ನವದೆಹಲಿ, ಜನವರಿ 28: ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ನ ಮುಖ್ಯಸ್ಥರಾಗಿದ್ದ ರಾಣಾ ತಲ್ವಾರ್ (Rana Talwar) ಶನಿವಾರ (ಜ. 27) ಮೃತಪಟ್ಟಿರುವ ಸುದ್ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಯಾಗಿದೆ. ರಾಣಾ ಅವರಿಗೆ 76 ವರ್ಷ ವಯಸ್ಸಾಗಿದ್ದು, ಪತ್ನಿ ರೇಣುಕಾ ಹಾಗೂ ಮಗ ರಾಹುಲ್ ಅವರನ್ನು ಅಗಲಿದ್ದಾರೆ. ಕೆಲ ಕಾಲದಿಂದ ರಾಣಾ ತಲ್ವಾರ್ ಅನಾರೋಗ್ಯದಿಂದ ಬಾಧಿತರಾಗಿದ್ದರು ಎನ್ನಲಾಗಿದೆ. ವರದಿ ಪ್ರಕಾರ ಇಂದು ಭಾನುವಾರ ದೆಹಲಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ರಾಣಾ ತಲ್ವಾರ್ ಅವರ ಪತ್ನಿ ರೇಣುಕಾ ಖ್ಯಾತ ಉದ್ಯಮಿ ಕೆಪಿ ಸಿಂಗ್ ಅವರ ಪುತ್ರಿ. ಕೆಪಿ ಸಿಂಗ್ ಅವರು ಡಿಎಲ್ಎಫ್ ಗ್ರೂಪ್ನ ಮಾಜಿ ಮುಖ್ಯಸ್ಥರೂ ಹೌದು. ಇನ್ನು, ತಲ್ವಾರ್ ಅವರ ಮಗ ರಾಹುಲ್ ಡಿಎಲ್ಎಫ್ ಸಂಸ್ಥೆಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾರೆ. ರಾಣಾ ತಲ್ವಾರ್ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ಗೆ ಮುನ್ನ ಸಿಟಿ ಬ್ಯಾಂಕ್ನಲ್ಲಿ ಕೆಲಸ ಮಾಡಿದ್ದರು. ಸೇಬರ್ ಕ್ಯಾಪಿಟಲ್ ಎಂಬ ಕಂಪನಿಯ ಸಂಸ್ಥಾಪಕ ಛೇರ್ಮನ್ ಮತ್ತು ಮ್ಯಾನೇಜಿಂಗ್ ಪಾರ್ಟ್ನರ್ ಕೂಡ ಆಗಿದ್ದರು.
ಇದನ್ನೂ ಓದಿ: Krutrim Record: ಒಂದು ಬಿಲಿಯನ್ ಡಾಲರ್ ಮೌಲ್ಯದ ಭಾರತದ ಮೊದಲ ಎಐ ಕಂಪನಿ; ಓಲಾ ಸ್ಥಾಪಕರ ಹೊಸ ಸಾಹಸಕ್ಕೆ ಫಲಶೃತಿ
ರಾಣಾ ತಲ್ವಾರ್ ದೆಹಲಿಯಲ್ಲಿ ಎಕನಾಮಿಕ್ಸ್ ಪದವೀಧರರಾಗಿದ್ದಾರೆ. ಬಳಿಕ ಅವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಆರಂಭಿಸಿದ್ದರು. 1969ರಲ್ಲಿ ಸಿಟಿ ಬ್ಯಾಂಕ್ ಮೂಲಕ ಅವರ ವೃತ್ತಿಜೀವನ ಆರಂಭವಾಯಿತು. ಸಿಟಿ ಬ್ಯಾಂಕ್ನಲ್ಲಿ ಹಂತ ಹಂತವಾಗಿ ಬಡ್ತಿ ಪಡೆದು ಮೇಲೇರಿದ ಅವರು ಆ ಬ್ಯಾಂಕ್ನ ಏಷ್ಯಾ ಪೆಸಿಫಿಕ್, ಮಿಡಲ್ ಈಸ್ಟ್, ಯೂರೋಪ್ ಮತ್ತು ಉತ್ತರ ಅಮೆರಿಕದ ರೀಟೇಲ್ ಬಿಸಿನೆಸ್ನ ಮುಖ್ಯಸ್ಥರಾಗುವ ಹಂತಕ್ಕೆ ಹೋಗಿದ್ದು ವಿಶೇಷ.
ಸಿಟಿ ಕಾರ್ಪ್ ಮತ್ತು ಸಿಟಿ ಬ್ಯಾಂಕ್ನಲ್ಲಿ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಹಾಗೂ ಪಾಲಿಸಿ ಕಮಿಟಿ ಸದಸ್ಯರೂ ಆಗಿದ್ದರು.
ಇದನ್ನೂ ಓದಿ: Union Budget 2024: ಬಜೆಟ್ ಮಂಡನೆ ಬಳಿಕ ನಿರ್ಮಲಾ ಸೀತಾರಾಮನ್ ಪಾಲಾಗಲಿವೆ ಹಲವು ದಾಖಲೆಗಳು, ಇಲ್ಲಿದೆ ವಿವರ
1997ರಲ್ಲಿ ಅವರು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಸೇರಿ, ಬಳಿಕ ಸಿಇಒ ಆದರು. ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ನ ವ್ಯವಹಾರ ವೃದ್ಧಿಯಾಗಲು ರಾಣಾ ಪಾತ್ರ ಬಹಳ ಇತ್ತು. ಯುಬಿಎಸ್, ಗ್ರಿಂಡ್ಲೇಸ್ ಬ್ಯಾಂಕ್, ಎಎನ್ಝಡ್ ಕಂಪನಿಗಳ ಕೆಲ ಹಣಕಾಸು ವ್ಯವಹಾರಗಳು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ನಲ್ಲಿ ವಿಲೀನಗೊಳ್ಳುವ ಕಾರ್ಯಗಳಾಗಿದ್ದು ರಾಣಾ ತಲ್ವಾರ್ ಕಾಲದಲ್ಲೇ. ಹಾಂಕಾಂಗ್ನ ಚೇಸ್ ಮನ್ಹಟ್ಟನ್ನಿಂದ ಕ್ರೆಡಿಟ್ ಕಾರ್ಡ್ ಬಿಸಿನೆಸ್ ಅನ್ನೂ ಖರೀದಿಸಲಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ