ತಮಿಳುನಾಡಿನಲ್ಲಿ ಉಚಿತ ಸೀರೆ, ಧೋತಿ ಪಡೆಯಲು ನೂಕುನುಗ್ಗಲು; ಕಾಲ್ತುಳಿತದಲ್ಲಿ ನಾಲ್ವರು ಮಹಿಳೆಯರು ಸಾವು
ತಮಿಳು ಜನರು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಸುವ ತೈಪೂಸಂ ಆಚರಣೆಯ ಹಿನ್ನೆಲೆಯಲ್ಲಿ ಸ್ಥಳೀಯರೊಬ್ಬರು ಬಡವರಿಗೆ ಉಚಿತ ಸೀರೆ ಮತ್ತು ಪಂಚೆ ವಿತರಿಸುವ ಕಾರ್ಯಕ್ರಮವನ್ನು ಕೈಗೊಂಡಿದ್ದರು. ಈ ವೇಳೆ ಕಾಲ್ತುಳಿತ ಉಂಟಾಗಿದೆ.
ಚೆನ್ನೈ: ತಮಿಳುನಾಡಿನ ತಿರುಪತ್ತೂರ್ ಜಿಲ್ಲೆಯಲ್ಲಿ ಇಂದು (ಶನಿವಾರ) ಸಂಭವಿಸಿದ ಕಾಲ್ತುಳಿತದಲ್ಲಿ (Tamil Nadu Stampede) ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಉಚಿತ ಸೀರೆ, ಪಂಚೆ ಮತ್ತು ಧೋತಿಗಳನ್ನು ತೆಗೆದುಕೊಳ್ಳಲು ಟೋಕನ್ ಪಡೆಯಲು ಜನರು ಸಾಲುಗಟ್ಟಿ ನಿಂತಿದ್ದರು. ಈ ವೇಳೆ ಆ ಸ್ಥಳದಲ್ಲಿ ನೂಕುನುಗ್ಗಲು ಉಂಟಾಯಿತು. ಆಗ ಕಾಲ್ತುಳಿತ ಉಂಟಾಗಿದ್ದು, ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ.
ತೈಪುಸಮಿನ್ ತಿರುಪ್ಪತ್ತೂರಿನ ವಾಣಿಯಂಬಾಡಿಯಲ್ಲಿ ವ್ಯಕ್ತಿಯೊಬ್ಬರು ಉಚಿತ ಬಟ್ಟೆಗಳನ್ನು ವಿತರಿಸುತ್ತಿದ್ದರು ಎಂದು ತಿರುಪತ್ತೂರ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ಕಾಲ್ತುಳಿತ ಉಂಟಾಗಿರುವ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಕ್ಷಣ ಆಗಮಿಸಿದರು. ಬಳಿಕ ಅಲ್ಲಿ ಸೇರಿದ್ದ ಜನರನ್ನು ಚದುರಿಸಲಾಯಿತು. ಈ ಘಟನೆ ಬಗ್ಗೆ ತಮಿಳುನಾಡು ಸರ್ಕಾರ ಆಘಾತ ವ್ಯಕ್ತಪಡಿಸಿದೆ. ಈ ಕುರಿತು ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಮಾಹಿತಿ ಪಡೆದಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿ ಮುಖ್ಯಮಂತ್ರಿ ಕಚೇರಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಗಾಯಾಳುಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ನೀಡಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: Chandrababu Naidu: ಮಾಜಿ ಸಿಎಂ ಚಂದ್ರಬಾಬು ನಾಯ್ಡು ರ್‍ಯಾಲಿ ವೇಳೆ ಕಾಲ್ತುಳಿತ: 8 ಜನರು ಸಾವು
ತಿರುಪತ್ತೂರು ಜಿಲ್ಲೆಯ ವಾಣಿಯಂಬಾಡಿಯಲ್ಲಿ ಕಾಲ್ತುಳಿತ ಘಟನೆ ನಡೆದಿದೆ. ತಮಿಳು ಜನರು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಸುವ ತೈಪೂಸಂ ಆಚರಣೆಯ ಹಿನ್ನೆಲೆಯಲ್ಲಿ ಸ್ಥಳೀಯ ದಾನಿಯೊಬ್ಬರು ಕೆಲವು ಬಡ ಮಹಿಳೆಯರಿಗೆ ಸೀರೆ ಮತ್ತು ಪುರುಷರಿಗೆ ಪಂಚೆ ವಿತರಿಸುವ ಕಾರ್ಯಕ್ರಮವನ್ನು ಕೈಗೊಂಡಿದ್ದರು. ಅವುಗಳ ವಿತರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಟೋಕನ್ ವಿತರಣೆ ಮಾಡಲಾಗುತ್ತಿತ್ತು. ಆ ಟೋಕನ್ ಪಡೆಯಲು ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ.
Tamil Nadu | Four women died in a stampede where many people had gathered to receive tokens for the collection of free ‘Veshtis’ and sarees being distributed by an individual on the occasion of Thaipusam in Tiruppattur’s Vaniyambadi today: Thirupathur Police officials
— ANI (@ANI) February 4, 2023
ಉಚಿತ ಬಟ್ಟೆಯ ಟೋಕನ್ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಆಗಮಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಸ್ಥಳೀಯರು ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಂದು, ಟೋಕನ್‌ಗಳನ್ನು ತೆಗೆದುಕೊಳ್ಳಲು ಮುಂದಾದರು. ಇದರಿಂದ ಕಾಲ್ತುಳಿತ ಉಂಟಾಯಿತು. ಈ ಘಟನೆಯಲ್ಲಿ ನಾಲ್ವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಇದನ್ನೂ ಓದಿ: Odisha Stampede: ಒಡಿಶಾದಲ್ಲಿ ಮಕರ ಮೇಳದಲ್ಲಿ ಕಾಲ್ತುಳಿತ; ಮಹಿಳೆ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
ತಮಿಳು ಜನರು ಪುಷ್ಯಮಾಸವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸುತ್ತಾರೆ. ಈ ಮಾಸದಲ್ಲಿ ತೈಪೂಸಂ ಹೆಸರಿನಲ್ಲಿ ಹುಣ್ಣಿಮೆಯನ್ನು ಆಚರಿಸುವುದು ವಾಡಿಕೆ. ಪಳನಿಯಲ್ಲಿ ಪ್ರತಿಷ್ಠಾಪಿಸಿರುವ ಸುಬ್ರಹ್ಮಣ್ಯ ಸ್ವಾಮಿಯನ್ನು ನೋಡಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಂತಹ ಶುಭ ದಿನದಂದು ಬಡವರಿಗೆ ಬಟ್ಟೆ ಹಂಚುವುದರಿಂದ ಶುಭವಾಗುತ್ತದೆ ಎಂಬ ನಂಬಿಕೆ ಇದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:31 pm, Sat, 4 February 23