Chinese App Ban: ಚೀನಾ ಮೂಲದ 200ಕ್ಕೂ ಹೆಚ್ಚು ಲೋನ್ ಮತ್ತು ಬೆಟ್ಟಿಂಗ್ ಆ್ಯಪ್ಗಳ ನಿಷೇಧ; ಭಾರತ ತುರ್ತು ಕ್ರಮ
China Linked Loan Apps and Betting Apps Getting Banned: ಗೃಹ ಇಲಾಖೆ ಸೂಚನೆ ಮೇರೆಗೆ ಚೀನಾ ಮೂಲದ 94 ಲೋನ್ ಆ್ಯಪ್ಗಳು, 138 ಬೆಟ್ಟಿಂಗ್ ಆ್ಯಪ್ಗಳನ್ನು ನಿಷೇಧಿಸಲು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಕ್ರಮ ಜರುಗಿಸುತ್ತಿದೆ.
ನವದೆಹಲಿ: ಈ ಹಿಂದೆ ಟಿಕ್ ಟಾಕ್ ಸೇರಿದಂತೆ ಹಲವು ಚೀನೀ ಆ್ಯಪ್ಗಳನ್ನು ನಿಷೇಧಿಸಿದ್ದ ಭಾರತ ಸರ್ಕಾರ ಇದೀಗ ಚೀನಾ ಮೂಲದ 200ಕ್ಕೂ ಹೆಚ್ಚು ಲೋನ್ ಮತ್ತು ಬೆಟ್ಟಿಂಗ್ ಆ್ಯಪ್ಗಳನ್ನು ನಿಷೇಧಿಸಲು ತುರ್ತು ಕ್ರಮ ಕೈಗೊಂಡಿದೆ. ಇದರಲ್ಲಿ 138 ಬೆಟ್ಟಿಂಗ್ ಆ್ಯಪ್ಗಳು ಮತ್ತು 94 ಲೋನ್ ಆ್ಯಪ್ಗಳು ಸೇರಿವೆ. ಈ ಆ್ಯಪ್ಗಳನ್ನು ತಡೆಹಿಡಿಯಲು ಗೃಹ ಸಚಿವಾಲಯದಿಂದ ಈ ವಾರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯಕ್ಕೆ ಸೂಚನೆ ಹೋಗಿದ್ದು, ಕ್ರಮ ಜರುಗಿಸಲಾಗುತ್ತಿದೆ ಎಂದು ವರದಿಯೊಂದು ಹೇಳಿದೆ.
ಆರು ತಿಂಗಳ ಹಿಂದೆ ಗೃಹ ಇಲಾಖೆಯು 28 ಚೀನೀ ಲೋನ್ ಆ್ಯಪ್ಗಳ ಬಗ್ಗೆ ಪರಿಶೀಲನೆ ನಡೆಸಲು ಆರಂಭಿಸಿತ್ತು. ಆ ಸಂದರ್ಭದಲ್ಲಿ ಅಂಥ 94 ಆ್ಯಪ್ಗಳು ಬೇರೆ ಬೇರೆ ಆನ್ಲೈನ್ ತಾಣಗಳಲ್ಲಿ ಲಭ್ಯ ಇದ್ದುದು ಗಮನಕ್ಕೆ ಬಂದಿದೆ. ಈ ಆ್ಯಪ್ಗಳು ಜನರ ಗಮನ ಸೆಳೆದು ಭಾರೀ ಪ್ರಮಾಣದಲ್ಲಿ ಹಣಕಾಸು ವಂಚನೆ ಎಸಗುತ್ತಿವುದು ಗೊತ್ತಾಗಿದೆ. ಅಲ್ಲದೇ, ಈ ಆ್ಯಪ್ಗಳ ಮೂಲಕ ಗೂಢಚಾರಿಕೆ, ಪಿತೂರಿ ಇತ್ಯಾದಿ ಪಾತಕಗಳನ್ನು ಎಸಗುವುದರ ಜೊತೆಗೆ ಜನರ ವೈಯಕ್ತಿಕ ಮಾಹಿತಿಯನ್ನು ಕದ್ದು ಭದ್ರತಾ ಅಪಾಯ ಒಡ್ಡುವಂತೆ ತೋರಿದೆ. ಹೀಗಾಗಿ, ಈ ಅಪ್ಲಿಕೇಶನ್ಗಳನ್ನು ನಿಷೇಧಿಸಲು ಸರ್ಕಾರ ತ್ವರಿತ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ತನಗೆ ತಿಳಿಸಿದ್ದಾಗಿ ನ್ಯೂಸ್18 ವಾಹಿನಿ ತನ್ನ ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: NIA: ಹೈದರಾಬಾದ್ನಲ್ಲಿ ಎನ್ಐಎಯಿಂದ ಮೂವರು ಶಂಕಿತ ಉಗ್ರರ ಬಂಧನ: ಹ್ಯಾಂಡ್ ಗ್ರೆನೇಡ್ ವಶಕ್ಕೆ
ಸಾಲದ ಆ್ಯಪ್ಗಳಿಂದ ಬಹಳಷ್ಟು ವಂಚನೆಯಾಗಿರುವ ಹಲವು ಪ್ರಕರಣಗಳು ದೇಶಾದ್ಯಂತ ದಾಖಲಾಗಿವೆ. ಸುಲಭವಾಗಿ ಸಾಲ ಕೊಡುತ್ತೇವೆಂದು ಹೇಳಿ ಸುಳ್ಳು ಸಾಲಗಳನ್ನು ನೀಡಿ ವಂಚಿಸಿ, ನಂತರ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಸಂಗತಿ ಬಹಳ ನಡೆದಿವೆ. ಹಾಗೆಯೇ, ಸಾಲ ನೀಡಿದ ಹಣಕ್ಕೆ ಸಾವಿರಾರು ರೂ ಪ್ರತಿಶತದಷ್ಟು ಬಡ್ಡಿ ವಿಧಿಸಿ, ನೂರಾರು ಪಟ್ಟು ಹೆಚ್ಚು ಹಣ ವಸೂಲಿಗೆ ನಿಂತ ಘಟನೆಗಳು ಬೆಳಕಿಗೆ ಬಂದಿವೆ. ಉತ್ತರ ಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ ಮುಂತಾದ ರಾಜ್ಯಗಳು ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ಗಮನಕ್ಕೆ ತಂದು ಎಚ್ಚರಿಸಿದ್ದವು. ಈ ಆ್ಯಪ್ಗಳ ಹಿಂದೆ ಚೀನೀ ನಾಗರಿಕರು ಇದ್ದು, ಭಾರತದ ಸ್ಥಳೀಯ ಕೆಲ ಜನರ ಸಹಾಯದಿಂದ ಈ ದಂಧೆ ನಡೆಸುತ್ತಿರುವುದು ತಿಳಿದುಬಂದಿದೆ.
ಭಾರತದಲ್ಲಿ ಸಾಲಕ್ಕೆ ಇರುವ ಬೇಡಿಕೆಯನ್ನು ಚೀನಾ ಮೂಲದ ಆ್ಯಪ್ಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ವಿವಿಧ ಪ್ರಕರಣಗಳಿಂದ ಸ್ಪಷ್ಟವಾಗಿ ಗೋಚರವಾಗಿದೆ. ಭಾರತದ ಸಾರ್ವಭೌಮತೆಗೆ ಅಪಾಯ ಉಂಟು ಮಾಡುವ ಪ್ರಕರಣಗಳಿಗೆ ಸಂಬಂಧಿಸಿದ ಐಟಿ ಕಾಯ್ದೆಯ ಸೆಕ್ಷನ್ 69 ಅಡಿಯಲ್ಲಿ ಈ ಆ್ಯಪ್ಗಳ ವಿರುದ್ಧ ಸರ್ಕಾರ ಕ್ರಮ ಜರುಗಿಸುತ್ತಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಉಚಿತ ಸೀರೆ, ಧೋತಿ ಪಡೆಯಲು ನೂಕುನುಗ್ಗಲು; ಕಾಲ್ತುಳಿತದಲ್ಲಿ ನಾಲ್ವರು ಮಹಿಳೆಯರು ಸಾವು
ಇನ್ನು ಬೆಟ್ಟಿಂಗ್ ಆ್ಯಪ್ಗಳು ಜನರ ದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಂಡು ಹಣ ಕೊಳ್ಳೆ ಹೊಡೆಯುತ್ತಿವೆ. ಈ ಬಹುತೇಕ ಬೆಟ್ಟಿಂಗ್ ಅಪ್ಲಿಕೇಶನ್ಗಳು ಪ್ಲೇಸ್ಟೋರ್ ಇತ್ಯಾದಿ ಅಧಿಕೃತ ಆ್ಯಪ್ ಸ್ಟೋರ್ಗಳಲ್ಲಿ ಲಭ್ಯ ಇಲ್ಲವಾದರೂ ಬೇರೆ ಸ್ವತಂತ್ರ ವೆಬ್ಸೈಟ್ಗಳಲ್ಲಿ ಲಿಂಕ್ಗಳ ಮೂಲಕ ಜನರಿಗೆ ಡೌನ್ಲೋಡ್ ಮಾಡಿಕೊಳ್ಳುವ ಅವಕಾಶ ಇದೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಜಾಹೀರಾತು ರೂಪದಲ್ಲಿ ಇವುಗಳ ಲಿಂಕ್ ಕಾಣಿಸುತ್ತವೆ.
ಇದೇ ವೇಳೆ, ಆನ್ಲೈನ್ ಜಾಹೀರಾತು ಒದಗಿಸುವ ಮಧ್ಯವರ್ತಿಗಳಿಗೆ ಈ ಚೀನೀ ಲೋನ್ ಆ್ಯಪ್ ಮತ್ತು ಬೆಟ್ಟಿಂಗ್ ಆ್ಯಪ್ಗಳಿಗೆ ಅವಕಾಶ ನೀಡದಿರಿ ಎಂದು ಸರ್ಕಾರ ಸೂಚನೆ ನೀಡಿದೆ. ಬೆಟ್ಟಿಂಗ್ನಂತಹ ಜೂಜುಗಳ ಜಾಹೀರಾತುಗಳನ್ನು ಭಾರತದಲ್ಲಿ ನೀಡಬಾರದೆಂದು ಕಟ್ಟುನಿಟ್ಟಾಗಿ ತಿಳಿಸಲಾಗಿದೆ ಎಂದು ವರದಿ ಹೇಳುತ್ತಿದೆ.
Published On - 12:24 pm, Sun, 5 February 23