Calligo: ಬೆಂಗಳೂರಿನ ಕ್ಯಾಲಿಗೋ ಸಾಧನೆ; ಪೊಸಿಟ್ ಎನೇಬಲ್ಡ್ ಸಿಲಿಕಾನ್ ರಚಿಸಿದ ವಿಶ್ವದ ಮೊದಲ ಕಂಪನಿ
World's First Posit Enabled Silicon: ಬೆಂಗಳೂರಿನ ಕ್ಯಾಲಿಗೋ ಟೆಕ್ನಾಲಜೀಸ್ ಇದೀಗ ಪೊಸಿಟ್ ಎನೇಬಲ್ಡ್ ಸಿಲಿಕಾನ್ ತಯಾರಿಸಿದೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಕಂಪನಿಯಾಗಿದೆ. ಕ್ಯಾಲಿಗೋ ಈಗ ಸಾಮಾನ್ಯ ಬಳಕೆಯ ಕಂಪ್ಯೂಟಿಂಗ್ಗೆ ಆಕ್ಸಲರೇಟರ್ ಕಾರ್ಡ್ ತಯಾರಿಸುವ ಸಾಮರ್ಥ್ಯ ಹೊಂದಿದೆ. 2016ರಲ್ಲಿ ಅಮೆರಿಕದ ಗಣಿತಜ್ಞರೊಬ್ಬರು ರೂಪಿಸಿದ ಪೊಸಿಟ್ ನಂಬರ್ ವ್ಯವಸ್ಥೆಯಲ್ಲಿ ಹೆಚ್ಚು ನಿಖರತೆ ಇದೆ. ಇದರ ಆಧಾರದಲ್ಲಿ ಸಿಲಿಕಾನ್ ತಯಾರಿಸಲಾಗಿದೆ.
ಬೆಂಗಳೂರು, ಜನವರಿ 26: ಭಾರತದ ಸೆಮಿಕಂಡಕ್ಟರ್ ಕ್ಷೇತ್ರದ ಬೆಳವಣಿಗೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವಂತಿದೆ. ಬಹಳಷ್ಟು ಫ್ಯಾಬ್ಲೆಸ್ ಚಿಪ್ ಡಿಸೈನ್ (fabless semiconductor chip design) ಸ್ಟಾರ್ಟಪ್ಗಳು ಭಾರತದಲ್ಲಿ ಹುಲುಸಾಗಿ ಬೆಳೆಯುತ್ತಿವೆ. ಅದರಲ್ಲಿ ಬೆಂಗಳೂರಿನ ಕ್ಯಾಲಿಗೋ ಟೆಕ್ನಾಲಜೀಸ್ (Calligo Technologies) ಒಂದು. ಹತ್ತು ವರ್ಷದ ಹಿಂದೆ ಸ್ಥಾಪನೆಯಾದ ಕ್ಯಾಲಿಗೋ ಹೊಸ ಮೈಲಿಗಲ್ಲು ಮುಟ್ಟಿದೆ. ಪೊಸಿಟ್ ಎನೇಬಲ್ಡ್ ಸಿಲಿಕಾನ್ (POSIT-enabled Silicon) ಅನ್ನು ತಯಾರಿಸಿದ ವಿಶ್ವದ ಮೊದಲ ಕಂಪನಿ ಎನಿಸಿದೆ. ಇದರೊಂದಿಗೆ ಆ್ಯಕ್ಸಲರೇಟರ್ ಕಾರ್ಡ್ (Accelerator card) ತಯಾರಿಸುವ ಸಾಮರ್ಥ್ಯ ಕ್ಯಾಲಿಗೋಗೆ ಸಿಕ್ಕಂತಾಗಿದೆ. ಮುಂದಿನ ತಲೆಮಾರಿನ ಕಂಪ್ಯೂಟಿಂಗ್ ತಂತ್ರಜ್ಞಾನದಲ್ಲಿ ಬೆಂಗಳೂರಿನ ಸ್ಟಾರ್ಟಪ್ಗೆ ಬಲ ಸಿಕ್ಕಂತಾಗಿದೆ.
ಸೆಮಿಕಂಡಕ್ಟರ್ ಫ್ಯಾಬ್ಲೆಸ್ ಆ್ಯಕ್ಸಲರೇಟರ್ ಲ್ಯಾಬ್ ಮತ್ತು ಕರ್ನಾಟಕ ಸರ್ಕಾರದ ಇನ್ಫಾರ್ಮೇಶನ್ ಟೆಕ್ನಾಲಜಿ ಸೊಸೈಟಿಯಿಂದ ಬೆಂಬಲ ಹೊಂದಿರುವ ಕ್ಯಾಲಿಗೋ ಟೆಕ್ನಾಲಜೀಸ್ ತಯಾರಿಸಿರುವ ಪೊಸಿಟ್ ಎನೇಬಲ್ಡ್ ಸಿಲಿಕಾನ್ ಅನ್ನು ಪಿಎಫ್ಜಿಎ ಪ್ಲಾಟ್ಫಾರ್ಮ್ನಲ್ಲಿ ಅಳವಡಿಸಲಾಗುತ್ತದೆ. ಈ ರೀತಿಯಲ್ಲಿ ತಯಾರಿಸಲಾದ ಮೊದಲ ಸಿಲಿಕಾನ್ ಮುಂದಿನ ತಿಂಗಳು (2024ರ ಫೆಬ್ರುವರಿ) ತಯಾರಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: Foxconn CEO: ಫಾಕ್ಸ್ಕಾನ್ ಸಿಇಒ ಯಂಗ್ ಲಿಯುಗೆ ಪದ್ಮ ಭೂಷಣ ಪ್ರಶಸ್ತಿ ಗೌರವ
ಕ್ಯಾಲಿಗೋ ಈಗ ಸಾಮಾನ್ಯ ಬಳಕೆಯ ಕಂಪ್ಯೂಟಿಂಗ್ಗೆ ಆಕ್ಸಲರೇಟರ್ ಕಾರ್ಡ್ ತಯಾರಿಸುವ ಸಾಮರ್ಥ್ಯ ಹೊಂದಿದೆ. ಇಂಡಸ್ಟ್ರಿ ಕಾಂಪ್ಯಾಟಬಲ್ ಕಂಪೈಲರ್ ಮತ್ತು ಆಪರೇಟಿಂಗ್ ಸಿಸ್ಟಂ ಸೇರಿದಂತೆ ಸಂಪೂರ್ಣ ಸಾಫ್ಟ್ವೇರ್ ಟೆಕ್ನಾಲಜಿ ಹೊಂದಿದೆ.
ಏನಿದು ಪೊಸಿಟ್?
ಇತ್ತೀಚಿನವರೆಗೂ ಫ್ಲೋಟಿಂಗ್ ಪಾಯಿಂಟ್ ಯೂನಿಟ್ ಹಾರ್ಡ್ವೇರ್ಗಳಿಗೆ ಐಇಇಇ 754 ಎಂಬುದು ಟೆಕ್ನಿಕಲ್ ಸ್ಟ್ಯಾಂಡರ್ಡ್ ಆಗಿತ್ತು. ಆದರೆ, ಅದರ ಸಂಖ್ಯೆ ವ್ಯವಸ್ಥೆಯಲ್ಲಿ ಒಂದಷ್ಟು ಲೋಪದೋಷಗಳಿವೆ. 2016ರಲ್ಲಿ ಅಮೆರಿಕದ ಗಣಿತಜ್ಞ ಜಾನ್ ಗುಸ್ಟಾಫ್ಸನ್ ಎಂಬುವವರು ಇನ್ನಷ್ಟು ಗಣಿತ ನಿಖರತೆ ಮತ್ತು ವ್ಯಾಪ್ತಿ ಹೆಚ್ಚುವಂತೆ ಪೊಸಿಟ್ ನಂಬರ್ ಸಿಸ್ಟಂ ಅನ್ನು ಶೋಧಿಸಿದರು.
ಈ ವಿನೂತನ ಪೊಸಿಟ್ ನಂಬರ್ ಸಿಸ್ಟಂ ಆಧಾರಿತವಾಗಿ ಚಿಪ್ ತಯಾರಿಸುವುದು ಸವಾಲಿನ ಕೆಲಸವಾಗಿತ್ತು. ಕ್ಯಾಲಿಗೋ ಟೆಕ್ನಾಲಜೀಸ್ ಈ ಕಾರ್ಯ ಮಾಡಿ ಸೈ ಎನಿಸಿದೆ. ಇದರಿಂದ ಕಂಪ್ಯೂಟಿಂಗ್ ನಿಖರತೆ ಇನ್ನಷ್ಟು ಹೆಚ್ಚುತ್ತದೆ. ನೆಕ್ಸ್ಟ್ ಜನರೇಶನ್ ಕಂಪ್ಯೂಟಿಂಗ್ಗೆ ಇದು ಪುಷ್ಟಿ ಕೊಡಲಿದೆ.
ಭಾರತದಲ್ಲಿ ಕ್ರಿಯಾಶೀಲತೆ, ನಾವೀನ್ಯತೆಯ ಗುಣ ಹೊಂದಿರುವ ಸ್ಟಾರ್ಟಪ್ಗಳಿಗೆ ಪ್ರತೀಕವಾಗಿ ಕ್ಯಾಲಿಗೋ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ