Retail Inflation: ಏಪ್ರಿಲ್ ತಿಂಗಳ ಚಿಲ್ಲರೆ ಹಣದುಬ್ಬರ ದರ ಶೇ 4.29ರೊಂದಿಗೆ 3 ತಿಂಗಳ ಕನಿಷ್ಠ ಮಟ್ಟಕ್ಕೆ

|

Updated on: May 12, 2021 | 7:42 PM

2021ರ ಮಾರ್ಚ್​ ತಿಂಗಳಿಗಿಂತ ಏಪ್ರಿಲ್ ಅಗ್ಗವಾಗಿತ್ತು ಎಂಬುದು ಕೇಂದ್ರ ಸರ್ಕಾರವು ಬುಧವಾರ ಬಿಡುಗಡೆ ಮಾಡಿದ ಅಂಕಿ- ಅಂಶಗಳಿಂದ ತಿಳಿದುಬರುತ್ತಿದೆ.

Retail Inflation: ಏಪ್ರಿಲ್ ತಿಂಗಳ ಚಿಲ್ಲರೆ ಹಣದುಬ್ಬರ ದರ ಶೇ 4.29ರೊಂದಿಗೆ 3 ತಿಂಗಳ ಕನಿಷ್ಠ ಮಟ್ಟಕ್ಕೆ
ಸಾಂದರ್ಭಿಕ ಚಿತ್ರ
Follow us on

ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿರುವ ಅಂಕಿ- ಅಂಶದ ಪ್ರಕಾರ, 2021ರ ಮಾರ್ಚ್​ಗಿಂತ ಏಪ್ರಿಲ್​ ತಿಂಗಳು ಗ್ರಾಹಕರು ಅಥವಾ ಬಳಕೆದಾರರ ಪಾಲಿಗೆ ಅಗ್ಗವಾಗಿತ್ತು ಎನ್ನಲಾಗಿದೆ. ಇದು ಹೇಗೆ ಅಂದರೆ, ಬುಧವಾರ ಚಿಲ್ಲರೆ ಹಣದುಬ್ಬರ (ರೀಟೇಲ್ ಇನ್​ಫ್ಲೇಷನ್) ಮಾಹಿತಿ ಬಿಡುಗಡೆ ಆಗಿದೆ. ಅದರ ಪ್ರಕಾರ, ಏಪ್ರಿಲ್​ನಲ್ಲಿ ಶೇ 4.29 ಇದೆ. ಅದನ್ನೇ ಮಾರ್ಚ್​ ತಿಂಗಳಿಗೆ ಹೋಲಿಸಿ ನೋಡುವುದಾದರೆ, ಆ ತಿಂಗಳು ಶೇ 5.52 ಇತ್ತು. ಇದಕ್ಕೆ ಮುಖ್ಯ ಕಾರಣ ಏನೆಂದರೆ, ಆಹಾರ ಪದಾರ್ಥಗಳ ಬೆಲೆಯಲ್ಲಿನ ಇಳಿಕೆ ಎಂದು ಸರ್ಕಾರದ ದತ್ತಾಂಶವು ತೋರಿಸುತ್ತಿದೆ. ಅಂದ ಹಾಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಪ್ರತಿ ಎರಡು ತಿಂಗಳಿಗೊಮ್ಮೆ ನಡೆಸುವ ಹಣಕಾಸುವ ನೀತಿ ಸಭೆಗೆ ಮುಖ್ಯವಾಗಿ ಗಣನೆಗೆ ತೆಗೆದುಕೊಳ್ಳುವುದು ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧಾರಿತ ವಾದ ಚಿಲ್ಲರೆ ಹಣದುಬ್ಬರವನ್ನೇ.

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಏಪ್ರಿಲ್​ನಲ್ಲಿ ಆಹಾರ ಪದಾರ್ಥಗಳ ಹಣದುಬ್ಬರ ಶೇ 2.02ರಷ್ಟಿತ್ತು. ಅದಕ್ಕೂ ಹಿಂದಿನ ತಿಂಗಳಾದ ಮಾರ್ಚ್​ನಲ್ಲಿ ಶೇ 4.87ರಷ್ಟಿತ್ತು. ಈ ಬಗ್ಗೆ ಪರಿಣತರು ಮಾತನಾಡಿ, ಕಳೆದ ವರ್ಷದ ಏಪ್ರಿಲ್​ನಲ್ಲಿ ಸಪ್ಲೈ ಚೈನ್​ಗೆ (ಪೂರೈಕೆ ಜಾಲ) ಭಾರೀ ಸಮಸ್ಯೆ ಆಗಿತ್ತು. ಅದಕ್ಕೆ ಕಾರಣವಾಗಿದ್ದು ಕೋವಿಡ್​ ನಿಯಂತ್ರಣಕ್ಕಾಗಿ ಹೇರಿದ್ದ ಲಾಕ್​ಡೌನ್. 2021ರ ಏಪ್ರಿಲ್​ನಲ್ಲಿ ಸಿಪಿಐ ಆಧಾರಿತ ಹಣದುಬ್ಬರವು ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಆದರೆ ನಿರೀಕ್ಷೆ ಮಾಡಿದ್ದಕ್ಕಿಂತ ಸ್ವಲ್ಪ ಹೆಚ್ಚಿದೆ ಎಂದಿದ್ದಾರೆ.

ಒಟ್ಟಾರೆಯಾಗಿ ನೋಡಿದಾಗ 2021ರ ಏಪ್ರಿಲ್​ನಲ್ಲೂ ಕೋವಿಡ್​ ನಿಯಂತ್ರಣಕ್ಕಾಗಿ ಅಲ್ಲಲ್ಲಿ ನಿರ್ಬಂಧಗಳನ್ನು ಹಾಕಲಾಗಿತ್ತು. ಆದರೆ ಅದರ ಪರಿಣಾಮವು ಬಹಳ ಮಿತಿಯಾಗಿ ಆಗಿರುವಂತಿದೆ ಎಂದು ಅನಿಸಿಕೆ ವ್ಯಕ್ತವಾಗಿದೆ. ಕರ್ನಾಟಕದ ವಿಚಾರದಲ್ಲಿ ಹೇಳುವುದಾದರೆ ಮೇ 24ನೇ ತಾರೀಕಿನವರೆಗೆ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ. ಈ ಮಧ್ಯೆ ದೇಶದ ವಿವಿಧೆಡೆಗಳಲ್ಲಿ ಆಕ್ಸಿಜನ್​ ಪೂರೈಕೆ ಬಗ್ಗೆ ದೂರುಗಳು ಕೇಳಿಬರುತ್ತಿದೆ. ಆದರೆ ಮೇ ತಿಂಗಳಲ್ಲಿ ಹಣದುಬ್ಬರ ದರ ಹೇಗಿರಬಹುದು ಎಂಬುದು ಕುತೂಹಲಕರವಾಗಿದೆ. ಏಕೆಂದರೆ ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ತಡೆಗಾಗಿ ಸ್ಥಳೀಯ ನಿರ್ಬಂಧ ಕಠಿಣವಾಗಿದೆ.

ಇದನ್ನೂ ಓದಿ: ಕೋವಿಡ್- 19 ಎದುರಿಸಲು ಶೇ 4ರ ಬಡ್ಡಿ ದರದಲ್ಲಿ 3 ವರ್ಷಗಳ ಅವಧಿಗೆ ಸಾಲ ಘೋಷಣೆ

(Consumer Price Index based retail inflation eased in 2021 April at 4.29%)