ನವದೆಹಲಿ, ನವೆಂಬರ್ 25: ಸರ್ಕಾರೀ ಸ್ವಾಮ್ಯದ ಪ್ರಸಾರ್ ಭಾರತಿ ಸಂಸ್ಥೆ ವೇವ್ಸ್ ಹೆಸರಿನಲ್ಲಿ ಒಟಿಟಿ ಪ್ಲಾಟ್ಫಾರ್ಮ್ ಅನ್ನು ಆರಂಭಿಸಿದೆ. ಕಳೆದ ವಾರ ಗೋವಾದಲ್ಲಿ ನಡೆದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವೇವ್ಸ್ ಬಿಡುಗಡೆ ಆಗಿದೆ. ಈ ವೇವ್ಸ್ ಒಟಿಟಿ ಸಂಪೂರ್ಣ ಉಚಿತವಾಗಿರುತ್ತದೆ. 65 ಲೈವ್ ಚಾನಲ್ಗಳು, ವಿಒಡಿ ಸರ್ವಿಸ್, ಗೇಮಿಂಗ್ ಇವೆಲ್ಲವೂ ಫ್ರೀಯಾಗಿ ಲಭಿಸಲಿವೆ. ಆನ್ಲೈನ್ ಶಾಪಿಂಗ್ ಸರ್ವಿಸ್ ಕೂಡ ಇದರಲ್ಲಿ ಒಳಗೊಳ್ಳಲಾಗುತ್ತದೆ. ಇದು ಒಎನ್ಡಿಸಿ ಸೌಲಭ್ಯವನ್ನು ಒದಗಿಸುತ್ತದೆ. ಕನ್ನಡವೂ ಸೇರಿದಂತೆ 12 ಭಾರತೀಯ ಭಾಷೆಗಳಲ್ಲಿ ಇದರ ಕಂಟೆಂಟ್ ಲಭ್ಯ ಇದೆ.
ಪ್ರಸಾರ್ ಭಾರತಿ ಸಂಸ್ಥೆಯ ವೇವ್ಸ್ ಒಟಿಟಿ ಅತಿದೊಡ್ಡ ಅಗ್ರಿಗೇಟರ್ ಎನಿಸಿದೆ. ಅತಿಹೆಚ್ಚು ಚಾನಲ್ಗಳನ್ನು ಇದೊಂದೇ ಒಟಿಟಿಯಲ್ಲಿ ವೀಕ್ಷಿಸಬಹುದು. ಈ ಆ್ಯಪ್ ಅನ್ನು ಉಚಿತವಾಗಿ ಡೌನ್ಲೋಡ್ ಮಾಡಬಹುದು. ಹೆಚ್ಚಿನ ಕಂಟೆಂಟ್ಗಳು ಉಚಿತ ವೀಕ್ಷಣೆಗೆ ಲಭ್ಯ ಇವೆ. ಪ್ರೀಮಿಯಮ್ ಕಂಟೆಂಟ್ಗಳಿಗೆ ಸಬ್ಸ್ಕ್ರೈಬ್ ಮಾಡಬೇಕಾಗುತ್ತದೆ.
ಅಮೆರಿಕದ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ನ ಮ್ಯಾಚ್ಗಳನ್ನು ಲೈವ್ ಆಗಿ ಇಲ್ಲಿ ವೀಕ್ಷಿಸಬಹುದು. ಅಯೋಧ್ಯೆಯ ರಾಮಲಲ್ಲಾ ಆರತಿ ಸೇವೆಯೂ ಲೈವ್ ಆಗಿ ವೀಕ್ಷಣೆಗೆ ಲಭ್ಯ. ಭಾರತೀಯ ಸಂಸ್ಕೃತಿ, ಪ್ರಾದೇಶಿಕತೆಯ ಕಂಟೆಂಟ್ಗಳನ್ನು ವೇವ್ಸ್ ಒಟಿಟಿಯಲ್ಲಿ ಕಾಣಬಹುದು.
ಇದನ್ನೂ ಓದಿ: ನೊಂದಾಯಿತ ಸಣ್ಣ ಉದ್ದಿಮೆಗಳಲ್ಲಿ ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ 23 ಕೋಟಿ
ನೆಟ್ಫ್ಲಿಕ್ಸ್, ಜಿಯೋಹಾಟ್ಸ್ಟಾರ್, ಅಮೇಜಾನ್ ಪ್ರೈಮ್ ಆ್ಯಪ್ಗಳಿಗೆ ವೇವ್ಸ್ ಪೈಪೋಟಿ ನೀಡಬಲ್ಲುದಾ ಎನ್ನುವ ಪ್ರಶ್ನೆ ಇದೆ. ಆದರೆ, ನೆಟ್ಫ್ಲಿಕ್ಸ್, ಪ್ರೈಮ್ ಇತ್ಯಾದಿಯಲ್ಲಿ ಬರುವ ಕಂಟೆಂಟ್ಗಳೇ ಬೇರೆಯೇ ರೀತಿಯ ಜಾನರ್ನದ್ದಾಗಿವೆ. ವೇವ್ಸ್ನಲ್ಲಿ ಸಾಂಸ್ಕೃತಿಕ ಹಾಗೂ ಗಂಭೀರ ಸ್ತರದ ಕಂಟೆಂಟ್ಗಳನ್ನು ನಿರೀಕ್ಷಿಸಬಹುದು.
ಪ್ರಸಾರ್ ಭಾರತಿ ಸಂಸ್ಥೆ ವೇವ್ಸ್ ಒಟಿಟಿಯನ್ನು ಬಿಡುಗಡೆ ಮಾಡಿರುವುದು ಕೇಬಲ್ ಮತ್ತು ಡಿಟಿಎಚ್ ಆಪರೇಟರ್ಗಳಿಗೆ ತುಸು ಆತಂಕಕ ಮೂಡಿಸಿದೆ. ಹೆಚ್ಚೆಚ್ಚು ವೀಕ್ಷಕರು ಟಿಡಿಎಚ್, ಕೇಬಲ್ ತೊರೆದು ಒಟಿಟಿಗಳತ್ತ ಮುಗಿಬೀಳುತ್ತಿದ್ದಾರೆ. ಈಗ ವೇವ್ಸ್ನಲ್ಲಿ ಟಿವಿ ಚಾನಲ್ಗಳ ಪ್ರಸಾರವನ್ನೂ ಒಳಗೊಳ್ಳಲಾಗಿರುವುದು ಇವುಗಳ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ ಎನ್ನಲಾಗಿದೆ.
ವೇವ್ಸ್ ಒಟಿಟಿಯು ಆ್ಯಪಲ್ ಮತ್ತು ಆಂಡ್ರಾಯ್ಡ್ ವರ್ಷನ್ಗಳಲ್ಲಿ ಲಭ್ಯ. ಆ್ಯಪಲ್ನ ಆ್ಯಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋನಲ್ಲಿ ಈ ಆ್ಯಪ್ ಅನ್ನು ಉಚಿತವಾಗಿ ಡೌನ್ಲೋಡ್ ಮಾಡಬಹುದು. ಇದರಲ್ಲಿ ಮೂರು ರೀತಿಯ ಪ್ಲಾನ್ಗಳಿವೆ. ಪ್ಲಾಟಿನಂ, ಡೈಮಂಡ್ ಮತ್ತು ಗೋಲ್ಡ್ ಪ್ಲಾನ್ಗಳಿವೆ.
ಪ್ಲಾಟಿನಂ ಪ್ಲಾನ್ ವರ್ಷಕ್ಕೆ 999 ರೂ ಬೆಲೆ ಇದೆ. ಡೈಮಂಡ್ ಪ್ಲಾನ್ನಲ್ಲಿ ವರ್ಷಕ್ಕೆ 350 ರೂ ಇದೆ.
ಎನ್ಡಿಟಿವಿ ಇಂಡಿಯಾ, ಇಂಡಿಯಾ ಟುಡೇ ಸೇರಿದಂತೆ 65 ಲೈವ್ ಚಾನಲ್ಗಳು ವೇವ್ಸ್ನಲ್ಲಿ ಸಿಗುತ್ತವೆ. ಇದರಿಂದ ಬಂದ ಆದಾಯದಲ್ಲಿ ಶೇ. 65ರಷ್ಟನ್ನು ಆ ಚಾನಲ್ಗಳೇ ಪಡೆಯುತ್ತವೆ. ಶೇ. 35ರಷ್ಟು ಆದಾಯವು ಪ್ರಸಾರಭಾರತಿ ಸಂಸ್ಥೆಗೆ ಹೋಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ