Krutrim Record: ಒಂದು ಬಿಲಿಯನ್ ಡಾಲರ್ ಮೌಲ್ಯದ ಭಾರತದ ಮೊದಲ ಎಐ ಕಂಪನಿ; ಓಲಾ ಸ್ಥಾಪಕರ ಹೊಸ ಸಾಹಸಕ್ಕೆ ಫಲಶೃತಿ
AI Startup Krutrim Becomes Unicorn company: ಭವೀಶ್ ಅಗರ್ವಾಲ್ ಸ್ಥಾಪಿಸಿದ ಕೃತ್ರಿಮ್ ಕಂಪನಿ ಒಂದೇ ತಿಂಗಳಲ್ಲಿ 1 ಬಿಲಿಯನ್ ಡಾಲರ್ ಮೌಲ್ಯದ ಯೂನಿಕಾರ್ನ್ ಕಂಪನಿಯಾಗಿದೆ. ಭಾರತದ ಎಐ ಸ್ಟಾರ್ಟಪ್ವೊಂದು ಯೂನಿಕಾರ್ನ್ ಆಗಿ ಬೆಳೆದದ್ದು ಇದೇ ಮೊದಲು. ಭವೀಶ್ ಅಗರ್ವಾಲ್ ಅವರಿಗೆ ತಮ್ಮ ಕಂಪನಿ ಎಐ ಇಕೋಸಿಸ್ಟಂಗೆ ಸರ್ವರ್ ಮತ್ತು ಸೂಪರ್ ಕಂಪ್ಯೂಟರ್ ತಯಾರಿಸುವ ಗುರಿ ಇಟ್ಟಿದ್ದಾರೆ.
ನವದೆಹಲಿ, ಜನವರಿ 26: ಒಲಾ ಸಂಸ್ಥೆಯ ಭವೀಶ್ ಅಗರ್ವಾಲ್ ಸ್ಥಾಪಿಸಿದ ಕೃತ್ರಿಮ್ (Krutrim) ಎಂಬ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಸ್ಥೆ ಕೃತ್ರಿಮ್ ಯೂನಿಕಾರ್ನ್ ಆಗಿ ಬೆಳೆದಿದೆ. ಮ್ಯಾಟ್ರಿಕ್ಸ್ ಪಾರ್ಟ್ನರ್ಸ್ ಇಂಡಿಯಾ ಸೇರಿದಂತೆ ವಿವಿಧ ಹೂಡಿಕೆದಾರರಿಗೆ ಕೃತ್ರಿಮ್ಗೆ 50 ಮಿಲಿಯನ್ ಡಾಲರ್ ಫಂಡಿಂಗ್ ಸಿಕ್ಕಿದೆ. ಇದರೊಂದಿಗೆ ಈ ಸ್ಟಾರ್ಟಪ್ಗೆ ಸಿಕ್ಕಿದ ಒಟ್ಟು ಹೂಡಿಕೆ ಮೊತ್ತ 1 ಬಿಲಿಯನ್ ಡಾಲರ್ ಗಡಿ ದಾಟಿದೆ. ಈ ಮೂಲಕ ಯೂನಿಕಾರ್ನ್ ಕಂಪನಿ ಎನಿಸಿದೆ. ಭಾರತದ ಎಐ ಸ್ಟಾರ್ಟಪ್ವೊಂದು ಯೂನಿಕಾರ್ನ್ (unicorn company) ಎನಿಸಿದ್ದು ಇದೇ ಮೊದಲು.
ಅಚ್ಚರಿ ಎಂದರೆ ಕೃತ್ರಿಮ್ ಸಂಸ್ಥೆ ಒಂದು ತಿಂಗಳ ಹಿಂದಷ್ಟೇ ಶುರುವಾಗಿದ್ದು. ಇಷ್ಟು ಅಲ್ಪಾವಧಿಯಲ್ಲಿ ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯಾಗಿ ಬೆಳೆದಿದ್ದು ಗಮನಾರ್ಹವೇ ಸರಿ.
ಕೃತ್ರಿಮ್ ಸಂಸ್ಥೆ ಲಾರ್ಜ್ ಲ್ಯಾಂಗ್ವೇಜ್ ಮಾಡಲ್ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ. ಹಾಗೆಯೇ, ಡಾಟಾ ಸೆಂಟರ್ಗಳನ್ನೂ ತಯಾರಿಸುತ್ತಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇಕೋಸಿಸ್ಟಂಗೆ ಬೇಕಾದ ಸರ್ವರ್ ಮತ್ತು ಸೂಪರ್ ಕಂಪ್ಯೂಟರ್ಗಳ ನಿರ್ಮಾಣ ಮಾಡುವುದು ಕೃತ್ರಿಮ್ನ ಗುರಿ ಎನ್ನಲಾಗಿದೆ.
ಭಾರತಕ್ಕೆ ತನ್ನದೇ ಆದ ಎಐ ನಿರ್ಮಾಣವಾಗಬೇಕು. ದೇಶದ ಮೊದಲ ಪೂರ್ಣ ಎಐ ಕಂಪ್ಯೂಟಿಂಗ್ ಸ್ಟ್ಯಾಕ್ ಅನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ ಎಂದು ಭವೀಶ್ ಅಗರ್ವಾಲ್ ಹೇಳಿದ್ದಾರೆ.
ಮೈಕ್ರೋಸಾಫ್ಟ್ ಬೆಂಬಲಿತ ಓಪನ್ಎಐ ಸಂಸ್ಥೆ ಚ್ಯಾಟ್ಜಿಪಿಟಿ ಶುರು ಮಾಡಿದ ಬಳಿಕ ಜಾಗತಿಕವಾಗಿ ಹಲವು ಕಂಪನಿಗಳು ಎಐ ರೇಸ್ನಲ್ಲಿ ನಿರತವಾಗಿವೆ. ದೊಡ್ಡ ಬಂಡವಾಳ ಹೊಂದಿರುವ ಗೂಗಲ್ ಮುಂತಾದ ಕಂಪನಿಗಳು ಮುಂದೋಡುತ್ತಿವೆ. ಈ ರೇಸ್ಗೆ ಭಾರತೀಯ ಕಂಪನಿಗಳೂ ಪ್ರವೇಶ ಪಡೆದಿವೆ. ಆದರೆ, ತಂತ್ರಜ್ಞಾನ ಮತ್ತು ಬಂಡವಾಳದ ಕೊರತೆ ಇರುವ ಈ ಓಟದಲ್ಲಿ ಹಿಂದುಳಿದಿವೆ. ಆದರೂ ಕೂಡ ಭಾರತೀಯ ಭಾಷೆಗಳಲ್ಲಿ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ಗಳನ್ನು ರಚಿಸುವ ಪ್ರಯತ್ನಗಳಾಗುತ್ತಿವೆ.
ಇದನ್ನೂ ಓದಿ: Calligo: ಬೆಂಗಳೂರಿನ ಕ್ಯಾಲಿಗೋ ಸಾಧನೆ; ಪೊಸಿಟ್ ಎನೇಬಲ್ಡ್ ಸಿಲಿಕಾನ್ ರಚಿಸಿದ ವಿಶ್ವದ ಮೊದಲ ಕಂಪನಿ
ಸದ್ಯ ಎಐ ತಂತ್ರಜ್ಞಾನದಲ್ಲಿ ಅಮೆರಿಕ ಮತ್ತು ಚೀನಾ ಹೆಚ್ಚು ಪ್ರಾಬಲ್ಯ ಹೊಂದಿವೆ. ಇದರ ಮಧ್ಯೆ ಬೇರೆ ದೇಶಗಳಲ್ಲಿ ಅವುಗಳ ಮಟ್ಟದಲ್ಲಿ ಎಐ ಇಕೋಸಿಸ್ಟಂ ರೂಪಿಸುವ ಪ್ರಯತ್ನ ಇದೆ. ಸರ್ವಂ ಎಂಬ ಭಾರತೀಯ ಕಂಪನಿಯೊಂದು ಓಪನ್ ಹಾಥಿ ಎಂಬ ಮೊದಲ ಹಿಂದಿ ಎಲ್ಎಲ್ಎಂ ಅನ್ನು ಆರಂಭಿಸಿತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ