ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಅನ್ನೋದು ಸಾಮಾನ್ಯವಾಗಿ ನಿವೃತ್ತಿ ನಂತರದ ಹೂಡಿಕೆ ಆಯ್ಕೆ ಆಗಿರುತ್ತದೆ. 15,000 ರೂಪಾಯಿ ಮೇಲ್ಪಟ್ಟ ಪ್ರತಿ ಸಿಬ್ಬಂದಿಗೆ ಪಿಎಫ್ ಕಡ್ಡಾಯ ಆಗಿರುತ್ತದೆ. ಪ್ರತಿ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಸೆಕ್ಷನ್ 80ಸಿ ಅಡಿಯಲ್ಲಿ 1.5 ಲಕ್ಷ ರೂಪಾಯಿ ತನಕ ಕಟ್ಟುವ ಮೊತ್ತಕ್ಕೆ ವಿನಾಯಿತಿ ಸಹ ಇದೆ. ಇನ್ನು ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO) ತನ್ನ ಸದಸ್ಯರಿಗೆ ಇನ್ನಷ್ಟು ಅನುಕೂಲಗಳನ್ನು ಒದಗಿಸುತ್ತದೆ. ಅದರಲ್ಲಿ ಇನ್ಷೂರೆನ್ಸ್ನಿಂದ ಪೆನ್ಷನ್ ಅನುಕೂಲದ ತನಕ ಇದೆ. ಉದ್ಯೋಗಿಗಳು ನಿವೃತ್ತಿ ನಂತರದ ಅನುಕೂಲವಾಗಿ ಪಿಎಫ್ ಅನ್ನು ನೋಡುವುದರ ಜತೆಗೆ ಉಳಿದ ಅನುಕೂಲಗಳತ್ತ ಗಮನ ಹರಿಸಬೇಕು ಎನ್ನುತ್ತಾರೆ ಪರಿಣತರು. ಹಾಗಿದ್ದರೆ ಏನು ಆ ಅನುಕೂಲಗಳು, ಅದರಲ್ಲೂ ಮುಖ್ಯವಾಗಿ 5 ಅನುಕೂಲಗಳ ಬಗ್ಗೆ ತಿಳಿಯಿರಿ.
1) ಉಚಿತ ಇನ್ಷೂರೆನ್ಸ್
ಪಿಎಫ್ ಖಾತೆದಾರರಿಗೆ ತಾನಾಗಿಯೇ ಉಚಿತ ಇನ್ಷೂರೆನ್ಸ್ ದೊರೆಯುತ್ತದೆ. ಸೇವಾವಧಿಯಲ್ಲಿ ಸಾವು ಸಂಭವಿಸಿದರೆ EDLI ಯೋಜನೆ ಅಡಿಯಲ್ಲಿ 7 ಲಕ್ಷ ಇನ್ಷೂರೆನ್ಸ್ ದೊರೆಯುತ್ತದೆ. ಈ ಹಿಂದೆ ಮೊತ್ತ 6 ಲಕ್ಷ ಇತ್ತು. ಆದರೆ ಈಗ 7 ಲಕ್ಷಕ್ಕೆ ವಿಸ್ತರಣೆ ಆಗಿದೆ. ತುಂಬ ಮುಖ್ಯವಾಗಿ ಪಿಎಫ್ ಚಂದಾದಾರರು ಯಾವುದೇ ಇನ್ಷೂರೆನ್ಸ್ ಪ್ರೀಮಿಯಂ ಪಾವತಿ ಮಾಡುವ ಅಗತ್ಯವಿಲ್ಲ.
2) ಪೆನ್ಷನ್
ಪಿಎಫ್ ಖಾತೆದಾರರು 58 ವರ್ಷ ತುಂಬಿದ ನಂತರ ಪೆನ್ಷನ್ ಪಡೆಯುವುದಕ್ಕೆ ಅರ್ಹರು. ಇದಕ್ಕಾಗಿ ನಿರಂತರವಾಗಿ 15 ವರ್ಷಗಳ ಕಾಲ ಪ್ರತಿ ತಿಂಗಳು ಪಿಎಫ್ ಖಾತೆಗೆ ಹಣ ಜಮೆ ಆಗಿರಬೇಕು. ಉದ್ಯೋಗದಾತರ ಶೇ 8.33 ಕೊಡುಗೆಯು (ಶೇ 12ರ ಪೈಕಿ) ಪಿಎಫ್ ಖಾತೆದಾರರ ಇಪಿಎಸ್ ಖಾತೆಗೆ ಹೋಗುತ್ತದೆ.
3) ಪಿಎಫ್ ಮೇಲೆ ಸಾಲ ಸಿಗುತ್ತದೆ
ಹಣಕಾಸು ತುರ್ತು ಇರುವ ಸಂದರ್ಭದಲ್ಲಿ ಪಿಎಫ್ ಮೊತ್ತದ ಮೇಲೆ ಖಾತೆದಾರರಿಗೆ ಸಾಲ ದೊರೆಯುತ್ತದೆ. ಅದರ ಮೇಲೆ ಬಡ್ಡಿ ಕೇವಲ ಶೇ 1 ಮಾತ್ರ. ಆ ಸಾಲ ಮರುಪಾವತಿ ಅಲ್ಪಾವಧಿಯದ್ದಾಗಿರುತ್ತದೆ. ಸಾಲ ವಿತರಣೆಯಾದ 36 ತಿಂಗಳಲ್ಲಿ ಮರುಪಾವತಿ ಮಾಡಬೇಕು.
4) ತುರ್ತು ಸಂದರ್ಭದಲ್ಲಿ ಭಾಗಶಃ ವಿಥ್ಡ್ರಾ
ವೈದ್ಯಕೀಯ ಹಾಗೂ ತುರ್ತು ಸಂದರ್ಭಗಳಲ್ಲಿ ಕೆಲವು ಷರತ್ತು ಮತ್ತು ನಿಬಂಧನೆಗಳೊಂದಿಗೆ ಭಾಗಶಃ ಹಣ ವಿಥ್ಡ್ರಾ ಮಾಡುವುದಕ್ಕೆ ಇಪಿಎಫ್ಒದಿಂದ ಅವಕಾಶ ನೀಡಲಾಗುತ್ತದೆ.
5) ಗೃಹ ಸಾಲ ಅಥವಾ ಪುರ್ಣ ಸಾಲ ಮರುಪಾವತಿ
ಪಿಎಫ್ ಹಣವನ್ನು ಬಳಸಿಕೊಂಡು ಹೋಮ್ ಲೋನ್ ಮರುಪಾವತಿ ಮಾಡಬಹುದು. ಇಪಿಎಫ್ಒ ನಿಯಮದ ಪ್ರಕಾರ, ಹೊಸ ಮನೆ ಖರೀದಿಗೆ ಅಥವಾ ಮನೆ ಕಟ್ಟುವುದಕ್ಕೆ ಶೇ 90ರಷ್ಟು ಪಿಎಫ್ ಮೊತ್ತದ ಬಾಕಿ ವಿಥ್ಡ್ರಾ ಮಾಡಬಹುದು. ಅಷ್ಟೇ ಅಲ್ಲ, ಸೈಟ್ ಖರೀದಿಗೂ ಹಣ ಬಳಸಬಹುದು.
ಇದನ್ನೂ ಓದಿ: EPF account: ಇಪಿಎಫ್ ಖಾತೆ ವರ್ಗಾವಣೆ, ವಿಥ್ಡ್ರಾ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಸಂಗತಿಗಳಿವು
(Here is the 5 benefits of provident fund from insurance to pension for subscribers)