Loan Write Offs: 2022-23ರಲ್ಲಿ 2 ಲಕ್ಷಕೋಟಿ ರೂ ಕೆಟ್ಟ ಸಾಲ ಹೊರಗಿಟ್ಟ ಬ್ಯಾಂಕುಗಳು; 3 ವರ್ಷದಲ್ಲಿ ಎನ್ಪಿಎ ವಸೂಲಾಗಿರುವುದೆಷ್ಟು?
Banks In India Write Off 2.09 Lakh Crore NPA: ಎನ್ಪಿಎ ಅಥವಾ ಕೆಟ್ಟ ಸಾಲಗಳನ್ನು ಬ್ಯಾಂಕುಗಳು ರೈಟ್ ಮಾಡುವ ಟ್ರೆಂಡ್ ಮುಂದುವರಿದಿದೆ. 2022-23ರಲ್ಲಿ 2.09 ಲಕ್ಷಕೋಟಿ ರೂನಷ್ಟು ಎನ್ಪಿಎಗಳನ್ನು ಬ್ಯಾಂಕುಗಳು ರೈಟ್ ಆಫ್ ಮಾಡಿವೆ. 3 ವರ್ಷದಲ್ಲಿ ರೈಟ್ ಆಫ್ ಆದ ಲೋನ್ಗಳ ಪ್ರಮಾಣ 5 ಲಕ್ಷಕೋಟಿಗೂ ಹೆಚ್ಚೆನ್ನಲಾಗಿದೆ.
ನವದೆಹಲಿ, ಜುಲೈ 24: ಭಾರತೀಯ ಬ್ಯಾಂಕುಗಳು 2022-23ರ ಹಣಕಾಸು ವರ್ಷದಲ್ಲಿ ರೈಟ್ ಆಫ್ ಮಾಡಿದ ಕೆಟ್ಟ ಸಾಲಗಳ ಪ್ರಮಾಣ 2.09 ಲಕ್ಷಕೋಟಿ ರೂ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಆರ್ಬಿಐ ನೀಡಿದ ಮಾಹಿತಿ ಪ್ರಕಾರ ಕಳೆದ 5 ವರ್ಷದಲ್ಲಿ ಬ್ಯಾಂಕುಗಳು 10.57 ಲಕ್ಷ ಕೋಟಿ ರೂನಷ್ಟು ಅನುತ್ಪಾದಕ ಸಾಲಗಳನ್ನು ಪ್ರತ್ಯೇಕ ಇಟ್ಟಿವೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
2020-21ರ ಹಣಕಾಸು ವರ್ಷದಲ್ಲಿ ಬ್ಯಾಂಕುಗಳು ರೈಟ್ ಆಫ್ ಮಾಡಿದ ಎನ್ಪಿಎ ಮೊತ್ತ 2,02,781 ಕೋಟಿ ರೂ ಇತ್ತು. 2021-22ರ ಹಣಕಾಸು ವರ್ಷದಲ್ಲಿ ಈ ಕೆಟ್ಟ ಸಾಲಗಳ ಮೊತ್ತ 1,74,966 ಕೋಟಿ ರೂ ಇತ್ತು. ಈಗ ಅದು 2,09,144 ಕೋಟಿ ರೂ ಆಗಿದೆ.
ಲೋನ್ ರೈಟ್ ಆಫ್ ಆದರೆ ಸಾಲ ಕೈಬಿಟ್ಟಂತಲ್ಲ…
ಬ್ಯಾಂಕುಗಳ ಪ್ರಕಾರ ಎನ್ಪಿಎ ಎಂದರೆ ಅನುತ್ಪಾದಕ ಸಾಲ. ಅಂದರೆ ಸಾಲ ಮರುಪಾವತಿಯಾಗದೇ ಇರುವಂತಹವು. ಯಾವುದೇ ಸಾಲ 90 ದಿನಗಳವರೆಗೆ ಅಸಲು ಅಥವಾ ಬಡ್ಡಿ ಪಾವತಿಯಾಗದೇ ಇದ್ದರೆ ಅದನ್ನು ಎನ್ಪಿಎ ಎಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಬ್ಯಾಂಕ್ನ ಅಸೆಟ್ ಬುಕ್ನಿಂದ ಹೊರಗಿಡಲಾಗುತ್ತದೆ. ಬ್ಯಾಂಕಿನ ಆರೋಗ್ಯ ಉತ್ತಮವಾಗಿರುವುದನ್ನು ಬಿಂಬಿಸಲು ಕೈಗೊಳ್ಳುವ ಕ್ರಮ ಇದು. ಇಂಥ ಸಾಲವನ್ನು ಬ್ಯಾಂಕ್ನ ಆದಾಯ ಪಟ್ಟಿಯಿಂದ ಪ್ರತ್ಯೇಕಗೊಳಿಸಿ, ನಷ್ಟ ಎಂದು ತೋರಿಸಲಾಗುತ್ತದೆ. ಇದನ್ನೇ ರೈಟ್ ಆಫ್ ಎಂದು ಕರೆಯುವುದು. ಒಟ್ಟಿನಲ್ಲಿ ಇವು ಅಕೌಂಟಿಂಗ್ ಲೆಕ್ಕಾಚಾರ ಮಾತ್ರ. ಹಾಗೆಯೇ, ಎನ್ಪಿಎ ಅನ್ನು ರೈಟ್ ಆಫ್ ಮಾಡುವುದರಿಂದ ಬ್ಯಾಂಕುಗಳಿಗೆ ತೆರಿಗೆ ಹೊರೆಯೂ ಕಡಿಮೆ ಆಗುತ್ತದೆ.
ಇದನ್ನೂ ಓದಿ: Income Tax Day 2023: ಸಿಪಾಯಿ ದಂಗೆಯಿಂದಾದ ನಷ್ಟಕ್ಕೆ ಪರಿಹಾರವಾಗಿ ಬ್ರಿಟಿಷರು ಜಾರಿಗೊಳಿಸಿದ್ದರು ಆದಾಯ ತೆರಿಗೆ
ಹೀಗೆ ರೈಟ್ ಆಫ್ ಆದ ಸಾಲವನ್ನು ಬ್ಯಾಂಕುಗಳು ಹಾಗೇ ಕೈಬಿಡುವುದಿಲ್ಲ. ಈ ಅನುತ್ಪಾದಕ ಸಾಲವನ್ನು ಬ್ಯಾಂಕುಗಳು ವಸೂಲಿ ಮಾಡಲು ಯತ್ನಿಸಬಹುದು. ಆದರೆ, ಇಂಥ ಎನ್ಪಿಎಗಳಲ್ಲಿ ಹೆಚ್ಚಿನವು ಅಸುರಕ್ಷಿತ ಸಾಲ ಹಾಗೂ ಸುಳ್ಳು ದಾಖಲೆಗಳನ್ನು ಕೊಟ್ಟು ಪಡೆದ ಸಾಲವೇ ಆಗಿರುತ್ತವೆ. ಕುತೂಹಲ ಎಂದರೆ ಕಳೆದ 3 ವರ್ಷದಲ್ಲಿ ಬ್ಯಾಂಕುಗಳು ರೈಟ್ ಆಫ್ ಮಾಡಿದ ಒಟ್ಟು ಎನ್ಪಿಎ ಸಾಲದ ಮೊತ್ತ 5,86,891 ಕೋಟಿ ರೂ ಆಗಿದೆ. ಈ ಪೈಕಿ 2020-21ರಲ್ಲಿ 30,104 ಕೋಟಿ ರೂ; 2021-22ರಲ್ಲಿ 33,534 ಕೋಟಿ ರೂ ಹಾಗು 2022-23ರಲ್ಲಿ 45,548 ಕೋಟಿ ರೂ ಮಾತ್ರ ಬ್ಯಾಂಕುಗಳು ವಸೂಲಿ ಮಾಡಿವೆ. ಅಂದರೆ 5.87 ಲಕ್ಷ ಕೋಟಿ ರೂ ಎನ್ಪಿಎ ಸಾಲದ ಪೈಕಿ ಬ್ಯಾಂಕುಗಳು ವಸೂಲಿ ಮಾಡಿರುವುದು 1.09 ಲಕ್ಷ ಕೋಟಿ ರೂ ಮಾತ್ರ. ಅಂದರೆ ಶೇ. 80ಕ್ಕಿಂತಲೂ ಹೆಚ್ಚು ಎನ್ಪಿಎಗಳು ಇನ್ನೂ ವಸೂಲಾಗದೇ ಹಾಗೇ ಇವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ