ನವದೆಹಲಿ, ಡಿಸೆಂಬರ್ 20: ಬಹಳಷ್ಟು ಸಂಸ್ಥೆಗಳು ಬ್ಯಾಂಕ್ನಲ್ಲಿ ಪಡೆದ ಸಾಲವನ್ನು ತೀರಿಸಲು ಅದೇ ಬ್ಯಾಂಕಿನಲ್ಲಿ ಹೊಸ ಸಾಲ ಮಾಡುತ್ತವೆ. ಅದು ವರ್ತುಲದಂತೆ ಮರುಕಳಿಸುತ್ತಲೇ (evergreening of loans) ಇರುತ್ತದೆ. ಇಂಥದ್ದನ್ನು ತಪ್ಪಿಸಲು ಆರ್ಬಿಐ ಕ್ರಮ ಕೈಗೊಳ್ಳಲು ಯತ್ನಿಸಿದೆ. ಬ್ಯಾಂಕ್ನಲ್ಲಿ ಸಾಲ ಇರುವ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಆಲ್ಟರ್ನೇಟಿವ್ ಇನ್ವೆಸ್ಟ್ಮೆಂಟ್ ಫಂಡ್ಸ್ನ (AIF- Alternative investment fund) ಸ್ಕೀಮ್ನಲ್ಲಿ ಬ್ಯಾಂಕ್ ಆಗಲೀ ಎನ್ಬಿಎಫ್ಸಿಗಳಾಗಲೀ ಹೂಡಿಕೆ ಮಾಡುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಿನ್ನೆ (ಡಿ. 19) ಅಪ್ಪಣೆ ಮಾಡಿದೆ.
ಆಲ್ಟರ್ನೇಟಿವ್ ಇನ್ವೆಸ್ಟ್ಮೆಂಟ್ ಫಂಡ್ ಎಂಬುದು ಸೆಬಿ ಇತ್ಯಾದಿ ಯಾವುದೇ ಪ್ರಾಧಿಕಾರ ಸಂಸ್ಥೆಯ ನಿಯಂತ್ರಣಕ್ಕೆ ಒಳಪಡದ ಸಂಪೂರ್ಣ ಖಾಸಗಿ ಹೂಡಿಕೆ (privately pooled funds) ನಿಧಿಯಾಗಿದೆ. ವೆಂಚರ್ ಕ್ಯಾಪಿಟಲ್ ಫಂಡ್, ಏಂಜಲ್ ಫಂಡ್, ಇನ್ಫ್ರಾಸ್ಟ್ರಕ್ಚರ್ ಫಂಡ್, ಪ್ರೈವೇಟ್ ಈಕ್ವಿಟಿ ಫಂಡ್, ಹೆಡ್ಜ್ ಫಂಡ್ ಮೊದಲಾದವು ಇದಕ್ಕೆ ಉದಾಹರಣೆ. ಬ್ಯಾಂಕುಗಳು ತಮ್ಮಲ್ಲಿರುವ ಹಣವನ್ನು ಇಂಥ ಫಂಡ್ಗಳ ಮೇಲೆ ಹೂಡಿಕೆ ಮಾಡುವುದು ಸಾಮಾನ್ಯ. ಆದರೆ, ಈ ಫಂಡ್ಗಳು ಹೂಡಿಕೆ ಮಾಡಿರುವ ಸಂಸ್ಥೆಗಳು ಕಳೆದ 12 ತಿಂಗಳಲ್ಲಿ ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡಿದ್ದರೆ, ಅಂಥ ಫಂಡ್ಗಳ ಸ್ಕೀಮ್ನಲ್ಲಿ ಬ್ಯಾಂಕು ಯಾವ ಹೂಡಿಕೆಯನ್ನೂ ಮಾಡಬಾರದು ಎಂಬುದು ಆರ್ಬಿಐ ಈಗ ವಿಧಿಸಿರುವ ನಿರ್ಬಂಧವಾಗಿದೆ.
ಇದನ್ನೂ ಓದಿ: ಪೇಟೆಂಟ್ ವ್ಯಾಜ್ಯ; ಆ್ಯಪಲ್ನ ಸ್ಮಾರ್ಟ್ವಾಚ್ಗಳಿಗೆ ಅಮೆರಿಕದಲ್ಲಿ ನಿಷೇಧ ಸಾಧ್ಯತೆ; ಏನಿದು ಬಿಕ್ಕಟ್ಟು?
‘ಕಾನೂನು ಸಮಸ್ಯೆ ತರುವ ಎಐಎಫ್ಗಳೊಂದಿಗೆ ಬ್ಯಾಂಕ್, ಎನ್ಬಿಎಫ್ಸಿ ಮೊದಲಾದ ಪ್ರಾಧಿಕಾರ ನಿಯಂತ್ರಿತ ಸಂಸ್ಥೆಗಳು (Regulated Entities) ನಡೆಸಿರುವ ಕೆಲ ವ್ಯವಹಾರವು ನಮ್ಮ ಗಮನಕ್ಕೆ ಬಂದಿದೆ. ಎಐಎಫ್ಗಳಲ್ಲಿ ಹೂಡಿಕೆ ಮಾಡುವ ಮೂಲಕ ಬ್ಯಾಂಕುಗಳು ಪರೋಕ್ಷವಾಗಿ ಸಾಲ ಕೊಡುತ್ತಿವೆ,’ ಎಂದು ಆರ್ಬಿಐ ಹೊರಡಿಸಿದ ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.
ಹಾಗೆಯೇ, ಈಗಾಗಲೇ ಇಂಥ ಹೂಡಿಕೆಗಳನ್ನು ಮಾಡಿರುವ ಹಣಕಾಸು ಸಂಸ್ಥೆಗಳು 30 ದಿನದೊಳಗೆ ಅದನ್ನು ಹಿಂಪಡೆಯಬೇಕು ಎಂದೂ ಆರ್ಬಿಐ ನಿರ್ದೇಶನ ನೀಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ