Odisha Stampede: ಒಡಿಶಾದಲ್ಲಿ ಮಕರ ಮೇಳದಲ್ಲಿ ಕಾಲ್ತುಳಿತ; ಮಹಿಳೆ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
ಒಡಿಶಾದ ಕಟಕ್ನ ದೇಗುಲವೊಂದರ ಬಳಿ ಶನಿವಾರ ಮಕರ ಸಂಕ್ರಾಂತಿ ಪ್ರಯುಕ್ತ ನಡೆದ ಮಕರ ಮೇಳದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಕಟಕ್ (ಒಡಿಶಾ): ಒಡಿಶಾದ (Odisha) ಕಟಕ್ನ ದೇಗುಲವೊಂದರ ಬಳಿ ಶನಿವಾರ ಮಕರ ಸಂಕ್ರಾಂತಿ (Makar Sankranti) ಪ್ರಯುಕ್ತ ನಡೆದ ಮಕರ ಮೇಳದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಬದಂಬ – ಗೋಪಿನಾಥಪುರ ಟಿ-ಬ್ರಿಡ್ಜ್ನಲ್ಲಿ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. 45 ವರ್ಷದ ಮಹಿಳೆ ಅಂಜನಾ ಸ್ವೈನ್ ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮಹಿಳೆ ಮೃತಪಟ್ಟಿರುವುದನ್ನು ಬದಂಬ – ನರಸಿಂಗ್ಪುರ ಶಾಸಕರು ಮತ್ತು ಸಚಿವ ದೇವಿ ಪ್ರಸಾದ್ ಮಿಶ್ರಾ ಖಚಿತಪಡಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಕಟಕ್ನ ಎಸ್ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳನ್ನು ಬದಂಬದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಹಬ್ಬದ ಪ್ರಯುಕ್ತ ಶ್ರೀರಂಗನಾಥ ದೇವರ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಮಧ್ಯಾಹ್ನ ನಂತರ ಏಕಾಏಕಿ ಅಪಾರ ಸಂಖ್ಯೆಯಲ್ಲಿ ಭಕ್ತರು ಬರತೊಡಗಿದರು. ಮಹಿಳೆಯರು ಮತ್ತು ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿ ಬಂದರು. ಈ ವೇಳೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಹೇಮಂತ ಕುಮಾರ್ ಸ್ವೈನ್ ತಿಳಿಸಿದ್ದಾರೆ. ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಉತ್ಸವಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಹೀಗಾಗಿ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಇದನ್ನೂ ಓದಿ: Sabarimala Makarjyoti: ಶಬರಿಮಲೆ ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮೂಡಿದ ಮಕರಜ್ಯೋತಿ, ಕಣ್ತುಂಬಿಕೊಂಡ ಭಕ್ತಕೋಟಿ
ದೇಶದ ಹಲವೆಡೆ ಇಂದು (ಜನವರಿ 14) ಮಕರ ಸಂಕ್ರಾಂತಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಜನವರಿ 15ರಂದೂ ಮಕರ ಸಂಕ್ರಾಂತಿ ಹಬ್ಬ ಆಚರಿಸುತ್ತಾರೆ. ಕೇರಳದ ಪ್ರಸಿದ್ಧ ಕ್ಷೇತ್ರ ಶಬರಿಮಲೆಯಲ್ಲಿ ಮಕರ ಸಂಕ್ರಾಂತಿ ಉತ್ಸವ ವಿಜ್ರಂಭಣೆಯಿಂದ ಜರಗಿದೆ. ಶಬರಿಮಲೆಯ ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮಕರಜ್ಯೋತಿ ಕಾಣಿಸಿಕೊಂಡಿದ್ದು ಸಾವಿರಾರು ಭಕ್ತರು ದರ್ಶನ ಪಡೆದರು. ಜತೆಗೆ ಅಯ್ಯಪ್ಪನ ದರ್ಶನವನ್ನೂ ಪಡೆದರು. ಕೋವಿಡ್ ಸಾಂಕ್ರಾಮಿಕದ ಕಾರಣ ಕಳೆದ ಎರಡು ವರ್ಷಗಳಿಂದ ಮಕರ ಸಂಕ್ರಾಂತಿ ಉತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಕೋವಿಡ್ ನಿರ್ಬಂಧಗಳು ಹಬ್ಬದ ಸಂಭ್ರಮಕ್ಕೆ ಅಡ್ಡಿ ಉಂಟುಮಾಡಿದ್ದವು. ಹೀಗಾಗಿ ಈ ವರ್ಷ ಎಲ್ಲ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:29 pm, Sat, 14 January 23