PM Kisan: ಪಿಎಂ ಕಿಸಾನ್ ಯೋಜನೆ; ಜುಲೈ 27ಕ್ಕೆ 14ನೇ ಕಂತು; ಆಧಾರ್ ಪ್ರಕಾರ ನಿಮ್ಮ ಹೆಸರಿದೆಯಾ ಖಚಿತಪಡಿಸಿಕೊಳ್ಳಿ
How To Ensure PM Kisan Instalment: ಪಿಎಂ ಕಿಸಾನ್ ಯೋಜನೆಯಲ್ಲಿ ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿದ್ದರೂ 14ನೇ ಕಂತಿನ ಹಣ ಸಿಗದೇ ಹೋಗಬಹುದು. ಆಧಾರ್ ಪ್ರಕಾರ ನಿಮ್ಮ ಹೆಸರು ನೊಂದಾಯಿತವಾಗದೇ ಇದ್ದರೆ ಹಣ ಸಿಗುವುದಿಲ್ಲ.
ನವದೆಹಲಿ, ಜುಲೈ 24: ರೈತರ ವ್ಯವಸಾಯಕ್ಕೆ ಅನುಕೂಲವಾಗಲೆಂದು ಸರ್ಕಾರ ಜಾರಿಗೆ ತಂದಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) 14ನೇ ಕಂತಿನ ಹಣ ಜುಲೈ 27ರಂದು ಬಿಡುಗಡೆ ಆಗಲಿದೆ. ಅಂದು 8.5 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ತಲಾ 2,000 ರೂ ಹಣ ಜಮೆ ಆಗಲಿದೆ. ಸರ್ಕಾರ 2019ರಲ್ಲಿ ಆರಂಭಿಸಿದ ಈ ಯೋಜನೆಯಲ್ಲಿ 2,000 ರೂಗಳ 3 ಕಂತಿನಲ್ಲಿ ವರ್ಷಕ್ಕೆ 6,000 ರೂವನ್ನು ರೈತರ ಖಾತೆಗಳಿಗೆ ನೀಡಲಾಗುತ್ತದೆ. ಈವರೆಗೆ ಸರ್ಕಾರ 13 ಕಂತುಗಳನ್ನು ಬಿಡುಗಡೆ ಮಾಡಿದೆ. ಫೆಬ್ರುವರಿ 27ರಂದು 13ನೇ ಕಂತು ಬಿಡುಗಡೆ ಆಗಿತ್ತು.
ಕಳೆದ ವರ್ಷದ ಕೊನೆಯಲ್ಲಿ ಸರ್ಕಾರ ಪಿಎಂ ಕಿಸಾನ್ ಫಲಾನುಭವಿಗಳಿಗೆ ಇಕೆವೈಸಿ ಅಪ್ಡೇಟ್ ಮಾಡುವಂತೆ ತಿಳಿಸಿತ್ತು. ಇಕೆವೈಸಿ ಮಾಡಿಸಿದವರಿಗೆ ಮಾತ್ರವೇ ಕಿಸಾನ್ ಯೋಜನೆ ಹಣ ಸಿಗುತ್ತದೆ. 13ನೇ ಕಂತಿನಲ್ಲಿ ಇದೇ ಕಾರಣಕ್ಕೆ ಬಹಳ ಮಂದಿಗೆ ಹಣ ಸಿಕ್ಕಿರಲಿಲ್ಲ.
ಪಿಎಂ ಕಿಸಾನ್ನ ಅಧಿಕೃತ ವೆಬ್ಸೈಟ್ಗೆ ಹೋದರೆ ಅಲ್ಲಿ ಇಕೆವೈಸಿ ಮಾಡಲು ಅವಕಾಶ ಇದೆ. ಹಾಗೆಯೇ ಹೊಸದಾಗಿ ನೊಂದಣಿ ಮಾಡಿಸಲು, ನೊಂದಣಿ ಅಪ್ಡೇಟ್ ಮಾಡಲು, ಫಲಾನುಭವಿಗಳ ಪಟ್ಟಿ ವೀಕ್ಷಿಸಲು, ಆಧಾರ್ ಪ್ರಕಾರ ಹೆಸರು ಬದಲಾಯಿಸಲು ಇತ್ಯಾದಿ ಅವಕಾಶಗಳಿವೆ.
ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿದ್ದರೂ ಹಣ ಬರದೇಹೋಗಬಹುದು…
ನೀವು ಇಕೆವೈಸಿ ಮಾಡಿದ್ದಿರಬಹುದು. 13ನೇ ಕಂತಿನ ಹಣವನ್ನೂ ಪಡೆದಿರಬಹುದು. ಫಲಾನುಭವಿಗಳ ಪಟ್ಟಿಯಲ್ಲೂ ನಿಮ್ಮ ಹೆಸರಿರಬಹುದು. ಆದರೂ ಕೂಡ 14ನೇ ಕಂತಿನ ಹಣ ಬರುತ್ತದೆ ಎಂದು ಖಾತ್ರಿ ಪಡುವಂತಿಲ್ಲ. ಪಿಎಂ ಕಿಸಾನ್ ಯೋಜನೆಯ ನೊಂದಣಿಯಲ್ಲಿರುವ ನಿಮ್ಮ ಹೆಸರು ಆಧಾರ್ನಲ್ಲಿರುವ ಹೆಸರಿನೊಂದಿಗೆ ತಾಳೆಯಾಗದಿದ್ದರೆ 14ನೇ ಕಂತಿನ ಹಣ ಸಿಗುವುದಿಲ್ಲ.
ಪಿಎಂ ಕಿಸಾನ್ ವೆಬ್ಸೈಟ್ಗೆ ಹೋದರೆ ಅಲ್ಲಿ ಫಾರ್ಮರ್ಸ್ ಕಾರ್ನರ್ ಸೆಕ್ಷನ್ನಲ್ಲಿ ಆಧಾರ್ ಪ್ರಕಾರ ಹೆಸರು ತಿದ್ದುಪಡಿ ಮಾಡುವ ಅವಕಾಶ ಇದೆ.
- ‘ನೇಮ್ ಕರೆಕ್ಷನ್ ಆ್ಯಸ್ ಪರ್ ಆಧಾರ್’ ಎಂದು ಬರೆದಿರುವ ಟ್ಯಾಬ್ ಅನ್ನು ಕ್ಲಿಕ್ ಮಾಡಿದರೆ ಬೇರೊಂದು ಪುಟ ತೆರೆಯುತ್ತದೆ.
- ಅಲ್ಲಿ ಯೋಜನೆಯ ನಿಮ್ಮ ರಿಜಿಸ್ಟ್ರೇಶನ್ ನಂಬರ್ ನಮೂದಿಸಿ
- ರಿಜಿಸ್ಟ್ರೇಶನ್ ನಂಬರ್ ಗೊತ್ತಿಲ್ಲದಿದ್ದರೆ ‘ನೋ ಯುವರ್ ರಿಜಿಸ್ಟ್ರೇನ್ ನಂಬರ್’ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಆಧಾರ್ ನಂಬರ್ ಅಥವಾ ನೊಂದಾಯಿತ ಮೊಬೈಲ್ ನಂಬರ್ ಮೂಲಕ ರಿಜಿಸ್ಟ್ರೇಶನ್ ನಂಬರ್ ಪಡೆದುಕೊಳ್ಳಿ
- ಈಗ ಆ ರಿಜಿಸ್ಟ್ರೇಶನ್ ನಂಬರ್ ಹಾಕಿ ಸರ್ಚ್ ಕೊಡಿ.
ಅಲ್ಲಿ ಆಧಾರ್ ಕಾರ್ಡ್ನಲ್ಲಿರುವ ನಿಮ್ಮ ಹೆಸರನ್ನು ಪಿಎಂ ಕಿಸಾನ್ ಯೋಜನೆಗೆ ಅಪ್ಡೇಟ್ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ