಲ್ಲಿ ಭಾರತದ ವಿವಿಧ ಬ್ಯಾಂಕುಗಳಲ್ಲಿ 114 ಅಕೌಂಟ್​ಗಳನ್ನು ತೆರೆದಿರುವುದನ್ನು ಹೈದರಾಬಾದ್ ಪೊಲೀಸರು ಪತ್ತೆಹಚ್ಚಿದ್ದಾರೆ. ಭಾರತದ ಮೊಬೈಲ್ ನಂಬರ್​​ಗಳನ್ನು ಬಳಸಿ ಈ ಅಕೌಂಟ್ ತೆರೆಯಲಾಗಿದೆ. ಹೈದರಾಬಾದ್​ನಲ್ಲಿ ರಾಧಿಕಾ ಮಾರ್ಕೆಟಿಂಗ್ ಎಂಬ ಕಂಪನಿಯೂ ಇಂಥದ್ದೊಂದು ಶೆಲ್ ಕಂಪನಿ. ಇದಕ್ಕೆ ಜೋಡಿಸಲಾದ ಮೊಬೈಲ್ ನಂಬರ್ ಮುನಾವರ್ ಎಂಬ ವ್ಯಕ್ತಿಯದ್ದಾಗಿತ್ತು. ಪೊಲೀಸರು ಮುನಾವರ್​ನನ್ನು ಟ್ರ್ಯಾಕ್ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಾರೆ.

ಇದನ್ನೂ ಓದಿ: Chinese App Ban: ಚೀನಾ ಮೂಲದ 200ಕ್ಕೂ ಹೆಚ್ಚು ಲೋನ್ ಮತ್ತು ಬೆಟ್ಟಿಂಗ್ ಆ್ಯಪ್​ಗಳ ನಿಷೇಧ; ಭಾರತ ತುರ್ತು ಕ್ರಮ

ಈ ಮುನಾವರ್ ತನ್ನ ಮೂವರು ಸಹಚರರ ಜೊತೆ ಲಕ್ನೋಗೆ ಹೋಗಿ 33 ಶೆಲ್ ಕಂಪನಿಗಳ 65 ಅಕೌಂಟ್​ಗಳನ್ನು ತೆರೆದಿರುತ್ತಾನೆ. ಒಂದೊಂದು ಖಾತೆಗೂ ಇವರಿಗೆ 2 ಲಕ್ಷ ರೂ ಕಮಿಷನ್ ಸಿಗುತ್ತದೆ. ಪೊಲೀಸ್ ವಿಚಾರಣೆ ವೇಳೆ ಇವರು ಇತರ ಮೂವರ ಹೆಸರು ತಿಳಿಸುತ್ತಾರೆ. ಪೊಲೀಸರು ಆ ಮೂವರನ್ನು ಶೋಧಿಸುತ್ತಿದ್ದಾರೆ. ಹಾಗೆಯೇ, ತನಿಖೆ ವೇಳೆ ಕೆವಿನ್ ಜುನ್, ಲೀ ಲೂ ಲ್ಯಾಂಗ್​ಝೌ ಮತ್ತು ಶಶಾ ಎಂಬ ಚೀನೀ ವ್ಯಕ್ತಿಗಳು ಮಾಸ್ಟರ್​ಮೈಂಡ್ ಎಂಬುದು ಪೊಲೀಸರಿಗೆ ಗೊತ್ತಾಗುತ್ತದೆ.

ವಂಚಿಸಿ ಗಳಿಸಿದ ಹಣದಲ್ಲಿ ಕೆಲ ಭಾಗವನ್ನು ದುಬೈಗೆ ಕಳುಹಿಸಲಾಗಿತ್ತು. ಅಲ್ಲಿ ಕ್ರಿಪ್ಟೋಗೆ ಪರಿವರ್ತಿಸಿ ಹೆಜ್ಬೋಲ್ಲಾದ ಖಾತೆಗೆ ಹಾಕಲಾಗಿತ್ತು. ಹಾಗೆಯೇ, ಚೀನಾಗೂ ಹೆಚ್ಚಿನ ಪಾಲಿನ ಹಣ ವರ್ಗಾವಣೆ ಆಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Mon, 24 July 23