ಆಪರೇಷನ್ ಸಿಂದೂರದ ಬಳಿಕ ಭಾರತದ ಡಿಫೆನ್ಸ್ ಶಕ್ತಿ ಮೇಲೆ ಜಗತ್ತಿನ ಕಣ್ಣು; ಯುದ್ಧವಿಮಾನ ತಯಾರಿಕೆಯಲ್ಲೂ ಪಳಗುತ್ತಿದೆ ಭಾರತ
India defense sector shining: ಆಪರೇಷನ್ ಸಿಂದೂರದಲ್ಲಿ ಭಾರತದ ದೈತ್ಯ ಮಿಲಿಟರಿ ಶಕ್ತಿಯ ಒಂದು ಸಣ್ಣ ನಿದರ್ಶನ ಸಿಕ್ಕಿದೆ. ಭಾರತದಲ್ಲೇ ತಯಾರಾದ ಶಸ್ತ್ರಾಸ್ತ್ರಗಳು ವೈರಿ ಕೋಟೆಗಳನ್ನು ನಡುಗಿಸಿವೆ. ಡಿಫೆನ್ಸ್ ಕ್ಷೇತ್ರದಲ್ಲಿ ಭಾರತ ಬಹುತೇಕ ಸ್ವಾವಂಬನೆ ಸಾಧಿಸುತ್ತಿದೆ. ಫೈಟರ್ ಜೆಟ್ನಲ್ಲೂ ಸ್ವಾವಂಬನೆ ಸಾಧಿಸುತ್ತಿದೆ. ಮುಂದಿನ ಕೆಲ ವರ್ಷಗಳಲ್ಲಿ ವಾಯುಪಡೆಗೆ ಬೇಕಾದ ಎಲ್ಲಾ ಯುದ್ಧವಿಮಾನಗಳೂ ಭಾರತದಲ್ಲೇ ತಯಾರಾಗಲಿವೆ ಎಂದೆನ್ನುತ್ತಾರೆ ತಜ್ಞರು.

ನವದೆಹಲಿ, ಮೇ 21: ವಿಶ್ವದ ಬಲಿಷ್ಠ ಮಿಲಿಟರಿ ದೇಶಗಳ ಸಾಲಿನಲ್ಲಿರುವ ಭಾರತವು ಈಗ ತಾನು ಪೇಪರ್ ಟೈಗರ್ ಅಲ್ಲ, ನಿಜವಾದ ವ್ಯಾಘ್ರ ಎಂಬುದನ್ನು ಆಪರೇಷನ್ ಸಿಂದೂರದಲ್ಲಿ (Operation Sindoor) ಖಚಿತವಾಗಿ ಸಾಬೀತುಪಡಿಸಿದೆ. ಭಾರತದ ದಾಳಿತಂತ್ರ, ಕರಾರುವಾಕ್ ಯೋಜನೆ, ನಿಖರ ದಾಳಿ, ಯುದ್ಧೋಪಕರಣಗಳ ಜಾಣ್ಮೆ ಬಳಕೆ ಇವೆಲ್ಲವೂ ಅಲ್ಪಾವಧಿಯಲ್ಲಿ ಜಾಹೀರಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಭಾರತವು ಈಗ ಡಿಫೆನ್ಸ್ ಕ್ಷೇತ್ರದಲ್ಲಿ (Indian defense sector) ಸಂಪೂರ್ಣ ಸ್ವಾವಲಂಬನೆ ಸಾಧಿಸುವತ್ತ ವೇಗವಾಗಿ ಸಾಗುತ್ತಿದೆ.
ಯುದ್ಧ ವಿಮಾನಗಳ ತಯಾರಿಕೆಯಲ್ಲಿ ಪಳಗುತ್ತಿರುವ ಭಾರತ
ಜಗತ್ತಿನ ಅತ್ಯಂತ ಶಕ್ತಿಶಾಲಿ ಮಿಸೈಲ್ ಎನಿಸಿರುವ ಬ್ರಹ್ಮೋಸ್ ಈಗ ಭಾರತವನ್ನು ಜಾಗತಿಕ ಭೂಪಟದಲ್ಲಿ ದೊಡ್ಡದಾಗಿ ನಿಲ್ಲಿಸಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಇಡುತ್ತಿರುವ ಭಾರತವು ಈಗ ಪ್ರಬಲ ಯುದ್ಧವಿಮಾನಗಳ ತಯಾರಿಕೆ ಹೆಚ್ಚಿಸುತ್ತಿದೆ. ರಫೇಲ್, ಎಫ್-35 ಇತ್ಯಾದಿ ಫೈಟರ್ ಜೆಟ್ಗಳಿಗೆ ಭಾರತವು ಬೇರೆ ದೇಶಗಳಿಗೆ ಎಡತಾಕುವ ಪ್ರಮೇಯ ಕಡಿಮೆ ಆಗಬಹುದು.
ಭಾರತದಲ್ಲೇ ಸ್ವಂತವಾಗಿ ಅಭಿವೃದ್ಧಿಪಡಿಸಲಾದ ಯುದ್ಧವಿಮಾನ ಎಲ್ಸಿಎ ತೇಜಸ್. ಇದು ಭಾರತದ ಸ್ವಾವಲಂಬನೆಯ ಪಥದಲ್ಲಿ ಒಂದು ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಮೇಡ್ ಇನ್ ಇಂಡಿಯಾ ಫೈಟರ್ ಜೆಟ್ಗಳು ಭಾರತದ ವಾಯುಪಡೆಯ ಬತ್ತಳಿಕೆಯನ್ನು ತುಂಬಲಿವೆಯಂತೆ.
ಇದನ್ನೂ ಓದಿ: ರೆಮಿಟೆನ್ಸ್ ಟ್ಯಾಕ್ಸ್ ಹೇರಲು ಹೊರಟ ಟ್ರಂಪ್ ಸರ್ಕಾರ; ಭಾರತಕ್ಕೆ ಭಾರೀ ಹೊಡೆತ; ಪಾಕಿಸ್ತಾನಕ್ಕೆ ಮತ್ತೂ ಸಂಕಟ
ವಾಯುಸೇನೆಗೆ ಅಗತ್ಯವಾದ ಎಲ್ಲಾ ಶ್ರೇಣಿಯ ಯುದ್ಧವಿಮಾನಗಳನ್ನು ಭಾರತದಲ್ಲೇ ತಯಾರಿಸುವ ಮಹಾ ಯೋಜನೆ ಸಿದ್ಧವಾಗುತ್ತಿದೆ. ಹೀಗೆಂದು ಎಲ್ಸಿಎ ತೇಜಸ್ ಯೋಜನೆಯ ಮಾಜಿ ಮುಖ್ಯಸ್ಥರಾದ ಕೋಟ ಹರಿನಾರಾಯಣ ಹೇಳುತ್ತಾರೆ.
ಮುಂದಿನ ಕೆಲ ವರ್ಷಗಳಲ್ಲಿ ಭಾರತಕ್ಕೆ ಅವಶ್ಯವಾದ ಎಲ್ಲಾ ಫೈಟರ್ ಜೆಟ್ಗಳು ಸ್ಥಳೀಯವಾಗಿ ಅಭಿವೃದ್ಧಿಯಾದಂತಹವೇ ಆಗಿರುತ್ತವೆ. ಅಷ್ಟೇ ಅಲ್ಲ, ಬೇರೆ ದೇಶಗಳಿಗೂ ಈ ಜೆಟ್ಗಳು ರಫ್ತಾಗಬಹುದು ಎಂಬುದು ಇವರ ಅನಿಸಿಕೆ.
2025-26ರಲ್ಲಿ ಭಾರತದ ಡಿಫೆನ್ಸ್ ರಫ್ತು 30,000 ಕೋಟಿ ರೂ?
ಭಾರತದ ರಕ್ಷಣಾ ಕ್ಷೇತ್ರದಿಂದ ನೂರಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗುತ್ತದೆ. ಕಳೆದ 11 ವರ್ಷದಲ್ಲಿ ಈ ಸೆಕ್ಟರ್ನ ರಫ್ತು 34 ಪಟ್ಟು ಹೆಚ್ಚಾಗಿದೆ. 2013-14ರಲ್ಲಿ ರಫ್ತು 686 ಕೋಟಿ ರೂ ಇತ್ತು. 2024-25ರಲ್ಲಿ ಅದು 23,622 ಕೋಟಿ ರೂಗೆ ಏರಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು 30,000 ಕೋಟಿ ರೂ ಆಗಬಹುದು ಎಂಬುದು ತಜ್ಞರ ನಿರೀಕ್ಷೆ. 2029ರಲ್ಲಿ ಭಾರತದ ಡಿಫೆನ್ಸ್ ರಫ್ತು 50,000 ಕೋಟಿ ರೂ ಮುಟ್ಟಬೇಕು ಎನ್ನುವ ಗುರಿಯನ್ನು ರಕ್ಷಣಾ ಸಚಿವಾಲಯ ನಿಗದಿ ಮಾಡಿಕೊಂಡಿದೆ.
ಇದನ್ನೂ ಓದಿ: 3 ನಿಮಿಷಗಳಲ್ಲಿ ಭಾರತೀಯ ಸೇನೆ 13 ಶತ್ರು ನೆಲೆಗಳನ್ನು ಧ್ವಂಸಗೊಳಿಸಿತ್ತು: ಸೇನಾ ಅಧಿಕಾರಿ
ಬ್ರಹ್ಮೋಸ್, ಕೆ4, ಕೆ15 ಕ್ಷಿಪಣಿಗಳು, ಆರ್ಟಿಲರಿ ಗನ್, ರೈಫಲ್ ಇತ್ಯಾದಿ ಹಲವಾರು ಯುದ್ಧೋಪಕರಣಗಳು, ಶಸ್ತ್ರಾಸ್ತ್ರಗಳನ್ನು ಭಾರತವು ತನ್ನ ಮಿತ್ರರಾಷ್ಟ್ರಗಳಿಗೆ ರಫ್ತು ಮಾಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








